`ಒರಟ’ ಮತ್ತೊಮ್ಮೆ ಹೊರಟ..!

ಒರಟ ಖ್ಯಾತಿಯ ಪ್ರಶಾಂತ್ ಸುದ್ದಿಯಲ್ಲಿದ್ದಾರೆ. ಅದು ಕೂಡ ಒರಟ ಚಿತ್ರಕ್ಕೆ ಸಂಬಂಧಿಸಿದ ಹಾಗೆಯೇ ಎನ್ನುವುದು ವಿಶೇಷ. ಇದರ ನಡುವೆ ಒಂದಷ್ಟು ಕಾಲ ಸುದ್ದಿಯೇ ಇರಲಿಲ್ಲ ಯಾಕೆ ಎಂದು ಅವರನ್ನೇ ಪ್ರಶ್ನಿಸಿದಾಗ ಸಿನಿಕನ್ನಡ.ಕಾಮ್ ಗೆ ಅವರು ನೀಡಿರುವ ಉತ್ತರ ಇಲ್ಲಿದೆ.

“ಸುಮ್ಸುಮ್ನೇ ನಮ್ಮ ಸುದ್ದಿ ಚಾಲ್ತಿಯಲ್ಲಿರಬೇಕು ಎನ್ನುವ ಕಾರಣಕ್ಕೆ ಏನಾದರೂ ಮಾಡಬೇಕು ಅಂತ ನನಗೆ ಅನಿಸಿಲ್ಲ. ನನಗೆ ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುವ ಅಭ್ಯಾಸ ನನಗೆ ಮೊದಲಿನಿಂದಲೂ ಇಲ್ಲ. ಹಾಗಾಗಿ ಸುಮ್ಮನೇ ಇದ್ದೀನಿ ಅನ್ಸುತ್ತೆ. ಒರಟ ಭಾಗ ಎರಡು ಯೋಜನೆ ಸಿದ್ಧವಾಗಿದೆ. ಶ್ರೀ ಮತ್ತು ನನ್ನ ಕಾಂಬಿನೇಶನ್ ನಲ್ಲಿ ಮತ್ತೊಮ್ಮೆ ಬರಲು ಸಿದ್ಧರಾಗ್ತಿದ್ದೇವೆ. ಸ್ಕ್ರಿಪ್ಟ್ ವರ್ಕ್ ಕಂಪ್ಲೀಟಾಗಿದೆ. ಮೊದಲಾರ್ಧದ ಸಂಭಾಷಣೆ ಕೂಡ ಪೂರ್ತಿಯಾಗಿದೆ. ಸೆಕೆಂಡ್ ಹಾಫ್ ಕೆಲಸ ನಡೀತಾ ಇದೆ. ಕೊರೊನಾ ಕೋಲಾಹಲ ಎಲ್ಲ ಸಂಪೂರ್ಣವಾಗಿ ಕಡಿಮೆಯಾದ ಮೇಲೆ ಒರಟ ಪಾರ್ಟ್ ಸೆಕೆಂಡನ್ನು ದೊಡ್ಡದಾಗಿ ಯೋಜನೆ ಹಾಕುತ್ತಿದ್ದೇವೆ” ಎಂದು ಹೊಸ ಸುದ್ದಿ ನೀಡಿದರು ನಾಯಕ ಪ್ರಶಾಂತ್.

`ಒರಟ ಐ ಲವ್ ಯೂ..’ ಸಿನಿಮಾ ಬಂದು ಈಗಾಗಲೇ ಹದಿಮೂರು ವರ್ಷಗಳಾಗಿವೆ. ಇದರ ನಡುವೆ ನನ್ನದೊಂದಿಷ್ಟು ಸಿನಿಮಾಗಳು ಬಂದಿವೆ. ಶ್ರೀ ನಿರ್ದೇಶನದಲ್ಲಿಯೂ ಒಂದಷ್ಟು ಚಿತ್ರಗಳು ಬಂದಿವೆ. ಆದರೆ ಇಬ್ಬರು ಜತೆ ಸೇರಿ ಮತ್ತೊಂದು ಚಿತ್ರ ಮಾಡಿರಲಿಲ್ಲ. ಸಾಮಾನ್ಯವಾಗಿ ಪಾರ್ಟ್ ಟು ಸಿನಿಮಾಗಳನ್ನು ಮಾಡುವುದು ರಿಸ್ಕ್ ಎನ್ನಲಾಗುತ್ತದೆ. ಆದರೆ ಇತ್ತೀಚೆಗೆ ಸೀರೀಸ್ ಚಿತ್ರಗಳು ಚೆನ್ನಾಗಿ ಓಡುತ್ತಿವೆ. ಹಾಗಾಗಿ ನಮಗೂ ಈಗ ಸಮಯ ಕೂಡಿ ಬಂದಿದೆ ಎಂದುಕೊಂಡಿದ್ದೇವೆ. ಒರಟ ನೋಡಿದವರಿಗೆ ಖಂಡಿತವಾಗಿ ನಿರೀಕ್ಷೆಗಳು ಇರುತ್ತವೆ ಎಂದು ಗೊತ್ತು. ಆ ನಿರೀಕ್ಷೆಗೆ ಯಾವುದೇ ಕೊರತೆ ಉಂಟಾಗದ ಹಾಗೆ ಕತೆ ಮಾಡಿದ್ದೇವೆ. ಇದರಲ್ಲಿ ಇನ್ನೊಂದು ರೀತಿಯ ಒರಟನನ್ನು ನೋಡಬಹುದು. ಹೀಗೂ ಇರಬಹುದಾ ಎಂದು ಅಚ್ಚರಿ ಪಡಬಹುದು. ಇನ್ನಷ್ಟು ವಿವರ ಮುಂದಿನ ದಿನಗಳಲ್ಲಿ ನಿಮ್ಮ ಜತೆಯಲ್ಲೇ ಹಂಚಿಕೊಳ್ಳಲಿದ್ದೇವೆ ಎಂದಿದ್ದಾರೆ ಪ್ರಶಾಂತ್. ಈಗ ಸೃಷ್ಟಿಯಾಗಿರುವ ಹೊಸ ಸಿನಿಮಾ ಪ್ರೇಕ್ಷಕರಿಗೆ ಒರಟ ಸಿನಿಮಾ ಗೊತ್ತಿಲ್ಲದೆಯೂ ಇರಬಹುದು. ಆದರೆ “ಯಾರೋ.. ಕಣ್ಣಲ್ಲಿ ಕಣ್ಣನಿಟ್ಟು ಮನಸಿನಲ್ಲಿ ಮನಸನಿಟ್ಟು ನನ್ನ ಒಳಗಿಂದಾನೇ ನನ್ನ ಕದ್ದೋರ್ಯಾರೂ..” ಹಾಡು ಎಲ್ಲರಿಗೂ ನೆನಪಿದ್ದೇ ಇರುತ್ತದೆ. ಅಂಥದೇ ಮ್ಯೂಸಿಕಲ್ ಕಾಂಬಿನೇಶನ್ ಕೂಡ ಚಿತ್ರದಲ್ಲಿರಲಿ ಎನ್ನುವುದು ಸಿನಿಮಾ ಪ್ರಿಯರ ಆಶಯ.

Recommended For You

Leave a Reply

error: Content is protected !!