ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ಮಗಳು ಜಾನಕಿ’ ಮುಕ್ತಾಯಗೊಂಡಿದ್ದಾಗಿ ಅಧಿಕೃತ ಮಾಹಿತಿ ದೊರಕಿದೆ. ಖ್ಯಾತ ನಿರ್ದೇಶಕ ಟಿ ಎನ್ ಸೀತಾರಾಮ್ ಅವರ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ ‘ಮಗಳು ಜಾನಕಿ’ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿತ್ತು. ಹಾಗಾಗಿ ಈ ಸುದ್ದಿ ಅವರಿಗೆಲ್ಲ ಆಘಾತ ತಂದಿರುವುದರಲ್ಲಿ ಸಂದೇಹವಿಲ್ಲ. ಕಲರ್ಸ್ ಸೂಪರ್ ವಾಹಿನಿಯ ಬಿಸ್ನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅವರು ಸಿನಿಕನ್ನಡ. ಕಾಮ್ ಜತೆಗೆ ಮಾತನಾಡಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
ಮಗಳಿಗೆ ಮಂಗಳಂ
“ಮಗಳು ಜಾನಕಿ” ಮಾತ್ರವಲ್ಲ, ಕಲರ್ಸ್ ಸೂಪರ್ ವಾಹಿನಿಯಲ್ಲಿನ ಎಲ್ಲ ಸೀರಿಯಲ್ ಗಳು ಶೋಗಳು ಸ್ಟಾಪ್ ಆಗಲಿದೆ. ಒಂದು ದೊಡ್ಡ ಗ್ಯಾಪ್ ಬಳಿಕ ಎಲ್ಲ ಹೊಸ ಕಾರ್ಯಕ್ರಮಗಳೊಂದಿಗೆ ವಾಹಿನಿ ಮುಂದುವರಿಯಲಿದೆ. ಅಲ್ಲಿಯವರೆಗೆ ‘ಕಲರ್ಸ್ ಸೂಪರ್’ ವಾಹಿನಿಯಲ್ಲಿ ಯಾವುದೇ ಹೊಸ ಎಪಿಸೋಡ್ ಗಳ ಪ್ರಸಾರವಿಲ್ಲ.
ಪರಮೇಶ್ವರ ಗುಂಡ್ಕಲ್, ‘ಕಲರ್ಸ್ ಕನ್ನಡ’ ಗ್ರೂಪ್ ಬಿಸ್ನೆಸ್ ಹೆಡ್
ಹೊಸ ಪ್ರಾಜೆಕ್ಟ್ ಕಡೆ ಗಮನ ಹರಿಸಿದ್ದೇನೆ- ಟಿ.ಎನ್.ಸೀ
ನನಗೆ ತಿಳಿದಂತೆ ಇನ್ನು ಸುಮಾರು ಐದು ತಿಂಗಳ ಮಟ್ಟಿಗೆ ‘ಕಲರ್ಸ್ ಸೂಪರ್’ ವಾಹಿನಿಯನ್ನು ಸ್ಥಗಿತಗೊಳಿಸುತ್ತಿದ್ದಾರೆ. ಹಾಗಾಗಿ ‘ಮಗಳು ಜಾನಕಿ’ ಮುಂದುವರಿಯುವ ಸಾಧ್ಯತೆ ಇಲ್ಲ. ನಾನು ಸಧ್ಯಕ್ಕೆ ಬೇರೆ ಹೊಸ ಪ್ರಾಜೆಕ್ಟ್ ಕಡೆಗೆ ಗಮನ ಕೇಂದ್ರೀಕರಿಸಿದ್ದೇನೆ. ಆದರೆ ವಾಹಿನಿಯಿಂದ ನನಗೆ ಅಧಿಕೃತವಾಗಿ ತಿಳಿಸಿರದ ಕಾರಣ ನಾನು ಕೂಡ ನನ್ನ ತಂಡಕ್ಕೆ ನಿಂತು ಹೋಗಿದೆ ಎಂದು ಹೇಳಿಲ್ಲ.
ಟಿ ಎನ್ ಸೀತಾರಾಮ್, ‘ಮಗಳು ಜಾನಕಿ’ ನಿರ್ದೇಶಕರು
ಸರಿಯಾದ ಅಂತ್ಯ ಪ್ರಸಾರವಾಗಬೇಕಿತ್ತು – ಗಾನವಿ
“ಮುಂದಿನ ದೃಶ್ಯಗಳು ತುಂಬ ಚೆನ್ನಾಗಿದ್ದವು. ಶೂಟ್ ಮಾಡಿರುವ ಎಪಿಸೋಡ್ ಗಳು ಕೂಡ ಎಲ್ಲವೂ ಪ್ರಸಾರವಾಗಿಲ್ಲ. ಅದನ್ನಾದರೂ ಪ್ರಸಾರ ಮಾಡಬೇಕಿತ್ತು. ನೊ ಕಮೆಂಟ್ಸ್. ಸೀತಾರಾಮ್ ಸರ್ ಅವರ ಧಾರಾವಾಹಿ ಹೀಗೆ ಅರ್ಧದಲ್ಲಿ ಕೊನೆಯಾಗಿರುವ ಇತಿಹಾಸ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ನನಗೆ ಇದುವರೆಗೆ ಅಧಿಕೃತವಾಗಿ ಹೇಳಿಲ್ಲ. ನಿಲ್ಲಿಸುವುದಾದರೆ ಧಾರಾವಾಹಿಯ ಕತೆಗಳಿಗೆ ಒಂದು ಪ್ರಾಪರ್ ಎಂಡಿಂಗ್ ಕೊಟ್ಟು ನಿಲ್ಲಿಸುವ ಅವಕಾಶ ವಾಹಿನಿ ನೀಡಿದ್ದರೆ ಚೆನ್ನಾಗಿತ್ತು. ‘ಮಗಳು ಜಾನಕಿ’ಗೆ ಎಷ್ಟೊಂದು ಅಭಿಮಾನಿಗಳಿದ್ದಾರೆ ಎನ್ನುವುದು ನನಗೂ ಗೊತ್ತು. ಅವರಿಗೆ ನಿರಾಶೆ ಮಾಡಬಾರದಿತ್ತು.
ಸದ್ಯಕ್ಕೆ ನಾನು ಚಿಕ್ಕಮಗಳೂರಿನ ನನ್ನ ಮನೆಯಲ್ಲೇ ಇದ್ದೇನೆ. ಹೊಸ ಆಫರ್ಸ್ ಬಂದರೆ ಇಷ್ಟವಾದರೆ ಒಪ್ಪಿಕೊಳ್ಳುತ್ತೇನೆ. ಆದರೆ ಧಾರಾವಾಹಿ ಮಾಡುವುದಿಲ್ಲ. ಸಿನಿಮಾಗಳ ಆಫರ್ ಬರುತ್ತಿವೆ. ಅವುಗಳಲ್ಲಿ ಗಟ್ಟಿ ಪಾತ್ರ ಇರುವಂಥ ಚಿತ್ರವನ್ನು ನಾನು ಆಯ್ದುಕೊಳ್ಳಬೇಕಾಗಿದೆ.
ಗಾನವಿ ಲಕ್ಷ್ಮಣ್, ಮಗಳು ಜಾನಕಿ ನಾಯಕಿ
ಕ್ಲೈಮ್ಯಾಕ್ಸ್ ದೃಶ್ಯಗಳಿಗೆ ಕಾತರಿಸಿದ್ದೆ- ರಾಕೇಶ್ ಮಯ್ಯ
‘ಮಗಳು ಜಾನಕಿ’ಗೂ ಮೊದಲು ನಾನು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಇದೊಂದು ಧಾರಾವಾಹಿ ನನ್ನನ್ನು ಜನ ಗುರುತಿಸುವಂತೆ ಮಾಡಿದೆ. ಇದುವರೆಗೆ ಸಹಜವಾಗಿ ಜಾನಕಿಗೆ ಪ್ರಾಮುಖ್ಯತೆ ಇತ್ತು. ಆದರೆ ಧಾರಾವಾಹಿಯ ಉದ್ದಕ್ಕೂ ನನ್ನ ವರ್ತನೆಗಳಿಗೆ ಏನು ಕಾರಣ ಎನ್ನುವುದನ್ನು ತಿಳಿಸುವಂಥ ಕ್ಲೈಮ್ಯಾಕ್ಸ್ ಬಗ್ಗೆ ಎಲ್ಲರಿಗೂ ನಿರೀಕ್ಷೆ ಇತ್ತು. ನನಗೂ ನಟನೆಯ ಮತ್ತೊಂದು ಮುಖ ತೋರಿಸಲು ನಿರ್ದೇಶಕರ ಕಡೆಯಿಂದ ಇನ್ನಷ್ಟು ಅವಕಾಶ ಸಿಗುತ್ತಿತ್ತು ಎನ್ನುವ ನಿರೀಕ್ಷೆ ಇತ್ತು. ಹಾಗಂತ ಕತೆಯ ಅಂತ್ಯ ನನಗೆ ಹೇಳಿದ್ದಾರೆ ಅಂತ ಅಲ್ಲ. ನಿರೀಕ್ಷೆ ಇತ್ತು. ಹಾಗಾಗಿ ಎಲ್ಲರ ನಿರೀಕ್ಷೆಗಳಿಗೆ ಬ್ರೇಕ್ ಬಿದ್ದಂತಾಗಿದೆ. ಹೊಸ ಆಫರ್ ಗಳು ಬರುತ್ತಿವೆ. ಒಂದು ಸಿನಿಮಾ ಕೂಡ ಮಾಡಬೇಕು ಅಂತ ಇದೆ. ಅದು ಜೂನ್ ನಲ್ಲಿ ಶುರುವಾಗಬೇಕಿತ್ತು. ಸದ್ಯಕ್ಕೆ ಸಣ್ಣಪುಟ್ಟ ಗ್ರಾಫಿಕ್ ಡಿಸೈನ್ ಕೆಲಸ ಮತ್ತು ‘ಲೋಲ್ ಭಾಗ್’ ಯೂ ಟ್ಯೂಬ್ ವಾಹಿನಿಯ ಮೂಲಕ ದಿನಕಳೆಯುತ್ತಿದ್ದೇನೆ.
ರಾಕೇಶ್ ಮಯ್ಯ, ನಿರಂಜನ್ ಪಾತ್ರಧಾರಿ.
ವೀಕ್ಷಕರ ನಿರಾಸೆ
ನಿರಂಜನ್ ತಂದೆ ಕೊಲೆ ಮಾಡಿದ್ದಾರ? ಅಥವಾ ಮಾಡಿದ್ದು ಹೇಗೆ? ಭಾರ್ಗಿ ನಿಜವಾಗಿಯೂ ತನ್ನ ತಂದೆಯಲ್ಲ ಎಂದು ಜಾನಕಿಗೆ ಯಾರಿಂದ ತಿಳಿಯುತ್ತದೆ? ಶ್ಯಾಮಲತ್ತೆ ಮಗ ಮತ್ತು ಸೊಸೆ ಆಸ್ತಿಯ ಆಸೆಯಿಂದ ಬಂದಿದ್ದಾರೆ. ಅವರಿಗೆ ಆಸ್ತಿ ಸಿಗುತ್ತಾ? ಎನ್ನುವ ಪ್ರಶ್ನೆಗಳು ಒಂದು ಕಡೆಯಾದರೆ ಕತೆಯ ಪ್ರಮುಖ ಖಳ ಭಾರ್ಗಿಗೆ ತಕ್ಕ ಶಾಸ್ತಿ ಆಗುತ್ತಾ? ಆಗುವ ಶಿಕ್ಷೆ ಏನು? ಅದಕ್ಕೆ ಆತನ ಪ್ರತಿಕ್ರಿಯೆ ಏನು? ಒಟ್ಟಿನಲ್ಲಿ ಒಳ್ಳೆಯ ಪಾತ್ರಗಳು ಖುಷಿಯಾದಾಗ ಅವರ ಮುಖಭಾವ ಹೇಗಿರುತ್ತದೆ? ದುಷ್ಟರು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವಾಗ ಅವರ ಪ್ರಾಯಶ್ಚಿತ್ತ ಪಡುತ್ತಾರ ಮೊದಲಾದವನ್ನು ಪರದೆಯ ಮೇಲೆಯೇ ನೋಡಲು ಲಕ್ಷಾಂತರ ಮಂದಿ ಪ್ರೇಕ್ಷಕರು ಕಾದಿದ್ದಾರೆ ಎನ್ನುವುದು ನಿಜ. ‘ಕಲರ್ಸ್ ಸೂಪರ್’ ತಾತ್ಕಾಲಿಕ ಸ್ಥಗಿತವಾದರೇನು? ಕಲರ್ಸ್ ಕನ್ನಡ ವಾಹಿನಿಯಲ್ಲಿ ಮುಂದುವರಿಸಬಹುದಲ್ಲ ಎನ್ನುವುದು ಅಭಿಮಾನಿಗಳ ಆಗ್ರಹ. ಅವರಿಗೆಲ್ಲ ವಾಹಿನಿಯ ಈ ನಿರ್ಧಾರದಿಂದ ನಿರಾಶೆ ಆಗಿರುವುದು ಕೂಡ ಅಷ್ಟೇ ನಿಜ.