
ಕನ್ನಡ ಚಿತ್ರರಂಗದ ಹಿರಿಯ ನಟ, ವೇದಿಕೆ ಹಾಸ್ಯ ಕಾರ್ಯಕ್ರಮಗಳ ಮೂಲಕ ಗುರುತಾಗಿದ್ದ ಮಿಮಿಕ್ರಿ ರಾಜ್ ಗೋಪಾಲ್ ನಿಧನರಾಗಿದ್ದಾರೆ. ಕಿಡ್ನಿ ತೊಂದರೆಯಿಂದ ಉಂಟಾದ ಪ್ರಾಥಮಿಕ ಹಂತದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ತಡರಾತ್ರಿ ಒಂದೂವರೆ ಗಂಟೆಗೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ತಮಗೆ ಕಿಡ್ನಿಯ ಸಮಸ್ಯೆ ಇದೆ ಎಂದು ವೈದ್ಯರಿಂದ ತಿಳಿದುಕೊಂಡ ಮೇಲೆ ಮಿಮಿಕ್ರಿ ರಾಜ್ ಗೋಪಾಲ್ ಆತಂಕದಿಂದ ದಿನ ಕಳೆಯುತ್ತಿದ್ದರು. ಕಾಲು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು, ಮನೆಯಲ್ಲೇ ಇದ್ದ ತಮ್ಮನ್ನು ಭೇಟಿಯಾಗಲು ಯಾರೂ ಬರುತ್ತಿಲ್ಲ ಎನ್ನುವ ಚಿಂತೆಯನ್ನು ತಮ್ಮೊಂದಿಗೆ ಹಂಚಿಕೊಂಡಿದ್ದರೆಂದು ನಟ ಮೂಗು ಸುರೇಶ್ ತಿಳಿಸಿದ್ದಾರೆ. ಅವರ ಮತ್ತೋರ್ವ ಆತ್ಮೀಯ ಮಿತ್ರ, ನಟ ಡಿಂಗ್ರಿ ನಾಗರಾಜ್ ಮಾತನಾಡಿ, “ಮಿಮಿಕ್ರಿ ರಾಜ್ ಗೋಪಾಲ್ ಅವರು ತಮ್ಮ ಬೆನ್ನ ಹಿಂದೆಯೇ ಹಾಸ್ಯರಂಗಕ್ಕೆ ಬಂದಿದ್ದು, ಇಬ್ಬರೂ ಜತೆಯಾಗಿ ಅನೇಕ ಕಾರ್ಯಕ್ರಮಗಳನ್ನು ನೀಡಿರುವುದಾಗಿ ನೆನಪಿಸಿಕೊಳ್ಳುತ್ತಾರೆ. ಅದರಲ್ಲಿಯೂ ರಾಜ್ ಗೋಪಾಲ್ ಅವರು ನಟಿ ಕಲ್ಪನಾ ಅವರ ಧ್ವನಿಯನ್ನು ಬಹಳ ಚೆನ್ನಾಗಿ ಅನುಕರಿಸುತ್ತಿದ್ದರು, ಅದು ಸಾಕಷ್ಟು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು” ಎನ್ನುವುದನ್ನು ಸಿನಿಕನ್ನಡ.ಕಾಮ್ ಜತೆಗೆ ಮಾತನಾಡಿದ ಡಿಂಗ್ರಿ ನಾಗರಾಜ್ ಮೆಲುಕು ಹಾಕಿದರು.

ಸುಲೈಮಾನ್ ಎನ್ನುವ ಅಶರೀರವಾಣಿ..!
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಿರ್ದೇಶಿಸಿ ನಟಿಸಿದ ‘ಅಹಂ ಪ್ರೇಮಾಸ್ಮಿ' ಚಿತ್ರದಲ್ಲಿ ಬುಲೆಟ್ ಪ್ರಕಾಶ್ ಅವರಿಗೆ '
ಸುಲೈಮಾನ್’ ಎನ್ನುವ ಅಶರೀರವಾಣಿ ಕೇಳಿಸುವ ಹಾಸ್ಯ ಸನ್ನಿವೇಶ ತುಂಬ ಜನಪ್ರಿಯವಾಗಿತ್ತು. ವಾಸ್ತವದಲ್ಲಿ ಆ ಹೆಣ್ಣು ಧ್ವನಿಯನ್ನು ನೀಡಿದವರು ಕೂಡ ಮಿಮಿಕ್ರಿ ರಾಜ್ ಗೋಪಾಲ್ ಅವರೇ ಆಗಿದ್ದರು! ವಿಪರ್ಯಾಸ ಎಂದರೆ ಇದೊಂದೇ ವರ್ಷದಲ್ಲಿ ಬುಲೆಟ್ ಪ್ರಕಾಶ್ ಮತ್ತು ಮಿಮಿಕ್ರಿ ರಾಜ್ ಗೋಪಾಲ್ ಇಬ್ಬರೂ ನಮ್ಮನ್ನು ಅಗಲಿದ್ದಾರೆ ಎನ್ನುವ ವಿಚಾರವನ್ನು ಖ್ಯಾತ ಮಿಮಿಕ್ರಿ ಕಲಾವಿದ ಗೋಪಿಯವರು ಸಿನಿಕನ್ನಡ.ಕಾಮ್ ಗೆ ಹಂಚಿಕೊಂಡರು. ಕನ್ನಡದಲ್ಲಿ ಮಿಮಿಕ್ರಿಯ ವಿಚಾರ ಬಂದಾಗ ಎಲ್ಲರೂ ನೆನಪಿಸುವುದು ದಯಾನಂದ್ ಅವರ ಹೆಸರನ್ನು. ಆದರೆ ದಯಾನಂದ್ ಅವರಿಗಿಂತ ಸೀನಿಯರ್ ಕಲಾವಿದರಾಗಿ ಹೆಸರು ಮಾಡಿದವರು ರಾಜ್ ಗೋಪಾಲ್ ಎನ್ನುವುದು ಇಂದಿನ ಬಹುತೇಕರಿಗೆ ನೆನಪಿಲ್ಲ.
ಮಿಮಿಕ್ರಿ ರಾಜ್ ಗೋಪಾಲ್ ಅವರು ಕವಿತಾ, ವೀಣಾ, ಶ್ವೇತಾ ಎಂಬ ಮೂರು ಹೆಣ್ಣು ಮಕ್ಕಳ ತಂದೆಯಾಗಿದ್ದು, ಅವರೆಲ್ಲರನ್ನು ವಿವಾಹ ಮಾಡಿಕೊಟ್ಟಿದ್ದಾರೆ. ಪ್ರಸ್ತುತ ಪತ್ನಿ ರೇಣುಕಾ ಜತೆಗೆ ನಗರದ ಕೆಂಗೇರಿ ಬಿಡಿಎ ಕಾಂಪ್ಲೆಕ್ಸ್ ಸಮೀಪದ ಮನೆಯಲ್ಲಿ ವಾಸವಾಗಿದ್ದರು.
ಕನ್ನಡ ಚಿತ್ರರಂಗ ಕಳೆದುಕೊಳ್ಳುತ್ತಿರುವ ಹಿರಿಯ ಪ್ರತಿಭೆಗಳ ಸಾಲಿಗೆ ಈ ವರ್ಷ ಮಿಮಿಕ್ರಿ ರಾಜ್ ಗೋಪಾಲ್ ಅವರು ಸೇರಿಕೊಂಡಿದ್ದು ವಿಷಾದನೀಯ. ನೂರಾರು ಚಿತ್ರಗಳಲ್ಲಿ ನಟಿಸಿರುವ ರಾಜ್ ಗೋಪಾಲ್ ಅವರು ಕೊನೆಯದಾಗಿ ನೃತ್ಯ ನಿರ್ದೇಶಕ ಕಪಿಲ್ ಅವರ `ಕಾಪಿಕಟ್ಟೆ’ ಚಿತ್ರದಲ್ಲಿಯೂ ಅಭಿನಯಿಸಿದ್ದು, ಅದು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಮೃತರಿಗೆ ಸಿನಿಕನ್ನಡದ ಶ್ರದ್ಧಾಂಜಲಿ.
ಚಿತ್ರಗಳು: ಡಿ.ಸಿ ನಾಗೇಶ್