ಆರ್ಟ್ ಡೈರೆಕ್ಷನ್ ಟೀಮ್ ಹುಡುಗನ ಆತ್ಮಹತ್ಯೆ

ಹೆಸರು ಲೋಕೇಶ್. ನೋಡಲು ಮಾತ್ರವಲ್ಲ ವ್ಯಕ್ತಿತ್ವವೂ ಆಕರ್ಷಕ ಎನ್ನುವುದು ಆತ್ಮೀಯ ಸ್ನೇಹಿತರ ಮಾತು. ಆದರೆ ಅವೆಲ್ಲವನ್ನು ಆತ್ಮಹತ್ಯೆಯ ನಿರ್ಧಾರದೊಂದಿಗೆ ಕೊನೆಯಾಗಿಸಿದ್ದ ಹುಡುಗನಿಗೆ ವಯಸ್ಸು ಕೇವಲ ಇಪ್ಪತ್ತೈದು ದಾಟಿತ್ತಷ್ಟೇ! ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕರಾದ ರಕ್ಷಿತ್ ಶಟ್ಟಿ, ರಿಷಭ್ ಶೆಟ್ಟಿ ತಂಡದಲ್ಲಿ ಕಲಾನಿರ್ದೇಶನದ ಇನ್ ಚಾರ್ಜ್ ವಹಿಸಿಕೊಳ್ಳುತ್ತಿದ್ದ ಧರಣಿಯ ತಂಡದ ಚುರುಕಿನ ಹುಡುಗ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

“ಬೆಂಗಳೂರಿನ ಲಗ್ಗೆರೆ ಭಾಗದಲ್ಲಿ ಸಾಕಷ್ಟು ಸಿನಿಮಾ ಕಲಾವಿದರು, ತಂತ್ರಜ್ಞರು ತುಂಬಿದ್ದಾರೆ. ಲೋಕೇಶ್ ಕೂಡ ಅಲ್ಲೇ ವಾಸವಾಗಿದ್ದವರು. ಲಾಕ್ಡೌನ್ ವೇಳೆ ಎರಡು ತಿಂಗಳು ಊರಲ್ಲಿದ್ದ ಆತ ಬೆಂಗಳೂರಿಗೆ ಬಂದರೂ ಕೆಲಸ ಇನ್ನು ಆರಂಭವಾಗಿರಲಿಲ್ಲವಲ್ಲ? ಹಳೆಯ ಮನೆಯ ಪಕ್ಕದ ಅಜ್ಜಿ ಆ ಮನೆಗೆ ಊಟ ತಿಂಡಿ ತಂದು ಕೊಟ್ಟು ಅಕ್ಕರೆ ತೋರಿಸುತ್ತಿದ್ದರು. ಕಳೆದ ಸೋಮವಾರ ಕೂಡ ಅಜ್ಜಿ ಆ ಮನೆಗೆ ಬರಬೇಕಾದರೆ ವಿಷ ಕುಡಿದು ನಿತ್ರಾಣವಾಗಿ ಬಿದ್ದಿದ್ದ ಲೋಕೇಶ ಕಾಣಿಸಿದ್ದಾನೆ. ಅವರಿಗೆ ತಕ್ಷಣ ಯಾರಿಗೆ ಹೇಳೋಣ ಎಂದೇ ಗೊತ್ತಾಗಲಿಲ್ಲ. ಆದರೆ ಲೋಕೇಶನ ಸ್ನೇಹಿತನೊಬ್ಬ ತಂದುಕೊಟ್ಟಿದ್ದ ಮದುವೆಯ ಕರೆಯೋಲೆ ಅಲ್ಲೇ ಇತ್ತು. ಅದರಲ್ಇದ್ದ ನಂಬರ್‌ಗೆ ಕರೆ ಮಾಡಿದಾಗ ಆ ಸ್ನೇಹಿತ ಆತನ ಅಣ್ಣನಿಗೆ ವಿಚಾರ ತಿಳಿಸಿದ್ದಾರೆ. ಅಣ್ಣ ಬಂದು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಾಗಲೇ ಎರಡು, ಮೂರು ಗಂಟೆ ದಾಟಿತ್ತು. ಸ್ಥಳೀಯ ಆಸ್ಪತ್ರೆಯ ಮಂದಿ ಕೈ ಚೆಲ್ಲಿದಾಗ ಬೆಂಗಳೂರಿನ ಪ್ರಮುಖ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಸಾವಾಗಿದೆ. ಇಂದು ರಾಮಯ್ಯ ಹಾಸ್ಪಿಟಲ್ ನಲ್ಲಿ ಮೃತದೇಹದ ಪೋಸ್ಟ್‌ಮಾರ್ಟಂ ನಡೆಸಿ ಪಾರ್ಥಿವ ಶರೀರವನ್ನು ಸಂಬಂಧಿಕರಿಗೆ ನೀಡಲಾಗಿದೆ” ಎಂದು ತಿಳಿಸಿದ್ದು ಆರ್ಟ್ ಸೆಕ್ಷನ್ ಇನ್ ಚಾರ್ಜ್ ಧರಣಿಯವರು. ಅವರು ಲೋಕೇಶನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಬಳಿಕ ಸಿನಿಕನ್ನಡದ ಜತೆಗೆ ಮಾತನಾಡಿ ಈ ವಿಚಾರ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಕಲರ್ಸ್ ಕೊರೊನಾ ಪ್ರೊಮೊ ಮಾಡಿದ್ದೆವು..!

” ನನಗೂ ಲೋಕೇಶನಿಗೂ ಸುಮಾರು ಆರೇಳು ವರ್ಷಗಳಿಂದ ಪರಿಚಯ. ನಿಜ ಹೇಳಬೇಕೆಂದರೆ ಆತ್ಮಹತ್ಯೆ ಮಾಡುವಷ್ಟು ದುರ್ಬಲ ಮನಸ್ಥಿತಿ ಆತನದ್ದು ಎಂದು ಅನಿಸುವಂತಿರಲಿಲ್ಲ. ಚೆನ್ನಾಗಿಯೇ ಇದ್ದ. ಲಾಕ್ಡೌನ್ ಸಂದರ್ಭದ ಎರಡು ತಿಂಗಳು ಬಿಂಡಿಗನವಿಲೆಯ ತನ್ನ ಊರಲ್ಲಿದ್ದ. ಆತನ ಅಪ್ಪ ಅಮ್ಮ ಮೂರು ವರ್ಷದ ಹಿಂದೆ ತೀರಿ ಹೋಗಿದ್ದರು. ಊರಲ್ಲಿ ಅಣ್ಣ ಅತ್ತಿಗೆ ಇದ್ದಾರೆ. ಕೆಲಸದ ವಿಚಾರ ಬಂದರೆ ಒಳ್ಳೆಯ ವರ್ಕರ್. ಆರ್ಟ್ ಅಸಿಸ್ಟೆಂಟ್ ಆಗಿದ್ದರೂ ಕಾರ್ಪೆಂಟರ್ ಕೆಲಸ, ಪೆಯಿಂಟ್ ಕೆಲಸ ಎಲ್ಲದಕ್ಕೂ ಒಂದೇ ಉತ್ಸಾಹದಲ್ಲಿ ತಯಾರಾಗುತ್ತಿದ್ದ. ನಾನು ಆತನ ಜತೆಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ರಿಷಭ್ ಶಟ್ಟಿ ನಾಯಕರಾಗಿರುವ ಬೆಲ್ ಬಾಟಂ'ಗೆ , ರಕ್ಷಿತ್ ಶೆಟ್ಟಿ ನಾಯಕತ್ವದಲ್ಲಿ ಬಿಡುಗಡೆಯಾಗಬೇಕಿರುವ777ಚಾರ್ಲಿ’ ಚಿತ್ರಗಳಿಗೆ ಕೆಲಸ ಮಾಡಿದ್ದಾನೆ. ಇವುಗಳಲ್ಲದೆ ತುಂಬ ಜಾಹೀರಾತು ಚಿತ್ರಿಕರಣಗಳಲ್ಲಿ ಕೆಲಸ ಮಾಡಿದ್ದೆವು. ಇತ್ತಿಚೆಗಷ್ಟೇ `ಕಲರ್ಸ್ ಕನ್ನಡ’ಕ್ಕಾಗಿ ಕೊರೊನಾ ಕುರಿತಾದ ಪ್ರೊಮೊ ಫಿಲ್ಮ್ ಸಿಟಿಯಲ್ಲಿ ಶೂಟ್ ನಡೆಸುವಾಗಲೂ ಅದರಲ್ಲಿ ಪಾಲ್ಗೊಂಡಿದ್ದ. ಅದೇ ನಾವಿಬ್ಬರು ಜತೆಗಿದ್ದ ಕೊನೆಯ ಚಿತ್ರೀಕರಣವಾಗಿತ್ತು.

ಲಾಕ್ಡೌನ್ ಸಂದರ್ಭದ ಒಂಟಿತನ ಕಾರಣ ಇರಬಹುದು

ಬೆಲ್ ಬಾಟಂ ನಿರ್ದೇಶಕ ಜಯತೀರ್ಥ ಅವರಲ್ಲಿ ಲೋಕೇಶ್ ಬಗ್ಗೆ ವಿಚಾರಿಸಿದಾಗ ಅವರು ಹೇಳಿದ್ದಿಷ್ಟು. “ಆತ ನನಗೂ ಪರಿಚಯವಿದ್ದ ಹುಡುಗ. ನನಗೆ ತಿಳಿದ ಮಟ್ಟಿಗೆ ಲಾಕ್ಡೌನ್ ಕಾರಣದಿಂದ ಆದಂಥ ಒಂಟಿತನ, ಭವಿಷ್ಯದ ಕುರಿತಾದ ಭಯ ಮತ್ತು ಸಾಲದ ಪರಿಣಾಮ ಈ ಕೃತ್ಯ ಕೈಗೊಂಡಿರಬೇಕು. ಲೋಕೇಶ್ ನನ್ನ ಸಹಾಯಕ ನಿರ್ದೇಶಕರ ಜತೆಗೆ ಆತ್ಮೀಯವಾಗಿದ್ದರು ” ಎಂದ ಜಯತೀರ್ಥ ತಮ್ಮ ಸಹಾಯಕ ನಿರ್ದೇಶಕ ಚಿರಂತ್ ಕೈಗೆ ಫೋನ್ ಕೊಟ್ಟರು. ಆಗ ಮಾತನಾಡಿದ ಚಿರಂತ್ “ನನಗೆ ಆತ್ಮೀಯರು. ಬೆಲ್ ಬಾಟಂ'ಗೆ ವರ್ಕ್ ಮಾಡಿದಾಗ ನಾನು ಜತೆಗಿದ್ದೆ. ಆತ ಕೆಲಸದಲ್ಲಿ ತೃಪ್ತಿ ಕಾಣುತ್ತಿದ್ದ ಎಂದರು.777ಚಾರ್ಲಿ’ ಚಿತ್ರದ ನಿರ್ದೇಶಕ ಕಿರಣ್ ರಾಜ್ ಅವರನ್ನು ಸಂಪರ್ಕಿಸಿದಾಗ “ನಮ್ಮ ಮೊದಲ ಶೆಡ್ಯೂಲ್‌ ನ ಆರಂಭದ ದಿನಗಳಲ್ಲಿ ಇದ್ದರೆಂದು ಆರ್ಟ್ ಇನ್ ಚಾರ್ಜ್ ಧರಣಿ ತಿಳಿಸಿದರು. ವಿಷಯ ತಿಳಿದಾಗ ನಿಜಕ್ಕೂ ಆಘಾತ, ನೋವು ಎರಡೂ ಆಯಿತು. ಅವರು ಜಾಹೀರಾತು ವಿಭಾಗದಲ್ಲಿಯೂ ಕೆಲಸ ಮಾಡಿದ್ದಾಗಿ ಹೇಳಿದ್ದರು” ಎಂದರು. ಅಂದಹಾಗೆ ಇಲ್ಲಿ ನೀಡಿದ ಹೆಚ್ಚಿನ ಮಾಹಿತಿ ಧರಣಿಯ ಕಡೆಯಿಂದಲೇ ನಮಗೆ ಸಿಕ್ಕಿತು.

ಒಟ್ಟಿನಲ್ಲಿ ಇತ್ತೀಚೆಗೆ ಆತ್ಮಹತ್ಯೆ ಸಾಮಾನ್ಯ ಎನ್ನುವಂತೆ ನಡೆಯುತ್ತಿದೆ. ಆದರೆ ಚಿತ್ರರಂಗದ ಮಂದಿಯ ಆತ್ಮಹತ್ಯೆ, ಸಾವುಗಳು ನಮ್ಮನ್ನು ಹೆಚ್ಚು ಸೆಳೆಯುತ್ತವೆ. ಆದರೆ ಸಾವು ಎಲ್ಲರಿಗೂ ಒಂದೇ. ಕಾರಣಗಳೇ ವಿಚಿತ್ರ. ಕಾರಣಗಳು ತಿಳಿಯದೇ ಹೋದಾಗ ಬದುಕಿದವರಿಗೆ ನೋವಿನ ಜತೆಗೆ ಆತಂಕವೂ ಸೇರುತ್ತದೆ. ಆತ್ಮಹತ್ಯೆಗೆ ಕಾರಣಗಳೇನೇ ಇರಲಿ. ಮಾನಸಿಕ ದೌರ್ಬಲ್ಯ ಪ್ರಮುಖ ಕಾರಣ ಆಗಿರುತ್ತದೆ. ಹಾಗಾಗಿ ಈ ಸಂದರ್ಭಲ್ಲಿ ನಮ್ಮಿಂದ ಆದಷ್ಟು ಮಂದಿಯ ಬಗ್ಗೆ ಕಾಳಜಿ ವಹಿಸುತ್ತಿರೋಣ ಎನ್ನುವುದೇ ಸಿನಿಕನ್ನಡ.ಕಾಮ್ ಆಶಯ.

Recommended For You

Leave a Reply

error: Content is protected !!
%d bloggers like this: