ಕನ್ನಡದ ಖ್ಯಾತ ಚಿತ್ರ ಸಾಹಿತಿ, ಗೀತರಚನೆಕಾರ ದಿವಂಗತ ಚಿ. ಉದಯಶಂಕರ್ ಅವರ ಪತ್ನಿ ಶಾರದಮ್ಮ(74) ಇಂದು ನಿಧನರಾದರು.
ಪತಿ ಉದಯಶಂಕರ್ ಅವರು 1993ರಲ್ಲಿಯೇ ನಿಧನರಾಗಿದ್ದರು. ಇದೀಗ ಪುತ್ರ ಗುರುದತ್ ಸೇರಿದಂತೆ ಮಕ್ಕಳಿಂದ ತಾಯಿ ಕೂಡ ದೂರವಾಗಿದ್ದಾರೆ.
ಶಾರದಮ್ಮ ಅವರು ಸ್ವಲ್ಪ ಕಾಲದಿಂದ ಅನಾರೋಗ್ಯದಲ್ಲಿದ್ದರು. ಮೂವರು ಮಕ್ಕಳಲ್ಲಿ ಗುರುದತ್ ಸಿನಿಮಾ ನಟನರಾಗಿ ಗುರುತಿಸಿಕೊಂಡಿದ್ದಾರೆ. ಹಿರಿಯ ಪುತ್ರ ರವಿಶಂಕರ್ ಕೆಲವು ವರ್ಷಗಳ ಹಿಂದೆಯೇ ತೀರಿಹೋಗಿದ್ದರು. ಮಗಳು ಶ್ಯಾಮಲಾ ಅಮೆರಿಕಾದಲ್ಲಿದ್ದು ಕೊರೊಮಾ ಕಾರಣದಿಂದ ವಿಮಾನ ಸಂಚಾರಗಳಿರದ ಕಾರಣ ಅವರುತಾಯಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿಲ್ಲ. ಅಂತ್ಯಕ್ರಿಯೆಯು ಇಂದು ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿದೆ.
ಉದಯಶಂಕರ್ ಅವರು 1964ರ ಜೂನ್ 5ರಂದು ಶಾರದಮ್ಮ ಅವರ ಕೈ ಹಿಡಿದಿದ್ದರು. ಚಿ ಉದಯಶಂಕರ್ ಅವರ ಬಗ್ಗೆ ಬರೆಯಬೇಕಾದರೆ ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಅವರನ್ನು ನೆನಪಿಸಲೇಬೇಕಾಗುತ್ತದೆ. ಉದಯ ಶಂಕರ್ ಅವರು ಡಾ.ರಾಜ್ ಅವರ ಸಿನಿಮಾಗಳ ಆಸ್ಥಾನದ ಬರಹಗಾರರಾಗಿ ಗುರುತಿಸಿಕೊಂಡಿದ್ದರು. ಹಂಸಲೇಖಾ ಅವರ ಪ್ರವೇಶಕ್ಕೂ ಮೊದಲೇ ಕನ್ನಡ ಸಿನಿಮಾ ಸಾಹಿತ್ಯದಲ್ಲಿ ವೈವಿಧ್ಯತೆಯನ್ನು ತೋರಿದ ಗೀತರಚನೆಕಾರ ಇದ್ದರೆ ಅದು ಉದಯಶಂಕರ್ ಅವರು ಮಾತ್ರ ಎನ್ನಬಹುದು. ರಾಜ್ ಕುಮಾರ್ ಸಿನಿಮಾಗಳ ಹಲವಾರು ಗೀತೆಗಳಲ್ಲಿನ ಕನ್ನಡ ಪದಗಳನ್ನು ಮೆಚ್ಚುವಾಗ ಅದರದೊಂದು ಪಾಲು ಉದಯಶಂಕರ್ ಅವರನ್ನು ತಲುಪುತ್ತದೆ ಎನ್ನುವುದನ್ನು ಮರೆಯಲಾಗದು. ವೈಯಕ್ತಿಕವಾಗಿಯೂ ಅವರಿಬ್ಬರ ಸಂಬಂಧ ತುಂಬ ಆತ್ಮೀಯವಾಗಿತ್ತು ಎನ್ನುವುದನ್ನು ನಾವು ಇಲ್ಲಿ ಸ್ಮರಿಸಬಹುದು. ರಾಜ್ ಕುಮಾರ್ ಮತ್ತು ಚಿ. ಉದಯಶಂಕರ್ ಅವರ ಆತ್ಮೀಯತೆಯನ್ನು ಸಾರುವ ಚಿತ್ರಗಳು ಇಲ್ಲಿವೆ.