ಜೆ ಕೆ ರಾಕ್ಷಸನಾಗಿದ್ದು ಏಕೆ..?!

ತೆಲುಗು ನಟ ಚಿರಂಜೀವಿ ಚಿತ್ರರಂಗದ ಮೇಲೆ ಆಸೆಪಟ್ಟು ಕಷ್ಟಪಟ್ಟು ಅವಕಾಶಗಿಟ್ಟಿಸಿಕೊಂಡು ಬೆಳೆದು ಬಂದವರು. ಅವರಿಗೆ ಸುಮಲತಾ ಮೂಲಕ ಪರಿಚಯವಾದವರು ಅಂಬರೀಷ್. ಅಂಬರೀಷ್ ಅವರ ಜತೆಗಿನ ಪ್ರಥಮ ಭೇಟಿಯಲ್ಲಿ ಕನ್ನಡ ಚಿತ್ರರಂಗದ ಬಗ್ಗೆ, ಅಲ್ಲಿ ಅಂಬರೀಷ್ ಅವರಿಗೆ ಸಿಗುತ್ತಿರುವ ಅವಕಾಶಗಳ ಬಗ್ಗೆ ವಿಚಾರಿಸಿದರಂತೆ ಚಿರಂಜೀವಿ. “ನಾನು ಜಸ್ಟ್ ಟೈಮ್ ಪಾಸ್ ಗೆ ನಟಿಸುತ್ತಿದ್ದೇನೆ. ಇದನ್ನೇ ನಂಬಿಕೊಂಡಿಲ್ಲ” ಎಂದು ತಮ್ಮ ಎಂದಿನ ಡೋಂಟ್ ಕೇರ್ ಶೈಲಿಯಲ್ಲಿ ಉತ್ತರಿಸಿದ್ದಾರೆ ಅಂಬರೀಷ್. ಚಿರಂಜೀವಿಗೆ ಪರಮಾಶ್ಚರ್ಯ! ಒಬ್ಬ ವ್ಯಕ್ತಿ ಟೈಮ್ ಪಾಸ್‌ಗೆ ಸಿನಿಮಾದಲ್ಲಿ ನಾಯಕನಾಗಿ ನಟಿಸಲು ಸಾಧ್ಯವೇ ಎಂದು! ಅದು ಅವರಿಗಷ್ಟೇ ಅಲ್ಲ; ಇಂದಿನ ತಲೆಮಾರಿಗೂ ಅಚ್ಚರಿಯೇ. ಹಾಗಂತ ಅಂಬರೀಷ್ ಅವರ ಸಿನಿಮಾಗಳು ಯಾವತ್ತಿಗೂ ಅಭಿಮಾನಿಗಳಿಗೆ ನಿರಾಶೆ ಮಾಡಲಿಲ್ಲ. ಅಭಿಮಾನಿಗಳನ್ನೇ ಅವರನ್ನು ಚಿತ್ರರಂಗದಲ್ಲಿ ಉಳಿಯುವಂತೆ ಮಾಡಿದರು. ಅಂಬರೀಷ್ ಬಿಡಿ; ಅಂಥ ಉದಾಹರಣೆ ಜಗತ್ತಲ್ಲಿ ಬೇರೊಬ್ಬರು ಸಿಗಲಾರರು.

ಜಯರಾಮ್ ಕಾರ್ತಿಕ್ ಎನ್ನುವ ಜೆ.ಕೆ ಕೆಲವು ವಿಚಾರಗಳಿಗೆ ಅಂಬರೀಷ್ ಅವರನ್ನೇ ಹೋಲುತ್ತಾರೆ ಎಂದರೆ ಅಚ್ಚರಿ ಬೇಕಿಲ್ಲ! ಅಂಬರೀಷ್ ಅವರಂತೆ ಜೆ.ಕೆ ಕೂಡ ಯಾವುದಕ್ಕೂ ದೊಡ್ಡ ಮಟ್ಟಿಗೆ ತಲೆಕೆಡಿಸಿಕೊಂಡವರಲ್ಲ. ಬಹುಶಃ ಅಂಬಿಯಂತೆ ಇವರು ಕೂಡ ಶ್ರೀಮಂತಿಕೆಯಲ್ಲೇ ಹುಟ್ಟಿದ ಕಾರಣ, ಆ ಮನೋಭಾವ ಜನ್ಮತಃ ಬಂದಿರಬಹುದು! ಆದರೆ ಅಲ್ಲಿ ಅಂಬರೀಷ್ ಅವರನ್ನು ಕಲಾವಿದನಾಗಿ ರೂಪಿಸಲು ಪುಟ್ಟಣ್ಣನಂಥ ನಿರ್ದೇಶಕರಿದ್ದರು. ಆದರೆ ಜೆ.ಕೆಯವರಿಗೆ ಚಿತ್ರರಂಗದಲ್ಲಿರುವ ಆಸಕ್ತಿಯಿದ್ದರೂ, ಅವರಿಗೆ ಇನ್ನೂ ಅಂಥ ಒಬ್ಬ ಗಾಡ್‌ಫಾದರ್ ನಿರ್ದೇಶಕ ಸಿಗದಿರುವುದು ವಿಪರ್ಯಾಸ. ಎತ್ತರ, ಚೆಲುವು ಜತೆಗೆ ಸಮರ್ಪಣಾ ಭಾವದಿಂದ ಮೂಡಿಸಿಕೊಂಡ ದೇಹದಾರ್ಢ್ಯತೆ ಎಲ್ಲವನ್ನು ಗಮನಿಸಿದಾಗ ಇವರಿಂದ ಎಂಥೆಂಥ ಪಾತ್ರಗಳನ್ನು ಮಾಡಿಸಬಹುದಿತ್ತಲ್ವ ? ಎನ್ನುವ ಯೋಚನೆ ಯಾವುದೇ ಸಿನಿಮಾಭಿಮಾನಿಗೂ ಮೂಡಬಹುದು. ಆದರೆ ನಮ್ಮ ನಿರ್ದೇಶಕರು ಇಲ್ಲಿಯವರೆಗೂ ಅಂಥ ಪ್ರಯತ್ನಕ್ಕೆ ಕೈ ಹಾಕಿಲ್ಲ.

ಕನ್ನಡದಲ್ಲಿ ಜೆ.ಕೆ ನಟಿಸಿರುವ ಒಂದು ಸಿನಿಮಾ ನೋಡಿ ಆತನನ್ನು, ಆ ಚಿತ್ರವನ್ನು ಮರೆಯಲಾಗದಂಥ ಅನುಭವ ಬೇಕಾದರೆ ದಯಾಳ್ ಪದ್ಮನಾಭನ್ ನಿರ್ದೇಶನದ ‘ಆ ಕರಾಳ ರಾತ್ರಿ' ಎನ್ನುವ ಚಿತ್ರ ನೋಡಿದರೆ ಸಾಕು. ಹಾಗೆ ವೈವಿಧ್ಯತೆಯ ಪಾತ್ರಗಳನ್ನು ನಿಭಾಯಿಸಬಲ್ಲ ಜೆ.ಕೆಯ ಪ್ರತಿಭೆಯನ್ನು ಸಮರ್ಪಕವಾಗಿ ಬಳಸಿದ ಕೀರ್ತಿ ಹಿಂದಿಯ 'ಸಿಯಾ ಕೆ ರಾಮ್’ ಎನ್ನುವ ಪೌರಾಣಿಕ ಧಾರಾವಾಹಿಗೆ ಸಲ್ಲುತ್ತದೆ.

ಹಿಂದಿಯ ಮಂದಿ ಸೀತೆಯನ್ನು ‘ಸಿಯಾ’ ಎಂದು ಕೂಡ ಕರೆಯುತ್ತಾರೆ. ಹಾಗಾಗಿ ‘ಸಿಯಾ ಕೆ ರಾಮ್’ ಧಾರಾವಾಹಿಯಲ್ಲಿ ಸೀತೆಗೆ ಪ್ರಧಾನ ಪಾತ್ರ ಎನ್ನುವುದು ಮೇಲ್ನೋಟಕ್ಕೆ ಅರಿವಾಗುತ್ತದೆ. ಆದರೆ ಧಾರಾವಾಹಿ ನೋಡಿದ ಪ್ರೇಕ್ಷಕರಲ್ಲಿ ಹಲವರು ರಾವಣನಿಗೆ ಅಭಿಮಾನಿಯಾಗಿಬಿಟ್ಟಿದ್ದರು. ಅದಕ್ಕೆ ಕಾರಣ, ರಾವಣನ ಚೆಲುವು, ಗಾಂಭೀರ್ಯವಷ್ಟೇ ಅಲ್ಲ, ಜೆ.ಕೆಯಂಥ ನಟ ಆ ಪಾತ್ರವನ್ನು ನಿಭಾಯಿಸಿದ ರೀತಿಯೂ ಹೌದು.

ಕನ್ನಡದಲ್ಲಿ ಕಿರುತೆರೆಯಿಂದ ಹಿರಿತೆರೆ ಸೇರಿದ್ದ ಜೆ.ಕೆ ಮತ್ತೆ ಕಿರುತೆರೆಗೆ ಹೋಗಲು ಕಾರಣವೂ ಅದೇ ಆಗಿತ್ತು. ರಾಕ್ಷಸನ ಪಾತ್ರವಾದರೂ, ಅದರಲ್ಲಿ ನಟನೆಗೆ ಸಿಕ್ಕ ಅವಕಾಶ ಆ ಮಟ್ಟದಲ್ಲಿತ್ತು. ನಿಜಕ್ಕೂ ಈ ಧಾರಾವಾಹಿಯ ಮೂಲಕ ಜೆ.ಕೆ ಮೂಡಿಸಿದ ಪ್ರಭಾವಳಿ ಎಷ್ಟು ದೊಡ್ಡ ಮಟ್ಟದ್ದಾಗಿತ್ತೆಂದರೆ, ಅದರ ಬಳಿಕ ನೇರವಾಗಿ ಅವರಿಗೆ ಬಾಲಿವುಡ್ ಸಿನಿಮಾದಲ್ಲೇ ನಟಿಸುವ ಅವಕಾಶ ದೊರೆಯಿತು. ಹಿಂದಿಯಲ್ಲಿ ಕಾಮಿಡಿ ಶೋ ಮೂಲಕ ಜನಪ್ರಿಯರಾಗಿದ್ದ ಕೃಷ್ಣನ ಜತೆಗೆ ಜೆಕೆ ನಾಯಕನಾಗಿ ಎಂಟ್ರಿ ಕೊಟ್ಟ ಆ ಚಿತ್ರದ ಹೆಸರು `ಓ ಪುಷ್ಪಾ ಐ ಹೇಟ್ ಟಿಯರ್ಸ್’ ಎನ್ನುವುದಾಗಿತ್ತು. ಬಿಡುಗಡೆಯಾದ ಬಳಿಕ ಕೊರೊನಾ ಕಾಟವೂ ಶುರುವಾಗಿ ಚಿತ್ರ ಜನರನ್ನು ತಲುಪದೇ ಹೋಗಿದ್ದು ವಿಪರ್ಯಾಸ. ಆದರೆ ಈ ಎಲ್ಲವುಗಳಿಗೆ ಕಾರಣವಾದ ‘ಸಿಯಾ ಕೆ ರಾಮ್’ ಇದೀಗ ಕನ್ನಡಕ್ಕೆ ಡಬ್ ಆಗಿದೆ.

ಸ್ಟಾರ್ ಸುವರ್ಣ ಪ್ರಸಾರ ಮಾಡುತ್ತಿರುವ ಡಬ್ಬಿಂಗ್ ಭಕ್ತಿ ಧಾರಾವಾಹಿಗಳ ಸಾಲಿಗೆ ‘ಸಿಯಾ ಕೆ ರಾಮ್’ ಕೂಡ ಸೇರ್ಪಡೆಯಾಗಿದೆ. ಇಲ್ಲಿ ಸಣ್ಣದೊಂದು ಬೇಸರದ ವಿಚಾರ ಏನೆಂದರೆ ಜೆ.ಕೆಯ ಪಾತ್ರಕ್ಕೆ ಬೇರೆ ಯಾರೋ‌ ಕಂಠದಾನ‌ ಮಾಡಿದ್ದಾರೆ. ಕಂಠದಲ್ಲಿ ತುಸುವಾದರೂ ಜೆ.ಕೆಯ ಹೋಲಿಕೆ ಇದ್ದರೆ ಮಾತ್ರ ಕನ್ನಡಿಗರಿಗೆ ಅರಗಿಸಿಕೊಳ್ಳಲು ಸುಲಭವಾದೀತು. ಯಾಕೆಂದರೆ ‘ಅಶ್ವಿನಿ ನಕ್ಷತ್ರ’ದಲ್ಲಿ ಅವರ ಧ್ವನಿಯಲ್ಲಿನ ‘ಹೆಂಡ್ತೀ’ ಎನ್ನುವ ಕರೆಯ ಮೋಡಿಯನ್ನು ಇಂದಿಗೂ‌ ನೆನಪಲ್ಲಿರಿಸಿಕೊಂಡವರಿದ್ದಾರೆ.

ಒಟ್ಟಿನಲ್ಲಿ ‘ಸಿಯಾ ಕೆ ರಾಮ್’ ಇದೇ ತಿಂಗಳಲ್ಲಿ `ಸೀತೆಯ ರಾಮ’ನಾಗಿ ನಿಮ್ಮೆದುರಿಗೆ ಬರಲಿದೆ. ಪರಭಾಷೆಯಲ್ಲಿ ಅಭಿನಯಿಸಿದ ನಮ್ಮ ನಾಯಕನತ್ತ ಗಮನಿಸದೇ ಹೋದವರಿಗೆ ನೋಡಲು ಇದು ಉತ್ತಮ ಅವಕಾಶ. ಮುಂದೆ ನಮ್ಮ ಚಿತ್ರರಂಗವು ಕೂಡ ಈ ನಟನ ಕ್ಯಾಲಿಬರ್‌ಗೆ ಹೊಂದುವಂಥ ಪಾತ್ರಗಳನ್ನು ನೀಡಿ ಪ್ರೋತ್ಸಾಹಿಸಲಿ ಎಂದು ಸಿನಿಕನ್ನಡ ಬಯಸುತ್ತದೆ.

Recommended For You

Leave a Reply

error: Content is protected !!