ವೃತ್ತಿಜೀವನದ ಶುರುವಿನಿಂದಲೂ ಪ್ರಯೋಗಾತ್ಮಕ ಚಿತ್ರಗಳನ್ನೇ ಮಾಡುತ್ತಾ ಬಂದಿರುವ ರಾಧಿಕಾ ನಾರಾಯಣ್ ಪಾತ್ರಪೋಷಣೆಯಲ್ಲಿ ತಮ್ಮದೇ ವಿಭಿನ್ನ ಶೈಲಿಯಿಂದ ಚಿತ್ರ ರಸಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದವರು. ‘ಶಿವಾಜಿ ಸುರತ್ಕಲ್’ ಚಿತ್ರದ ನಂತರ ಹೊರಬರುತ್ತಿರುವ ರಾಧಿಕಾ ನಾರಾಯಣ್ ಅವರ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆಗೆ ‘ಚೇಸ್’ ಉತ್ತರವಾಗಿದೆ. ಒಂದು ಕೊಲೆ, ಅದರ ಸುತ್ತ ಗಿರಕಿ ಹೊಡೆಯುವ ಕೆಲವು ಪಾತ್ರಗಳು, ಒಂದು ಕುಟುಂಬ, ನಗು, ಅಳು, ಹೊಡೆದಾಟ, ಒಂದು ಬಯಲಾಗದ ರಹಸ್ಯ ಮತ್ತು ಒಂದು ಗಟ್ಟಿ ಕಥೆ ಎಲ್ಲವೂ ಅಡಕವಾಗಿರುವ ಈ ಚಿತ್ರದಲ್ಲಿ ಮೊದಲ ಬಾರಿಗೆ ಒಂದು ಆಕ್ಷನ್ ಪಾತ್ರದಲ್ಲಿ ರಾಧಿಕಾ ನಾರಾಯಣ್ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಲಾಕ್ ಡೌನ್ ಸಮಯದಲ್ಲಿ ಮಾತಿಗೆ ಸಿಕ್ಕ ರಾಧಿಕಾ ‘ಚೇಸ್’ ಸಿನಿಮಾ ಮತ್ತು ತಮ್ಮ ಮುಂದಿನ ಯೋಜನೆಗಳ ಕುರಿತು ಸಿನಿಕನ್ನಡ.ಕಾಮ್ ಗೆ ವಿಶೇಷ ಮಾಹಿತಿ ನೀಡಿದ್ದಾರೆ.
ನಿಮ್ಮ ಲಾಕ್ಡೌನ್ ದಿನಗಳ ಬಗ್ಗೆ ಹೇಳಿ?
ಮುಂಜಾನೆ 6 ಘಂಟೆಗೆ ನನ್ನ ದಿನಚರಿ ಪ್ರಾರಂಭವಾಗುತ್ತದೆ, ಸುಮಾರು ಒಂದು ಘಂಟೆ ಯೋಗ, ಬೆಳಗಿನ ತಿಂಡಿ ಸ್ನಾನಾದಿಗಳನ್ನು ಮುಗಿಸಿ ಹನ್ನೊಂದು ಘಂಟೆ ಸಮಯಕ್ಕೆ ಯಾವುದಾದ್ರೂ ಆನ್ಲೈನ್ ನಟನಾ ಕೋರ್ಸ್ ನಲ್ಲಿ ತೊಡಗಿಸಿಕೊಳ್ಳುತ್ತಿದ್ದೆ, ನಂತರ ಊಟ, ಸಿನಿಮಾ ವೀಕ್ಷಣೆ. ಸಂಜೆಯಾದರೆ ಕೆನಡಾದಲ್ಲಿ ನೆಲೆಸಿರುವ ನನ್ನ ಅಣ್ಣನ ಮಕ್ಕಳೊಂದಿಗೆ ವಿಡಿಯೋ ಕಾಲ್ ಮಾಡಿ ಮಾತಾಡುವುದು ನನ್ನ ಇಷ್ಟದ ಕೆಲಸ. ಉಳಿದಂತೆ ಸದ್ಗುರು ಅವರ ‘ಇನ್ನರ್ ಎಂಜಿನಿಯರಿಂಗ್’ ಕೋರ್ಸ್ ಮಾಡಿದೆ, ಆಷ್ಟೇ ಅಲ್ಲದೆ ‘ಝೆoಟಾಂಗಲ್’ ಎಂಬ ಮೆಡಿಟೇಟೀವ್ ಕಲೆಯೊಂದನ್ನು ಕಲಿತೆ. ಸಂಪೂರ್ಣವಾಗಿ ತಾತ್ವಿಕ ಆಧಾರದ ಮೇಲೆ ನಿಂತಿರುವ ಈ ಕಲೆಯಲ್ಲಿನ ಮಾದರಿಗಳು ನಮ್ಮ ಬದುಕಿನ ಏರಿಳಿತಗಳನ್ನು ಬಿಂಬಿಸುವಂತಿದ್ದು ನನ್ನ ಬಗ್ಗೆ ನನಗೇ ಗೊತ್ತಿರದ ವಿಷಯಗಳನ್ನು ತಿಳಿದುಕೊಳ್ಳಲು ಈ ಕಲೆ ನೆರವಾಯಿತು. ಹಾಗೆ ಈಗ ಮೊದಲಿಗಿಂತ ಸ್ವಲ್ಪ ಕೋಪ ಕಡಿಮೆಯಾಗಿದೆ.
ಒಂದು ಕಥೆ ಆಯ್ಕೆ ಮಾಡುವಾಗ ಯಾವುದೆಲ್ಲ ವಿಷಯವನ್ನು ಗಣನೆಗೆ ತೆಗೆದುಕೊಳ್ಳುತ್ತೀರಿ!?
ಮೊದಲನೆಯದಾಗಿ ಒಂದು ಚಿತ್ರಕ್ಕೆ ಕಥೆಯೇ ಜೀವಾಳ. ನನ್ನ ಚಿತ್ರದ ಆಯ್ಕೆ ವಿಷಯದಲ್ಲಿ ಕಥೆಗೆ ಮೊದಲ ಪ್ರಾಶಸ್ತ್ಯ. ಉಳಿದಂತೆ ನಾನು ಈವರೆಗೆ ಮಾಡಿರದ ಪಾತ್ರದ ಮಾಡಬೇಕು ಎಂಬುದು ನನ್ನ ಎರಡನೇ ಆದ್ಯತೆಯಾಗಿರುತ್ತದೆ. ನಾನು ನಿರ್ವಹಿಸಲಿರುವ ಪಾತ್ರ ನನಗೆ ಸವಾಲೊಡ್ಡುವಂತಿರಬೇಕು, ಕೇವಲ ನನ್ನ ಪಾತ್ರವಷ್ಟೇ ಅಲ್ಲದೇ ಉಳಿದ ಪಾತ್ರಗಳಿಗೂ ಅದರದೇ ಆದ ಗಟ್ಟಿತನ ಇರಬೇಕು, ಹಾಗಿದ್ದಾಗಲೇ ಒಂದು ಕಥೆ ಒಳ್ಳೆ ಚಿತ್ರವಾಗಲು ಸಾಧ್ಯ ಎಂಬುವುದು ನನ್ನ ಅನಿಸಿಕೆ. ಕೆಲವು ಕಥೆಗಳನ್ನು ಕೇಳಿದೆ, ಒಂದೆರಡು ಇಷ್ಟವಾದುವು, ಚಿತ್ರತಂಡಕ್ಕೆ ಸ್ಕ್ರಿಪ್ಟ್ ನಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವಂತೆ ಹೇಳಿದ್ದೇನೆ. ಆದರೆ ಮುಂದೆ ಯಾವ ಕಥೆಯಲ್ಲಿ ನಾನು ನಟಿಸಲಿದ್ದೇನೆ ಎನ್ನುವುದನ್ನು ಈಗಲೇ ಹೇಳಲು ಕಷ್ಟ.
‘ಚೇಸ್’ ಸಿನಿಮಾದಲ್ಲಿ ವಿಶೇಷ ಅನಿಸಿದ್ದೇನು?
ಈ ಸಿನಿಮಾದ ಕಥೆ ನನಗೆ ಸುಮಾರು 2017 ರಲ್ಲಿ ಬಂತು. ಚಿತ್ರದಲ್ಲಿ ನಾನು ಪೊಲೀಸ್ ಆಫೀಸರ್ ಅಕಾಡೆಮಿಯ ಟ್ರೈನಿ ಯಾಗಿ ಪಾತ್ರ ನಿರ್ವಹಿಸುತ್ತಿದ್ದೇನೆ. ಈ ಪಾತ್ರಕ್ಕೆ ಭೂತ, ವರ್ತಮಾನ ಹಾಗೂ ಭವಿಷ್ಯ ಎಂಬ ಹಲವು ಆಯಾಮಗಳಿದ್ದು ನನ್ನನ್ನು ಈವರೆಗೆ ನೋಡಿರದ ಪಾತ್ರದಲ್ಲಿ ಪ್ರೇಕ್ಷಕರು ನೋಡಬಹುದು. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದರೂ ಸಹ ಒಬ್ಬ ಮನುಷ್ಯನ ಜೀವನದಲ್ಲಿ ಕುಟುಂಬದ ಪಾತ್ರ ಎಷ್ಟು ಮುಖ್ಯವಾಗುತ್ತದೆ ಎಂಬುದನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಹೇಳಲಾಗಿದೆ. ಅಂದಹಾಗೆ ನಾನು ಮೊದಲ ಬಾರಿ ಆಕ್ಷನ್ ದೃಶ್ಯಗಳಲ್ಲಿ ನಟಿಸಿದ್ದೇನೆ. ಜನ ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಸದ್ಯ ಲಾಕ್ ಡೌನ್ ಇರುವ ಕಾರಣ ಬಿಡುಗಡೆಯ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ಚಿತ್ರಕ್ಕೆ ಯಾವ ರೀತಿ ತಯಾರಿ ಮಾಡಿಕೊಂಡಿದ್ದಿರಿ?
ಚಿತ್ರದಲ್ಲಿ ಆಕ್ಷನ್ ಪ್ರಮುಖವಾಗಿರುವ ಕಾರಣ ಅದಕ್ಕೆಂದೇ ಒಂದು ತಿಂಗಳ ಕಾಲ ‘ಕ್ರಾವ್ ಮಾಗ’ ಎಂಬ ಸಮರಕಲೆಯ ತರಬೇತಿ ಪಡೆದಿದ್ದೆ. ‘ಕ್ರಾವ್ ಮಾಗ’ ಅನ್ನೋದು ಇಸ್ರೇಲಿ ರಕ್ಷಣಾ ಪಡೆಯ ಸಮರಕಲೆ. ಹಾಗಾಗಿ ಇದರ ಸಲುವಾಗಿ ತುಂಬಾನೇ ಬೆವರು ಹರಿಸಿದ್ದೇನೆ, ಹಾಗೆ ಈ ಸಿನಿಮಾದಲ್ಲಿ ನನ್ನನ್ನು ಬೇರೆ ಬೇರೆ ಆಕಾರದಲ್ಲಿ ನೋಡಬಹುದು. ಚಿತ್ರದಲ್ಲಿ ಮೂರು ಆಕ್ಷನ್ ದೃಶ್ಯಗಳು ಇರಲಿದ್ದು ಸಾಮಾನ್ಯವಾಗಿ ಚಿತ್ರಗಳಲ್ಲಿ ಕಾಣ ಸಿಗುವ ಫೈಟ್ಗಳಿಗಿಂತ ಭಿನ್ನ ಹಾಗೂ ನೈಜತೆಯಿಂದ ಕೂಡಿರಲಿವೆ. ತರಬೇತಿಯ ಸಮಯದಲ್ಲಿ ಸ್ಟಂಟ್ ಮಾಸ್ಟರ್ ಚೇತನ್ ಡಿಸೋಜ ಅವರ ಸಹಕಾರ ಮರೆಯೋಹಾಗಿಲ್ಲ. ಇನ್ನೊಂದು ವಿಷಯ, ಚಿತ್ರದಲ್ಲಿ ‘ಬ್ರೂನೊ’ ಎಂಬ ನಾಯಿ ಕೂಡ ಇದೆ. ಚಿತ್ರದ ಕಥೆಯುದ್ದಕ್ಕೂ ಬ್ರೂನೊ ನನ್ನೊಂದಿಗೆ ಇರೋದರಿಂದ ಪ್ರಾಣಿ ಪ್ರೇಮಿಯಲ್ಲದ ನನಗೆ ಬ್ರುನೊ ಜತೆಗೆ ಹೊಂದಿಕೊಳ್ಳುವುದು ಸವಾಲಿನ ಕೆಲಸ ಆಗಿತ್ತು. ಮೊದಲು ಹೆದರಿದ್ದ ನನಗೆ ಬರಬರುತ್ತಾ ಬ್ರೂನೊ
ಇಷ್ಟವಾಗಿದ್ದು ದೊಡ್ಡ ವಿಶೇಷ!
ಸಂದರ್ಶಕರು: ಸುಜಯ್ ಬೆದ್ರ