ಸಾವಿನ ಬಳಿಕವೂ ಸುಶಾಂತ್ ದಾಖಲೆ..!

ಬಾಲಿವುಡ್ ನಟ ಸುಶಾಂತ್ ಸಿಂಗ್ ನಟಿಸಿರುವ ಕೊನೆಯ ಚಿತ್ರ ನಿನ್ನೆ ತಾನೇ ಬಿಡುಗಡೆಯಾಯಿತು. ನವ ನಿರ್ದೇಶಕ ಮುಖೇಶ್ ಛಬ್ರ ನಿರ್ದೇಶನದ ದಿಲ್ ಬೆಚಾರ' ಚಿತ್ರವು ಸುಶಾಂತ್ ಸಾವಿನೊಂದಿಗೆ ಸಾಕಷ್ಟು ಸುದ್ದಿ ಮಾಡಿತ್ತು. ನಟನ ಅಂತಿಮ ಚಿತ್ರ ಎನ್ನುವ ಕಾರಣಕ್ಕೆ ಸುಶಾಂತ್ ಅಭಿಮಾನಿಗಳಷ್ಟೇ ಅಲ್ಲದೆ ಎಲ್ಲ ಸಿನಿಮಾ ಪ್ರೇಮಿಗಳು ಚಿತ್ರ ನೋಡುವ ಉತ್ಸಾಹ ತೋರಿದ್ದರು. ಬಿಡುಗಡೆಯಾದ ಒಂದೇ ದಿನದಲ್ಲಿ ಅದುಐಎಮ್ ಡಿಬಿ’ಯಲ್ಲಿ ಇದುವರೆಗಿನ ಭಾರತೀಯ ಸಿನಿಮಾಗಳಿಗೆ ಸಿಕ್ಕಿರದ ರೇಟಿಂಗ್ಸ್ ಪಡೆದುಕೊಂಡಿದೆ. ಹತ್ತರಲ್ಲಿ 9.8 ರೇಟಿಂಗ್ಸ್ ಪಡೆದಿರುವುದನ್ನು ಐಎಮ್ ಡಿಬಿ ಪ್ರಕಟಗೊಳಿಸಿದ್ದು, ಇದು ಒಂದು ರೀತಿ ಸಾರ್ವಕಾಲಿಕ ದಾಖಲೆಯಾಗಿದೆ.

ಒಟಿಟಿಯೇ ಕ್ರ್ಯಾಶ್ ಆಯಿತು..!

ಶುಕ್ರವಾರ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಒಟಿಟಿ ಫ್ಲಾಟ್‌ ಫಾರ್ಮಿನಲ್ಲಿ `ದಿಲ್ ಬೆಚಾರ’ ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಸಿನಿಮಾದ ಕುರಿತಾದ ನಿರೀಕ್ಷೆ, ಸುಶಾಂತ್ ಸಿಂಗ್ ಬಗೆಗಿನ ಅಭಿಮಾನ, ಇದು ಕೊನೆಯ ಚಿತ್ರ ಎನ್ನುವ ಭಾವೋದ್ರೇಕ ಪ್ರತಿಯೊಬ್ಬರನ್ನು ಚಿತ್ರ ನೋಡುವಂತೆ ಪ್ರೇರೇಪಿಸಿತ್ತು. ಹಾಗಾಗಿ ಟ್ರಾಫಿಕ್ ಹೆಚ್ಚಿ ಸಂಜೆ ದಾಟುತ್ತಿದ್ದ ಹಾಗೆ ಒಟಿಟಿ ಫ್ಲಾಟ್ಫಾರ್ಮೇ ಕ್ರ್ಯಾಶ್ ಆಯಿತೆಂದು ಬಾಲಿವುಡ್ ನಿರ್ದೇಶಕ ಹನ್ಸಲ್ ಮೆಹ್ತಾ ಟ್ವೀಟ್ ಮಾಡಿದ್ದರು. ಇದೇ ವೇಳೆ ಚಿತ್ರ ನೋಡಿದ ಬಳಿಕ ಇಂಥದೊಂದು ಉತ್ತಮ ಚಿತ್ರವನ್ನು ನಾಯಕನಿಗೆ ಅಂತಿಮ ಸಮರ್ಪಣೆ ಎನ್ನುವ ರೀತಿಯಲ್ಲಿ ನೋಡುವಂತಾಗಿದ್ದು ದುರಾದೃಷ್ಟ ಎಂದಿದ್ದಾರೆ.

ಒಟಿಟಿ ಪ್ರಿಯರಿಗೆ ಎಚ್ಚರಿಕೆ!!

ನಿನ್ನೆ ಸಿನಿಮಾ ನೋಡಿದ ಕನ್ನಡದ ನಿರ್ದೇಶಕ ನಾಗೇಂದ್ರ ಅರಸ್ ತಾವು ನೋಡುವಾಗಲೇ ಹಾಟ್ ಸ್ಟಾರ್ ಬ್ಲರ್ ಆಗಿ ಬರುತ್ತಿತ್ತು ಎಂದರು. ಒಂದೆರಡು ನಿಮಿಷ ಬ್ಲರ್ ಆದ ಬಳಿಕ ಕ್ಲ್ಯಾರಿಟಿ ಸಿಗುತ್ತಿತ್ತು. ಬಹುಶಃ ಒಟಿಟಿ ಸಿನಿಮಾ ಕ್ರ್ಯಾಶ್ ಆಗಿದ್ದೇ ಹೀಗಾಗಲು ಕಾರಣ ಎಂದು ಆಮೇಲೆ ಅರಿವಾಯಿತು ಎಂದು ನಾಗೇಂದ್ರ ಅರಸ್ ತಿಳಿಸಿದ್ದಾರೆ. ಕೆಂಪಿರ್ವೆ' ಎನ್ನುವ ಚಿತ್ರ ಮೂಲಕ ತಮ್ಮ ಸಿನಿಮಾ ನಿರ್ದೇಶನದ ಕಂಪನ್ನು ತೋರಿಸಿರುವ ಯುವ ನಿರ್ದೇಶಕ ವೆಂಕಟ್ ಭಾರಧ್ವಾಜ್ ಇದೇ ವಿಚಾರದಲ್ಲಿ ಮಾತನಾಡಿ, "ಸದ್ಯದ ಮಟ್ಟಿಗೆ ಥಿಯೇಟರ್ ಬಿಡುಗಡೆ ಕಷ್ಟ ಎನ್ನುವ ಕಾರಣಕ್ಕೆ ಇರೋ ಬರೋ ಒಟಿಟಿ ಫ್ಲಾಟ್ಫಾರ್ಮ್ ಗೆ ಚಿತ್ರ ನೀಡಲು ಹಲವಾರು ನಿರ್ಮಾಪಕರು ಮುಂದಾಗುತ್ತಿದ್ದಾರೆ. ಕೆಲವರು ತಾವೇ ಒಟಿಟಿ ಸ್ಥಾಪಿಸಲು ಮುಂದಾಗಿದ್ದಾರೆ. ಇವೆರಡೂ ಕೂಡ ರಿಸ್ಕಿ ಆಗಿದೆ. ಯಾಕೆಂದರೆ ಸರಿಯಾದ ಟೆಕ್ನಾಲಜಿಯನ್ನು ಬಳಸದ ಒಟಿಟಿಯಾಗಿದ್ದಲ್ಲಿ ಅದಕ್ಕೆ ನಮ್ಮ ಕಂಟೆಂಟ್ ನೀಡುವುದು ಎಷ್ಟು ಸೇಫ್ ಎನ್ನುವುದು ತುಂಬ ಮುಖ್ಯವಾದ ಪ್ರಶ್ನೆ. ಹಾಗಾಗಿ ಒಟಿಟಿಗೆ ಸಿನಿಮಾ ನೀಡುವ ಬಗ್ಗೆ ಯೋಚಿಸಿ ಹೆಜ್ಜೆ ಮುಂದಿಡಿ ಎಂದಿದ್ದಾರೆ ವೆಂಕಟ್ ಭಾರಧ್ವಾಜ್. ಪ್ರಸ್ತುತ ಅವರು ನಿರ್ದೇಶಿಸಿ, ನಟಿಸಿರುವ ‘ದಿ ಪೈಂಟರ್’ ಸಿನಿಮಾ ಇಟಿ ಎಟಿಟಿ ಮೂಲಕ ಬಿಡುಗಡೆಯಾಗಲಿದೆ. (ಎನಿ ಟೈಮ್ ಥಿಯೇಟರ್) ಆನ್ಲೈನ್ ಇ ಥಿಯೇಟರ್ ಮೂಲಕ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿರುವ ಪ್ರಥಮ ಚಿತ್ರ ಇದು ಎನ್ನಲಾಗಿದೆ.

Recommended For You

Leave a Reply

error: Content is protected !!