ಡಾ.ರಾಜ್ ವಿಚಾರದಲ್ಲಿ ನನ್ನ ಮಾತು ಕಾಂಟ್ರವರ್ಸಿ ಮಾಡಬೇಡಿ: ಜೈ ಜಗದೀಶ್

ನಟ, ನಿರ್ಮಾಪಕ ಜೈ ಜಗದೀಶ್ ಅವರಿಗೆ ಇಂದು 66ನೇ ವರ್ಷದ ಜನ್ಮ ದಿನಾಚರಣೆ. ಕನ್ನಡದ ಜನಪ್ರಿಯ ನಟರಲ್ಲೋರ್ವರಾದ ಅವರು ಇತ್ತೀಚೆಗೆ ಸುದ್ದಿಯಾಗಿದ್ದು ಸಣ್ಣದೊಂದು ವಿವಾದದ ಮೂಲಕ. ಅದು ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅವರ ವಿರುದ್ಧ ನಡೆಸಿದ ಮಾತಿನ ಸಮರ. ಆದರೆ ಅದರ ನಡುವೆ ರಾಜ್ ಕುಮಾರ್ ಅವರ ಹೆಸರು ಪ್ರಸ್ತಾಪವಾಗಿತ್ತು ಎಂದು ಡಾ.ರಾಜ್ ಅಭಿಮಾನಿಗಳು‌ ಬೇಸರ ವ್ಯಕ್ತಪಡಿಸಿದ್ದರು. ಜೈ ಜಗದೀಶ್ ಅವರಿಗೆ ಜನ್ಮದಿನದ ಶುಭ ಕೋರುವ ಜತೆಗೆ ಈ ವಿಚಾರವನಯ ಕೂಡ‌ ಪ್ರಸ್ತಾಪಿಸಿದ ಸಿನಿಕನ್ನಡ.ಕಾಮ್ ಗೆ ಜೈಜಗದೀಶ್ ನೀಡಿದ ಉತ್ತರ “ಖಂಡಿತವಾಗಿ ರಾಜ್ ಕುಮಾರ್ ಅಭಿಮಾನಿಗಳಿಗೆ ನೋವಾಗುವಂಥದ್ದು ಮಾತನಾಡಿಲ್ಲ” ಎನ್ನುವುದಾಗಿತ್ತು. ಅಂದಹಾಗೆ ಅದಕ್ಕೆ ಸಮರ್ಥನೆ ನೀಡುವಂತೆ ಇಂದು ಅವರ ಪುತ್ರಿ ತಂದೆಯ ಜತೆಗೆ ಡಾ.ರಾಜ್ ಅವರ “ನಿನ್ನಂಥ ಅಪ್ಪಾ ಇಲ್ಲ..” ಹಾಡಿಗೆ ಟಿಕ್ಟಾಕ್ ಮಾಡಿ ಸಂಭ್ರಮ ಹಂಚಿಕೊಂಡಿದ್ದಾರೆ. ಜೈ ಜಗದೀಶ್ ಅವರೊಂದಿಗಿನ ಸಣ್ಣದೊಂದು ‌ಮಾತುಕತೆ ಇಲ್ಲಿದೆ.

ಶುಭಾಶಯಗಳು.ಜನ್ಮದಿನಾಚರಣೆ ಹೇಗೆ ಮಾಡಿಕೊಂಡಿರಿ?

ತ್ಯಾಂಕ್ಯೂ ಸೋ ಮಚ್. ಬರ್ತ್ ಡೇ ಏನು ಮಾಡ್ತಿಲ್ಲ. ಪಾರ್ಟಿ ಮಾಡುವ ಸಂದರ್ಭ ಅಲ್ಲವಲ್ಲ..

ಇತ್ತೀಚೆಗೆ ನೀವು ಡಾ.ರಾಜ್ ಅವರ ಬಗ್ಗೆ ಮಾತನಾಡಿದ್ದು ವಿವಾದ ಆದಂತಿದೆಯಲ್ಲ?

ರಾಜ್ ಕುಮಾರ್ ಬಗ್ಗೆಯಾಗಲೀ, ಅವರ ಫ್ಯಾನ್ಸ್ ಬಗ್ಗೆಯಾಗಲೀ ಮಾತನಾಡಿಲ್ಲ. ನೀವಾಗಿ ಕಾಂಟ್ರವರ್ಸಿ ಮಾಡದಿದ್ದರೆ ಸಾಕು! ನಾನು ಮಾತನಾಡಿರುವುದು ಸಾರಾ ಗೋವಿಂದು ಅವರ ಬಗ್ಗೆ. ವಿಷಯಾಂತರ ಮಾಡಬೇಡಿ.

ಸರಿ.‌ ಹಾಗಾದರೆ ಥಿಯೇಟರಲ್ಲಿ ಸಿನಿಮಾ ಬಿಡುಗಡೆ ಬಗ್ಗೆ ಮಾತನಾಡೋಣವೇ..?

ಸರ್ಕಾರ ಏನೋ‌ ನೀತಿ ಜಾರಿಗೆ ತಂದು ಸಿನಿಮಾ ಬಿಡುಗಡೆ ಮಾಡಲು ಹೇಳಬಹುದು. ಆದರೆ ಜನ ಬರಬೇಕಲ್ಲ ಥಿಯೇಟರ್ ಗೆ? ಬಸ್ಸುಗಳಲ್ಲೇ ಜನ ಹತ್ತಿರ ಕೂತ್ಕೊಳ್ಳೋಕೆ ಹೆದರ್ತಾರೆ.
ಏನೋ ಸ್ಟಾರ್ ಸಿನಿಮಾಗೆ ಫ್ಯಾನ್ಸ್ ಬರ್ತಾರೆ ಅಂತ ಇಟ್ಕೊಳ್ಳಿ. ಆದರೆ ಫ್ಯಾಮಿಲಿ‌ ಆಡಿಯನ್ಸ್ ಬರದೆ ಸಿನಿಮಾ ಸುಪರ್ ಹಿಟ್ ಆಗಲು ಸಾಧ್ಯವೇ..?

ಒಟಿಟಿ ಫ್ಲಾಟ್ಫಾರ್ಮಲ್ಲಿ‌ ಸಿನಿಮಾಗಳ ನೇರ ಬಿಡುಗಡೆಯ ಬಗ್ಗೆ ಏನಂತೀರಿ?

ನಮ್ಮಲ್ಲಿ ಒಟಿಟಿ‌ ಫ್ಲಾಟ್ಫಾರ್ಮ್ ಬಳಸದಿರುವ ಎಷ್ಟೊಂದು ಮಂದಿ ಪ್ರೇಕ್ಷಕರಿಲ್ಲ? ಅಥವಾ ಥಿಯೇಟರಲ್ಲೇ ಸಿನಿಮಾ ನೋಡಬೇಕು ಎಂದುಕೊಳ್ಳುವವರಿಲ್ಲ? ಅಂಥ ಪ್ರೇಕ್ಷಕರು ಹೊಸ ಸಿನಿಮಾಗಳಿಂದ ಶಾಶ್ವತವಾಗಿ ವಂಚಿತರಾದ ಹಾಗಲ್ಲವೇ?

ಕೊರೊನಾ ಜತೆಯಲ್ಲೇ ಒಂದಷ್ಟು ಕಲಾವಿದರ ಸಾವುಗಳು ಕೂಡ ಚಿತ್ರೋದ್ಯಮಕ್ಕೆ ಆತಂಕ ತಂದಂತಿದೆಯಲ್ಲ?

ಈ‌ ಸಾವುಗಳು‌ ಕೊರೊನಾದಿಂದ ಆಗಿಲ್ಲ. ಕೆಲವೊಮ್ಮೆ ಸಂದರ್ಭಗಳೇ ಆತಂಕ ಸೃಷ್ಟಿಸುತ್ತವೆ. ನಮ್ಮ ಎಚ್ಚರಿಕೆಯಲ್ಲಿ ನಾವಿರೋಣ. ವರ್ಷಗಳ ಹಿಂದೆ ನನಗೆ ಲಘು ಹೃದಯಾಘಾತ ಎಂದು ಸುಳ್ಳು ಸುದ್ದಿ ಹರಡಲಾಗಿತ್ತು. ಎಲೆಕ್ಷನ್ ಟೈಮಲ್ಲಿ ಅಪೊಸಿಶನವರು ಹಬ್ಬಿಸಿದ ಫೇಕ್ ನ್ಯೂಸ್ ಅದು. ದೇವರ ದಯೆಯಿಂದ ನನಗೆ ಯಾವುದೇ ಹೃದಯದ ಕಾಯಿಲೆ ಇಲ್ಲ. ಎಲ್ಲರೂ ತಮ್ಮ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರಿ.

Recommended For You

Leave a Reply

error: Content is protected !!
%d bloggers like this: