ಸಾವಿನ ಬಗ್ಗೆ ಪತ್ರ ಬರೆದಿದ್ದ ಇರ್ಫಾನ್ !

ಬಾಲಿವುಡ್ ನಟ ಇರ್ಫಾನ್ ಖಾನ್ ಇಂದು ನಿಧನರಾಗಿದ್ದಾರೆ. ಆದರೆ ಅವರ ಸಾವಿನ ಬಗ್ಗೆ ಅವರಿಗೆ ಎರಡು ವರ್ಷಗಳಿಂದಲೇ ಸೂಚನೆ ಇತ್ತು. ಅದನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು ಕೂಡ. ತೀರ ಅಪರೂಪವಾದ ಕಾಯಿಲೆಯಿಂದ ಬಳಲುತ್ತಿದ್ದ ಅವರು ಅದನ್ನು ವಿಡಂಬನಾತ್ಮಕವಾಗಿಯೇ ಹಂಚಿಕೊಂಡಿದ್ದರು. ಚಿಕಿತ್ಸೆಯಲ್ಲಿದ್ದರೂ ಕೂಡ ಆನಂತರದಲ್ಲಿಯೂ ಅವರು ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ಅವರ `ಅಂಗ್ರೇಜಿ ಮೀಡಿಯಂ’ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತ್ತು.

ದುರಂತವೇನೆಂದರೆ ಕಳೆದ ಶನಿವಾರವಷ್ಟೇ ಅವರ ತಾಯಿ ರಾಜಸ್ಥಾನದ ಸ್ವಗೃಹದಲ್ಲಿ ನಿಧನರಾಗಿದ್ದರು. ಲಾಕ್ಡೌನ್‌ ಕಾರಣದಿಂದ ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಮಂಗಳವಾರ ಮುಂಬೈನ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದ ಇರ್ಫಾನ್ ಇದೀಗ ನಮ್ಮನ್ನೆಲ್ಲ ಅಗಲಿದ್ದಾರೆ. ಈ ಸಂದರ್ಭದಲ್ಲಿ ತುಳು ಸಿನಿಮಾ ನಿರ್ದೇಶಕ ಕನ್ನಡದ ಯುವ ಸಿನಿಮಾ ವಿಮರ್ಶಕ ವೇಣುಗೋಪಾಲ ಶೆಟ್ಟಿ ಕಾಸರಗೋಡು ಅವರು ಇರ್ಫಾನ್ ಖಾನ್ ಎರಡು ವರ್ಷಗಳ ಹಿಂದೆ ಬರೆದಿದ್ದ ಪತ್ರವನ್ನು ಕನ್ನಡೀಕರಿಸಿ ಹಂಚಿಕೊಂಡಿದ್ದಾರೆ. ಇದು ಇರ್ಫಾನ್ ಖಾನ್ ಅವರಿಗೆ ಸಿನಿಕನ್ನಡ.ಕಾಮ್ ನ ಸ್ಮರಣಾಂಜಲಿ.

‘‘ನ್ಯೂರೋನ್‌ ಡಾಕ್ರೈನ್‌ ಕ್ಯಾನ್ಸರ್‌ ನನ್ನ ಆವರಿಸಿದೆ. ಈ ಹೆಸರೇ ನನ್ನ ಶಬ್ದಕೋಶಕ್ಕೆ ಹೊಸತು. ಇದು ತೀರಾ ಅಪರೂಪದ ಕ್ಯಾನ್ಸರ್ ರೋಗ. ಇದರ ಬಗ್ಗೆ ನಡೆದ ಅಧ್ಯಯನಗಳೂ ಕಡಿಮೆ. ಹೀಗಾಗಿ ನಿಶ್ಚಿತವಾದ ಔಷಧಿ ಇಲ್ಲ. ಹೀಗಾಗಿ, ನಾನೀಗ ವೈದ್ಯಲೋಕಕ್ಕೆ ಟ್ರಯಲ್ ಆ್ಯಂಡ್ ಎರರ್ ಆಟದ ವಸ್ತು.
ಅಸಲಿಗೆ ನಾನೊಂದು ಭಿನ್ನ ಆಟದಲ್ಲಿದ್ದೆ… ವೇಗವಾಗಿ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಕನಸುಗಳು, ಯೋಜನೆಗಳು, ಆಕಾಂಕ್ಷೆಗಳು, ಗುರಿಗಳು ಈ ಎಲ್ಲವೂಗಳಲ್ಲಿ ನಾನು ಎಂಗೇಜ್ ಆಗಿದ್ದೆ. ಥಟ್ಟನೆ ಯಾರೋ ಭುಜ ತಟ್ಟಿದ ಹಾಗಾಯ್ತು. ತಿರುಗಿ ನೋಡಿದರೆ ಟಿಸಿ ನಿಂತಿದ್ದರು. ‘‘ನೀವು ತಲುಪಬೇಕಾದ ಸ್ಥಳ ಬಂದಿದೆ.. ಪ್ಲೀಸ್ ಇಳಿದು ಬಿಡಿ..’’ ಅಂದಾಗ ನನಗೆ ಗೊಂದಲ! “ಇಲ್ಲ.. ಇಲ್ಲ.. ನಾನು ತಲುಪಬೇಕಾದ ಸ್ಥಳ ಇನ್ನೂ ಬಂದಿಲ್ಲ” ಎಂದೆ. ‘‘ಇಲ್ಲ, ಅದೇ ಇದು.. ಕೆಲವೊಮ್ಮೆ ಹಾಗೆಯೇ ಆಗುತ್ತೆ. ”
ನನಗೆ ಈಗ ಅರ್ಥವಾಗಿದ್ದು ಇಷ್ಟೇ; ಸಾಗರದಲ್ಲಿ ತೇಲುತ್ತಿರುವ ಮರದ ತೊಗಟೆಯಂತಿರುವ ನಿಮಗೆ ಅಲ್ಲಿನ ಅಲೆಗಳು ಹೇಗಿರಬಹುದೆಂದು ಊಹಿಸಲು ಅಸಾಧ್ಯವಾಗುತ್ತದೆ ಹಾಗೂ ಅವುಗಳನ್ನು ನಿಯಂತ್ರಿಸಲು ನೀವು ಹತಾಶರಾಗಿ ಪ್ರಯತ್ನಿಸುತ್ತೀರಿ. ಇಂಥದೊಂದು ಗಾಬರಿ, ಆತಂಕ, ಭಯ ಪರಿಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ ನಾನು, ನನ್ನ ಮಗನ ಬಳಿ ಹೇಳಿಕೊಂಡೆ ‘‘ನನ್ನಿಂದ ನಾನು ನಿರೀಕ್ಷಿಸುವುದು ಇಷ್ಟೇ. ಈ ಪರಿಸ್ಥಿತಿಯನ್ನು ಮತ್ತೆ ಎಂದಿಗೂ ನಾನು ಎದುರಿಸಬಾರದು. ನನ್ನ ಕಾಲ ಮೇಲೆ ನಾನು ನಿಲ್ಲಬೇಕಿದೆ. ಭೀತಿ ಮತ್ತು ಭಯ ನನ್ನ ಆಕ್ರಮಿಸಿಕೊಳ್ಳಬಾರದು’’.”
ನೋವಿನ ಅರಿವು ನಿಮಗೆ ತಿಳಿದಿದ್ದರೆ, ನನ್ನ ಈಗಿನ ಸ್ವರೂಪ ಮತ್ತು ತೀವ್ರತೆಯ ಅನುಭವ ನಿಮಗೂ ಇರುತ್ತದೆ. ಯಾವುದೇ ಸಮಾಧಾನ, ಪ್ರೇರಣೆ ಕೆಲಸ ಮಾಡುತ್ತಿಲ್ಲ. ಬರೀ ನೋವು, ಮತ್ತು ಈ ನೋವು ದೇವರಿಗಿಂತಲೂ ಅಗಾಧವಾದದ್ದು ಅನಿಸುತ್ತಿದೆ.”

ದುಗುಡ, ದಣಿವಿನಿಂದ ಲಂಡನ್ ಆಸ್ಪತ್ರೆ ಪ್ರವೇಶಿಸಿದಾಗ ಆಸ್ಪತ್ರೆಯ ಮುಂಭಾಗದಲ್ಲಿ ಲಾರ್ಡ್ಸ್ ಸ್ಟೇಡಿಯಂ ಇರೋದು ಅರಿವಾಯ್ತು. ಇದು ನನ್ನ ಬಾಲ್ಯದ ಕನಸಿನ ಮೆಕ್ಕಾ. ನೋವಿನ ಮಧ್ಯೆಯೂ ನಾನು ಅಲ್ಲಿ ನಗುತ್ತಿರುವ ವಿವಿಯನ್‌ ರಿಚರ್ಡ್ಸ್ ಅವರ ಪೋಸ್ಟರ್‌ ಕಂಡೆ. ನಾನು ಈ ಜಗತ್ತಿನಲ್ಲಿ ಇಲ್ಲದಿದ್ದರೂ ಈ ಪ್ರಪಂಚದಲ್ಲಿ ಏನೂ ಸಂಭವಿಸುವುದಿಲ್ಲ. ಎಲ್ಲವೂ ಹಾಗೆಯೇ ಇರುತ್ತದೆ.
ನನ್ನ ಕೊಠಡಿಯ ಬಲಭಾಗದಲ್ಲಿ ಕೋಮಾದಲ್ಲಿ ಇರುವವರ ವಾರ್ಡ್ ಇದೆ. ಒಂದೊಮ್ಮೆ ನಾನು ಆಸ್ಪತ್ರೆಯ ಬಾಲ್ಕನಿಯಲ್ಲಿ ನಿಂತು ದೂರಕ್ಕೆ ದೃಷ್ಟಿ ಹರಿಸಿದೆ. ತಕ್ಷಣ ವಿಲಕ್ಷಣವಾದ ಭಾವವೊಂದು ನನ್ನನ್ನು ಕಾಡಿತು. ಜೀವನ ಆಟ ಮತ್ತು ಸಾವಿನ ಆಟದ ನಡುವೆ ಕೇವಲ ಒಂದು ರಸ್ತೆ ಮಾತ್ರ ಅಲ್ಲಿತ್ತು. ಒಂದು ಕಡೆ ಕ್ರೀಡಾಂಗಣ… ಮತ್ತೊಂದು ಕಡೆ ಆಸ್ಪತ್ರೆ ಇತ್ತು. ಆದರೆ ನಾವು ಇವೆರಡರಲ್ಲಿ ಒಂದರ ಭಾಗವಾಗಿದ್ದೇವೆ ಎಂದು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಕ್ರೀಡಾಂಗಣಕ್ಕೂ ಸೇರಿದವರಲ್ಲ, ಆಸ್ಪತ್ರೆಗೂ ಸೇರಿದವರಲ್ಲ. ಈ ಸತ್ಯ ನನ್ನನ್ನು ಬಹಳವಾಗಿ ಕಾಡಿತು.
ಈ ಬ್ರಹ್ಮಾಂಡಕ್ಕೆ ಅದೆಂಥಾ ಅಭೂತ ಪೂರ್ವ ಶಕ್ತಿ ಇದೆ ಎಂಬುದು ಗೊತ್ತಾಯಿತು. ನನ್ನ ಆಸ್ಪತ್ರೆ ಇರುವ ಸ್ಥಳದ ಈ ಒಂದು ವಿಚಿತ್ರ ಘಟ್ಟ ನನ್ನನ್ನು ಬಹುವಾಗಿ ಕಾಡಿತು. ನನ್ನಲ್ಲೀಗ ಅನಿಶ್ಚಿತತೆ ಮನೆ ಮಾಡಿದೆ. ನಾನೀಗ ಮಾಡಲು ಸಾಧ್ಯವಿರುವುದು ಒಂದನ್ನೇ.. ನನ್ನ ಸಾಮರ್ಥ್ಯವನ್ನು ಅರಿತುಕೊಂಡು, ನನ್ನ ಪಾಲಿನ ಆಟವನ್ನು ಅತ್ಯುತ್ತಮವಾಗಿ ಆಡೋದು.
ಫಲಿತಾಂಶ ಏನಾಗಬಹುದೆಂದು ಯೋಚಿಸಿದೆ, ಇದು ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗಬಹುದೆಂದೂ ಯೋಚಿಸಿದೆ. ಈಗಿನಿಂದ ನಾಲ್ಕು ಎಂಟು ತಿಂಗಳು ಅಥವಾ ಎರಡು ವರ್ಷವಾಗಲಿ, ಫಲಿತಾಂಶ ಏನೇ ಬರಲಿ. ನಾನು ನಂಬಿಕೆ ಕಳೆದುಕೊಳ್ಳಬಾರದು ಎಂದು ನಿರ್ಧರಿಸಿದ್ದೇನೆ.
ಆಸ್ಪತ್ರೆಯ ಚಿಕಿತ್ಸೆ ಪಡೆಯುವಾಗ ಮೊದಲ ಬಾರಿಗೆ ಸ್ವಾತಂತ್ರ್ಯ ಎನ್ನುವ ಪದದ ನಿಜವಾದ ಅರ್ಥ ಮನವರಿಕೆಯಾಗಿದೆ. ಜೀವನದ ಮ್ಯಾಜಿಕನ್ನು ಮೊದಲ ಬಾರಿಗೆ ಪರೀಕ್ಷಿಸುತ್ತಿದ್ದೇನೆ. ಫಲಿತಾಂಶ ಏನಾಗಲಿದೆ ಎಂಬುದನ್ನು ಕಾಯುತ್ತಿದ್ದೇನೆ. ನನ್ನ ಪ್ರತಿಯೊಂದು ಕಣಕಣದಲ್ಲೂ ವಿಶ್ವಾಸವಿದೆ. ಅದು ಉಳಿಯುವುದೇ ಎನ್ನುವುದನ್ನು ಸಮಯವೇ ಹೇಳಲಿದೆ. ”


ನನ್ನ ಜೀವನದ ಪ್ರಯಾಣದುದ್ದಕ್ಕೂ ಜಗತ್ತಿನಾದ್ಯಂತ ಜನ ನನಗಾಗಿ ಪ್ರಾರ್ಥಿಸಿಸುತ್ತಿದ್ದಾರೆ… ಶುಭ ಕೋರಿದ್ದಾರೆ. ನನಗೆ ತಿಳಿದಿರುವ, ತಿಳಿಯದೆ ಇರುವ ಜನರು ವಿಶ್ವದ ವಿವಿಧೆಡೆಯಿಂದ ನನಗಾಗಿ ಪ್ರಾರ್ಥಿಸುತ್ತಿದ್ದಾರೆ. ಬೇರೆ ಬೇರೆ ಜಾಗದಲ್ಲಿ ಬೇರೆ ಬೇರೆ ಕಾಲಮಾನದಲ್ಲಿ ಮಾಡಿದ ಈ ಪ್ರಾರ್ಥನೆ ಒಂದಾಗಿ ನನಗೆ ಸ್ಫೂರ್ತಿ ನೀಡುತ್ತಿದೆ… ನನ್ನ ಶಕ್ತಿಯ ಕಿರೀಟವಾಗಿದೆ. ಈ ವಿಶ್ವಾಸ ನಿಧಾನವಾಗಿ ಮೊಗ್ಗಾಗಿ, ಎಲೆಯಾಗಿ, ರೆಂಬೆವಾಗಿ ಬೆಳೆಯುತ್ತಿದೆ. ನಾನು ಈ ಪ್ರಾರ್ಥನೆಯನ್ನು ನೋಡುತ್ತ ತೃಪ್ತಿಪಡುತ್ತಿದ್ದೇನೆ. ಪ್ರತಿ ಹೂವು, ಪ್ರತಿ ರೆಂಬೆಯೂ ಸಾಮೂಹಿಕ ಪ್ರಾರ್ಥನೆಯ ಮೂಲಕ ನನ್ನನ್ನು ತಲುಪಿ ಅಚ್ಚರಿ, ಸಂತೋಷ ಮತ್ತು ಕುತೂಹಲ ಮೂಡಿಸಿದೆ. ಒಂದು ಪ್ರವಾಹವನ್ನು ತಡೆಯಲು ಮುಚ್ಚಳದ ಅಗತ್ಯವಿಲ್ಲ ಎನ್ನುವುದು ಮನವರಿಕೆಯಾಗಿದೆ. ಬಹುಶಃ ಪ್ರಕೃತಿ ನನಗೆ ಸಣ್ಣ ಆಘಾತ ನೀಡಿದೆಯಷ್ಟೆ.’’”

Recommended For You

Leave a Reply

error: Content is protected !!
%d bloggers like this: