ಹಿರಿಯ ನಟ ಶೇಖರ ಭಂಡಾರಿ ಸಾವು

ನಟ, ಸಾಹಿತಿ ಶೇಖರ ಭಂಡಾರಿ ನಿಧನರಾಗಿದ್ದಾರೆ. ಇತ್ತೀಚೆಗಷ್ಟೇ ಕೋವಿಡ್ ಬಾಧಿತರಾಗಿ ಸಾವನ್ನಪ್ಪಿದ ಕಲಾವಿದ ಹುಲಿವಾನ್ ಗಂಗಾಧರಯ್ಯ ಅವರ ಬಳಿಕ ಕನ್ನಡ ಸಿನಿಮಾ ಲೋಕದಿಂದ ಕೊರೊನಾದಿಂದಾಗಿ ಸಾವು ಕಾಣುತ್ತಿರುವ ಮತ್ತೋರ್ವ ನಟ ಇವರಾಗಿದ್ದಾರೆ.

ಶೇಖರ ಭಂಡಾರಿಯವರು ಕಾರ್ಕಳ ಘಟ್ಟದ ಮನೆ ಬಾಬು ಭಂಡಾರಿ ಮತ್ತು ಅಭಯಾ ದಂಪತಿಯ ಪುತ್ರನಾಗಿರುವ ಇವರು ವಿಜಯಾ ಬ್ಯಾಂಕ್ ನ ಮಾಜಿ ಉದ್ಯೋಗಿ. ವಿ ರವಿಚಂದ್ರನ್ ನಿರ್ದೇಶಿಸಿ, ನಟಿಸಿದ್ದ ‘ಓ ನನ್ನ ನಲ್ಲೆ', ವಿ ಮನೋಹರ್ ನಿರ್ದೇಶನದಲ್ಲಿ ಶಿವರಾಜ್ ಕುಮಾರ್ ನಟನೆಯ 'ಇಂದ್ರ ಧನುಷ್’ ಸೇರಿದಂತೆ ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸುಮಾರು 40ಕ್ಕೂ ಅಧಿಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಭಂಡಾರಿಯವರು ‘ಮಸ್ತಕದಿಂದ ಪುಸ್ತಕಕ್ಕೆ’ ಹೆಸರಿನ ಕೃತಿಯ ಮೂಲಕ ಜಾಗೃತಿ ಮೂಡಿಸುವ ಪ್ರಾಸ ಕವನಗಳನ್ನು ಬರೆದು ಕರಾವಳಿಯಲ್ಲಿ ಜನಪ್ರಿಯರಾಗಿದ್ದರು. ಈ `ಪ್ರಾಸ ಭಂಡಾರ’ ಪುಸ್ತಕವು ಮೂರು ಭಾಗಗಳಾಗಿ ಬಿಡುಗಡೆಯಾಗಿವೆ. ಶೇಖರ ಭಂಡಾರಿಯವರ ಸಿನಿಮಾ, ಸಾಹಿತ್ಯದ ಸೇವೆಯನ್ನು ಗಮನಿಸಿ ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಕಾಡಿದ ಕೊರೊನ

ಸಿನಿಕನ್ನಡದ ಜತೆಗೆ ಮಾತನಾಡಿದ ಹಿರಿಯ ನಿರ್ದೇಶಕ ಸುಧಾಕರ ಬನ್ನಂಜೆಯವರು ಬಗ್ಗೆ ಮಾತನಾಡುತ್ತಾ, “ನನ್ನ ನಿರ್ದೇಶನದ ಸಾಕಷ್ಟು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಅವರ ನಟಿಸಿರುವ `ಗಂಟ್ ಕಲ್ವೆರ್’ ಎನ್ನುವ ನನ್ನದೇ ಚಿತ್ರ ಚಿತ್ರೀಕರಣ ಪೂರ್ತಿಯಾಗಿದ್ದು, ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಈ ಸಂದರ್ಭದಲ್ಲಿ ಅವರ ಸಾವು ನನಗೆ ತುಂಬ ನೋವು ತಂದಿದೆ. ನಮ್ಮ ಸ್ನೇಹ ಸುಮಾರು ವರ್ಷಗಳದ್ದು. ನಾನು ಅಸೋಸಿಯೇಟ್ ಡೈರೆಕ್ಟರ್ ಆಗಿದ್ದ ದಿನಗಳಲ್ಲೇ ಅವರು ಕಲಾವಿದರಾಗಿ ನನಗೆ ಪರಿಚಿತರಾಗಿದ್ದರು. ಎಲ್ಲರೊಂದಿಗೂ ಸ್ನೇಹದಿಂದ ಕೂಡಿದ ವರ್ತನೆ ಅವರ ವಿಶೇಷತೆಯಾಗಿತ್ತು. ವಯಸ್ಸನ್ನು ತೋರಿಸಿಕೊಳ್ಳದಂಥ ವ್ಯಕ್ತಿತ್ವ, ದೇಹ ಪ್ರಕೃತಿ ಹೊಂದಿದ್ದ ಅವರನ್ನು ಕೊರೊನಾ ಮಾತ್ರ ಪೀಡಿಸುವಲ್ಲಿ ಯಶಸ್ವಿಯಾಗಿದ್ದು ದುರಂತ.

ಕಳೆದ ಒಂದು ವಾರದಿಂದ ಕೊರೊನಾ ಪೀಡಿತರಾಗಿ ಮಂಗಳೂರಿನ ಎಜೆ ಶೆಟ್ಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಕಳೆಯುತ್ತಿದ್ದ ಭಂಡಾರಿಯವರು ನಿನ್ನೆ ಕೊನೆಯುಸಿರೆಳೆದಿದ್ದಾರೆ. ಜ್ವರದ ಜತೆಗೆ ಶ್ವಾಸಕೋಶದಲ್ಲಿ ಕಫ ತುಂಬಿ ಉಸಿರಾಟದ ಸಮಸ್ಯೆ ಎದುರಿಸಿದ ಅವರಿಗೆ ನೀಡಲಾದ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ಶೇಖರ ಭಂಡಾರಿಯವರಿಗೆ ಎಪ್ಪತ್ತನಾಲ್ಕು ವರ್ಷ ವಯಸ್ಸಾಗಿದ್ದು, ಮೃತರು ಪತ್ನಿ ವಾರಿಜಾ ಮತ್ತು ಇಬ್ಬರು ಪುತ್ರಿಯರಾದ ಪ್ರೀತಿ, ಸ್ವಾತಿ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಕೊರೊನಾ ರೋಗಿಯಾಗಿದ್ದ ಕಾರಣ ಮೃತದೇಹದ ದರ್ಶನವನ್ನು ನಿಷೇಧಿಸಲಾಗಿದ್ದು, ಪತ್ನಿ ಮತ್ತು ಮಕ್ಕಳಿಗೆ ಪಿಪಿಇ ಕಿಟ್ ನೀಡಿ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದ್ದು ಸರ್ಕಾರಿ ನಿಯಮಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಿರುವುದಾಗಿ ತಿಳಿದು ಬಂದಿದೆ.

ಪತ್ನಿ ವಾರಿಜಾ ಜತೆಗೆ ಶೇಖರ್ ಭಂಡಾರಿ

Recommended For You

Leave a Reply

error: Content is protected !!
%d bloggers like this: