ಇಂದು ಬೆಳಗ್ಗಿನಿಂದ ಎಲ್ಲ ಕಡೆ ಶ್ರೀರಾಮಚಂದ್ರ ದೇವರ ಚಿತ್ರಗಳೇ ರಾರಾಜಿಸುತ್ತಿದ್ದವು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವುದರ ಸಹಜ ಖುಷಿಯನ್ನು ಜನಗಳು ಹೀಗೆ ವ್ಯಕ್ತಪಡಿಸುತ್ತಿದ್ದರು. ಆದರೆ ಕೆಲವರು ತಮ್ಮ ಕಲಾಕೃತಿಯನ್ನು ಮೋದಿಗೆ ಸಮರ್ಪಿಸುವ ಭರದಲ್ಲಿ ಶ್ರಿರಾಮನನ್ನೇ ಮೋದಿ ಕೈ ಹಿಡಿದು ಕರೆದೊಯ್ಯುವಂಥ ಅರ್ಥಹೀನ ಚಿತ್ರಗಳನ್ನು ನೋಡಿ ಮನಸು ಕೆಡಿಸಿಕೊಂಡು ಕುಳಿತಿರಬೇಕಾದರೆ ಕಂಡಿದ್ದು ಈ ಫೊಟೋಗಳು. ಕಳೆದ ವರ್ಷ ತೆರೆಕಂಡ `ವಿರುಪಾ’ ಎನ್ನುವ ಮಕ್ಕಳ ಚಿತ್ರದ ನಿರ್ದೇಶಕ ಪುನೀಕ್ ಶೆಟ್ಟಿ ಫೊಟೋಗ್ರಫಿಗಳು ಇವು.
ಕಳೆದ ಹದಿನೈದು ವರ್ಷಗಳಿಂದ ಸ್ಥಿರಚಿತ್ರ ಛಾಯಾಗ್ರಾಹಕರಾಗಿರುವ ಪುನೀಕ್ ಶೆಟ್ಟಿ ಮಕ್ಕಳ ಫೊಟೋ ತೆಗೆಯುವುದರಲ್ಲಿ ನಿಸ್ಸೀಮರು. ಮಂಗಳೂರಿನ ಬಿಜೈ ಎನ್ನುವಲ್ಲಿ ಇವರ ಸ್ಟುಡಿಯೋದ ತುಂಬ ಮುದ್ದುಮುದ್ದು ಮಕ್ಕಳವೇ ಬಿಂಬ. ಅದರಲ್ಲಿಯೂ ತಮ್ಮ ಸ್ನೇಹಿತ ಸೂರಜ್ ಶೆಟ್ಟಿಯವರ ಪುತ್ರ ಗಗನ್ ಶೆಟ್ಟಿ ಎನ್ನುವ ಈ ಮುದ್ದು ಹುಡುಗನೇ ಪ್ರಮುಖ ಮಾಡೆಲ್! ಪುನೀಕ್ ಶೆಟ್ಟಿ ತಮ್ಮ ಛಾಯಾಗ್ರಹಣಕ್ಕೆ ಪ್ರಶಸ್ತಿಗಳು ಬಂದಿವೆ ಎಂದರು. ನಮ್ಮೆಲ್ಲರ ಮನಸೆಳೆಯುವ ಅವರ ಕಲೆಗೆ ಖಂಡಿತವಾಗಿ ಇನ್ನಷ್ಟು ಪ್ರಶಸ್ತಿಗಳು ಸಲ್ಲಲೇಬೇಕು. ಅವರ ಕಲೆಗೆ ಅಭಿನಂದನೆಗಳು.