ಕಲಾವಿದರನ್ನು ನಾವು ಅವರ ಸಿನಿಮಾಗಳ ಮೂಲಕ ಸದಾ ಸ್ಮರಿಸುತ್ತೇವೆ. ಅದರಾಚೆಗೆ ಆದರ್ಶವಾಗಿರುವ ನಟರು ಅಪರೂಪ. ಆದರೆ ಡಾ.ರಾಜ್ ಕುಮಾರ್ ಅವರು ಇಂದಿನ ಪೀಳಿಗೆಗೆ ಕೂಡ ಆದರ್ಶಪ್ರಾಯರಾಗುತ್ತಾರೆ. ಅದು ಹೇಗೆ ಎನ್ನುವುದನ್ನು ಹಿರಿಯ ಪತ್ರಕರ್ತ ಸದಾಶಿವ ಶೆಣೈ ಅವರು ಇಲ್ಲಿ ವಿಭಿನ್ನ ರೀತಿಯಿಂದ ಆತ್ಮಾವಲೋಕನ ಮಾಡಿಕೊಂಡಿದ್ದಾರೆ.
ಪ್ರೀತಿಯ ರಾಜಣ್ಣ…
ಅಲ್ಲಿರುವ ನಿಮಗೆ ಇಲ್ಲಿಂದಲೇ ಹುಟ್ಟು ಹಬ್ಬದ ಕೋಟಿ ಕೋಟಿ ಶುಭಾಶಯ. ನಿಜಕ್ಕೂ ನಾವು ಮರೆಯಲಾಗದ ದಿನಗಳಲ್ಲಿ ಏಪ್ರಿಲ್ 24 ಕೂಡ ಒಂದು. ಯಾಕೆಂದರೆ ನೀವು ಕಪ್ಪು – ಬಿಳುಪು ಕಾಲವನ್ನು ವರ್ಣ ರಂಜಿತ ಮಾಡಿಕೊಟ್ಟವರು. ರೀಲ್ – ರಿಯಲ್ ನಲ್ಲಿ ನಮಗೆ ಬದುಕಿನ ರೀತಿ – ರಿವಾಜುಗಳನ್ನು ಕಲಿಸಿಕೊಟ್ಟವರು ನೀವು. ಯಾವ ಸ್ಕೂಲೂ ಕಲಿಸದ ಜೀವನ ಪಾಠಗಳನ್ನು ಹೇಳಿಕೊಟ್ಟಿದ್ದೀರಿ. ನಮ್ಮಿಂದ ದೂರವಾದ ಮೇಲೂ ನಾವೆಲ್ಲ ಇಷ್ಟೊಂದು ನೆನಪಿಸಿಕೊಳ್ಳುವ ಮತ್ತೊಬ್ಬ ಕಲಾವಿದ ಇರಲಾರ. ಸಿನಿಮಾ, ಭಾಷೆ, ಹೋರಾಟ ಅಂದಾಗಲೆಲ್ಲ ನಿಮ್ಮ ನೆನಪು ಮತ್ತೆ ಮತ್ತೆ ಮಡುಗಟ್ಟುತ್ತದೆ.
ಅಂದಹಾಗೆ ಈ ಕ್ಷಣವೂ ನಾವು ನಿಮ್ಮ ನೆನಪುಗಳಿಂದ ಹೊರತಲ್ಲ. ಕಣ್ಣಿಗೆ ಕಾಣದ ಯಕಶ್ಚಿತ್ ಕೊರೊನ ವೈರಸ್ ಒಂದಕ್ಕೆ ಹೆದರಿ ನಾವೆಲ್ಲ ಮನೆಯೊಳಗೆ ಬಂಧಿಯಾಗಿರುವ ಈ ಹೊತ್ತಿನಲ್ಲಿ ನೀವು ಇದ್ದಿದ್ದರೆ ಹೇಗೆ ರಿಯಾಕ್ಟ್ ಮಾಡ್ತಾ ಇದ್ರಿ ಅನ್ನುವ ಕುತೂಹಲವೊಂದು ಹಾಗೆಯೇ ಉಳಿದುಕೊಂಡಿದೆ. ಹಾಗೆ ನೋಡಿದರೆ ನೀವು ಈ ಗೃಹ ಬಂಧನಕ್ಕಿಂತಲೂ ಘೋರವಾಗಿದ್ದನ್ನು ಅನುಭವಿಸಿದ್ದೀರಿ.
ದಟ್ಟ ಅಡವಿಯಲ್ಲಿ ನರಹಂತಕನ ಜೊತೆ 108 ದಿನಗಳು ಇದಕ್ಕಿಂತಲೂ ಕಠಿಣ ದಿನಗಳನ್ನು ಕಳೆದವರು ನೀವು. ಬಂದೂಕಿನ ಅಡಿಯಲ್ಲಿ ಕಾಲುನೋವು ಸೇರಿದಂತೆ ವಯೋಸಹಜ ಕಾಯಿಲೆಗಳನ್ನು ಹೊತ್ತು ಕಾಡಿನ ಕಲ್ಲು ಮುಳ್ಳಿನಲ್ಲಿ ನಡೆದಾಡಿದವರು. ಅಭಿಮಾನಿಗಳು, ಕುಟುಂಬದವರ ಪ್ರೀತಿಯನ್ನು, ನೆಮ್ಮದಿಯನ್ನು ಕಳೆದುಕೊಂಡ ನೀವು ಹೊತ್ತಿಗೆ ಸರಿಯಾಗಿ ಮಾತ್ರೆ ತೆಗೆದುಕೊಳ್ಳದೆ, ಯಾವುದೋ ಮಾಂಸದ ಊಟ ತಿಂದು, ಭಯ, ಭೀತಿಗಳ ನಡುವೆ ಬರೋಬ್ಬರಿ 108 ದಿನಗಳು ಆ ದಟ್ಟಡವಿಯಲ್ಲಿ ಕಳೆದ್ರಿ. ನಿಜಕ್ಕೂ ಅದು ಅರಣ್ಯ ರೋದನ!!
ಆದರೆ ಈಗ ನಮ್ಮ ಪರಿಸ್ಥಿತಿ ಅಷ್ಟು ಕಠೋರ ಇಲ್ಲ. ನಮ್ಮ ನಮ್ಮ ಮನೆಗಳಲ್ಲಿ, ರೂಮ್ ಗಳಲ್ಲಿ ಊರುಗಳಲ್ಲಿ ಬಂಧಿಯಾಗಿದ್ದೇವೆ ಅಷ್ಟೆ. ಊಟ- ತಿಂಡಿ ಇದೆ. ಮದ್ದು ಸಿಗುತ್ತೆ. ಟೈಮ್ ಪಾಸ್ ಮಾಡೋದಕ್ಕೆ ಟಿವಿ, ಯೂಟ್ಯೂಬ್, ಗೇಮ್, ಫೋನ್ ಎಲ್ಲವೂ ಇದೆ. ಆದ್ರೂ ನಮಗೆ ನಿಮ್ಮಂತೆ ಬದುಕೋದಕ್ಕೆ ಸಾಧ್ಯವಾಗ್ತಿಲ್ಲ ಅನ್ನೋದೆ ಅಚ್ಚರಿ. ಈ ವ್ಯವಸ್ಥೆಯನ್ನು, ಪೊಲೀಸರನ್ನು, ಸರ್ಕಾರವನ್ನು ದಿನಕ್ಕೆಷ್ಟು ಸಲ ಶಪಿಸಿದ್ದೇವೋ ನಮಗೇ ಗೊತ್ತಿಲ್ಲ.. ಆದರೆ ಕಾಡಿನಿಂದ ಬಂದಮೇಲೂ ನಿಮ್ಮ ಅಷ್ಟೂ ಪಡಿಪಾಟಲಿಗೆ ಕಾರಣನಾದ ನರಹಂತಕನನ್ನು “ವೀರಪ್ಪನ್ ಅವರೇ” ಅಂತ ಅಷ್ಟು ಪ್ರೀತಿಯಿಂದ, ಗೌರವದಿಂದ ಕರೆಯೋದಕ್ಕೆ ನಿಮಗೆ ಹೇಗೆ ಸಾಧ್ಯವಾಯಿತು?! ಇದು ನಮ್ಮ ಪಾಲಿಗೆ ಯಾವತ್ತೂ ಬಗೆಹರಿಯದ ಪ್ರಶ್ನೆ. ಪ್ರೀತಿಗೆ ನೀವು ಇನ್ನೊಂದು ಹೆಸರು. ನಿಮ್ಮ ಮುಂದೆ ಕರಗದೆ ಇರೋದಕ್ಕೆ ಆ ವೀರಪ್ಪನ್ ಗೂ ಸಾಧ್ಯವಾಗಿರಲಾರದು. ಅಷ್ಟೇ ಅಲ್ಲ.. ಈ ಬರಗೆಟ್ಟ ಬಂಧನ ಕಾಲದಲ್ಲಿ, ಎಲ್ಲರನ್ನೂ ಪ್ರೀತಿಸುವ, ಬದುಕನ್ನು ಬಂದಹಾಗೆ ಸ್ವೀಕರಿಸಿದ ನಿಮ್ಮ ಮನೋಧರ್ಮವನ್ನು ನಾವು ಪಾಲಿಸುವ ಅಗತ್ಯ ಇದೆ. ಈ ಕಾರಣಗಳಿಗೆ ನಾವು ನಿಮ್ಮಿಂದ ಕಲಿಯುವುದು ಇನ್ನೂ ಬಾಕಿ ಉಳಿದಿದೆ. ನೀವು ಅಂದಿಗೂ ಇಂದಿಗೂ ಎಂದೆಂದಿಗೂ ಬಗೆಹರಿಯದ ಕುತೂಹಲ. ದಯವಿಟ್ಟು ಮತ್ತೆ ಹುಟ್ಟಿ ಬನ್ನಿ ರಾಜಣ್ಣ…. ಇದು ಈ ಹುಟ್ಟುಹಬ್ಬಕ್ಕೆ ನಮ್ಮೆಲ್ಲರ ವಿನಮ್ರ ವಿನಂತಿ. ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು ❤️
ಇಂತಿ
- ಸದಾಶಿವ ಶೆಣೈ
ಪತ್ರಕರ್ತ