ರವಿಚಂದ್ರನ್ ‘ಪೋಲಿಹುಡುಗ’ ಎನ್ನುವ ಚಿತ್ರದಲ್ಲಿ ನಾಯಕರಾಗಿರುವುದು ನಮಗೆಲ್ಲ ಗೊತ್ತು. ಆದರೆ ರವಿಚಂದ್ರನ್ ಅವರನ್ನು ಪೋಲಿ ಎಂದು ಅವರ ತಂದೆಯೇ ಕರೆದಿದ್ದು ನಿಮಗೆ ಗೊತ್ತೇ.?
ಯಾವ ಶಾಟ್ಸ್ ನೋಡಿ ವೀರಾಸ್ವಾಮಿ ಅವರು ರವಿಚಂದ್ರನ್ ಅವರಿಗೆ ‘ಪಕ್ಕಾ ಪೋಲಿ ನನ್ ಮಗ’ ಇವ್ನು ಅಂತ ಹೇಳಿದ್ರು ಎನ್ನುವುದನ್ನು ಯುವ ಗೀತರಚನೆಕಾರ, ಈಶ್ವರಿ ಪ್ರೊಡಕ್ಷನ್ಸ್ ನಲ್ಲಿ ವೃತ್ತಿ ಮಾಡಿರುವ ಅನುಭವಿ, ರವಿಚಂದ್ರನ್ ಅಭಿಮಾನಿಯೂ ಆಗಿರುವ ದಿಲ್ಸೇ ದಿಲೀಪ್ ಸಿನಿಕನ್ನಡ.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ.
ರವಿಚಂದ್ರನ್ ಎಂದರೆ ಅದೊಂದು ಸ್ಫೂರ್ತಿಯ ಚಿಲುಮೆ. He is a Quick Mercury on the Set, a Real Tiger while he directs a Shot ! ಹಾಗಂತ ಅವರು ಯಾವಾಗಲೂ ತುಂಬಾ ಸೀರಿಯಸ್ ಆಗಿಯೇ ಇರುತ್ತಾರೆ ಅಂತ ಅಲ್ಲ, ತಮಗೆ ಬೇಕಾದ ಎಲ್ಲಾ ಸಿದ್ಧತೆಗಳು ಸರಿಯಾಗಿ ಆಗಿವೆ ಅಂತ ತಿಳಿದಾಗ ಸ್ವಲ್ಪ ರಿಲ್ಯಾಕ್ಸ್ ಆಗಿರುತ್ತಾರೆ. ಸೆಟ್ಟಿನಲ್ಲಿ ಸದಾ ನಗುತ್ತಾ ನಗಿಸುತ್ತಾ ಸುತ್ತ ಇರುವ ಚಿತ್ತಗಳ ಲವಲವಿಕೆಯಲ್ಲಿ ಇಡುತ್ತಾರೆ. ಹಾಡಿನ ಚಿತ್ರೀಕರಣ ಅಂದರೆ ಕ್ರೇಜಿಸ್ಟಾರ್ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಲಿರಿಕ್ ಮ್ಯೂಸಿಕ್ಗೆ ತಕ್ಕ ಹಾಗೆ ತುಂಟಾಟ, ಪೋಲಿ ಗಿಮಿಕ್ಗಳ ಯೋಚನೆ, ಹೇಗೆಲ್ಲಾ ಶಾಟ್ಸ್ ತೆಗೆಯಬಹುದು ಎಂಬ ಐಡಿಯಾಗಳು ಹಾಗೂ ಸುತ್ತಲಿರುವ ಪ್ರಾಪರ್ಟಿಗಳ ಸದ್ಬಳಕೆ ಮಾಡುವಲ್ಲಿ ಅವರ ತಲೆ ಓಡುತ್ತಿರುತ್ತದೆ. ಹೀಗೆ, ಅವರ ಸಿನಿಜೀವನದ ಮೊದಲ ಹಂತದಲ್ಲಿ ತಯಾರಾದ ಸಿನಿಮಾ “ನಾನು ನನ್ನ ಹೆಂಡ್ತಿ”. ಶ್ರೀ ವೀರಾಸ್ವಾಮಿಯವರ ನಿರ್ಮಾಣ, ಸಂಗೀತ ಶಂಕರ್ ಗಣೇಶ್, ಆಗಷ್ಟೇ ಹಂಸಲೇಖ ಅವರ ಎಂಟ್ರಿ, ನಿರ್ದೇಶನ ರಾಜೇಂದ್ರ ಬಾಬು, ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್. ಹಾಡುಗಳು ಎಲ್ಲಾವೂ ಒಂದು ರೀತಿಯ ಮಜಾ ಕೊಡಬೇಕು, ಜನಗಳು ರೋಮಾಂಚನಗೊಂಡು ಅಲ್ಲಿನ ಸಾಲುಗಳ ಅವರವರ ಹುಡುಗಿಗೆ ಹಾಡಬೇಕು, ಪೋಲಿ ಹುಡುಗರು ಅದಕ್ಕೆ ಅವರದೇ ಪೋಲಿ ಸಾಹಿತ್ಯ ಬೆರೆಸಿ ಹಾಡಿಕೊಳ್ಳಬೇಕು … ಆವಾಗ ಹಾಡು ಹಿಟ್ ಎನಿಸಿಕೊಳ್ಳುತ್ತದೆ ಎನ್ನುತ್ತಾ ಚಿ. ಉದಯಶಂಕರ್ ಅವರ ಬಳಿ ಜಗಳ ಮಾಡಿ, ಪೋಲಿ ಲಿರಿಕ್ ಬರೆಸಿಕೊಳ್ಳುತ್ತಾರೆ ರವಿಮಾಮ. ‘ಅಕ್ಕಿ ಪೇಟೆ ಲಕ್ಕಮ್ಮ’ ಹಾಡು ಒಮ್ಮೆ ಕೇಳಿ ನೋಡಿ.. ‘ಅದು ಇದು’, ‘ಇದರ ಒಳಗೆ ನಾನು..’ ಅಂತೆಲ್ಲ ಪಡ್ಡೆ ಹುಡುಗರ ಸಾಹಿತ್ಯವಿದೆ. ಇದು ರಿಯಲ್ ರವಿಚಂದ್ರನ್ ಫ್ಲೇವರ್. ತಮಿಳಿನ MGR ಅಲ್ಲಿನ ಕಮರ್ಷಿಯಲ್ ಮಾಸ್ಟರ್ ಅಂತಾದರೆ, ಕನ್ನಡದಲ್ಲಿ ಆ ಸ್ಥಾನ ರವಿಮಾಮನದು !
ಹೀಗೆಯೇ ರೊಮ್ಯಾಂಟಿಕ್ ಆಗಿ ತಯಾರುಗೊಂಡ ಹಾಡು…
“ರಾತ್ರಿ ಆಯ್ತು ಮಲಗೋಣ” ಎಂಬ ಜನಪ್ರಿಯ ಗೀತೆ. ಅದರ ಚಿತ್ರೀಕರಣದ ಸಮಯ. ಬೆಡ್ರೂಮಲ್ಲಿ ಶುರುವಾಗುವ ಹಾಡು ನಂತರ ಔಟ್ಡೋರ್ಗೆ ಹೋಗುತ್ತದೆ. ಅಲ್ಲಿ ಅನೇಕ ಪಾರಿವಾಳಗಳ ನಡುವೆ ಒಂದು ಉಯ್ಯಾಲೆ ಇರುವ ಶಾಟ್. ಪಂಚೆ ಉಟ್ಟು ಉರ್ವಶಿಯ ಜೊತೆಗೆ ಡಾನ್ಸ್ ಮಾಡುತ್ತಿದ್ದ ರವಿಮಾಮ ಸೆಟ್ಟಲ್ಲಿದ್ದ ಯಾರಿಗೂ ಕಾಣದ ಹಾಗೆ ಸುತ್ತಲು ಹಾರಾಡುತ್ತಿದ್ದ ಪಾರಿವಾಳ ಒಂದನ್ನು ಪಂಚೆಯ ಒಳಗೆ ಬಚ್ಚಿಟ್ಟುಕೊಳ್ಳುತ್ತಾರೆ ! ಚಿನ್ನಿ ಪ್ರಕಾಶ್ ರವರು ಆಕ್ಷನ್ ಹೇಳಿ ನಾಗ್ರಾ ಸೌಂಡ್ ಶುರುವಾದಾಗ, ಶಾಟ್ನ ಕೊನೆಯಲ್ಲಿ ರವಿಮಾಮ ತನ್ನ ಪಂಚೆಯ ಎತ್ತಿ ಪಾರಿವಾಳ ಹೊರ ತೆಗೆಯುತ್ತಾರೆ ! ಅಲ್ಲಿದ್ದ ಎಲ್ಲರೂ…ಊರ್ವಶಿ ಸಮೇತವಾಗಿ ಗೊಳ್ ಅಂತ ನಗುತ್ತಾರೆ. ಇಡೀ ಸೆಟ್ ಗಾಂಭೀರ್ಯ ಮುರಿದು ನಗೆಗಡಲಲ್ಲಿ ತೇಲುತ್ತದೆ. ರವಿಮಾಮನ ಸ್ಪಾಟ್ ಕ್ರಿಯೇಟಿವಿಟಿಗೆ, ಕರ್ಮರ್ಶಿಯಲ್ ತಲೆಗೆ ಎಲ್ಲರೂ ಜೈ ಎನ್ನುತ್ತಾರೆ.
ಆಗೆಲ್ಲಾ ಪಾಸಿಟೀವ್ ಡೆವೆಲಪ್ ಮಾಡಿ ಫಸ್ಟ್ ಕಾಪಿ ನೋಡುವುದು ಬಹಳ ದುಬಾರಿ ಅಂತ ಯಾರೂ ಆ ಸಾಹಸಕ್ಕೆ ಹೋಗುತ್ತಿರಲಿಲ್ಲ. ವಜ್ರೇಶ್ವರಿ ಸಂಸ್ಥೆ ಮಾತ್ರ ವೈಟ್ ಆಂಡ್ ಬ್ಲ್ಯಾಕಲ್ಲಿ ಡೆವೆಲಪ್ ಮಾಡಿ ಒಂದು ಸಾರಿ ಸಿನಿಮಾ ನೋಡುತ್ತಿದ್ದರು. ರವಿಚಂದ್ರನ್ ಸಿನಿಮನೆ ದುಬಾರಿಯ ಕಲರ್ ಪ್ರಿಂಟ್ ಹಾಕಿಸಿಕೊಂಡು ಫಸ್ಟ್ ಕಾಪಿ ನೋಡಿ, ನಂತರ ಕರೆಕ್ಷನ್ ಇದ್ದರೆ ಮತ್ತೆ ಶೂಟ್ ಮಾಡುವ ವಿಶೇಷ ಪದ್ಧತಿಯ ಇಟ್ಟುಕೊಂಡಿತ್ತು. ಹಾಗೆಯೇ, ಪ್ರೊಜೆಕ್ಷನ್ನಲ್ಲಿ ಈ ಸಿನಿಮಾದ ಹಾಡುಗಳ ನೋಡುವಾಗ ಥಿಯೇಟರಲ್ಲಿ ಇರುವ ಎಲ್ಲರೂ ರವಿಮಾಮನ ಲಂಗಿಯ ಒಳಗಿಂದ ಪಾರಿವಾಳ ಬರುವ ಶಾಟಿಗೆ ವಿಸಿಲ್ ಹಾಕಿ ನಗುತ್ತಾರೆ. ಇದು ಮಾಸ್ ಆಡಿಯನ್ಸ್, B C ಫ್ರಂಟ್ ಬೆಂಚ್ ಜನರ ಥ್ರಿಲ್ಲಾಗಿಸುವ ಅಂಶ ಅಂತ ಎಲ್ಲರಿಗೂ ಸಂತಸವಾಗುತ್ತದೆ. ಅಲ್ಲೇ ಇದ್ದ ವೀರಾಸ್ವಾಮಿಯವರು ಚಿನ್ನಿಪ್ರಕಾಶ್ ಕಡೆಗೆ ನೋಡಿ, “ಎನ್ನಪಾ ಇದು… ಪುರ” ಅಂತ ನಗುತ್ತಾರೆ. “ಎಂದ ಗ್ಯಾಪ್ಲ ಚಿನ್ನ ಮೊದಲಾಳಿ ಲುಂಗಿ ಉಳ್ಳ ಪುರ ವೆಚ್ಚಿರ್ಕಾರೋ ತೆರಿಯಾದು ಸರ್” ಎಂದು ನಗುತ್ತಾರೆ ಚಿನ್ನಿ ಪ್ರಕಾಶ್. ಸಖತ್ತಾಗಿ ನಗುವ ವೀರಾಸ್ವಾಮಿಯವರು “ಹುಟ್ಟು ಪೋಲಿ ನನ್ ಮಗಾ ಅವ್ನು” ಅಂತ ಮಗನ ತೆರೆಯ ಮೇಲಿನ ತರಲೆಯ ಎಂಜಾಯ್ ಮಾಡುತ್ತಾರೆ. ಮನೆಗೆ ಹೋಗಿ ಮತ್ತೆ ಈ ಘಟನೆಯನ್ನೂ ಎಲ್ಲರಿಗೂ ವಿವರಿಸಿ, ಅವರಿಗಾದ ಮುದ್ದಾದ ಶಾಕನ್ನು ಮಗನ ಮುಂದೆ ಕೀಟಲೆ ಮಾಡುತ್ತಾರೆ.
ಅಪ್ಪನಿಗೆ ಮಗನು ತಾನೇ ಹಾಡು ಬರೆಸಿಕೊಂಡು ಶಾಟ್ಸ್ ಇಂಪ್ರೋವೈಸ್ ಮಾಡುವ ಗುಣ ಬೆಳೆಯುತ್ತಿದೆ ಎಂಬ ಬಗ್ಗೆ ಹೆಮ್ಮೆ. ಅವನ ಬೆಂಬಲಿಸುವ ಹಂಬಲ. ಹಾಡಿನ ಮೇಕಿಂಗಿಗೆ ರವಿಚಂದ್ರನ್ ಐಡಿಯಾಗಳ ಮಹಾಬಲ ! ಬೆಳೆಯೋ ಚಿಗುರು ಮೊಳಕೆಯಲ್ಲಿ ಎನ್ನುವ ಹಾಗೆ ಆವತ್ತೇ ರವಿಮಾಮನ ಕಮರ್ಷಿಯಲ್ ಐಡಿಯಾಗಳು, ಹಾಡು ತಯಾರು ಮಾಡುವ ಕಲೆಗಳ ಒಂದು ಚಿಕ್ಕ ಕುರುಹಾಗಿ ಈ ಘಟನೆ ಕಂಡಿತ್ತು. ರಿಮೇಕ್ ಆಗಲಿ ಸ್ವಮೇಕ್ ಆಗಲಿ ಪಕ್ಕಾ
ಕಮರ್ಷಿಯಲ್ ಮಾಡಲೇಬೇಕು ಅಂತ ಸರಿಯಾಗಿ ಇಳಿದರೆ, ರವಿಚಂದ್ರನ್ ನಿಜಕ್ಕೂ ಒಬ್ಬ ಕಂಪ್ಲೀಟ್ ಮನೋರಂಜನೆಯ ನಿರ್ದೇಶಕ !