
ಇದು ದಕ್ಷಿಣ ಕನ್ನಡದ ಬಂಟ್ವಾಳದಲ್ಲಿರುವ ಯುವಕನೋರ್ವನ ಕತೆ. ಇಲ್ಲಿ ಅಣ್ಣನನ್ನು ಅಣ್ಣೆ ಎನ್ನುವುದು ತುಳುವರ ವಾಡಿಕೆ. ಸ್ವಂತ ಅಣ್ಣನಲ್ಲದ ವ್ಯಕ್ತಿಯನ್ನು ಊರ ಮಂದಿ ಅಣ್ಣೆ ಎಂದು ಕರೆಯಬೇಕಾದರೆ ಆತ ಊರಿಗೆ ಅಷ್ಟೊಂದು ಪ್ರಭಾವಿಯಾಗಿರಬೇಕು! ಆದರೆ ಹೈಸ್ಕೂಲ್ ಮೆಟ್ಟಿಲು ಹತ್ತಿರದ ಸಂತು ಆ ಸ್ಥಾನಕ್ಕೆ ಏರಿರುವುದು ನಿಜಕ್ಕೂ ಅಚ್ಚರಿಯ ಸಾಧನೆ. ಆ ಬಗ್ಗೆ ಸಂತೋಷ್ ಅವರನ್ನು ಹತ್ತಿರದಿಂದ ಬಲ್ಲ ಸ್ಥಳೀಯ ಸ್ನೇಹಿತ ಟಿ.ವಿ ಗಿರಿಯವರು `ಸಿನಿಕನ್ನಡ.ಕಾಮ್’ ನಲ್ಲಿ ಬರೆದಿದ್ದಾರೆ.
ಹವ್ಯಾಸದಲ್ಲಿ ಗಾಯಕರಾಗಿ ಗುರುತಿಸಿಕೊಂಡಿರುವ ಟಿ.ವಿ ಗಿರಿ, ವೃತ್ತಿಯಲ್ಲಿ ಸಾಣೂರು ಕಾರ್ಕಳದ `ಪ್ರಕೃತಿ’ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.
ಡಿಗ್ರಿ ಮೇಲೆ ಡಿಗ್ರಿ ಪಡೆದವರೆಲ್ಲರೂ ಜೀವನದಲ್ಲಿ ಗೆಲುವು ಸಾಧಿಸಲೇ ಬೇಕೆಂದಿಲ್ಲ. ಅದೇ ರೀತಿ ಕಾರಣಾಂತರಗಳಿಂದ ಶಾಲಾ ಕಾಲೇಜುಗಳಲ್ಲಿ ಕಲಿಸುವ ಅಧಿಕೃತ ಶಿಕ್ಷಣ ಪಡೆಯಲಾಗದವರು ಅಥವಾ ತಮ್ಮ ಆಸಕ್ತಿಯ ವಿಷಯಗಳು ಶಾಲಾ ಪಠ್ಯಕ್ರಮದಲ್ಲಿ ಸಿಗದೆ, ಕೊನೆಗೆ ಪರೀಕ್ಷೆಯಲ್ಲಿ ಡುಮ್ಕಿ ಹೊಡೆದು ಪ್ರೈಮರಿ, ಹೈಸ್ಕೂಲ್ ಹಂತದಲ್ಲೇ ಶಾಲೆಗೆ ಬೆನ್ನು ಹಾಕಿ ಹೋಗುವ ವಿದ್ಯಾರ್ಥಿಗಳೂ ಅನೇಕರಿದ್ದಾರೆ. ಹಾಗೆಂದು ಅವರಲ್ಲಿ ಕೆಲವರು ತಮ್ಮ ಜೀವನದ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಜೊತೆಗೆ ಪಾಸಾಗಿ ಸಮಾಜದ ಇತರರಿಗೆ ಮಾದರಿಯಾಗಿ, ಜೀವನ ಪಾಠದ ಬೋಧಕರಾದವರೂ ಇಲ್ಲದಿಲ್ಲ.
ಅಂತಹ ಓರ್ವ ಅಪರೂಪದ ಸಾಧಕ ಬೋಳಿಯಾರಿನ “ಸಂತು ಗ್ರಾಫಿಕ್ಸ್” ನ ಮಾಲೀಕ , ಬಪ್ಪನಾಡು ಯಕ್ಷಗಾನ ಮೇಳದ ಕ್ಯಾಂಪ್ ಮ್ಯಾನೇಜರ್ ಶ್ರೀ ಸಂತೋಷ್ ನಾಯಕ್ ಬೋಳಿಯಾರು.
ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನಲ್ಲಿ ಈ “ಸಂತು ಅಣ್ಣ”ನ ಪರಿಚಯ ಇಲ್ಲದವರೇ ವಿರಳ ಎನ್ನುವ ಮಟ್ಟಿಗೆ ಇಂದು ಇವರ ಛಾತಿ ಪಸರಿಸಿದೆ. ನನಗೆ ಮೊದಲಿಂದಲೂ ಇವರೊಂದಿಗೆ ಇರುವ ಸಲುಗೆಯಿಂದ ‘ಸಂತು’ ಎಂದೇ ಬರೆಯುತ್ತಿದ್ದೇನೆ.
1982ರಲ್ಲಿ ಬೋಳಿಯಾರು ಆನಂದ ನಾಯಕ್ ಹಾಗೂ ವೇದಾವತಿ ದಂಪತಿಗಳ ಪುತ್ರನಾಗಿ ಜನಿಸಿದ ಈ ಸಂತುವಿನ ಶಾಲಾ ಕಲಿಕೆ ಏಳನೆಯ ತರಗತಿ ಅಷ್ಟೇ ಎಂದರ ಈಗ ನಂಬಲು ಬಲು ಕಷ್ಟ ಆದೀತು.
ಐದನೆಯ ತರಗತಿಯಿಂದಲೇ ಸುತ್ತಮುತ್ತಲಿನ ಜಾತ್ರೆ, ಯಕ್ಷಗಾನ,ನಾಟಕ ನಡೆಯುವಲ್ಲಿ ಆ ಕಾಲದ ಪ್ರಸಿದ್ಧವಾಗಿದ್ದ ಮುಡಿಪಿನ ಪೂರ್ಣಚಂದ್ರ ಐಸ್ಕ್ರೀಮ್ ನ ಟೆಂಪೋದಲ್ಲಿ ಕುಳಿತು ಐಸ್ಕ್ರೀಮ್ ಮಾರಾಟ ಮಾಡಲು ಬಹಳ ಉತ್ಸಾಹದಿಂದ ಹೋಗುತ್ತಿದ್ದ ಸಂತುವಿಗೆ ಮನೆಯಲ್ಲಿನ ಆಗಿನ ಬಡತನದ ದಿನಗಳಲ್ಲಿ ಇದರಿಂದ ಸಿಗುತ್ತಿದ್ದ ಹಣ ಈ “ಉಮೇದನ್ನು” ಇಮ್ಮಡಿಗೊಳಿಸಿತು. ಏಳನೆಯ ತರಗತಿ ನಂತರ ಶಾಲೆಗೆ ಟಾಟಾ ಮಾಡಿ ಇದರಲ್ಲೇ ಪೂರ್ಣಾವಧಿ ಕೆಲಸ ಮಾಡಲು ಪ್ರೇರೇಪಿಸಿತು.
ಆ ದಿನಗಳಲ್ಲಿ (ಸುಮಾರು 1996) ಮುಡಿಪಿನ ಪೂರ್ಣಚಂದ್ರ ಹೋಟೆಲ್ ನ ಬದಿಯಲ್ಲೇ ಇದ್ದ ‘ಸ್ವಾತಿ ಆರ್ಟ್ಸ್’ ನ ಸತೀಶ್ ಮುಡಿಪು ಇವರ ಪರಿಚಯ ಆದದ್ದು ಸಂತುವಿನ ಜೀವನದ ದಿಕ್ಕನ್ನೇ ಬದಲಾಯಿಸಿತು.

ಚಿತ್ರ ಕಲಾವಿದ ಸತೀಶ್ ಬ್ಯಾನರ್ ಬರೆಯುವಲ್ಲಿ ಪ್ರಸಿದ್ಧರು. ನಾಟಕಗಳ ಪರದೆ, ಸೆಟ್ಟಿಂಗ್ಸ್, ಮೇಕಪ್ ಇವೇ ಮೊದಲಾದ ಉದ್ಯಮದಲ್ಲಿ ಬಿಡುವಿಲ್ಲದೆ ಬ್ಯುಸಿಯಾಗಿದ್ದ ಸತೀಶ್ ಅವರಿಗೆ ಸಾಥ್ ನೀಡಿದ ಸಂತು, ಸ್ವಾತಿ ಆರ್ಟ್ಸ್ ನಲ್ಲೇ ಉದ್ಯೋಗಿಯಾಗಿ ಸೇರಿಕೊಂಡು ಮುಂದೆ ಅವರ ಬಲಗೈಯೇ ಆದರು. ಈ ಸಂದರ್ಭ ಮಂಗಳೂರಿನ ಜನಾರ್ದನ ಅವರ ಚಂದ್ರ ಡಿಜಿಟಲ್ ಫ್ಲೆಕ್ಸ್ ಬ್ಯಾನರ್ ಸೆಂಟರ್ ಗೆ ಭೇಟಿ ನೀಡುತ್ತಿದ್ದ ಸಂತು ಅಲ್ಲಿ ತಾನು ಕಂಪ್ಯೂಟರ್ ನಲ್ಲಿ ಗ್ರಾಫಿಕ್ಸ್ ನ ಎಬಿಸಿಡಿ ಕಲಿತದ್ದನ್ನು ಸ್ಮರಿಸುತ್ತಾರೆ. ಆ ನಂತರ ತಾನೇ ಸ್ವತಃ ಕಂಪ್ಯೂಟರ್ ನಲ್ಲಿ ಬ್ಯಾನರ್ ನ ಪೇಜ್ ಡಿಸೈನಿಂಗ್, ಗ್ರಾಫಿಕ್ಸ್ ನ್ನು ಕಲಿಯುತ್ತಾ ಹೋಗಿ ತಕ್ಕಮಟ್ಟಿಗೆ ಸೈ ಎನಿಸಿಕೊಂಡ ಮೇಲೆ 2009 ರಲ್ಲಿ ಬೋಳಿಯಾರಿನ ತನ್ನ ಮನೆಯ ಬಳಿಯೇ ಇದ್ದ ಶೆಡ್ಡಿನಲ್ಲಿ ಕೇವಲ ಒಂದು ಕಂಪ್ಯೂಟರ್ ಜೊತೆಗೆ ತಾನೇ ಬ್ಯಾನರ್ ಡಿಸೈನ್ ಮಾಡಿ ಶಿವಮೊಗ್ಗದಲ್ಲಿ ಅದನ್ನು ಪ್ರಿಂಟ್ ಮಾಡಿಸಿ ಕೊಡಲು ಪ್ರಾರಂಭಿಸಿದರು. ಕ್ರಮೇಣ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಫ್ಲೆಕ್ಸ್ ಪ್ರಿಂಟಿಂಗ್ ಮೆಷಿನ್ ತರಿಸಿ ತನ್ನದೇ “ಸಂತು ಗ್ರಾಫಿಕ್ಸ್” ಪ್ರಾರಂಭ ಮಾಡುತ್ತಾರೆ. ಆ ನಂತರ ಹಿಂದಿರುಗಿ ನೋಡದ ಸಂತು 2015 ರಲ್ಲಿ ಮತ್ತೆ 13 ಲಕ್ಷ ರೂಪಾಯಿ ಮೌಲ್ಯದ ದೊಡ್ಡ ಪ್ರಿಂಟಿಂಗ್ ಮೆಷಿನ್ ಸ್ಥಾಪಿಸಿ ಎಲ್ಲ ಗಾತ್ರದ ಕಟೌಟ್, ಬ್ಯಾನರ್ ಪ್ರಿಂಟಿಂಗ್ ನಲ್ಲಿ ಪೂರ್ಣ ಸ್ವಾವಲಂಬನೆ ಸಾಧಿಸುತ್ತಾರೆ. ಇಂದು ನಾಲ್ಕೈದು ಮಂದಿಗೆ ಬೋಳಿಯಾರಿನ ತನ್ನ “ಸಂತು ಗ್ರಾಫಿಕ್ಸ್”ನಲ್ಲಿ ಪೂರ್ಣಾವಧಿ ಉದ್ಯೋಗದಾತ ರಾಗಿರುವ ಸಂತು ಅವರೆಲ್ಲರೊಂದಿಗೆ ತಾನೂ ಕೆಲಸಗಾರನಾಗಿ ದುಡಿದು ತಾನೋರ್ವ ಧಣಿಯೆಂದು ಬೀಗದೆ ಸ್ನೇಹಿತನಾಗಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ. ಇದುವೇ ತನ್ನ ಯಶಸ್ಸಿನ ಹಿಂದಿರುವ ದೊಡ್ಡ ಗುಟ್ಟು ಎನ್ನುತ್ತಾರೆ ಸಂತು.
ಪ್ರಸ್ತುತ ಒಟ್ಟು 25 ಲಕ್ಷ ರುಪಾಯಿ ಮೌಲ್ಯದ ಪ್ರಿಂಟಿಂಗ್ ಸಾಮಗ್ರಿಗಳನ್ನು ಹೊಂದಿರುವ ಇವರ ಸಂತು ಗ್ರಾಫಿಕ್ಸ್ ಸೃಜನಶೀಲತೆ ಹಾಗೂ ಹೊಸ ಪ್ರಯೋಗಗಳ ಸಂಶೋಧನಾ ಕೇಂದ್ರವೂ ಹೌದು. ಇಂದು ಇವರು ಕಂಪ್ಯೂಟರ್ ಮುಂದೆ ಕುಳಿತು ಲೀಲಾಜಾಲವಾಗಿ ಕೆಲಸ ಮಾಡುವುದನ್ನು ನೋಡಿದರೆ ಯಾವ ಕಂಪ್ಯೂಟರ್ ಡಿಪ್ಲೊಮಾ ಪದವೀಧರನೂ ಮೂಗಿನ ಮೇಲೆ ಬೆರಳಿಡದೆ ಇರಲಾರ. ಇತ್ತೀಚೆಗೆ ಇವರು ಫೊಟೋವನ್ನು ಬಳಸಿ ತಯಾರಿಸಿದ ಮುಖ ಪರಿಚಯ ಸಿಗುಬಹುದಾದ ಮಾಸ್ಕ್ ತಯಾರಿಸಿ ಮಾಧ್ಯಮಗಳಲ್ಲೂ ರಾಜ್ಯ ಮಟ್ಟದಲ್ಲಿ ಸುದ್ದಿಯಾದದ್ದು ಇದಕ್ಕೊಂದು ಸಣ್ಣ ಉದಾಹರಣೆ ಅಷ್ಟೆ.

ಸಂತುವಿಗೆ ಮೊದಲಿಂದಲೂ ಯಕ್ಷಗಾನದ ಬಗ್ಗೆ ವಿಪರೀತ ಆಸಕ್ತಿಯಿತ್ತು.`ಬಪ್ಪನಾಡು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳ’ದ ಯಜಮಾನ ವಿನೋದ್ ಕುಮಾರ್ ಹಾಗೂ ಮ್ಯಾನೇಜರ್ ಭವಾನಿ ಶಂಕರ ಶೆಟ್ಟಿಯವರ ಪ್ರೋತ್ಸಾಹದಿಂದ ಅದೇ ಯಕ್ಷಗಾನ ಮಂಡಳಿಯ ಕ್ಯಾಂಪ್ ಮ್ಯಾನೇಜರ್ ಆಗಿದ್ದಾರೆ. ಇವರ ಸೃಜನಶೀಲತೆಯ ಕಂಪು ಅಲ್ಲಿಯೂ ಪಸರಿಸಿದ್ದು, ಮೇಳದಲ್ಲಿರುವ ಹಾಗೂ ಇತರ ಮೇಳಗಳ ಕಲಾವಿದರೂ ಕೂಡ ಸಂತು ಅಣ್ಣನ ಬಗ್ಗೆ ನುಡಿಯುವ ಗೌರವದ ಮಾತುಗಳೇ ಇದಕ್ಕೆ ಸಾಕ್ಷಿ.
ಪ್ರಸ್ತುತ ಪತ್ನಿ ಜಯಶ್ರೀ ಹಾಗೂ ಪುತ್ರ ಸಚಿನ್ ಜೊತೆಗೆ ಬೋಳಿಯಾರಿನ ತನ್ನ ಚಿಕ್ಕ ನಿವೇಶನದಲ್ಲಿ ಸ್ವಂತ ಮನೆ ಹಾಗೂ ಸುಸಜ್ಜಿತ ಕಟ್ಟಡವನ್ನೊಳಗೊಂಡಿರುವ ಪ್ರಸಿದ್ಧ “ಸಂತು ಗ್ರಾಫಿಕ್ಸ್” ನ ಮಾಲಕರಾಗಿರುವ ಇವರ ಬಹುತೇಕ ಬ್ಯಾಂಕ್ ಸಾಲ ಈಗಾಗಲೇ ಮರುಪಾವತಿ ಆಗಿದೆ ಎಂದರೆ ಇವರ ಉದ್ಯಮದ ಬೆಳವಣಿಗೆಯ ವೇಗ ಅರ್ಥವಾಗಬಹುದು.ಇಂದು ಇವರ ತಿಂಗಳಿನ ದುಡಿಮೆ ಯಾವುದೇ ಸಾಫ್ಟವೇರ್ ಇಂಜನಿಯರ್ ಅಥವಾ ಡಾಕ್ಟರ್‌ಗಳ ಸಂಪಾದನೆಗಿಂತ ಕಡಿಮೆಯಿಲ್ಲ ಎಂಬುದು ಉತ್ಪ್ರೇಕ್ಷೆಯಲ್ಲ.

ತನ್ನ ಸ್ವಂತ ಪರಿಶ್ರಮದಿಂದ ಇಷ್ಟು ಎತ್ತರಕ್ಕೆ ಏರಿದರೂ ಪರಿಸರದ ಬಡವರಿಗೆ,ಸಂಘ ಸಂಸ್ಥೆಗಳಿಗೆ ಗೌಪ್ಯವಾಗಿ ಸಹಾಯ ಮಾಡುತ್ತಾ,ಸರ್ವ ಧರ್ಮೀಯರೊಂದಿಗೆ ಸ್ನೇಹದಿಂದಿದ್ದು ಎಲ್ಲರಿಗೂ ಇಂದು “ಸಂತು ಅಣ್ಣೆ” ಆಗಿದ್ದರೂ ತನ್ನ ಇತಿಮಿತಿ,ಹಾಗೂ ಬೆಳೆದು ಬಂದ ಹಾದಿಯನ್ನು ಚೆನ್ನಾಗಿ ಅರಿತಿದ್ದಾರೆ ಸಂತು. ತನ್ನ ಯಶಸ್ಸಿನ ಹಿಂದಿನ ಶಕ್ತಿಗಳನ್ನು ವಿನಮ್ರವಾಗಿ ಸ್ಮರಿಸುವ ಇವರು, ಸದಾ ಜೊತೆಗಿದ್ದು ಉದ್ಯಮದಲ್ಲಿ ಹೆಗಲಿಗೆ ಹೆಗಲು ನೀಡುವ ಪ್ರಾಣ ಸ್ನೇಹಿತರಾದ ರಾಜೇಶ್ ಕುಲಾಲ್, ನವೀನ್ ನಾಯಕ್, ಮನೋಜ್ ಮೊದಲಾದವರಿಲ್ಲದೆ ಸಂತು ಗ್ರಾಫಿಕ್ಸ್ ಇಲ್ಲ ಎನ್ನುತ್ತಾರೆ. ಬದುಕಿನ ಪಥವನ್ನೇ ಬದಲಿಸಿದ ಸ್ವಾತಿ ಸತೀಶ್, ಮೊದಲ ಬಾರಿಗೆ ಕಂಪ್ಯೂಟರ್ ಖರೀದಿಗೆ ನೆರವಾಗಿ ಹಾಗೂ ಸ್ವಂತ ಉದ್ದಿಮೆ ಸ್ಥಾಪನೆಗೆ ಪೂರ್ಣ ಪ್ರಮಾಣದ ಪ್ರೋತ್ಸಾಹ ನೀಡಿ ಇಂದಿಗೂ ನಿರಂತರ ಬೆಂಬಲ ನೀಡುತ್ತಿರುವ ಟಿ.ಜಿ.ರಾಜಾರಾಮ ಭಟ್, ತಮ್ಮ ಕಂಪೆನಿಯ ಎಲ್ಲ ಆರ್ಡರ್ ಗಳನ್ನು ಸದಾ ನೀಡಿ ಉದ್ದಿಮೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ಮೆಲ್ಕಾರ್ ಉಲ್ಲಾಸ್ ಐಸ್ಕ್ರೀಮ್ ಮಾಲಕ ಉದಯ ಪೈ, ಮ್ಯಾನೇಜರ್ ಹಕೀಂ, ಸಬ್ಸಿಡಿ ಸಹಿತ ಆರ್ಥಿಕ ಸಾಲ ಪಡೆಯುವಲ್ಲಿ ನೆರವಾದ ಶಿಬಿ ಮಂಗಳೂರು, ಜೊತೆಗೆ ಭಾಷೆ, ವಿಷಯ ಜ್ಞಾನ ಹಾಗೂ ಮಾಧ್ಯಮ ಮಿತ್ರರಾಗಿ ಹೆಜ್ಜೆ ಹೆಜ್ಜೆಗೂ ಮಾರ್ಗದರ್ಶನ ನೀಡುತ್ತಿರುವ ಕೃಷ್ಣ ಮೋಹನ ತಲೆಂಗಳ, ತನ್ನ ಉದ್ಯಮ ಕೇಂದ್ರಕ್ಕೆ “ಸಂತು ಗ್ರಾಫಿಕ್ಸ್ “ಎಂಬ ಹೆಸರು ಸೂಚಿಸಿದ ಭರತ್, ಸದಾ ಸರ್ವ ಸಹಕಾರ ನೀಡುವ `ಕಟ್ಟೆ ಫ್ರೆಂಡ್ಸ್ ಮುಡಿಪು’ ಇದರ ಗೆಳೆಯರೇ ಮೊದಲಾದವರನ್ನು ವಿಶೇಷವಾಗಿ ನೆನೆಯುತ್ತಾರೆ.

ನನಗೆ ಸಂತುವಿನ ಜೊತೆಗೆ ಎರಡು ದಶಕಗಳ ಒಡನಾಟವಿದೆ. ನನ್ನ ಕಾಲೇಜು ದಿನಗಳಿಂದ ಹಿಡಿದು, ಉದ್ಯೋಗ ಕ್ಷೇತ್ರಕ್ಕೆ ಕಾಲಿಟ್ಟಾಗ, ಗಾಯನ ಕ್ಷೇತ್ರ ಪ್ರವೇಶಿಸುವಾಗ ಹೀಗೆ ಪ್ರಮುಖವಾದ ಪ್ರತಿ ಹಂತದಲ್ಲೂ ಹಿತೈಷಿಯಾಗಿ ಅಮೂಲ್ಯ ಸಲಹೆಗಳನ್ನು ನನಗೆ ನೀಡಿದವರು. ನೇರ ನಿಷ್ಠುರ ನಡೆ,ನುಡಿಯ ಸಂತು ಅಂದೂ,ಇಂದೂ ಯಾರನ್ನೂ ಮುಖಸ್ತುತಿ ಮಾಡರು. ಇದ್ದದ್ದನ್ನು ಇದ್ದಂತೆ ನುಡಿಯುವ ಸಂತು ನನ್ನಂತಹ ಇನ್ನೂ ಅನೇಕರ ಬೆಳವಣಿಗೆಯಲ್ಲಿ ಪಾತ್ರ ವಹಿಸುತ್ತಿರುವುದು ಕೂಡಾ ವಾಸ್ತವ.
ಇಂದು(ಜೂನ್ 1) ರಂದು ತನ್ನ 38ನೆಯ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಂತುವಿನಿಂದ ಮುಂದಕ್ಕೆ ಸಮಾಜಕ್ಕೆ ಸ್ಫೂರ್ತಿ ನೀಡಬಲ್ಲ ಇನ್ನಷ್ಟು ಸಾಧನೆಗಳು ಬರುವಂತಾಗಲಿ, ಭಗವಂತ ಅನುಗ್ರಹಿಸಲಿ ಎಂಬುದು ನನ್ನ ಹಾರೈಕೆ. ಅಲ್ಲದೆ ಸಂತುವಿನ ಸ್ವಾವಲಂಬನೆಯ ಬದುಕಿನ ಈ ಯಶೋಗಾಥೆ, “ಶಾಲಾ ಕಾಲೇಜುಗಳಲ್ಲಿ ಅಂಕ ಗಳಿಸಿವುದೊಂದೇ ಜೀವನದ ಪರಮೋಚ್ಛ ಧ್ಯೇಯ, ಇಲ್ಲವಾದಲ್ಲಿ ಜೀವನವೇ ವ್ಯರ್ಥ” ಎಂದು ಚಿಂತಿಸುವ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ, ಅಧ್ಯಾಪಕರಿಗೆ, ಸ್ವಲ್ಪ ಅಂಕ ಕಡಿಮೆ ಬಂದಾಗ ಆತ್ಮಹತ್ಯೆಗೆ ಯತ್ನಿಸುವ ಮಕ್ಕಳಿಗೆ, ಸರ್ಕಾರಿ ಕೆಲಸವೇ ಬೇಕೆಂದು ಕಾದು ಕಾದು ಕೆಲಸ ಸಿಗದೇ ರಿಟೈರ್ ಆಗಿ ದ್ರಾಕ್ಷಿ ಹುಳಿ ಎನ್ನುವವರಿಗೆ, ಚಿಲ್ಲರೆ ಸಂಬಳಕ್ಕೆ ಖಾಸಗಿ ಸಂಸ್ಥೆಗಳ ಮಾಲಿಕರ ಮೋಸ, ದರ್ಪಗಳನ್ನು ಸಹಿಸಿಕೊಂಡು ಜೀವಂತ ಶವವಾಗಿ ಬಾಳುವವರಿಗೆ, ಅನವಶ್ಯಕವಾಗಿ ಕೀಳರಿಮೆ ಬೆಳೆಸಿಕೊಂಡಿರುವವರಿಗೆ….. ಹೀಗೆ ಅನೇಕರಿಗೆ ಪಾಠವಾಗಲಿ.. ಸ್ಫೂರ್ತಿಯಾಗಲಿ.
ತನ್ನ ಮೇಲೆ, ತನ್ನೊಳಗಿನ ಪ್ರತಿಭೆಯ ಮೇಲೆ, ಭಗವಂತನ ಮೇಲೆ ವಿಶ್ವಾಸವಿದ್ದು ಇಚ್ಛಾಶಕ್ತಿಯಿಂದ ಯಾವುದೇ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದಾಗ ಯಶಸ್ಸು ಸಿಗಲೇಬೇಕಲ್ಲವೆ?
ಹೌದು ಎನ್ನುತ್ತಾರೆ ಇಂದು “ಸಂತು ಅಣ್ಣೆ”
