ಮೊದಲ ಭೇಟಿಯಲ್ಲೇ ಫ್ಯಾನಾದೆ..!

ರಕ್ಷಿತ್ ಶೆಟ್ಟಿ ಚಿತ್ರರಂಗದಲ್ಲಿ ಹತ್ತು ವರ್ಷ ಪೂರೈಸಿರುವ ವಿಷಯ ನಿನ್ನೆ ತಿಳಿಯಿತು, ಈ ಸಂದರ್ಭದಲ್ಲಿ ಅವರನ್ನು ಭೇಟಿಮಾಡಿದ ಅನುಭವ ಕಥನವನ್ನು ಹಂಚಿಕೊಳ್ಳುತ್ತಿದ್ದೇನೆ, ಓದಿ.

ಸರಿ ಸುಮಾರು ಮೂರು ವರ್ಷದ ಹಿಂದೆ ಅಂದರೆ 2017 ರಲ್ಲಿ ನಾನು ನನ್ನ Wake Up The Band(R) ವತಿಯಿಂದ ತಯಾರಾಗಿತ್ತು ‘ಅಮ್ಮ’ ಎಂಬ ಚೊಚ್ಚಲ ಮೂಸಿಕಲ್ ವಿಡಿಯೋ ಸಾಂಗ್. ಅದಕ್ಕೆ ನಾನೇ ಸಾಹಿತ್ಯ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೆ. ಬಿಡುಗಡೆಗೆ ತಯಾರಾದ ಸರಕನ್ನು ಕಲಾಭಿಮಾನಿಗಳಿಗೆ ತಲುಪಿಸುವ ಸಲುವಾಗಿ ಸೆಲೆಬ್ರಿಟಿಗಳ ವಿಡಿಯೋ ತುಣುಕು ತೆಗೆದುಕೊಳ್ಳುವ ಕ್ರಮ ಆಗಷ್ಟೇ ದೊಡ್ಡದಾಗಿ ಚಾಲ್ತಿಯಲ್ಲಿತ್ತು. ನಾನು ಸಹ ಅಮ್ಮ ಹಾಡಿನ ಬಿಡುಗಡೆಗೆ ಯಾರಿಂದ ಮಾಡಿಸಿದರೆ ಒಳ್ಳೆಯದು ಎಂಬ ಚಿಂತೆಯಲ್ಲಿದ್ದೆ. ಆಗ ಮೊದಲು ಹೊಳೆದದ್ದೇ ‘ರಕ್ಷಿತ್ ಶೆಟ್ಟಿ’ ಹೆಸರು.

ರಕ್ಷಿತ್ ಅವರ ಅಭಿನಯದ ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’ ನೋಡಿದ್ದೆನಾದರೂ ನನಗೆ ಬಹಳವೇ ಪರಿಣಾಮ ಬೀರಿದ್ದು ‘ಉಳಿದವರು ಕಂಡಂತೆ’ ಚಿತ್ರ. ಊರಿನ ಆತ್ಮ, ಭಾಷೆ, ಭಾವ ಎಲ್ಲವನ್ನೂ ಎರಕ ಹೊಯ್ದು ಮಾಡಿದ್ದ ಸಿನಿಮಾ ಆದ್ದರಿಂದ ನನಗೆ ಬಹಳವಾಗಿ ಕಾಡಿದ್ದು ಅಚ್ಚರಿ ಏನಲ್ಲ, ಅದೂ ಅಲ್ಲದೆ ಮಂಗಳೂರು ಭಾಷೆಯನ್ನು ಕೇವಲ ಕಾಮಿಡಿ ಸರಕಾಗಿ ಬಳಸಿಕೊಂಡು ಬರುತ್ತಿದ್ದ ಸಮಯದಲ್ಲಿ ಕರಾವಳಿ ಭಾಗದ ಕಥೆಯನ್ನೇ ಪ್ರಧಾನವಾಗಿಟ್ಟುಕೊಂಡು ಕಮರ್ಷಿಯಲ್ ಚೌಕಟ್ಟಿಗೆ ಹೊಂದಿಸಿ ನಾಯಕನಾಗಿಯೂ ಗೆದ್ದ ಶ್ರೇಯಸ್ಸು ರಕ್ಷಿತ್ ಶೆಟ್ಟಿ ಅವರಿಗೆ ಸಲ್ಲುತ್ತದೆ. ಬಹು ಮುಖ್ಯವಾಗಿ ಅವರ ಗೆಲುವು ಚಿತ್ರರಂಗದಲ್ಲಿ ಹೆಸರು ಮಾಡಬೇಕು ಎಂಬ ಹಂಬಲವಿದ್ದ ಹಲವಾರು ಕರಾವಳಿ ಪ್ರತಿಭೆಗಳಿಗೆ ಹೊಸ ಹುರುಪು ತಂದುಕೊಟ್ಟದ್ದು ಸುಳ್ಳಲ್ಲ.
ಅಂದಿನಿಂದ ನಾನು ಅವರ ಅಭಿಮಾನಿ.

ರಕ್ಷಿತ್ ಶೆಟ್ಟಿ ಅಭಿನಯದ ‘ಕಿರಿಕ್ ಪಾರ್ಟಿ’ ಸಿನಿಮಾ ಆಗಷ್ಟೇ ಬಿಡುಗಡೆಯಾಗಿ ಯಶಸ್ವಿಯಾಗಿ ಇಪ್ಪತೈದು ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿತ್ತು, ಬಹುತೇಕ ಹೌಸ್ ಫುಲ್ ಶೋಸ್ ಕಂಡಿದ್ದ ಸಿನಿಮಾ ಕನ್ನಡ ಚಿತ್ರರಂಗದ ಅತಿ ದೊಡ್ಡ ಹಿಟ್ ಚಿತ್ರವಾಗುವತ್ತ ದಾಪುಗಾಲು ಇಟ್ಟಿತ್ತು. ಚಿತ್ರದಿಂದ ರಕ್ಷಿತ್ ಶೆಟ್ಟಿ ಅವರಿಗೆ ದೊಡ್ಡ ಮಟ್ಟದಲ್ಲೇ ಯಶಸ್ಸು ಗಳಿಸಿತ್ತು, ಅಂತ ಸಮಯದಲ್ಲಿ ಅವರನ್ನು ಹಿಡಿಯುವುದು ಕಬ್ಬಿಣದ ಕಡಲೆ ಎಂದೇ ನಾನು ಭಾವಿಸಿದ್ದೆ. ಬಿಡುಗಡೆ ಮಾಡಿಸಲಿಕ್ಕೆ ಆಗದಿದ್ದರೂ ನನ್ನ ಹಾಡನ್ನು ತೋರಿಸುವ ಅವಕಾಶಕ್ಕೆ ಕಾಯತೊಡಗಿದ್ದೆ.

ಅದೇ ಸಮಯಕ್ಕೆ ಸರಿಯಾಗಿ ಪ್ರಮೋಷನ್ ಸಲುವಾಗಿ ಮಂಗಳೂರಿಗೆ ‘ಕಿರಿಕ್ ಪಾರ್ಟಿ’ ಚಿತ್ರತಂಡ ಬರಲಿದೆ ಎಂಬ ಸುದ್ದಿ ತಿಳಿಯಿತು. ತಕ್ಷಣವೇ ರಕ್ಷಿತ್ ಶೆಟ್ಟಿ ಅವರ ಸಂಪರ್ಕ ಸಾಧಿಸಬಹುದಂತಹ ನನ್ನ ಕೆಲವು ಮಿತ್ರರಲ್ಲಿ ನನ್ನ ಇಷ್ಟವನ್ನು ತಿಳಿಸಿದೆ, ಬಹಳ ದಿನದ ನಂತರ ಮಿತ್ರರಾದ ದೀನ ಶೆಟ್ಟಿ ಹಾಗೂ ಆರ್ ಜೇ ಅನುರಾಗ್ ಬಂಗೇರ ಅವರ ಸಹಾಯದಿಂದ ರಕ್ಷಿತ್ ಶೆಟ್ಟಿ ಯನ್ನು ಭೇಟಿಯಾಗುವ ಅವಕಾಶ ದೊರೆಯಿತು. ಜೊತೆಗೆ ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತ ಹೆಗ್ಡೆ ಸಹ ಇದ್ದರು. ಕಡಿಮೆ ಕಾಲಾವಕಾಶ ಇದ್ದ ಕಾರಣ ನನಗೆ ಅವರಲ್ಲಿ ಹೇಳಬೇಕಾದನ್ನು ಬೇಗ ಹೇಳಿ ಮುಗಿಸುವ ಒತ್ತಡವಿತ್ತು. ನೋಡಿದ ತಕ್ಷಣ ತುಳುವಿನಲ್ಲಿ ‘ನಮಸ್ತೆ ಶೆಟ್ರೆ, ಎಂಚ ಉಲ್ಲರ್? ಈರೆಡ ಒಂಜಿ ಬೇಲೆ ಇತ್ತಂಡ್’ (ನಮಸ್ತೆ ಶೆಟ್ಟರೆ ಹೇಗಿದ್ದೀರಿ, ನಿಮ್ಮ ಹತ್ತಿರ ಒಂದು ಕೆಲಸ ಉಂಟು) ಅಂದೆ, ‘ಪನ್ಲೆ ಯಾನ್ ಹುಷಾರ್ ಉಲ್ಲೆ ಈರ್ ಎಂಚ ಉಲ್ಲರ್ ದಾದ ವಿಷ್ಯ’ (ಹೇಳಿ ನಾನು ಚೆನ್ನಾಗಿದ್ದೀನಿ ನೀವು ಹೇಗಿದ್ದೀರಿ, ಹೇಳಿ ಏನಾಗಬೇಕು) ಅಂದರು. ತುಂಬಾನೇ ಸಾವಕಾಶವಾಗಿ ನಾನು ಹೇಳಿದನ್ನೆಲ್ಲ ಕೇಳಿದರು. ಹಾಡು ಕೇಳಬೇಕು ಎಂದು ಕೇಳಿಕೊಂಡಾಗ ಸ್ವಲ್ಪವೂ ಹಿಂಜರಿಯದೆ ಸುಮಾರು ಮೂರುವರೆ ನಿಮಿಷದ ಹಾಡನ್ನು ತದೇಕ ಚಿತ್ತದಿಂದ ನೋಡಿದರು. ಅವತ್ತು ಅವರದು ತುಂಬಾನೇ ಬಿಜಿ ಶೆಡ್ಯೂಲ್ ನನ್ನ ಹಾಡನ್ನು ಸ್ವಲ್ಪ ಕೇಳಿದ ಹಾಗೆ ಮಾಡಿ ಮುಗಿಸಬಹುದಾಗಿತ್ತು. ಆದರೂ ಹಾಗೆ ಮಾಡದೆ ಸಂಪೂರ್ಣವಾಗಿ ಹಾಡನ್ನು ಕೇಳಿ ‘ಸೂಪರ್ ಆತ್ಂಡ್ (ಸೂಪರ್ ಆಗಿದೆ)’ ಎಂದರು. ನನ್ನ ಖುಷಿಗೆ ಪಾರವೇ ಇರಲಿಲ್ಲ, ಹಾಡಿನ ಸಾಹಿತ್ಯ, ಸಂಗೀತದ ಬಗ್ಗೆ ಯಾವುದೇ ಹಮ್ಮಿಲ್ಲದೇ ಹೊಗಳಿದರು.
ನೀವೇ ಬಿಡುಗಡೆ ಮಾಡಬೇಕೆಂದು ಕೇಳಿಕೊಂಡೆ, ತಕ್ಷಣವೇ ತಮ್ಮ ಮನೇಜರ್ ಪ್ರವೀಣ್ ಎಂಬುವವರಿಗೆ ನನ್ನ ನಂಬರ್ ತೆಗೆದುಕೊಳ್ಳುವುದಕ್ಕೆ ಹೇಳಿ, ಅವರನ್ನು ಕಾಂಟ್ಯಾಕ್ಟ್ ಮಾಡಿ ಮತ್ತು ನಾನು ತಿಳಿಸಿದಾಗ ಬೆಂಗಳೂರಿಗೆ ಬನ್ನಿ ಎಂದು ಹೇಳಿ ಶುಭ ಹಾರೈಸಿದರು.

ಸುಮಾರು ಎರಡು ಮೂರು ನಿಮಿಷಕ್ಕೆ ಸೀಮಿತವಾಗಬೇಕಿದ್ದ ನನ್ನ ಮತ್ತು ಅವರ ಭೇಟಿ ಸುಮಾರು ಇಪ್ಪತ್ತು ನಿಮಿಷ ಉದ್ದವಾಗಿದ್ದು ಕಲೆ ಬಗೆಗಿನ ಅವರ ಉತ್ಕಟ ಆಸಕ್ತಿಗೆ ಒಂದು ನಿದರ್ಶನ. ಸಮಯದ ಅಭಾವದ ನಡುವೆಯೂ ಹೊಸ ಪ್ರತಿಭೆಗಳಿಗೆ ಸ್ಪಂದಿಸುವ ಅವರ ಮನಸ್ಥಿತಿ, ಅಂದು ಅವರು ತೋರಿದ ಸರಳತೆ ನಿಜಕ್ಕೂ ನನ್ನನ್ನು ಮರುಳು ಮಾಡಿತ್ತು. Yes, he is a true gentleman.

ನಂತರದ ದಿನಗಳಲ್ಲಿ ಅಮ್ಮ ಹಾಡಿನ ಬಿಡುಗಡೆಯ ಸಲುವಾಗಿ ಅವರ ಮನೇಜರ್ ಅನ್ನು ಸಂಪರ್ಕಿಸಿದೆ, ಎರಡು ತಿಂಗಳುಗಳ ಕಾಲ ಕಿರಿಕ್ ಪಾರ್ಟಿ ಪ್ರಮೋಷನ್ ಸಲುವಾಗಿ ಹೊರದೇಶಕ್ಕೆ ತೆರಳಲಿದ್ದಾರೆ ಎಂಬ ವಿಷಯ ತಿಳಿಯಿತು. ಅವರು ಬರುವ ತನಕ ಕಾಯುವುದು ಸಮಂಜಸವೆನಿಸದೆ ನಂತರ ನಟ ವಿಜಯ ರಾಘವೇಂದ್ರ ಅವರಿಂದ ‘ಅಮ್ಮ’ ಹಾಡನ್ನು ಬಿಡುಗಡೆ ಮಾಡಿಸಿದೆ.

ಆ ಒಂದು ಭೇಟಿಯಿಂದ ನನಗೆ ರಕ್ಷಿತ್ ಶೆಟ್ಟಿಯವರು ಸಿನಿಮಾ ತಂತ್ರಜ್ಞ ಎಂಬ ಕಾರಣಕಷ್ಟೇ ಅಲ್ಲದೆ ಅವರ ವ್ಯಕ್ತಿತ್ವಕ್ಕೂ ದೊಡ್ಡ ಅಭಿಮಾನಿಯಾಗುವಂತೆ ಮಾಡಿಬಿಟ್ಟಿತು. ಸಿನಿಮಾ ರಂಗದಲ್ಲಿ ಒಂದು ದಶಕ ಪೂರೈಸಿರುವ ಅವರ ಬತ್ತಳಿಕೆಯಿಂದ ಇನ್ನೂ ಅತ್ಯುತ್ತಮ ಸಿನಿಮಾಗಳು ಹೊರಬಂದು ಕನ್ನಡ ಸಿನಿಮಾಗಳ ಕೀರ್ತಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ನನ್ನ ಹಾರೈಕೆ.

ಸುಜಯ್ ಬೆದ್ರ

Recommended For You

Leave a Reply

error: Content is protected !!