
ಚಿತ್ರ ಮಂದಿರ ತೆರೆಯುವ ವಿಚಾರದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್ ಅವರು ಚಿತ್ರರಂಗದವರ ಹಿರಿಯರ ಜತೆಗೆ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಮಯ ನಿಗದಿಯಾಗಿದೆ. ಇಂದು ಶನಿವಾರ ನಾಗವಾರದ ಶಿವಣ್ಣನ ಮನೆಯಲ್ಲಿ ನಿರ್ಮಾಪಕರು ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ.

ಕಳೆದ ವಾರವಷ್ಟೇ ಡಾ.ಶಿವರಾಜ್ ಕುಮಾರ್ ಅವರ ಮನೆಗೆ ಸಾರಾ ಗೋವಿಂದು ಮತ್ತು ಸಿಂಗ್ ಬಾಬು ನೇತೃತ್ವದಲ್ಲಿ ಭೇಟಿ ನೀಡಿದ ನಿರ್ಮಾಪಕರು ಶಿವಣ್ಣ ಚಿತ್ರರಂಗದ ಸಾರಥ್ಯ ವಹಿಸುವಂತೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. “ನಾನೇ ನಾಯಕ” ಎಂದು ಮುಂದೆ ನಡೆಯಲು ಸದಾ ಸಂಕೋಚ ವ್ಯಕ್ತಪಡಿಸುತ್ತಿದ್ದ ಶಿವಣ್ಣ ಈ ಬಾರಿ ದೊಡ್ಡದೊಂದು ಸಮಸ್ಯೆಯ ಎದುರಿಸುವ ಹೋರಾಟಕ್ಕೆ ಯಾರಾದರೂ ಮುಂದಾಳತ್ವ ವಹಿಸಲೇಬೇಕು ಎನ್ನುವ ಅನಿವಾರ್ಯತೆಗೆ ಮಣಿದು ಒಪ್ಪಿಕೊಂಡಿದ್ದರು. ಮಾತ್ರವಲ್ಲ, ಅವರಲ್ಲಿ ಡಾ.ರಾಜ್ ಕುಮಾರ್ ಅವರ ಪರಂಪರೆ ಇದೆಯೆನ್ನುವ ಕಾರಣದಿಂದಲೂ ಅವರು ಚಿತ್ರರಂಗಕ್ಕೆ ಪ್ರಶ್ನಾತೀತ ನಾಯಕರೇ ಆಗಿದ್ದಾರೆ.

ತಾವು ಅದೇನೇ ಮುಂದಾಳತ್ವ ವಹಿಸಿದರೂ, ಜತೆಯಾಗಿ ಸಾಗುವುದರಲ್ಲೇ ಖುಷಿ ಕಾಣುವುದಾಗಿ ಹೇಳಿದ್ದ ಶಿವಣ್ಣ ಅದರಂತೆ ಇದೇ ವಿಚಾರದಲ್ಲಿ ತಮ್ಮ ಸಹ ಕಲಾವಿದರ ಅಭಿಪ್ರಾಯಕ್ಕೂ ಮನ್ನಣೆ ಹಾಕುವ ನಿಟ್ಟಿನಲ್ಲಿ ಖುದ್ದಾಗಿ ಫೋನ್ ಮಾಡಿ ಅವರನ್ನೆಲ್ಲ ಮನೆಗೆ ಕರೆಸಿದ್ದರು. ಅದೇ ದಿನ ಶಿವಣ್ಣನ ಮನೆಗೆ ಸಚಿವ ಸಿಟಿ ರವಿ ಕೂಡ ಆಗಮಿಸಿದ್ದ ಕಾರಣ ಒಳ್ಳೆಯದೊಂದು ಚರ್ಚೆಯೇ ನಡೆದಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಶಿವಣ್ಣನಿಗೆ ನಾಯಕತ್ವ ವಹಿಸಿರುವ ನಿರ್ಮಾಪಕರ ತಂಡ ಇಂದು ಶಿವಣ್ಣ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಬೇಕಾದ ಮನವಿಯ ಕರಡನ್ನು ತಂದು ತೋರಿಸಿದ್ದಾರೆ. ಮನೆಗೆ ಬಂದ ನಿರ್ಮಾಪಕರೊಂದಿಗೆ ಚರ್ಚಿಸಿದ ಶಿವರಾಜ್ ಕುಮಾರ್ ಮಂಗಳವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ ಭೇಟಿಯಾಗಲು ಅಪಾಯಿಂಟ್ಮೆಂಟ್ ಪಡೆದುಕೊಂಡಿದ್ದಾಗಿ ತಿಳಿದು ಬಂದಿದೆ.
ಸ್ವತಃ ಚಹಾ ವಿತರಿಸಿದ ಶಿವಣ್ಣ!

ಇಂದು ನಡೆದ ಸಭೆಯಲ್ಲಿ ಸಾರಾ ಗೋವಿಂದ್, ರಾಜೇಂದ್ರಸಿಂಗ್ ಬಾಬು, ಕೆ.ಮಂಜು, ಕೆಪಿ ಶ್ರೀಕಾಂತ್, ನಾಗಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದರು. ಬಂದಿದ್ದ ಅಷ್ಟೂ ಮಂದಿಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಖುದ್ದಾಗಿ ಚಹಾ ವಿತರಣೆ ಮಾಡಿದ್ದು ವಿಶೇಷವಾಗಿತ್ತು. ಶಿವಣ್ಣನ ಸಿಂಪ್ಲಿಸಿಟಿ ಎಂದರೆ ಹಾಗೇನೇ. ಈ ಹಿಂದೆ ಮನೆಗೆ ಬಂದ ಅಭಿಮಾನಿಗಳಿಗೆ ಕೂಡ ಸ್ವತಃ ಸಿಹಿ ವಿತರಿಸಿ ಸುದ್ದಿಯಾಗಿದ್ದರು.



