ಮದುಮಕ್ಕಳ ಕೊಡುಗೈ ದಾನ..!

ಮದುವೆಗೆ ಮುನ್ನವೇ ಮದುವೆಯ, ಹುಟ್ಟಲಿರುವ ಮಕ್ಕಳ, ಮೊಮ್ಮಕ್ಕಳ ಖರ್ಚುಗಳಿಗೆ ಬ್ಯಾಂಕಲ್ಲಿ ಇಡುಗಂಟು ಇಡುವ ಜಮಾನ ಇದು. ಅಂಥದರಲ್ಲಿ ಮದುವೆ ಖರ್ಚನ್ನೇ ಸರಳಗೊಳಿಸಿ ಆ ದುಡ್ಡನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಮೂಲಕ ಮಾದರಿಯಾದ ಜೋಡಿ ಇಲ್ಲಿದೆ. ನವ ದಂಪತಿಯ ಹೆಸರು ಅರ್ಜುನ್ ಮತ್ತು ನಂದಿನಿ.

ಅರ್ಜುನ್ ಮತ್ತು ನಂದಿನಿಯದು ಹತ್ತು ವರ್ಷಗಳ ಪ್ರೀತಿ. ಆದರೆ ವಿವಾಹಕ್ಕೆ ತಡೆಯಾಗಿದ್ದು ವಿಭಿನ್ನವಾದ ಜಾತಿ. ದಾಂಪತ್ಯಕ್ಕೆ ಇಲ್ಲ ಜಾತಿಯ ಅಗತ್ಯ. ಆದರೆ ಮನೆಯವರು ಒಪ್ಪಲೇ ಇಲ್ಲ ಎನ್ನುವುದು ಸತ್ಯ. ಮನೆಯವರು ಒಪ್ಪುವ ತನಕ ಮದುವೆ ಬೇಡ ಎನ್ನುವುದು ಜೋಡಿಗಳ ಹಠ. ದಶಕದ ಪ್ರಯತ್ನಕ್ಕೆ ಇಂದು ಗೆಲವು ಸಿಕ್ಕಿದ್ದು ದಿಟ! ವಿವಾಹ ನಡೆದಿದ್ದು ಸರಳವಾಗಿ. ಹತ್ತಿರದ ಸಂಬಂಧಿಕರು ಮತ್ತು ಅತ್ಯಾಪ್ತ ಗಣ್ಯರಷ್ಟೇ ಭಾಗಿ. ಹೆಚ್ಚುವರಿ ಉಳಿದ ದುಡ್ಡನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದಾರೆ. 50,000 ರೂಪಾಯಿಗಳ ಚೆಕ್ ಅನ್ನು ವಧುವರರ ಕೈಗಳಿಂದ ಸ್ವೀಕರಿಸಿದ ಜನಪ್ರಿಯ ಚಿತ್ರನಟ ನವೀನ್ ಕೃಷ್ಣ ಅವರು ಸರ್ಕಾರಕ್ಕೆ ತಲುಪಿಸಿದ್ದಾರೆ. ಬಳಿಕ ದಂಪತಿಯಿಂದ ಲಾಕ್ಡೌನಲ್ಲಿ ನೊಂದ ನೂರು ಜನ ಅರ್ಹರಿಗೆ ಆಹಾರದ ಕಿಟ್ ವಿತರಣೆ ಕಾರ್ಯಕ್ರಮ ಕೂಡ ನೆರವೇರಿತು.

ಬಿಟಿ ಎಮ್ ಲೇಔಟ್ ನ ರಾಜರಾಜೇಶ್ವರಿ ಪ್ರಾರ್ಥನಾ ಮಂದಿರದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕಿಟ್ ವಿತರಿಸಿದ ನಟ, ನಿರ್ದೇಶಕ ನವೀನ್ ಕೃಷ್ಣ ಅವರು ಸಿನಿಕನ್ನಡ.ಕಾಮ್ ಜತೆಗೆ ಮಾತನಾಡಿ, “ಕೋವಿಡ್ 19ನಿಂದ ಉಂಟಾಗಿರುವ ಈ ಕಷ್ಟ ಸಂದರ್ಭದಲ್ಲಿ ಸೇವಾ ಮನೋಭಾವದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ಕಂಡಾಗ ಖುಷಿ ತಂದಿತು. ವೀರಕಪುತ್ರ ಅವರ ಆಹ್ವಾನದ ಮೇರೆಗೆ ಈ ವಿವಾಹದಲ್ಲಿ ಪಾಲ್ಗೊಂಡೆ” ಎಂದರು.

ಅಖಿಲ ಕರ್ನಾಟಕ ವಿಷ್ಣುಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರ ಸಹಭಾಗಿತ್ವದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಆಂಜನಪ್ಪ ಉಪಸ್ಥಿತರಿದ್ದರು.

Recommended For You

Leave a Reply

error: Content is protected !!
%d bloggers like this: