ಪತ್ರಕರ್ತ ಚೇತನ್ ನಾಡಿಗೇರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬರಹ ಇದು. ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ನಿರ್ದೇಶನ ಮತ್ತು ಚಿತ್ರ ಬದುಕಿನ ಶೈಲಿಯಲ್ಲಿ ಇತ್ತೀಚೆಗೆ ಆಗಿರುವ ಬದಲಾವಣೆಯ ಸಣ್ಣದೊಂದು ಅವಲೋಕನ.
ಕಳೆದ ನಾಲ್ಕು ತಿಂಗಳುಗಳಿಂದ ಚಿತ್ರೀಕರಣ ಚಟುವಟಿಕೆಗಳು, ಚಿತ್ರ ಪ್ರದರ್ಶನ ಎಲ್ಲವೂ ಬಂದ್ ಆಗಿದೆ. ಬಹುಶಃ ಈ ಸಂದರ್ಭದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲೇ ಯಾರಾದರೂ ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಲೇ ಇದ್ದಾರೆ ಎಂದರೆ ಅದು ರಾಮ್‍ಗೋಪಾಲ್ ವರ್ಮಾ ಇರಬೇಕು. ಒಂದು ಕಡೆ ಮಿಕ್ಕವರೆಲ್ಲಾ ತಮ್ಮ ಬರವಣಿಗೆ, ಮುಂದಿನ ಚಿತ್ರಗಳ ತಯಾರಿಯ ಸಿದ್ಧತೆ ನಡೆಸುತ್ತಾ ಇದ್ದರೆ, ವರ್ಮಾ ಮಾತ್ರ ಸಿನಿಮಾ ಮೇಲೆ ಸಿನಿಮಾ ಅನೌನ್ಸ್ ಮಾಡುತ್ತಲೇ ಇದ್ದಾರೆ. ಪ್ರತಿ ದಿನ ಅವರ ಒಂದಲ್ಲಾ ಒಂದು ಚಿತ್ರಗಳ ಪೋಸ್ಟರ್, ಟೀಸರ್‍ಗಳು ಬಿಡುಗಡೆಯಾಗುತ್ತಿವೆ. ಇಂದು ಮರ್ಡರ್' ಎಂಬ ಚಿತ್ರದ ಟೀಸರ್ ಬಿಡಗುಡೆಯಾಗಿದೆ. ಜುಲೈ 26ಕ್ಕೆ
ಥ್ರಿಲ್ಲರ್’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಅದರ ಹಿಂದಿನ ದಿನವಷ್ಟೇ ವರ್ಮಾ, ಆರ್ ಜಿವಿ ವರ್ಲ್ಡ್ ಥಿಯೇಟರ್ ಎಂಬ ಆ್ಯಪ್ ಶುರು ಮಾಡಿದ್ದಷ್ಟೇ ಅಲ್ಲ, ಅದರ ಮೂಲಕ ಪವರ್ ಸ್ಟಾರ್' ಎಂಬ ಚಿತ್ರವನ್ನೂ ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ, ಚಿತ್ರಮಂದಿರಗಳು ಇತಿಹಾಸ ಪುಟ ಸೇರುತ್ತವೆ ಮತ್ತು ಭವಿಷ್ಯವೇನಿದ್ದರೂ ಡಿಜಿಟಲ್ ಸ್ಟ್ರೀಮಿಂಗ್‍ನಲ್ಲಿದೆ ಎಂಬ ನಿರ್ಧಾರಕ್ಕೆ ಅವರು ಬಂದುಬಿಟ್ಟಿರುವಂತಿದೆ. ಅದೇ ಕಾರಣಕ್ಕೆ, ಅವರು ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಯೋಚನೆ ಬಿಟ್ಟು, ಏನಿದ್ದರೂ ಡಿಜಿಟಲ್ ಸ್ಟ್ರೀಮಿಂಗ್ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ
ಕ್ಲೈಮ್ಯಾಕ್ಸ್’ ಮತ್ತು `ನೇಕೆಡ್’ ಎಂಬ ಎರಡು ಚಿತ್ರಗಳನ್ನು ಬೇರೊಂದು ಪ್ಲಾಟ್‍ಫಾರ್ಮಲ್ಲಿ ಬಿಡುಗಡೆ ಮಾಡಿದರು. ಒಂದು ವೀಕ್ಷಣೆಗೆ ಇಷ್ಟು ಅಂತ ದುಡ್ಡು ಫಿಕ್ಸ್ ಮಾಡಿದರು.
ಯಾವಾಗ ಜನ ಈ ಚಿತ್ರಗಳನ್ನು ನೋಡಿ ಯಶಸ್ವಿಗೊಳಿಸಿದರೋ, ಆಗ ತಮ್ಮದೇ ಸ್ವಂತ ಆ್ಯಪ್ ಮೂಲಕ ಚಿತ್ರ ಬಿಡುಗಡೆ ಮಾಡುವ ತೀರ್ಮಾನಕ್ಕೆ ಬಂದರು ವರ್ಮಾ. ಹಾಗೆ ಹುಟ್ಟಿಕೊಂಡಿದ್ದೇ ಆರ್‍ಜಿವಿ ವಲ್ರ್ಡ್ ಥಿಯೇಟರ್. ಇದರ ಮೊದಲ ಚಿತ್ರವಾಗಿ ಬಿಡುಗಡೆಯಾಗಿದ್ದೇ ಪವರ್ ಸ್ಟಾರ್.' ಯಾವಾಗ ಈ ಹೆಸರು ಘೋಷಣೆಯಾಯಿತೋ, ತೆಲುಗು ನಟ
ಪವರ್ ಸ್ಟಾರ್’ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ರೊಚ್ಚಿಗೆದ್ದರು. ಮೊದಲಿನಿಂದಲೂ, ಒಂದಲ್ಲ ಒಂದು ಕಾರಣಕ್ಕೆ ವರ್ಮಾ ಮತ್ತು ಪವನ್ ಕಲ್ಯಾಣ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಯಾವಾಗ ಪವರ್ ಸ್ಟಾರ್' ಎಂಬ ಹೆಸರನ್ನು ವರ್ಮಾ ಘೋಷಿಸಿದರೋ, ಜತೆಗೆ ಪವನ್ ಕಲ್ಯಾಣ್ ಅವರನ್ನೇ ಹೋಲುವ ವ್ಯಕ್ತಿಯನ್ನು ಕರೆದುಕೊಂಡು ಬಂದು ಚಿತ್ರ ಶುರು ಮಾಡಿದರೋ, ಆಗ ಅಭಿಮಾನಿಗಳಿಗೆ ಇದು ತಮ್ಮ ಮೆಚ್ಚಿನ ನಟನ ಕುರಿತಾದ ಚಿತ್ರ ಎಂದು ಪಕ್ಕಾ ಆಯಿತು. ಇದನ್ನು ಚೆನ್ನಾಗಿ ಎನ್‍ಕ್ಯಾಶ್ ಮಾಡಿಕೊಂಡ ವರ್ಮಾ, ಇನ್ನಷ್ಟು ಪ್ರಚಾರ ಮಾಡಿದರು. ಅಡ್ವಾನ್ಸ್ ಬುಕಿಂಗ್‍ನಲ್ಲಿ ಟಿಕೆಟ್ ತೆಗೆದುಕೊಂಡರೆ 150 ರೂಪಾಯಿ, ಚಿತ್ರದ ಸ್ಟ್ರೀಮಿಂಗ್ ಪ್ರಾರಂಭವಾದ ನಂತರ 250 ರೂಪಾಯಿ ಎಂದು ಘೋಷಿಸಿದರು. ಅಷ್ಟೇ ಅಲ್ಲ, ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಚಿತ್ರದ ಟ್ರೇಲರ್ ನೋಡುವುದಕ್ಕೆ 25 ರೂಪಾಯಿ ಫೀಸು ಇಟ್ಟರು. ಆದರೆ, ಬಿಡುಗಡೆಯಾಗುವುದಕ್ಕಿಂತ ಮುಂಚೆಯೇ ಟ್ರೇಲರ್ ಲೀಕ್ ಆಗಿದ್ದರಿಂದ ಅವರಿಗೆ ಮೊದಲ ಪೆಟ್ಟು ಬಿತ್ತು. ಟ್ರೇಲರ್ ನೋಡುವುದಕ್ಕೆ ದುಡ್ಡು ಕೊಟ್ಟವರಿಗೆಲ್ಲಾ ಹಣ ಹಿಂದಿರುಗಿಸುವುದಾಗಿ ವರ್ಮಾ ಹೇಳಿದರು. ಆ ನಂತರ ಜುಲೈ 25ರಂದು 37 ನಿಮಿಷದ '
ಪವರ್ ಸ್ಟಾರ್’ ಬಿಡುಗಡೆಯಾಯಿತು. ಬಿಡುಗಡೆಯಾದ ಸ್ವಲ್ಪ ಹೊತ್ತಿಗೆ ಪೈರಸಿಯೂ ಆಯಿತು.
‘ಪವರ್ ಸ್ಟಾರ್’ ಚಿತ್ರದ ಬಗ್ಗೆ ಏನೇ ಟೀಕೆ-ಟಿಪ್ಪಣಿಗಳಿರಲಿ, ಅದೊಂದು ಇಂಡಸ್ಟ್ರಿ ಹಿಟ್ ಎಂದು ಸ್ವತಃ ವರ್ಮಾ ಘೋಷಿಸಿ ಬಿಟ್ಟಿದ್ದಾರೆ. ಈ ಯಶಸ್ಸಿನಿಂದ ಇನ್ನು ಮುಂದೆ ತಮ್ಮ ಆ್ಯಪ್ ಮೂಲಕವೇ ಚಿತ್ರ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿರುವ ಅವರು, ಒಂದಿಷ್ಟು ಹೊಸ ಚಿತ್ರಗಳನ್ನು ಘೋಷಿಸುವುದರ ಜತೆಗೆ, ಈ ಹಿಂದೆ ಮಾಡಿಟ್ಟುಕೊಂಡು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದ ಚಿತ್ರಗಳನ್ನೆಲ್ಲಾ ಅವರು ತಮ್ಮ ಆ್ಯಪ್ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ. ಈ ಎಲ್ಲಾ ಚಿತ್ರಗಳನ್ನು ಅವರೊಬ್ಬರೇ ನಿರ್ದೇಶಿಸುತ್ತಿಲ್ಲ. ಕೆಲವಕ್ಕೆ ಮಾತ್ರ ಅವರು ನಿರ್ದೇಶಕರು. ಇನ್ನೂ ಕೆಲವು ಕಥೆಗಳು ಇಷ್ಟವಾದರೆ, ದೂರ ನಿಂತು ಬರೀ ನಿರ್ಮಾಣ ಮಾಡಿ, ಅದನ್ನು ತಮ್ಮ ಆರ್ ಜಿವಿ ವರ್ಲ್ಡ್ ಥಿಯೇಟರ್ ಆ್ಯಪ್ ಮೂಲಕ ಬಿಡುಗಡೆ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ.
ಒಟ್ಟಿನಲ್ಲಿ ವರ್ಮಾ ಚಿತ್ರರಂಗದಲ್ಲಿ ಹೊಸ ಕ್ರಾಂತಿ ಮಾಡುತ್ತಿದ್ದಾರೆ ಎಂಬುದು ಹಲವರ ಅಭಿಪ್ರಾಯ. ಇನ್ನು ಏನಾದರೂ ಮಾಡುತ್ತಿರಬೇಕು ಎಂಬ ಹಪಾಹಪಿಯಿಂದ ಅವರು ಬರೀ ಸೆಕ್ಸ್, ಕೊಲೆ, ರಕ್ತಪಾತ ಇರುವ ಚಿತ್ರಗಳನ್ನೇ ಮಾಡುತ್ತಿದ್ದಾರೆ ಮತ್ತು ಅದನ್ನೇ ವೈಭವೀಕರಿಸುತ್ತಿದ್ದಾರೆ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಆದರೆ, ವರ್ಮಾ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಹೊಸ ಹೊಸ ಚಿತ್ರಗಳನ್ನು ಘೋಷಿಸುತ್ತಲೇ ಇದ್ದಾರೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೋ ಗೊತ್ತಿಲ್ಲ.