ಯಲಹಂಕ ಸಮೀಪ ನಡೆದ ಅಪಘಾತದಲ್ಲಿ ಕನ್ನಡ ಚಿತ್ರರಂಗದ ಖ್ಯಾತನಾಮರ ಮಕ್ಕಳಿಬ್ಬರು ಗಾಯಗೊಂಡ ಬಗ್ಗೆ ವರದಿಯಾಗಿದೆ. ನಟ, ನಿರ್ಮಾಪಕ ಜೈಜಗದೀಶ್ ಅವರ ಪುತ್ರಿ ಅರ್ಪಿತಾ ಮತ್ತು ಅವರ ಸಂಬಂಧಿಯೂ ಆಗಿರುವ ಮತ್ತೋರ್ವ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ ರಿಷಿಕಾ ಸಿಂಗ್ ಕಾರಿನಲ್ಲಿದ್ದಿದ್ದು ಚಾಲಕನ ಜತೆಗೆ ಗಾಯಗೊಂಡಿದ್ದಾರೆ.
ಘಟನೆಯ ಬಗ್ಗೆ ಹಲವಾರು ಊಹಾಪೋಹಗಳು ಹರಡುತ್ತಿದ್ದು, ಸಿನಿಕನ್ನಡ.ಕಾಮ್ ನೇರವಾಗಿ ಜೈಜಗದೀಶ್ ಅವರನ್ನೇ ಸಂಪರ್ಕಿಸಿದಾಗ ಅವರು ನಮಗೆ ನೀಡಿದ ಮಾಹಿತಿಗಳು ಹೀಗಿವೆ. “ಇದು ನಿನ್ನೆ ಬೆಳಿಗ್ಗೆ ನಡೆದ ಘಟನೆ. ಇಬ್ಬರಿಗೂ ಮೇಜರ್ ಗಾಯಗಳು ಏನೂ ಆಗಿಲ್ಲ. ಸಣ್ಣ ಪುಟ್ಟ ಗಾಯಗಳಾಗಿವೆ. ಅರ್ಪಿತಾ ಮತ್ತು ರಿಷಿಕಾ ಸಂಬಂಧಿಕರ ಜತೆಗೆ ಊಟಕ್ಕೆ ಹೋದವರು ಮರಳುವಾಗ ಸ್ನೇಹಿತರಲ್ಲಿ ಡ್ರಾಪ್ ಕೇಳಿದ್ದಾರೆ. ಮರಳಬೇಕಾದರೆ ಈ ಅಪಘಾತ ಆಗಿದೆ. ಕಾರಲ್ಲಿ ನಾನೂ ಇದ್ದೆ ಎಂದು ಸುದ್ದಿ ಹರಡ್ತಿದೆ. ನಾನು ಹಿಂದಿನ ದಿನವೇ ಬಂದು ಮನೇಲಿ ಮಲಗಿದ್ದೆ. ಇವರು ಸಂಬಂಧಿಕರ ಜೊತೆಗೆ ಊಟಕ್ಕೆ ಹೋಗಿ ರಾತ್ರಿ ಅಲ್ಲೇ ತಂಗಿದ್ದು ಬೆಳಗಿನ ಜಾವ ಬರಬೇಕಾದರೆ ಅಪಘಾತ ಆಗಿದೆ. ನಾನಾಗಲೀ, ನನ್ನ ಪತ್ನಿಯಾಗಲೀ, ರಾಜೇಂದ್ರ ಸಿಂಗ್ ಬಾಬುವಾಗಲೀ ನೋ ವೇರ್ ಕನೆಕ್ಟೆಡ್ ವಿತ್ ದಿಸ್ ಆಕ್ಸಿಡೆಂಟ್. ಯಲಹಂಕದ ಬಳಿ ನಡೆದ ಘಟನೆ ಇದು. ಮೊದಲು ಯಲಹಂಕದಲ್ಲಿ ಅಡ್ಮಿಟ್ ಮಾಡಲಾಗಿತ್ತು. ಈಗ ಅಪೊಲೋದಲ್ಲಿ ಬೇಸಿಕ್ ಅಬ್ಸರ್ವೇಶನಲ್ಲಿ ಇರಿಸಲಾಗಿದೆ.” ಎಂದು ಜೈಜಗದೀಶ್ ಅವರು ತಿಳಿಸಿದ್ದಾರೆ.