
ಚಿತ್ರ: ಫ್ರೆಂಚ್ ಬಿರಿಯಾನಿ ತಾರಾಗಣ: ಡ್ಯಾನಿಶ್ ಸೇಠ್, ಸಾಲ್ ಯೂಸುಫ್, ಸಂಪತ್, ಸಿಂಧು ಶ್ರೀನಿವಾಸ್ ಮೊದಲಾದವರು.
ನಿರ್ದೇಶನ: ಪನ್ನಗಾಭರಣ
ನಿರ್ಮಾಣ: ಪಿ ಆರ್ ಕೆ ಪ್ರೊಡಕ್ಷನ್ಸ್
ಫ್ರೆಂಚ್ ಬಿರಿಯಾನಿ ಎನ್ನುವ ಹೆಸರು ಕೇಳಿದಾಕ್ಷಣ ಇದು ಆಹಾರಕ್ಕೆ ಸಂಬಂಧಿಸಿದ ಚಿತ್ರ ಎಂದುಕೊಳ್ಳಬಾರದು. ಬಹುಶಃ ಟ್ರೇಲರ್ ನೋಡಿದವರಿಗೆ ಅಂಥ ಸಂದೇಹ ಪಕ್ಕಕ್ಕೆ ಸುಳಿಯದು. ಉಳಿದಂತೆ ಒಂದು ಸ್ವಾದಿಷ್ಟ ಬಿರಿಯಾನಿಯಲ್ಲಿರಬೇಕಾದ ಎಲ್ಲ ರೀತಿಯ ಮಸಾಲೆ ಪದಾರ್ಥಗಳ ಮಿಶ್ರಣ ಇದು. ಸೆಂಟಿಮೆಂಟ್ ಅಂಶ ಇಲ್ಲ ಎನ್ನಬಹುದು. ಹಾಸ್ಯ ರಸದೌತಣದಲ್ಲಿ ಇತರ ಭಾವನೆಗಳಿಗೆ ಹೆಚ್ಚು ಅವಕಾಶವಿಲ್ಲ.
ಕತೆಯ ವಿಚಾರಕ್ಕೆ ಬಂದರೆ ಚಾರ್ಲ್ಸ್ ಒಬ್ಬ ಮುದಿ ಡಾನ್. ಆತ ಸಾಯುವ ಮುನ್ನ ತನ್ನ ಮಗನಿಗೆ ಒಂದು ವಿಚಾರ ಹೇಳುತ್ತಾನೆ. ಸೊಲಮನ್ ಸಾಮಾನ್ ತರ್ತಾನೆ ಅದನ್ನು ಸುಲೈಮಾನಲ್ಲಿ ಪಡೆದುಕೊಳ್ಳುವಂತೆ ಹೇಳುತ್ತಾನೆ. ಆದರೆ ಡಾನ್ ಪುತ್ರನ ಮರೆವಿನ ಕಾರಣ ಸಾಮಾನು ತರುವ ವ್ಯಕ್ತಿಯ ಹೆಸರನ್ನು ನೆನಪಾಗುವುದಿಲ್ಲ. ಆ ಹೆಸರನ್ನು ಮತ್ತೊಮ್ಮೆ ಹೇಳದೇ ಮುದಿ ಡಾನ್ ತೀರಿಕೊಂಡು ಬಿಡುತ್ತಾನೆ. ಹಾಗಾಗಿ ಸೈಮನ್ ಎನ್ನುವ ಫ್ರೆಂಚ್ ವ್ಯಕ್ತಿಯ ಸಾಮಾನಿನ ಬ್ಯಾಗ್ ಹಿಂದೆ ಬೀಳುವ ಡಾನ್ ಕಡೆಯ ಎರಡು ತಂಡ ಮತ್ತು ಕಥಾ ನಾಯಕ ಹಾಗೂ ಪೊಲೀಸರ ಗೊಂದಲದೊಂದಿಗೆ ಚಿತ್ರ ಕ್ಲೈಮ್ಯಾಕ್ಸ್ ತಲುಪುತ್ತದೆ.

ಇತ್ತೀಚೆಗಷ್ಟೇ ನಿಧನರಾದ ನಟ ಮೈಖಲ್ ಮಧು ಚಿತ್ರದಲ್ಲಿ ಮುದಿಡಾನ್ ಚಾರ್ಲ್ಸ್ ಪಾತ್ರದಲ್ಲಿ ನಟಿಸಿದ್ದಾರೆ. ಡಾನ್ ಪುತ್ರ ಪಾತ್ರವಹಿಸಿದ ನಟ ಕೂಡ ಚಿತ್ರದ ಕ್ಲೈಮಾಕ್ಸ್ ತಲುಪುವ ಹೊತ್ತಿಗೆ ಮನದೊಳಗೆ ಸ್ಥಾನ ಪಡೆದಿರುತ್ತಾರೆ. ಶಿವಾಜಿ ನಗರದ ಟಿಪಿಕಲ್ ರಿಕ್ಷಾಚಾಲಕನಾಗಿ ಅಸ್ಗರ್ ಪಾತ್ರದಲ್ಲಿ ಡ್ಯಾನಿಶ್ ಸೇಠ್ ಅದ್ಭುತ ಅಭಿನಯ ನೀಡಿದ್ದಾರೆ. ಈ ಹಿಂದೆ ಹಂಬಲ್ ಪೊಲಿಟಿಶಿಯನ್ ನೋಗ್ರಾಜ್ ಚಿತ್ರದಲ್ಲಿನ ಪಾತ್ರ, ಮ್ಯಾನರಿಸಮ್ ಎಲ್ಲವನ್ನೂ ಮರೆಯುವಂತಿರುವ ಡ್ಯಾನಿಶ್ ನಟನೆ ಮತ್ತು ಮೇಕಪ್ ಬಗ್ಗೆ ಮೆಚ್ಚಲೇಬೇಕು. ಸೈಮನ್ ಪಾತ್ರಧಾರಿ ಸಾಲ್ ಯೂಸುಫ್ ಫ್ರೆಂಚ್ ಪ್ರಜೆಯ ಪಾತ್ರಕ್ಕೆ ಜೀವನೀಡಿದ್ದಾರೆ. ಉಳಿದಂತೆ ಒಂದೇ ದೃಶ್ಯದಲ್ಲಿ ಬಂದರೂ ಚಿಕ್ಕಣ್ಣ ಎಂದಿನಂತೆ ನಗಿಸುವಲ್ಲಿ ಗೆಲ್ಲುತ್ತಾರೆ. ರಂಗಾಯಣ ರಘು, ನಾಗಭೂಷಣ್, ಸಂಪತ್, ಸಿಂಧು ಶ್ರೀನಿವಾಸ್, ದಿಶಾ ಮದನ್ ಮೊದಲಾದವರು ಇನ್ನಿತರ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಕನ್ನಡದ ಮಟ್ಟಿಗೆ ಇಂಥದೊಂದು ಚಿತ್ರ ತೀರ ಅಪರೂಪ. ಮಲಯಾಳಂ ಮತ್ತು ಹಿಂದಿಗಳಲ್ಲಿ ಈ ಶೈಲಿಯಲ್ಲಿರುವ ಪ್ರಿಯದರ್ಶನ್ ನಿರ್ದೇಶನದ ಸಿನಿಮಾಗಳು ಬಂದಿವೆ. ಅದೇ ರೀತಿ ಬ್ಯಾಗ್ ಹಿಂದೆ ಬೀಳುವ ಕತೆಯನ್ನು ‘ಗೋಪಿಕೃಷ್ಣ' ಚಿತ್ರದಲ್ಲಿಯೇ ನೋಡಿದ್ದೇವೆ. ಆದರೆ ಇದು ಅವುಗಳಿಗಿಂತ ವಿಭಿನ್ನ. ತಮಿಳು ಮಸಾಲ ಚಿತ್ರಗಳ ಕಣ್ಣಿಗೆ ರಾಚುವ ಕಾಸ್ಟ್ಯೂಮ್ಸ್ ಇಲ್ಲಿನ ವಿಶೇಷ. ಒಂದೆರಡು ಕಡೆ ದ್ವಂದ್ವಾರ್ಥ ಪದ ಪ್ರಯೋಗಗಳಿಂದ ವೆಜ್ ಬಿರಿಯಾನಿಯಲ್ಲಿ ನಾನ್ ವೆಜ್ ಪೀಸ್ ಸಿಕ್ಕ ಅನುಭವವಾಗುತ್ತದೆ. ಆದರೆ ಚುರುಕು ಸಂಭಾಷಣೆ, ಲೊಕೇಶನ್ಸ್, ಛಾಯಾಗ್ರಹಣ ಮತ್ತು ವಾಸುಕಿ ವೈಭವ್ ಸಂಗೀತದ ಎರಡು ಹಾಡುಗಳು ಚಿತ್ರದ ಹೈಲೈಟ್. ಒಂದು ಹಾಡನ್ನು ಹಾಡುವುದರ ಜತೆಗೆ ಅದಿತಿ ಅರುಣ್ ಸಾಗರ್ ಪರದೆಯ ಮೇಲೆಯೂ ಕಾಣಿಸಿಕೊಂಡಿದ್ದಾರೆ. ಇನ್ನೊಂದರಲ್ಲಿ ನಿರ್ದೇಶಕ ಪನ್ನಗಾಭರಣ ಬರುತ್ತಾರೆ. ಇದು ದೊಡ್ಡ ಸಂದೇಶ ಸಾರುವ ಚಿತ್ರವಲ್ಲವಾದರೂ, ಲಾಕ್ಡೌನ್ ಸಮಯದಲ್ಲಿ ಟೈಮ್ ಪಾಸ್ ಮಾಡಲು ನೋಡಬಹುದಾದಂಥ ಚಿತ್ರ. ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಗೊಂಡರೂ, "
ಚಿತ್ರದ ಕ್ಲೈಮ್ಯಾಕ್ಸ್ ಥಿಯೇಟರಲ್ಲಿ ಥಿಯೇಟರಲ್ಲೇ ನಡೆಯುವುದು ಸತ್ಯ.!”ಇದು ಹೇಗೆ ಎನ್ನುವುದು ಅರ್ಥವಾಗಬೇಕಾದರೆ ನೀವು ಸಿನಿಮಾ ನೋಡಲೇಬೇಕು.