‘ಸಮುದಾಯದ ರಂಗಚಿಂತನ’ ಎನ್ನುವ ಐತಿಹಾಸಿಕ ಪ್ರಯತ್ನ

ಸಮುದಾಯ’ ಎನ್ನುವ ಕರ್ನಾಟಕದ ಜನಪ್ರಿಯ ರಂಗತಂಡಕ್ಕೆ ನಾಲ್ಕು ದಶಕಗಳ ಇತಿಹಾಸ ಇದೆ. ಒಂದು ಕಾಲದಲ್ಲಿ ರಾಜ್ಯ ರಾಜಧಾನಿಯ ರಾಜಕೀಯ, ಸಾಮಾಜಿಕ ಬೆಳವಣಿಗೆಯಲ್ಲಿ ಪ್ರಮುಖ ಬದಲಾವಣೆಗೆ ಕಾರಣವಾದ ಸಮುದಾಯವನ್ನು ಕಟ್ಟಿ ಬೆಳೆಸಿದ ಸಮಾನ ಮನಸ್ಕರಲ್ಲಿ ಆರ್ ಪಿ ಪ್ರಸನ್ನ ಕೂಡ ಪ್ರಮುಖರು. ಪ್ರಸ್ತುತ ಅವರು ಸೇರಿದಂತೆ ಭಾರತೀಯ ರಂಗಭೂಮಿಯ ಪ್ರಮುಖರು ‘ಸಮುದಾಯದ ರಂಗ ಚಿಂತನ’ ಎನ್ನುವ ಯೂಟ್ಯೂಬ್ ಸರಣಿ‌ ಕಾರ್ಯಕ್ರಮ ಶುರು ಮಾಡಿದ್ದಾರೆ. ಜೂನ್ 10ರಂದು ಆರಂಭಗೊಂಡಿರುವ ಈ ಚರ್ಚಾ ಮಾಲಿಕೆಯಲ್ಲಿ ಇದುವರೆಗೆ ಪ್ರಸನ್ನ, ಬಿ ಜಯಶ್ರೀ ಮತ್ತು ಪುರುಷೋತ್ತಮ ಬಿಳಿಮಲೆಯವರು ಮಾತನಾಡಿದ್ದಾರೆ. ಇನ್ನು ಮುಂದೆ ಕೂಡ ಸಾಕಷ್ಟು ಪ್ರಮುಖರು ಮಾತನಾಡಲಿದ್ದಾರೆ. ಈ ಕಾರ್ಯಕ್ರಮ ಹೇಗೆ ಸಾಗಿ ಬರುತ್ತಿದೆ ಎನ್ನುವ ಬಗ್ಗೆ ‘ಸಮುದಾಯ’ ರಂಗತಂಡದ ಪ್ರಮುಖರು ‘ಸಿನಿಕನ್ನಡ.ಕಾಮ್’ ಜತೆಗೆ ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.

ಕನ್ನಡದ ರಂಗಭೂಮಿಗೆ ಹೊಸ ಜೀವನೋತ್ಸಾಹ ತುಂಬಬೇಕಿದೆ – ಗುಂಡಣ್ಣ

ಸಮುದಾಯ ಸಂಘಟನೆಯಿಂದ ನಡೆಸಲಾಗುತ್ತಿರುವ ಕಾರ್ಯಕ್ರಮ ಇದು. ಇದು ಕೊರೊನಾಗಷ್ಟೇ ಸೀಮಿತವಾದ ವಿಚಾರ ಅಲ್ಲ. ಕಳೆದ ಎಂಟು, ಹತ್ತು ವರ್ಷಗಳಿಂದ ರಂಗಭೂಮಿ ಯಾವ ಪರಿಸ್ಥಿತಿಯಲ್ಲಿದೆ? ರಂಗಭೂಮಿಗೆ ಹೆಚ್ಚು ಜನರನ್ನು ಕರೆಸುವಲ್ಲಿ ಯಾವ ನಾಟಕಗಳನ್ನು ಆಯ್ಕೆ ಮಾಡಬೇಕು? ನಾಟಕಗಳು ಕೇವಲ ಮನರಂಜನೆಗಷ್ಟೇ ಸೀಮಿತವಾಗಿದ್ದರೆ ಸಾಕೇ? ಅಥವಾ ಅದರಲ್ಲೇನಾದರೂ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕೇ ಎನ್ನುವುದನ್ನು ನಮ್ಮ ಸಮಿತಿಯೊಂದಿಗೆ ಚರ್ಚಿಸಿದ್ದೇವೆ. ಇದು ರಾಜ್ಯ ಮತ್ತು ರಾಷ್ಟ್ರದ ಬಹಳ ಪ್ರಮುಖ ಸಂಘಟಕರನ್ನು, ನಿರ್ದೇಶಕರನ್ನು ನಾಟಕಕಾರರನ್ನು ಒಳಗೊಂಡ ಒಂದು ಸಂವಾದವಾಗಲಿ ಎನ್ನುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಶುರು ಮಾಡಿದ್ದೇವೆ. ಜೂನ್ 10ರಿಂದ ಆರಂಭಿಸಲಾದ ಈ ಕಾರ್ಯಕ್ರಮದಲ್ಲಿ ಸುಮಾರು 45ರಷ್ಟು ಮಂದಿ ಪಾಲ್ಗೊಳ್ಳಲಿದ್ದಾರೆ. ಇದೆಲ್ಲವೂ ರೆಕಾರ್ಡೆಡ್ ಕಾರ್ಯಕ್ರಮಗಳಾಗಿರುತ್ತವೆ. ಖ್ಯಾತ ನಾಟಕಾರರು ಮತ್ತು ರಂಗ ಪರಿಣಿತರ ಈ ತಂಡದಲ್ಲಿ ರಘುನಂದನ್, ಸುಧನ್ವ ದೇಶಪಾಂಡೆ, ದೇವಿ, ಬಿ ಸುರೇಶ್, ಪುರುಷೋತ್ತಮ ಬಿಳಿಮಲೆ, ವಾಮನ ಮೊದಲಾದವರಿದ್ದಾರೆ. ಮುಖ್ಯ ಮಾತುಗಾರರಿಗೆ ಹತ್ತು ಹದಿನೈದು ನಿಮಿಷ ಅವಕಾಶ ಇದೆ. ಕಾಲಾವಧಿ ಇಲ್ಲದೆ ಹೆಚ್ಚು ಮಾತನಾಡಿದ ಪ್ರಮುಖರ ಮಾತುಗಳನ್ನು ಹಾಗೆಯೇ ಪ್ರಸಾರ ಮಾಡಲಾಗುತ್ತದೆ. ಈಗಾಗಲೇ ಇಪ್ಪತ್ತಕ್ಕೂ ಅಧಿಕ ಮಂದಿಯ ಮಾತುಗಳನ್ನು ರೆಕಾರ್ಡ್ ಮಾಡಿ ಸಂಕಲನವನ್ನು ಮುಗಿಸಿದ್ದೇವೆ. ಹಾಗಾಗಿ ಯಾವುದೇ ಬ್ರೇಕ್ ಇಲ್ಲದೇ ನಿತ್ಯವೂ ಇವರ ಮಾತುಗಖ ಕೇಳುವ ಅವಕಾಶ ಇರುತ್ತದೆ. ‘ಸಮುದಾಯ ರಂಗಚಿಂತನ’ ಎನ್ನುವುದನ್ನು ಇಷ್ಟಕ್ಕೆ ಸೀಮಿತಗೊಳಿಸದೆ, ಮುಂದೆ ಇದೇ ವೇದಿಕೆ ಬಳಸಿಕೊಂಡು ‘ಜೂಮ್ ಕಾಲ್’ ಡಿಸ್ಕಶನ್ ಗಳನ್ನು ಮಾಡುವ ಉದ್ದೇಶ ಹೊಂದಿದ್ದೇವೆ.‌ ಇವೆಲ್ಲವೂ ರಂಗಭೂಮಿಯ ವಿಚಾರಗಳನ್ನು ಮಾತ್ರ ಒಳಗೊಂಡಿರುತ್ತವೆ ಎನ್ನುವುದು ವಿಶೇಷ.

ಇತ್ತೀಚಿನ ದಿನಗಳಲ್ಲಿ ಕನ್ನಡ ರಂಗಭೂಮಿ ಜನಾಕರ್ಷಣೆಯ ವಿಚಾರದಲ್ಲಿ ಬಹಳ ಕುಸಿತವನ್ನು ಅನುಭವಿಸುತ್ತಿದೆ. ನಾಟಕಗಳ ಕಂಟೆಂಟ್ ಮತ್ತು ಫಾರ್ಮ್ಯಾಟ್ ವಿಚಾರದಲ್ಲಿ ಹೊಸತನ ಎನ್ನುವುದೇ ಇಲ್ಲವಾಗಿದೆ. ಅದುವೇ ಮರಾಠಿ ಅಥವಾ ಬಂಗಾಳಿ ಥಿಯೇಟರ್ ಕಡೆಗೆ ಗಮನಿಸಿದರೆ ಅಲ್ಲಿ ಇವತ್ತಿಗೂ ಹೊಸ ಮಾದರಿಯ ನಾಟಕಗಳು ಸೃಷ್ಟಿಯಾಗುತ್ತಿವೆ. ಅವುಗಳಿಗೆ ಪ್ರೇಕ್ಷಕರೂ ಇದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಹಿಂದಿ ರಂಗಭೂಮಿ ಬಹಳ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಒಂದು ಕಾಲದಲ್ಲಿ ಇಡೀ ದೇಶಕ್ಕೇನೇ ಮಾದರಿಯಾಗುವಂತಿದ್ದ ಕನ್ನಡ ರಂಗಭೂಮಿಯ ಚಾರ್ಮ್ ಪ್ರಸ್ತುತ ಹಾಗೆ ಉಳಿದಿಲ್ಲ. ದಕ್ಷಿಣ ಭಾರತದಲ್ಲಿ ಬೇರೆಲ್ಲ ರಾಜ್ಯಗಳಿಗಿಂತ ಉತ್ಕೃಷ್ಟವಾದ ರೀತಿಯ ರಂಗ ತಂಡಗಳು ನಮ್ಮದಾಗಿದ್ದವು. (ಇಲ್ಲಿ ವೈವಿಧ್ಯತೆಯಿಂದ ಬೇರೆಯಾಗಿಯೇ ನಿಲ್ಲುವ ಕೇರಳವನ್ನು ಹೊರತುಪಡಿಸುತ್ತೇನೆ.) ಆದರೆ ಇವತ್ತಿನ ದಿನಗಳಲ್ಲಿ ರಂಗಭೂಮಿಯನ್ನೇ ನಂಬಿರುವ ಹಲವಾರು ಜನರಿದ್ದಾರೆ. ಹಾಗಾಗಿ ಕನ್ಸ್ಟ್ರಕ್ಟಿವ್ ಆಗಿ ಏನಾದರೂ ಮಾಡಬಹುದ ಎನ್ನುವ ಚರ್ಚೆ ನಡೆಯಬೇಕಿದೆ. ಎಪ್ಪತ್ತು ಎಂಬತ್ತರ ದಶಕದಲ್ಲಿ ನೀನಾಸಂ ಮಾತ್ರವೇ ನಮ್ಮಲ್ಲಿ ಇದ್ದ ಥಿಯೇಟರ್ ಇನ್ಸ್ಟಿಟ್ಯೂಟ್ ಆಗಿತ್ತು.‌ ಆದರೆ ಇಂದು ಸಾಕಷ್ಟು ತಂಡಗಳು ಸ್ಕೂಲ್ ಶುರು ಮಾಡಿದ್ದು, ಅಲ್ಲಿಂದ ತರಬೇತಿ ಪಡೆದುಕೊಂಡು ಬರುವವರಿಗೂ ಕೊರತೆ ಇಲ್ಲ. ‘ಎನ್ ಎಸ್ ಡಿ’ ಬೆಂಗಳೂರಿಗೂ ಬಂದಿದೆ. ರಾಜ್ಯದ ವಿವಿಧ ಜಾಗಗಳಲ್ಲಿ ‘ರಂಗಾಯಣ’ವೂ ಇದೆ. ಚಿತ್ರದುರ್ಗ ಸೇರಿದಂತೆ ಕೆಲವು ಮಠಗಳು ರಂಗ ತಂಡಗಳಿವೆ. ಕುಂದಾಪುರದಲ್ಲಿ ವಸಂತ ಬನ್ನಾಡಿಯವರು ತಂಡವೊಂದನ್ನು ನಡೆಸುತ್ತಿದ್ದಾರೆ. ಇಂಥ ಹಲವಾರು ತಂಡಗಳ ಭವಿಷ್ಯವೇನು ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಪಡೆಯವ ಪ್ರಯತ್ನ ಮಾಡಲಿದ್ದೇವೆ. ಮಾತ್ರವಲ್ಲ, ಬೆಂಗಳೂರಿನ‌ ರಂಗತಂಡದಲ್ಲಿರುವ ಎಲ್ಲರೂ ಸ್ಥಳೀಯರೇನಲ್ಲ. ಮುಕ್ಕಾಲು ಪಾಲಿಗೂ ಅಧಿಕ ಮಂದಿ ಬೇರೆ ಬೇರೆ ಹಳ್ಳಿಗಳಿಂದ ಬಂದಿರುತ್ತಾರೆ. ಅವರಿಗೆಲ್ಲ ಅಲ್ಲಿಯೇ ಆರ್ಥಿಕ‌, ಸಾಂಸ್ಕೃತಿಕ ಹಿನ್ನೆಲೆ ಇರುತ್ತದೆ. ಸಾಮಾನ್ಯವಾಗಿ ಅವರು ಕಲಿತ ಮೇಲೆ ಟಿ.ವಿ ಸೀರಿಯಲ್, ಸಿನಿಮೋದ್ಯಮ ಮೊದಲಾದವುಗಳ ಹಿಂದೆ ಹೋಗುತ್ತಾರೆ. ರೆಗ್ಯುಲರ್ ಥಿಯೇಟರ್ ಎನ್ನುವುದು ನಿಂತು ಹೋಗುತ್ತದೆ. ಆದರೆ ರಂಗತಂಡದಲ್ಲೇ ಕೊನೆಯ ತನಕ ಉಳಿಯುವಂಥ, ವೃತ್ತಿಪರ ರಂಗತಂಡ ಸೇರಿಕೊಳ್ಳದೆ ಇದರಲ್ಲೇ ಪ್ರಯೋಗಾತ್ಮಕ ಪ್ರಯತ್ನಗಳನ್ನು ನಡೆಸುವಂಥ ಸಾಧ್ಯತೆಗಳು ರಂಗಭೂಮಿಗೆ ಇದೆಯೇ? ಅದನ್ನು ನಾವು ಹೇಗೆ ಕಟ್ಟಿಕೊಳ್ಳಬಹುದು ಎನ್ನುವ ಮನಮಂಥನ ಮಾಡುವ ಪ್ರಯತ್ನ ನಮ್ಮದು.

ಗುಂಡಣ್ಣ, ಸಮುದಾಯದ ರಂಗ ಸಂಘಟಕ

ಕೋವಿಡ್ ಕಾಲದಲ್ಲಿನ ರಂಗಭೂಮಿ-ಶಶಿಧರ

“ಕೋವಿಡ್ 19 ನಿಂದ ಯಾವುದೇ ರಂಗಚಟುವಟಿಕೆ ಇರಲಿಲ್ಲ. ಈ ಸಂದರ್ಭದಲ್ಲಿ ಇಂಥದೊಂದು ಕಾರ್ಯಕ್ರಮ ಮಾಡೋಣ ಅಂತ ಯೋಚಿಸಿ, ರಂಗಭೂಮಿಯ ಸುಮಾರು 25 ರಿಂದ 30 ಜನರು ಹಾಗೂ ಈ ನಾಡಿನ ಚಿಂತಕರು, ಸಾಹಿತಿಗಳು, ಪ್ರಮುಖ ರಂಗತಜ್ಞರು ಮೊದಲಾದವರನ್ನು ಮಾತನಾಡಿಸಿದ್ದೇವೆ. ಅರುಂಧತಿ ನಾಗ್, ಬಿ ಜಯಶ್ರೀ, ಬಿ.ಸುರೇಶ್, ಬಸವಲಿಂಗಯ್ಯ ಎಲ್ಲರೂ ಮಾತಾಡಿದ್ದಾರೆ. ಅವರವರ ಅನಿಸಿಕೆಗಳನ್ನು ಹೇಳಿದ್ದಾರೆ. ಈಗಾಗಲೇ ಒಳ್ಳೆಯ ಪ್ರತಿಕ್ರಿಯೆ ಸಿಗತೊಡಗಿದೆ.

ಶಶಿಧರ -‘ಸಮುದಾಯ’ ರಂಗತಂಡದ ಕಾರ್ಯದರ್ಶಿ

ಈ ಚರ್ಚೆ ನಿರಂತರ – ಶ್ರೀಪಾದ ಭಟ್

ಇದು ಕೊರೊನಾ ಕಾಲದ ರಂಗಭೂಮಿಯ ಚರ್ಚೆ ಮಾತ್ರ ಆಗಬಾರದು ಎನ್ನುವ ಸೂಚನೆಯನ್ನು ಎಲ್ಲ ರಂಗತಜ್ಞರಿಗೂ ಮೊದಲೇ ಸೂಚಿಸಿದ್ದೆ. ಪಾಲ್ಗೊಂಡಿರುವ ಹಿರಿಯರಿಗೆಲ್ಲ ಖುಷಿಯಾಗಿದೆ. ಪಾಸಿಟಿವ್ ಆಗಿ ಮಾತಾಡಿದ್ದಾರೆ. ಅನೇಕ ಅಗತ್ಯವಾದ ನಿರ್ದೇಶಗಳನ್ನು ಕೊಟ್ಟಿದ್ದಾರೆ.

ಸಾಹಿತಿಗಳು ಚಿಂತಕರು ಬಿಳಿಮಲೆ, ರಾಜೇಂದ್ರ ಚೆನ್ನಿ ಅಂಥವರು ನಮಗೆ ಉಪಯುಕ್ತ ವಿಚಾರಗಳನ್ನು ವಿವರಿಸಿದ್ದಾರೆ. ನಮ್ಮ ಪ್ರಯತ್ನಕ್ಕೆ ಉತ್ಸಾಹದಾಯಕವಾಗಿ ಪ್ರತಿಕ್ರಿಯಿಸಿದ್ದಾರೆ. ಇಲ್ಲಿ ಮುಖ್ಯವಾಗಿ ವರ್ತಮಾನದ ಥಿಯೇಟರ್ ಸಮಸ್ಯೆಗಳ ಕುರಿತು ಸಂವಾದ ನಡೆಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಥಿಯೇಟರ್ ನ ಸಂಶೋಧಕರಿಗೆ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ವಿಚಾರ ಸಂಕೀರ್ಣದ ರೀತಿಯಲ್ಲಿ ಚಿಂತನೆಯ ಪ್ರೋಗ್ರಾಮ್ ಅನ್ನು ಡಿಸೈನ್ ಮಾಡಿದ್ದೇವೆ.

ಮುಖ್ಯವಾಗಿ ಮೊದಲೇ ಅನೇಕ ರಂಗಭೂಮಿಯ ಹಿರಿಯರು, ರಾಜ್ಯ ಮತ್ತು ಹೊರ ರಾಜ್ಯದ ವಿವಿಧ ವಿಭಾಗದ ಪರಿಣಿತರು, ಚಿಂತಕರು, ಸಾಹಿತಿಗಳು, ಸಾಮಾಜಿಕ ಚಿಂತಕರು, ಸಾಂಸ್ಕೃತಿಕ ಚಿಂತನೆಗೆ ನೆರವಾಗುವಂಥವರಿಗೆ ಕೆಲವೊಂದು ಪ್ರಶ್ನೆಗಳನ್ನು ಕಳುಹಿಸಿಕೊಟ್ಟಿದ್ದೇವೆ. ಥಿಯೇಟರ್ ನವರಿಗೆ ಒಂದಷ್ಟು ಪ್ರಶ್ನೆಗಳ‌ ಸರಮಾಲೆಯನ್ಬೇ ಕೊಟ್ಟಿದ್ದೆವು. ಅದೇ ವೇಳೆ ಚಿಂತಕರಿಗೆ ಬೇರೆಯೇ ತರಹದ ಪ್ರಶ್ನೆಗಳನ್ನು ಕೊಟ್ಟಿದ್ದೇವೆ. ಅವುಗಳಲ್ಲಿ ಮುಖ್ಯವಾಗಿ ಒಂದು ವರ್ತಮಾನದಲ್ಲಿರುವಂಥ ‘ಕನ್ನಡ ರಂಗಭೂಮಿ’ ಇದರ ವಿಶ್ಲೇಷಣೆಯನ್ನು ಮಾಡುವುದು. ಹೇಗಿದೆ ಅಂತ ಅಂದುಕೊಂಡಿದ್ದಾರೆ ಅಂತ. ಹಿರಿಯರಲ್ಲಿ ಈಗಿನ ಯುವಕರು ಅದನ್ನು ಯಾವ ರೀತಿ ತಿಳ್ಕೊಂಡಿದ್ದಾರೆ ಎನ್ನುವುದು ಪ್ರಶ್ನೆ. ಬೇರೆ ಬೇರೆ ಕಲಾ ಶಾಖೆಗಳು ಉದಾಹರಣೆಗೆ ಡ್ಯಾನ್ಸ್, ಮ್ಯೂಸಿಕ್, ಸಾಹಿತ್ಯ ಇವೆಲ್ಲವುಗಳ ಜತೆಗೆ ರಂಗಭೂಮಿ ಅಂತರ್ ಸಂಬಂಧ ಹೇಗಿದೆ ಮತ್ತು ಹೇಗಿರಬೇಕು ಎನ್ನುವುದರ ಕುರಿತು, ರಂಗಸಂಘಟನೆಯ ಕುರಿತು, ಸಮಾಜ ಮತ್ತು ರಂಗಭೂಮಿಯ ಸಂಬಂಧಗಳು, ಇದನ್ನ ನಾವು ರಂಗಸಂಸ್ಕ್ರತಿ ಎಂದು ಕರೆಯುವುದಾದರೆ ಯಾವ ತರಹದ ರಂಗಸಂಸ್ಕೃತಿ ಇರಬೇಕು ಎನ್ನುದರ ಕುರಿತಾದ ಒಂದಷ್ಟು ಪ್ರಶ್ನೆಗಳನ್ನು ತಯಾರು ಮಾಡಿ ಕಳುಹಿಸಿದ್ದೇವೆ. ಕೆಲವರು ಆ ಪ್ರಶ್ನೆಗಳಿಗೆ ಉತ್ತರವಾಗಿ ಮಾತಾಡಿದ್ದರೆ, ಇನ್ನು ಕೆಲವರು ವಿಸ್ತಾರವಾಗಿ ಮಾತನಾಡಿದ್ದಾರೆ. ಈ ಮಾತುಗಳು ‘ಯೂ ಟ್ಯೂಬ್’ನಲ್ಲಿ ಸದಾ ಸ್ಟೋರ್ ಇರುವುದರಿಂದಾಗಿ ಇವತ್ತು ನೋಡಲು ಆಗದೇ ಇದ್ದರೂ ದಿನ ಬಿಟ್ಟು ನೋಡುವ ಅವಕಾಶ ಕೂಡ ಸಿಗಲಿದೆ. ಹಾಗಾಗಿಯೇ ಇದೊಂದು ಕೊರೊನ ಕಾಲದ ಕಾರ್ಯಕ್ರಮವಷ್ಟೇ ಆಗಿರದೆ, ಎಲ್ಲ ಕಾಲಕ್ಕೂ ಅನ್ವಯಿಸುವ ಒಂದು ಸ್ಟಫ್ ಒಳಗೆ ಇರುವ ಹಾಗೆ ಮಾಡಿದ್ದೀವಿ. ನಾನು ಇದರ ಡಿಸೈನ್ ಮಾಡಿದ್ದೀನಿ. ಬೆಂಗಳೂರಿನ ಸಮುದಾಯ ಸಂಘಟನೆ ಮಾಡಿದೆ. ಮುಂದಿನ ಹಂತದಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಯುವ ಸಮುದಾಯವನ್ನು ಮಾತನಾಡಿಸಬೇಕು ಎನ್ನುವ ಯೋಜನೆ‌ ಇದೆ.

ಶ್ರೀಪಾದ ಭಟ್
ಕಾರ್ಯಕ್ರಮದ ಸಂಯೋಜಕ ಮತ್ತು ನಿರ್ವಾಹಕರು.

Recommended For You

Leave a Reply

error: Content is protected !!
%d bloggers like this: