ಕನ್ನಡದ ಜನಪ್ರಿಯ ಪೋಷಕ ನಟ ಹುಲಿವಾನ್ ಗಂಗಾಧರಯ್ಯ ನಿಧನರಾಗಿದ್ದಾರೆ. ಅವರ ಸಾವಿಗೆ ಕೋವಿಡ್ 19 ಕಾರಣ ಎಂದು ತಿಳಿದು ಬಂದಿದೆ. ಅವರಿಗೆ ಎಪ್ಪತ್ತು ವರ್ಷ ವಯಸ್ಸಾಗಿದ್ದು, ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದರು. ಲಾಕ್ಡೌನ್ ಬಳಿಕ ಆರಂಭವಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇ ಅವರ ಸಾವಿಗೆ ಕಾರಣವಾಗಿದ್ದು ದುರಂತ.
ಘಟನೆಯ ಬಗ್ಗೆ ಅವರ ಪುತ್ರಿ ರೇವತಿ ಸಿನಿಕನ್ನಡದ ಜತೆಗೆ ಮಾತನಾಡುತ್ತಾ , “ಅವರು ಕುಣಿಗಲ್ ತಾಲೂಕು ಹುಲಿವಾನದಲ್ಲೇ ಇದ್ದಿದ್ದು. ಹಾಗಾಗಿ ಜ್ವರ ಶುರುವಾದಾಗಲೇ ಬೆಳ್ಳೂರು ಕ್ರಾಸ್ ಬಳಿ ಟೆಸ್ಟ್ ಮಾಡಿಸಲಾಗಿತ್ತು. ಆದರೆ ಇದುವರೆಗೆ ಅದರ ಯಾವುದೇ ರಿಪೋರ್ಟ್ ಬಂದಿಲ್ಲ. ಜ್ವರದ ಗುಣಲಕ್ಷಣ ಕಾಣಿಸಿದೊಡನೆ ಫಾರ್ಮ್ ಹೌಸ್‌ಗೆ ಶಿಫ್ಟಾಗಿದ್ದಾರೆ. ಅಣ್ಣ ಎಲ್ಲ ಕ್ವಾರಂಟೈನ್ ಆಗಿದ್ದ.” ಎಂದರು. ಅಂದಹಾಗೆ ಅಲ್ಲಿ ರಿಪೋರ್ಟ್ ಬಾರದ ಕಾರಣ ಮತ್ತು ಜ್ವರ ಕಡಿಮೆಯಾಗದ ಕಾರಣ, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಕೊರೊನ ಇರುವುದು ದೃಢಪಟ್ಟಿತ್ತು. ಕಳೆದ ಹತ್ತು ದಿನಗಳಿಂದ ಜ್ವರ ಇತ್ತು. ಉಸಿರಾಡುವುದಕ್ಕೆಲ್ಲ ತುಂಬ ಕಷ್ಟ ಪಡುತ್ತಿದ್ದರು. ನಿನ್ನೆ ಅಂದರೆ ಶುಕ್ರವಾರ ರಾತ್ರಿ 11ಗಂಟೆಗೆ ಆಸ್ಪತ್ರೆಯಿಂದ ಅವರು ನಿಧನರಾಗಿರುವುದಾಗಿ ಫೋನ್ ಬಂತು. ಫಾರ್ಮಾಲಿಟಿಸ್ ಮುಗಿಸಿ ಬಾಡಿ ಪಡೆಯಲು ಕಾಯುತ್ತಿದ್ದೇವೆ” ಎಂದರು.
“ನಮ್ಮಪ್ಪ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ `ಪ್ರೇಮಲೋಕ’ದಲ್ಲಿ ಪಾಲ್ಗೊಂಡಿದ್ದರು. ಅದು ಮನೆಯೊಳಗೆ ನಡೆಯುತ್ತಿದ್ದಂಥ ಚಿತ್ರೀಕರಣ. ಹಾಗಾಗಿ ಯಾವುದೇ ಆತಂಕ ಬೇಕಿಲ್ಲ. ನಾವೆಲ್ಲ ತುಂಬ ಎಚ್ಚರಿಕೆ ತೆಗೆದುಕೊಂಡು ಶೂಟ್ ಮಾಡುತ್ತಿದ್ದೇವೆ ಎಂದಿದ್ದರು. ಸ್ವಲ್ಪ ದಿನ ಬಿಟ್ಟು ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಇರುವುದಾಗಿಯೂ ನನ್ನಲ್ಲಿ ಹೇಳಿದ್ದರು. ಅಲ್ಲಿ ಹೋಗಿ ಎರಡೇ ದಿನದಲ್ಲೇ ತುಂಬ ಜ್ವರ ಬಂತು. ಅದೇ ಕೊನೆ” ಎಂದು ನೋವು ವ್ಯಕ್ತಪಡಿಸಿದರು ರೇವತಿ.
ಗಂಗಾಧರಯ್ಯನವರಿಗೆ 70 ವರ್ಷ ಆಗಿತ್ತು. ನಾಲ್ಕು ಜನ ಮಕ್ಕಳಿದ್ದು, ಅವರಲ್ಲಿ ಮೂರು ಮಂದಿ ಹೆಣ್ಣು ಮಕ್ಕಳು. ಅವರು ಕೃಷಿಕನಾಗಿ ತುಮಕೂರು ಜಿಲ್ಲೆಯಲ್ಲೇ ಜನಪ್ರಿಯರಾಗಿದ್ದರು. ಐಟಿಐನಲ್ಲಿ ಪಿಆರ್ ಒ ಆಗಿದ್ದ ಅವರು ಅದರಿಂದ ವಿಆರ್ ಎಸ್ ತೆಗೆದುಕೊಂಡು ರಂಗಭೂಮಿ ಮತ್ತು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.
ಉಲ್ಟಾ ಪಲ್ಟಾ, ಧರ್ಮ ದೇವತೆ, ಭೂಮಿತಾಯಿಯ ಚೊಚ್ಚಲ ಮಗ, ಶಬ್ದವೇಧಿ, ಕುರಿಗಳು ಸಾರ್ ಕುರಿಗಳು ಅಪ್ಪು ಸೇರಿದಂತೆ ಹಲವಾರು ಟಿಎನ್ ಸೀತಾರಾಮ್ ಅವರ `ಮುಕ್ತ ಮುಕ್ತ’ ಧಾರಾವಾಹಿಯಲ್ಲಿನ ಅವರ ಪಾತ್ರ ಜನಪ್ರಿಯತೆ ಪಡೆದಿತ್ತು.