ರಿಷಭ್ ಶೆಟ್ಟಿಗೆ ನಾಯಕಿ ಮಗಳು ಜಾನಕಿ!

‘ಮಗಳು ಜಾನಕಿ’ ಧಾರಾವಾಹಿ ನಿಂತ ಬಳಿಕ ಪ್ರೇಕ್ಷಕರು ನಿರ್ದೇಶಕ ಟಿ ಎನ್ ಸೀತಾರಾಮ್ ಅವರ ಹೊಸ ಧಾರಾವಾಹಿಯನ್ನು ಎಷ್ಟು ನಿರೀಕ್ಷೆ ಮಾಡುತ್ತಿದ್ದಾರೆಯೋ ಅಷ್ಟೇ ಆಸಕ್ತಿಯನ್ನು ಜಾನಕಿಯ ಬಗ್ಗೆ ಕೂಡ ಇರಿಸಿಕೊಂಡಿದ್ದಾರೆ. ಆದರೆ ಜಾನಕಿ‌ ಪಾತ್ರಧಾರಿ ಸಿನಿಮಾದ ಮೂಲಕ ರಿಷಭ್ ಶೆಟ್ಟಿಯವರಿಗೆ ಜೋಡಿಯಾಗಿ ಬರಲಿದ್ದಾರೆ. ಆ ಚಿತ್ರ ಮತ್ತು ಗಾನವಿಯ ಕುರಿತಾದ ವಿಚಾರವೇ ಸಿನಿಕನ್ನಡ.ಕಾಮ್ ವಿಶೇಷ.

ಗಾನವಿ ಲಕ್ಷ್ಮಣ್ ಅವರು ಇತರ ನಟಿಯರ ಹಾಗೆ ಅಲ್ಲ. ಅದಕ್ಕೆ ಕಾರಣ, ಅವರು ಬೆಳೆದು ಬಂದಿರುವ ರೀತಿ. ಸಾಮಾನ್ಯವಾಗಿ ಯಾವ ನಟಿಯೇ ಆಗಿದ್ದರು ಮೊದಲ ಧಾರಾವಾಹಿಯೇ ಟಿಎನ್ ಸೀತಾರಾಮ್ ಅವರಿಂದ ಸಿಕ್ಕ ಬಳಿಕ, ಬಂದಂಥ ಸಹಜ ಡಿಮ್ಯಾಂಡನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದರು. ಆದರೆ ಹೊಸದಾಗಿ ಮೂರು ಧಾರಾವಾಹಿಗಳಿಂದ ಪ್ರಧಾನ ಪಾತ್ರದ ನಿರ್ವಹಣೆಗಾಗಿ ಆಫರ್ ಬಂದಿದ್ದರೂ ನಿರಾಕರಿಸಿದ್ದಾರೆ ಗಾನವಿ. ಅದಕ್ಕೆ ಕಾರಣ, “ಕಿರುತೆರೆ ಧಾರಾವಾಹಿಯಲ್ಲಿ ನಟನೆಗೆ ಏನೆಲ್ಲ ಸಾಧ್ಯತೆ ಇದೆಯೋ ಅವನ್ನೆಲ್ಲ ಬಳಸಿಕೊಳ್ಳುವಂಥ ಪಾತ್ರವನ್ನು ಟಿಎನ್ ಸೀತಾರಾಮ್ ಸರ್ ಅವರೇ ನೀಡಿದ್ದಾರೆ. ಇನ್ನೇನಾದರೂ ಹೊಸದಾಗಿ ಮಾಡಲು ಸಾಧ್ಯವಿದ್ದರೆ ಅದು ಸಿನಿಮಾ ಮೂಲಕ ಮಾತ್ರ. ಹಾಗಾಗಿ ಅಂಥದೊಂದು ನಿರೀಕ್ಷೆಯಲ್ಲಿದ್ದೇನೆ” ಎನ್ನುತ್ತಾರೆ.

ಆರಾಮ ಆದೊಡನೆ ನಾಥೂರಾಮ..!

ಕೊರೊನಾ ಕಾಟ ಇರದೆ, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ರಿಷಭ್ ಶೆಟ್ಟಿಗೆ ಜೋಡಿಯಾಗಿ ಗಾನವಿ ನಟಿಸಬೇಕಿದ್ದ ಚಿತ್ರದ ಶೂಟಿಂಗ್ ಸದ್ಯದಲ್ಲೇ ಶುರುವಾಗಬೇಕಿತ್ತು. ಆದರೆ ಒಂದು ವೈರಸ್ ಲಾಕ್ಡೌನ್ ಎಲ್ಲರ ಸಮಯವನ್ನು ಹಾಳು ಮಾಡಿದೆ.

ಕಿರುತೆರೆಯಲ್ಲಿ ಅತ್ಯಂತ ಯಶಸ್ವಿ ಹಾಗೂ‌ ಸೃಜನಶೀಲ ನಿರ್ದೇಶಕ ಎಂದು ಹೆಸರು ಮಾಡಿರುವವರು ವಿನು ಬಳಂಜ. ಅವರ ‘ಪ್ರೀತಿ ಇಲ್ಲದ ಮೇಲೆ’, ‘ಲವಲವಿಕೆ’ ಮೊದಲಾದ ಧಾರಾವಾಹಿಗಳು ಕ್ಲಾಸ್ ಪ್ರೇಕ್ಷಕರನ್ನು ಸೆಳೆದಿದ್ದವು. ಇದೀಗ ಅವರ ನಿರ್ದೇಶನದ ಪ್ರಥಮ‌ ಚಿತ್ರಕ್ಕೆ ನಾಥೂರಾಮ್ ಎಂದು ಹೆಸರಿಡಲಾಗಿದ್ದು, ನಾಥೂರಾಮನ ಪಾತ್ರದಲ್ಲಿ ಚಂದನವನದ ಯುವ ತಾರೆ ರಿಷಭ್ ಶೆಟ್ಟಿ ಅಭಿನಯಿಸಲಿದ್ದಾರೆ. ಹೆಸರು ‌ನಾಥೂರಾಮ ಎನ್ನುವುದಾಗಿ ಇದ್ದರೂ ಇದು‌ ಗಾಂಧಿಯನ್ನು ಕೊಂದ ಗೋಡ್ಸೆಯ ಕತೆಯಲ್ಲ. ಬದಲಾಗಿ ಮಹಾತ್ಮಾ ಗಾಂಧಿಯ ಮೇಲೆ ಅಪಾರ ಅಭಿಮಾನ ಇರಿಸಿರುವ ವ್ಯಕ್ತಿಯ ಕತೆ ಎಂದು ವಿನು ಬಳಂಜ ಮೊದಲೇ ಸ್ಪಷ್ಟ ಪಡಿಸಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಕತೆಯಲ್ಲಿ ಇರಬಹುದಾದ ತಿರುವು, ಸಂದೇಶಗಳ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಚಿತ್ರಕ್ಕೆ ನಾಯಕ ಪ್ರಧಾನ ಶೀರ್ಷಿಕೆ ಇದ್ದರೂ ನಾಯಕಿಗೆ ಕೂಡ ಚಿತ್ರದಲ್ಲಿ ಸಾಕಷ್ಟು ಉತ್ತಮ ಅವಕಾಶ ಇದೆ ಎಂದು ನಿರ್ದೇಶಕರು ಹೇಳಿದ್ದಾರೆ. ಅಲ್ಲಿಗೆ ಸಿನಿಮಾದಲ್ಲಿ ಕೂಡ ತಮಗೆ ಪ್ರಾಧಾನ್ಯತೆ ಇರುವ ಚಿತ್ರವನ್ನೇ ಒಪ್ಪುತ್ತೇನೆ ಎನ್ನುವ ಗಾನವಿಯ ಮಾತು ಸತ್ಯವಾಗಿದೆ.

‘ಚಾಲೆಂಜಿಂಗ್ ಪಾತ್ರ ಮಾಡಬಲ್ಲ ನಟಿ ಗಾನವಿ’

“ಗಾನವಿಯವರನ್ನು ನಾನು ಮಗಳು ಜಾನಕಿ ಧಾರಾವಾಹಿಯ ಆರಂಭದಿಂದಲೂ‌ ಬಲ್ಲೆ. ಆಕೆ ಆ ಧಾರಾವಾಹಿಗಾಗಿ ಎಷ್ಟು‌ ಸಮರ್ಪಣಾ ಭಾವದಿಂದ ಅಭಿನಯಿಸಿದ್ದಾರೆ ಎನ್ನುವುದು ನನಗೆ ಗೊತ್ತು. ಅಂಥ ಡೆಡಿಕೇಶನ್ ಇರುವ ಕಲಾವಿದೆಯೇ ನನಗೂ ಬೇಕಾಗಿತ್ತು. ಹಾಗಾಗಿಯೇ ಅವರನ್ನು ನಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಂಡೆ. ಅವರು ಕೂಡ ತಮ್ಮ ಕ್ಯಾರೆಕ್ಟರ್ ಬಗ್ಗೆ ಖುಷಿಯಾಗಿದ್ದಾರೆ” ಎನ್ನುತ್ತಾರೆ ವಿನು ಬಳಂಜ.

ರಿಷಭ್ ಶೆಟ್ಟಿಯವರ ಪ್ರಕಾರ ಈ ಮೂರು ತಿಂಗಳು ತಮ್ಮ ಇತರ ಪ್ರಾಜೆಕ್ಟ್ ಕೆಲಸಗಳು ಪೂರ್ತಿಯಾಗಿದ್ದರೆ ನಾಥೂರಾಮ ಆರಂಭಿಸಬಹುದಿತ್ತು. ಒಂದೊಳ್ಳೆಯ ಎಳೆಯನ್ನು ವಿನು ಬಳಂಜ‌ ಅವರು ಹೇಳಿದ್ದರು ಎನ್ನುತ್ತಾರೆ. ರಿಷಭ್ ಅವರ‌ ಕಾಲ್ ಶೀಟ್ ಸಿಗುವ ದಿನಗಳೊಳಗೆ ನಾನು ಮತ್ತೊಂದು ಸಣ್ಣ ಸಿನಿಮಾ ಮಾಡಬಹುದು ಎನ್ನುವ ಯೋಜನೆ ಹಾಕಿದ್ದೆ. ಅದು ಈ ಮೂರು ತಿಂಗಳೊಳಗೆ ಮುಗಿಯುತ್ತಿತ್ತು. ಅಷ್ಟರಲ್ಲಿ ಹೀಗಾಯಿತು ಎನ್ನುವುದು ನಿರ್ದೇಶಕರ ನಿರಾಶೆ. ಒಟ್ಟಿನಲ್ಲಿ ನಾಥೂರಾಮ್ ಪ್ರಾಜೆಕ್ಟ್ ಸ್ವಲ್ಪ ಮುಂದೆ ಹೋಗಿದೆ ಎನ್ನುವುದನ್ನು ಬಿಟ್ಟರೆ ಹಾಕಿಕೊಂಡ ಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಚಿತ್ರ ಖಂಡಿತವಾಗಿ ಮಾಡಲಿದ್ದೇವೆ ಎನ್ನುವುದು ತಂಡದ ಮಾತು.

ಕಷ್ಟಪಟ್ಟರೆ ಶ್ರೇಷ್ಠ ನಟಿಯಾಗಬಹುದು..!

ಅಂದಹಾಗೆ ಗಾನವಿ ಇವೆಲ್ಲ ಘಟನೆಗಳಿಂದ ಯಾವುದೇ ಆತಂಕಕ್ಕೆ ಒಳಗಾಗಿಲ್ಲ. “ಕೊರೊನಾದಿಂದ ಉಂಟಾಗಿರುವ ಕಷ್ಟ ನನಗೆ ಮಾತ್ರವಲ್ಲ, ವಿಶ್ವವೇ ಎದುರಿಸಿದೆ. ಅದರಲ್ಲಿ ಕೂಡ ಚಿತ್ರೋದ್ಯಮಕ್ಕೆ ದೊಡ್ಡ ಏಟು ಬಿದ್ದಿದೆ. ನಮ್ಮ ಕಡೆಯಿಂದ ಒಂದು ಸ್ಪಷ್ಟ ಗುರಿ ಇರಿಸಿಕೊಂಡು ಪರಿಶ್ರಮದಿಂದ ಮುನ್ನುಗ್ಗಬೇಕು ಎನ್ನುವುದಷ್ಟೇ ನನಗೆ ಗೊತ್ತು. ಅದಕ್ಕೆ ತಕ್ಕ ಪ್ರತಿಫಲ ಒಂದಲ್ಲ ಒಂದು ದಿನ ಖಂಡಿತವಾಗಿ ಸಿಗುತ್ತದೆ ಎನ್ನುವ ನಂಬಿಕೆ ನನಗಿದೆ” ಎನ್ನುತ್ತಾರೆ.

ಹೌದು, ಗಾನವಿ ಲಕ್ಷ್ಮಣ್ ಪರದೆಯ ಮೇಲೆ ಕಾಣಿಸುವುದನ್ನು ಮಾತ್ರ ಗುರಿಯಾಗಿಸಿಕೊಂಡವರಲ್ಲ. ಹೀಗೆಯೇ ಕಾಣಿಸಿಕೊಳ್ಳಬೇಕು ಎನ್ನುವ ನಿರ್ಧಾರ ಮಾಡಿಕೊಂಡವರು. ಸಣ್ಣ ಪುಟ್ಟ ಪಾತ್ರಗಳನ್ನು ಒಪ್ಪುವ ಅಗತ್ಯ ಯಾವಕಾರಣಕ್ಕೂ ಅವರಿಗಿಲ್ಲ. ಹೇಳಿ ಕೇಳಿ ಚಿಕ್ಕಮಗಳೂರಿನ ಕಾಫಿತೋಟದ ಮಾಲೀಕರ ಮಗಳು! ಹಾಗಂತ ಲಕ್ಷ್ಮಿಯೊಂದೇ ಗಾನವಿಯ ಅರ್ಹತೆಯಲ್ಲ, ಸೌಂದರ್ವೂ ಇದೆ. ನಾಟ್ಯ, ನವರಸ ಭಾವಗಳಲ್ಲಿ ಶಾರದೆಯೂ ಜತೆಗೂಡಿದ್ದಾರೆ. ಹಾಗಾಗಿ ಗಾನವಿಗೆ ಒಳ್ಳೆಯ ಪಾತ್ರ ಮತ್ತು ಚಿತ್ರಗಳು ದೊರಕುವುದನ್ನು ನೋಡಲು ಅವರಿಗಷ್ಟೇ ಅಲ್ಲ ಕನ್ನಡದ ಪ್ರೇಕ್ಷಕರಿಗೂ ಅದೃಷ್ಟ ಕೂಡಿ‌ಬರಬೇಕಿದೆ. ಆ ದಿನಗಳು ಬೇಗ ಕೈಗೂಡಲಿ ಎನ್ನುವುದು ಸಿನಿಕನ್ನಡದ ಹಾರೈಕೆ.

Recommended For You

Leave a Reply

error: Content is protected !!
%d bloggers like this: