ಸಹಾಯ ಬೇಡುತ್ತಿರುವ ಜನಪ್ರಿಯ ಪೋಷಕ‌ ನಟಿ

ಕೊರೊನ ಬಂದ ಮೇಲೆ‌ ನಿತ್ಯದ ದುಡಿಮೆಯನ್ನು ನಂಬಿಕೊಂಡ ಯಾರ ಪರಿಸ್ಥಿತಿ ಕೂಡ ಚೆನ್ನಾಗಿಲ್ಲ. ಅದರಲ್ಲಿ ಕೂಡ ಕಲಾವಿದರ ಬದುಕು ನಿಜಕ್ಕೂ ದುರಂತಮಯವಾಗಿದೆ. ಯಾಕೆಂದರೆ ವರ್ಷಗಳಿಂದ ನಟನೆಯನ್ನೇ ನಂಬಿರುವ ಬಹುತೇಕರಿಗೆ ಅನ್ನ ನೀಡುವ ಮಾರ್ಗವೇ ನಿಂತ ಹಾಗಿದೆ. ಇದೀಗ ಅಂಥದೊಂದು ಬೇಡಿಕೆಯನ್ನು ಪೋಷಕ‌ ನಟಿ ಲಲಿತಮ್ಮ ಮುಂದಿಟ್ಟಿದ್ದಾರೆ.

ರಂಗಭೂಮಿ ನಟಿಯಾಗಿ ಬಣ್ಣದ ಲೋಕ ಪ್ರವೇಶಿಸಿದ ಇವರು ಕಳೆದ ಎರಡು ದಶಕಗಳಿಂದ ಸಿನಿಮಾ ಮತ್ತು ಕಿರುತೆರೆ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಬಹಳಷ್ಟು ಚಿತ್ರಗಳಲ್ಲಿ ಪೋಷಕ‌ ಪಾತ್ರಗಳಲ್ಲಿ ಗುರುತಿಸಿಕೊಂಡಿರುವ ಲಲಿತಮ್ಮ ಪ್ರಸ್ತುತ ಪೋಷಣೆಯೇ ಇರದ ಸ್ಥಿತಿ ತಲುಪಿದ್ದಾರೆ.

ಒಂಟಿ‌ ಜೀವನ‌ ನಡೆಸುತ್ತಿದ್ದ ನಟಿ ಲಲಿತಾ ಅವರು ಚಿತ್ರೀಕರಣ ನಿಂತ ಕಾರಣ, ತಿಂಗಳಿನಿಂದ ಮನೆ ಬಾಡಿಗೆಯನ್ನು ಕೂಡ ನೀಡಲಾಗದೆ ನಿರ್ವಸಿತರ ಜತೆಗೆ
ಯಾವುದೋ ಕಚೇರಿಯಲ್ಲಿದ್ದರು. ಇದೀಗ ಅಲ್ಲಿಂದ ಖಾಲಿ ಮಾಡಬೇಕಾಗಿ ಬಂದ ಕಾರಣ ಸ್ನೇಹಿತರೋರ್ವರ ಮನೆಯಲ್ಲಿ ವಾಸವಾಗಿದ್ದಾರೆ. ಲಲಿತಾ ಅವರ ಕಷ್ಟ ಅರಿತವರು ಆಹಾರ ಕಿಟ್ ವಿತರಣೆ ಮಾಡಿ ಸಹಾಯ ಮಾಡಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಒಂದು ಬಾಡಿಗೆ ಮನೆ ಸೇರಲೇಬೇಕಾದ ಅನಿವಾರ್ಯತೆ ಲಲಿತಾ ಅವರಿಗೆ ಎದುರಾಗಿದೆ. ಯಾಕೆಂದರೆ ಯಾರೇ ಸ್ನೇಹಿತರಾದರೂ ತಿಂಗಳ‌ ಕಾಲ ಮನೆಯಲ್ಲಿ ಇರಿಸಿಕೊಳ್ಳುವುದು ಕಷ್ಟ. ಇದನ್ನು ಮನಗಂಡ ಲಲಿತಾ ಅವರು ಸ್ವತಃ ಸಹಾಯ ಬೇಡಿ ಸಾಮಾಜಿಕ ಜಾಲತಾಣಗಳ ಮೂಲಕ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಕಲಾವಿದೆಯಾಗಿ ಗೌರವಪೂರ್ಣ ಬದುಕು ನಡೆಸುತ್ತಿದ್ದ ಲಲಿತಾ ಅವರು ಇಂದು ಅನಿವಾರ್ಯವಾಗಿ ಇತರರ ಎದುರು ಕೈ ಚಾಚಬೇಕಾದ ಸಂದರ್ಭ ಬಂದಿದೆ. ಇವರಿಗೆ ಕಲಾವಿದರ ಸಂಘ ಅಥವಾ ಸಹಾಯ ಹಸ್ತ ಚಾಚಲು ಸೌಕರ್ಯವುಳ್ಳ ಸುಮನಸಿಗರು ಯಾರಾದರೂ ನೆರವು ನೀಡಬೇಕಾಗಿದೆ.

ಇವರು ಜನಪ್ರಿಯ ಪೋಷಕ ನಟಿ

ಲಲಿತಾ ಅವರು ನಟಿಸಿದ ಚಿತ್ರಗಳಲ್ಲಿ ‘ಜಂಗ್ಲಿ’ ಸಿನಿಮಾದಲ್ಲಿ ದುನಿಯಾ‌ ವಿಜಯ್ ಅವರ ತಾಯಿಯಾಗಿ‌ ನಟಿಸಿದ ಪಾತ್ರ ಜನಪ್ರಿಯವಾಗಿತ್ತು. ದರ್ಶನ್ ಅವರ ‘ಸುಂಟರಗಾಳಿ’ ಸಿನಿಮಾದಲ್ಲಿನ ‘ಸಾರಾಯಿ ಅಂಗಡಿ ಶಾರದಾ’ ಪಾತ್ರ ಕೂಡ ಅವರಿಗೆ ಹೆಸರು ತಂದುಕೊಟ್ಟ ಚಿತ್ರಗಳಲ್ಲಿ ಒಂದು. ಡಾ.‌ಶಿವರಾಜ್ ಕುಮಾರ್ ನಟನೆಯ ‘ವಜ್ರಕಾಯ’ದಲ್ಲಿ ಸಂಭಾಷಣೆಯೇ ಇರದ ಪಾತ್ರವಾದರೂ ಚಿತ್ರ ನೋಡಿದ ಪ್ರೇಕ್ಷಕರು ಮರೆಯಲಾಗದಂಥ ನಟನೆ ನೀಡಿದ್ದರು. ಉಳಿದಂತೆ ‘ಪಂಚರಂಗಿ’, ‘ಜಾಕಿ’, ‘ಗೋಪಾಲ ಗೋವಿಂದ’ ಹೀಗೆ ಸುಮಾರು 20ರಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

ಕಿರುತೆರೆಯ ವಿಚಾರಕ್ಕೆ ಬಂದರೆ ‘ರಂಗೋಲಿ’ ಧಾರಾವಾಹಿಯಲ್ಲಿ ‘ಸಲ್ಫಿಟ್ ಸರೋಜ’, ‘ಮಾಂಗಲ್ಯ’, ‘ಮಂಗಳ ಗೌರಿ ಮದುವೆ’,’ಪಾಪ ಪಾಂಡು’ ಹೀಗೆ 50 ರಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಸ್ನೇಹಿತರ ಮನೆಯಲ್ಲಿ ವಾಸವಾಗಿರುವ
ಲಲಿತಮ್ಮ ತಮಗೆ ಸಹಾಯ ನೀಡಲು ಸಂಪರ್ಕಿಸಲಿಕ್ಕಾಗಿ ತಮ್ಮ ಮೊಬೈಲ್ ನಂಬರ್ ನೀಡಿದ್ದಾರೆ. ದಯವಿಟ್ಟು ಆರ್ಥಿಕವಾಗಿ ಸಹಾಯ ನೀಡಲು ಸಾಧ್ಯವಿರುವವರು ಅವರು ನೀಡಿರುವ ಈ ಸಂಖ್ಯೆಗೆ ಕರೆ ಮಾಡಿ ( 9845183751) ಸಂಪರ್ಕಿಸುವಂತೆ ತಿಳಿಸಲು ಸ್ವತಃ ಲಲಿತಾ ಅವರು ಸಿನಿಕನ್ನಡ.ಕಾಮ್ ಜತೆಗೆ ವಿನಂತಿಸಿದ್ದಾರೆ.

ಅವರ ಬ್ಯಾಂಕ್ ಖಾತೆಯ ವಿವರ ಇಲ್ಲಿದೆ.

Name:lalitha B, ac no-39370221995, ifsc co-sbin0040292, branch-sajjanrao circle

Recommended For You

Leave a Reply

error: Content is protected !!
%d bloggers like this: