ಯುವ ನಟ, ನಿರ್ದೇಶಕ, ಬರಹಗಾರ, ಕವಿ ಎಲ್ಲವೂ ಆಗಿರುವ ಸುಜಯ್ ಬೆದ್ರ ಅವರು ತಾವು ಕಂಡ ರಂಗಭೂಮಿಯ ಯುವ ಪ್ರತಿಭೆ ವಿನುತಾ ಗಟ್ಟಿ ಕೈರಂಗಳ ಇವರನ್ನು ಸಿನಿಕನ್ನಡ.ಕಾಮ್ ಮೂಲಕ ರಂಗ ಪ್ರೇಮಿಗಳಿಗೆ ಪರಿಚಯಿಸಿದ್ದಾರೆ.
ಯಕ್ಷಗಾನ ಕರಾವಳಿ ಭಾಗದ ಗಂಡುಕಲೆ. ‘ತೆಂಕು ತಿಟ್ಟು’ ಹಾಗೂ ‘ಬಡಗು ತಿಟ್ಟು’ ಎಂಬ ಎರಡು ಕವಲುಗಳಾಗಿ ಬೆಳೆದುಬಂದಿರುವ ಈ ಕಲೆಯಲ್ಲಿ
ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅರ್ಧಭಾಗದಲ್ಲಿ ಚಾಲ್ತಿಯಲ್ಲಿರುವುದನ್ನು ‘ತೆಂಕು ತಿಟ್ಟು ಯಕ್ಷಗಾನ’ವಾಗಿ ಗುರುತಿಸಲ್ಪಡುತ್ತದೆ. ಅದರಿಂದ ಹೊರಬಂದಂಥ ಕರಾವಳಿಯ ಹಲವಾರು ಗ್ರಾಮೀಣ ಪ್ರತಿಭೆಗಳ ಸಾಲಲ್ಲಿ ವಿನುತ ಕೆ ಗಟ್ಟಿ ಕೂಡ ಒಬ್ಬರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಾನು PhD ವ್ಯಾಸಂಗ ಮಾಡುತ್ತಿದ್ದ ವೇಳೆ ಜೀವವಿಜ್ಞಾನ ವಿಭಾಗಗಕ್ಕೆ ಹೊಸ ಶೈಕ್ಷಣಿಕ ವರ್ಷಕ್ಕೆ ಆಗಮಿಸಿದ ಸ್ನಾತಕೋತ್ತರ ಪದವಿಗೆ ಸೇರಿದ ವಿದ್ಯಾರ್ಥಿಗಳ ಪೈಕಿ ವಿನುತ ಕೆ ಗಟ್ಟಿ ಇದ್ದರು. ಕೇವಲ ಬಯೋಟೆಕ್ ವಿದ್ಯಾರ್ಥಿಗಳಿಗೆ ಕ್ಲಾಸ್ ತಗೊಳ್ಳುತ್ತಿದ್ದ ಕಾರಣ ನನಗೆ ವಿನುತ ಅವರ ಪರಿಚಯ ಆಗ ಆಷ್ಟಾಗಿ ಇರಲಿಲ್ಲ. ಮುಂದೆ ಒಂದು ದಿನ ವಿಶ್ವವಿದ್ಯಾನಿಲಯದ ವತಿಯಿಂದ ನಡೆಯುವ ಅಂತರ್ ವಿಭಾಗ ಟ್ಯಾಲೆಂಟ್ ಸ್ಪರ್ಧೆಗಾಗಿ ನಾನು ಬರೆದ ಸ್ಕಿಟ್ ಗೆ ವಿದ್ಯಾರ್ಥಿಗಳನ್ನು ಹುಡುಕುತ್ತಿರುವಾಗ ಸಿಕ್ಕವರಲ್ಲಿ ವಿನುತ ಕೂಡ ಒಬ್ಬರು. ಅವರ ನೃತ್ಯಕೌಶಲ್ಯ, ನಾಟಕ, ಅಭಿನಯ, ಭಾಷೆಯ ಮೇಲಿನ ಹಿಡಿತ ಇದೆಲ್ಲವನ್ನು ಗಮನಿಸಿ ವಿಚಾರಿಸಿದಾಗಲೇ ನನಗೆ ಅವರ ಯಕ್ಷಗಾನ ಪ್ರೀತಿಯ ಅರಿವಾಗಿದ್ದು. ಪಾಶ್ಚಿಮಾತ್ಯ ಕಲೆಗೆ ಹೆಚ್ಚು ಒಲವು ತೋರುವ ಇಂದಿನ ಯುವಜನರ ನಡುವೆ ದೇಶಿ ಕಲೆಗೆ ಮಣೆಹಾಕಿರುವ ಕಾರಣಕ್ಕೆ ಅಂದು ವಿಶೇಷ ಅನಿಸಿದ್ದ ವಿನುತ ಅವರ ಬಗ್ಗೆ ಬರೆಯುವುದಕ್ಕೆ ನನಗೆ ಖುಷಿಯಿದೆ.
ಮೂಲತಃ ಕೈರಂಗಳ ನಿವಾಸಿಯಾಗಿರುವ ವಿನುತ ಕೆ ಗಟ್ಟಿ ಅವರಿಗೆ ಬಾಲ್ಯದಿಂದಲೇ ಯಕ್ಷಗಾನದ ಬಗ್ಗೆ ಅಪಾರ ಆಸಕ್ತಿ. ಸಧ್ಯ ಜೀವಶಾಸ್ತ್ರ ಪ್ರಾಧ್ಯಾಪಕಿ ಆಗಿರುವ ವಿನುತ ಅವರಿಗೆ ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಸರ್ಕಾರಿ ಕನ್ನಡ ಮಾಧ್ಯಮದಲ್ಲಿ ಪೂರೈಸಿರುವ ಬಗ್ಗೆ ಅಪಾರ ಹೆಮ್ಮೆಯಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಹಾಗೂ B.ed ಮುಗಿಸಿರುವ ಇವರದು ಕಲೆ ಮತ್ತು ವೃತ್ತಿಜೀವನದ ನಡುವೆ ಹೊಯ್ದಾಡುವ ಸೃಜನಾತ್ಮಕ ಜೀವನಶೈಲಿ.
ಯಕ್ಷಗಾನ ಕಲಿಯಬೇಕೆಂಬ ವಿನುತ ಅವರ ಆಸೆಗೆ ಜೀವ ಬಂದಿದ್ದು ಐದನೇ ತರಗತಿಯಲ್ಲಿ. ಶಾಲೆಯಲ್ಲಿ ಆರಂಭವಾದ ಯಕ್ಷಗಾನ ನಾಟ್ಯ ತರಬೇತಿಯಲ್ಲಿ ಶ್ರೀಯುತ ಕೃಷ್ಣ ಮೂಲ್ಯ ಕೈರಂಗಳ ಹಾಗೂ ಶ್ರೀ ಗೋಪಾಲಕೃಷ್ಣ, ಕೈರಂಗಳ ಯಕ್ಷಗಾನ ಸಂಘ, ಇದರ ಸದಸ್ಯರ ನೇತೃತ್ವದಲ್ಲಿ ನಾಟ್ಯಾ ಭ್ಯಾಸ ಆರಂಭಿಸಿದ ನಂತರ ಹಿಂತಿರುಗಿ ನೋಡುವ ಸಂಧರ್ಭ ಎದುರಾಗಲಿಲ್ಲ. ನಿರಂತರ ಅಭ್ಯಾಸದ ನಂತರ 2006 ರಲ್ಲಿ ಮೊದಲ ಬಾರಿಗೆ ಯಕ್ಷರಂಗ ಏರುವ ಅವಕಾಶ ಲಭಿಸುತ್ತದೆ. ಅಂದು ನಿರ್ವಹಿಸಿದ ಪಂಚಜನ ಮೋಕ್ಷದ ಶ್ರೀಕೃಷ್ಣನನ ಪಾತ್ರಕ್ಕೆ ಅಪಾರ ಜನಮನ್ನಣೆ ದೊರೆತದ್ದು ವಿನುತಾ ಅವರ ವೃತ್ತಿಜೀವನದ ನಿರ್ಣಾಯಕ ಘಟ್ಟ.
ನಂತರದ ದಿನಗಳಲ್ಲಿ ಆನೆಗುಂಡಿ ಗಣಪತಿ ಭಟ್, ನಾಗೇಶ್ ಆಚಾರ್ಯ ಕೈರಂಗಳ, ಭಾಗವತರಾದ ರಾಜಾರಾಮ ಹೊಳ್ಳರಂತ ಹಲವು ದಿಗ್ಗಜರ ಶಿಷ್ಯೆಯಾಗಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದಲ್ಲಿ ನಾಟ್ಯಾಭ್ಯಾಸವನ್ನು ಮುಂದುವರೆಸುತ್ತಾ ಒಂದು ಸಣ್ಣ ಯಕ್ಷ ತಂಡದ ಭಾಗವಾಗಿ 2006 ರಿಂದ ಇಂದಿನ ತನಕ ನೂರಕ್ಕೂ ಹೆಚ್ಚು ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಕಾಲೇಜು ಓದಿನ ಜೊತೆಜೊತೆಗೆ ಅವಕಾಶ ಸಿಕ್ಕಾಗಲೆಲ್ಲ ಬಣ್ಣ ಹಚ್ಚುತ್ತಾ ಕಲಾಸೇವೆಯಲ್ಲಿ ನಿಷ್ಠೆಯಿಂದ ತೊಡಗಿರುವ ವಿನುತಾ ಅವರು ನರಕಾಸುರವಧೆ, ಪಂಚಜನ ಮೋಕ್ಷ, ಕೃಷ್ಣಲೀಲೆ ಪ್ರಸಂಗಗಳಲ್ಲಿ ಕೃಷ್ಣನಾಗಿ ಆ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವವರಲ್ಲಿ ಮೇಲುಗೈ ಸಾಧಿಸಿದ್ದಾರೆ. ಇನ್ನು ತರಣಿಸೇನ ಪ್ರಸಂಗದ ತರಣಿಸೇನ, ಗುರುದಕ್ಷಿಣೆಯ ಏಕಲವ್ಯ ಸೇರಿದಂತೆ ಮದಿರಾಕ್ಷ, ರೂಕ್ಷ, ಸತ್ಯಭಾಮೆ, ಮಾಲಿನಿ, ಶಬರಿ, ಸುದರ್ಶನ, ಚಿತ್ರಾಂಗದೆ, ತ್ರಿಲೋಕ ಸುಂದರಿ, ದೇವೇಂದ್ರ ಹೀಗೆ ಹಲವಾರು ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಕೀರ್ತಿಯೂ ಇವರಿಗೆ ಸಂದಿದೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ವಿದ್ಯಾಬ್ಯಾಸ ಮಾಡುತ್ತಿದ್ದ ಸಮಯದಲ್ಲಿ ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಹಲವಾರು ವೇಷ ಹಾಕಿದ್ದನ್ನು ಸ್ಮರಿಸಿಕೊಳ್ಳುವ ವಿನುತಾ ಅಲ್ಲಿ ಹೆಚ್ಚಿನ ಹೆಜ್ಜೆಗಳನ್ನು ಕಲಿತೆ. ಅಲ್ಲಿಯ ಮುಖ್ಯ ಗುರುಗಳಾದ ಸದಾಶಿವ ಶೆಟ್ಟಿಗಾರ್ ಹಾಗೂ ಶರತ್ ಪೂಜಾರಿ ಅವರನ್ನು ಮರೆಯುವಂತಿಲ್ಲ ಎನ್ನುತ್ತಾರೆ.
ಕೂಡು ಕುಟುಂಬದ ಹಿನ್ನೆಲೆಯಿರುವ ವಿನುತಾ ರವರು ಯಕ್ಷಗಾನ ಕ್ಷೇತ್ರದಲ್ಲಿ ನಾನು ಇದುವರೆಗೆ ಮಾಡಿರುವ ಅಲ್ಪ ಸಾಧನೆಗೆ ತಮ್ಮ ಕುಟುಂಬವೇ ಬಹುದೊಡ್ಡ ಸ್ಪೂರ್ತಿ ಹಾಗೂ ಅವರ ಸಹಕಾರ ಅನನ್ಯ ಎನ್ನಲು ಮರೆಯುವುದಿಲ್ಲ. ಯಾವುದೇ ರೀತಿಯ ಪ್ರಚಾರದ ಹಿಂದೆ ಬೀಳದೆ, ಪ್ರಶಸ್ತಿ, ಮನ್ನಣೆಯ ಗೊಡವೆಯೇ ಇಲ್ಲದೆ ಕೇವಲ ತಮ್ಮ ಆತ್ಮತೃಪ್ತಿ ಗಾಗಿ ಕಾಲಾರಾಧನೆಯಲ್ಲಿ ತೊಡಗಿಕೊಂಡಿರುವುದು ಅವರ ಸರಳೆತೆಗೆ ಹಿಡಿದ ಕೈಗನ್ನಡಿ. ಗಂಡುಕಲೆ ಎಂದೇ ಪ್ರಸಿದ್ಧವಾಗಿರುವ ಯಕ್ಷಗಾನದಲ್ಲಿ ಭಾರವಾದ ಪೋಷಾಕುಗಳೊಂದಿಗೆ ಗಂಡಸರಂತೆಯೇ ಸಲೀಸಾಗಿ ಲೀಲಾಜಾಲವಾಗಿ ಕುಣಿಯುವ ವಿನುತರವರ
ಸಾಧನೆಯ ಹಾದಿಗೆ ಕಳಶವೆಂಬಂತೆ ಸಂಪಾಜೆ ಯಕ್ಷೋತ್ಸವ ಸ್ಪರ್ಧೆಯಲ್ಲಿ ಇವರು ನಿರ್ವಹಿಸಿದ ವಿಭೀಷಣನ ಪಾತ್ರಕ್ಕೆ ತೃತೀಯ ಬಹುಮಾನ ಸೇರಿದಂತೆ ಇನ್ನೂ ಹತ್ತು ಹಲವು ಪ್ರಶಸ್ತಿಗಳು ಇವರಿಗೆ ಲಭಿಸಿವೆ.
ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿರುವುದೂ ಸಹ ಈ ಕಲೆ ನೇಪಥ್ಯಕ್ಕೆ ಸರಿಯುತ್ತಿರುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಹಾವಳಿಯ ನಡುವೆ ವೈಜ್ಞಾನಿಕ ಹಾಗೂ ತರ್ಕಬದ್ಧ ಹಿನ್ನೆಲೆ ಹೊಂದಿರುವ ಹಲವಾರು ದೇಶಿ ಕಲಾಪ್ರಕಾರಗಳು ನಮ್ಮ ನೆಲದಲ್ಲಿ ನಗಣ್ಯ ಆಗಿರುವುದು ವಿಪರ್ಯಾಸವೇ ಸರಿ.
ಇದೆಲ್ಲದರ ನಡುವೆಯೂ ಸ್ವದೇಶಿತನ ಮೆರೆಯುತ್ತಿರುವ ವಿನುತ ರಂತಹ ಅದೆಷ್ಟೋ ಪ್ರತಿಭೆಗಳು ನಮ್ಮಲ್ಲಿನ್ನೂ ಉಸಿರಾಡುತ್ತಿವೆ. ಇಂಥವರನ್ನು ಗುರುತಿಸಿ, ನೀರೆರೆದು, ಪೋಷಿಸುವ ಹಾಗೂ ಸ್ವಂತಿಕೆಯನ್ನು ಮೆರೆಯುವ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರ ಮೇಲಿದೆ.
ಮೊದಲಿಗೆ ಸಾಧಕರಾದ ವಿನುತಾ ಕೆ ಗಟ್ಟಿ ಅವರಿಗೆ ಅಭಿನಂದನೆಗಳು..ಇಂತಹ ಒಂದು ಲೇಖನಕ್ಕೆ ಅವರು ಅರ್ಹರು. ಆದರೆ ಬರೆದವರ ಗಮನಕ್ಕೆ.. ಛಾಯಾಗ್ರಾಹಕರು ಕ್ಲಿಕ್ಕಿಸಿದ ಚಿತ್ರವನ್ನು ಬಳಸುತ್ತೀರಿ..ಆದರೆ ಅವರ ಲೋಗೋ ವನ್ನು blur ಮಾಡುತ್ತೀರಿ..ಛಾಯಾಗ್ರಾಹಕ ಯಾರೇ ಇರಲಿ..ಆ ಚಿತ್ರ ಕ್ಲಿಕ್ಕಿಸುವುದಕ್ಕೆ ಆತ ಕೂಡ ಕಷ್ಟಪಟ್ಟಿರುತ್ತಾನೆ. ನಿಮಗೆ ಅಗತ್ಯ ಇಲ್ಲದಿದ್ದರೆ ಚಿತ್ರಗಳನ್ನು ಬಳಸಬೇಡಿ. ಅವರು ಕ್ಲಿಕ್ಕಿಸಿದ ಚಿತ್ರಕ್ಕೆ ಅವರೇ ಹಾಕಿದ ಲೋಗೋ ಗಳನ್ನು blur ಮಾಡಿ ಅವರಿಗೆ ಅವಮಾನಿಸಬೇಡಿ…ಎಷ್ಟೋ ಲೇಖನಗಳಲ್ಲಿ ನಾನು ಗಮನಿಸಿದ್ದೇನೆ..ನಿಜವಾಗಿ ಹೇಳುವುದಿದ್ದರೆ ಚಿತ್ರ ಹಾಕುವ ಮೊದಲು ಅವರ ಒಪ್ಪಿಗೆ ಪಡೆಯಬೇಕು. ಆದರೆ ಅದು ಪಡೆಯದಿದ್ದರೂ ತೊಂದರೆ ಇಲ್ಲ.. ಲೇಖನಕ್ಕೆ ಪ್ರಶಸ್ತವಾದ ಫೋಟೋಗಳನ್ನು ಬಳಸಿಕೊಳ್ಳಿ..ಆದರೆ ಫೋಟೋದಲ್ಲಿರುವ ಲೋಗೋ ಗಳನ್ನು blur ಮಾಡೋದರಿಂದ ತಮಗಾಗುವ ಉಪಯೋಗ ಏನು..? ಇದು ಮುಂದಕ್ಕೆ ಪುನಾರವರ್ತನೆ ಆಗದಿರಲಿ ಎಂದು ನಮ್ಮ ಆಶಯ..ಛಾಯಾಗ್ರಾಹಕರ ಕೆಲಸಕ್ಕೂ ಒಂದು ಬೆಲೆಯಿದೆ…
ವಂದನೆಗಳು. ಕ್ಷಮಿಸಿ. ಇನ್ನು ಮುಂದೆ ಈ ರೀತಿ ಆಗದ ಹಾಗೆ ಎಚ್ಚರಿಕೆ ವಹಿಸುತ್ತೇವೆ.