
ಮಾಲಾಶ್ರೀಯವರಂಥ ನಟಿ ಕನ್ನಡದಲ್ಲಿ ಬೇರೆ ಇಲ್ಲ. ಅವರವರ ಜಾಗದಲ್ಲಿ ಎಲ್ಲರಿಗೂ ಪ್ರತ್ಯೇಕವಾದ ಸ್ಥಾನ ಮಾನವಿದೆ. ಆದರೆ ಅಕ್ಷರಶಃ ಆಕ್ಷನ್ ಹೀರೋಯಿನ್ ಆಗಿ ಮೆರೆದ ನಟಿ ಕನ್ನಡದಲ್ಲಿ ಮತ್ತೊಬ್ಬರಿಲ್ಲ. ಇತ್ತೀಚೆಗೆ ಆಕ್ಷನ್ ಚಿತ್ರಗಳಿಂದ ಜನಪ್ರಿಯತೆ ಪಡೆಯುವ ಮೊದಲು ಅಷ್ಟೇ ದೊಡ್ಡ ಮಟ್ಟದಲ್ಲಿ ಸಾಂಸಾರಿಕ ಚಿತ್ರಗಳ ನಾಯಕಿಯಾದವರೂ ಹೌದು. ಮಾಲಾಶ್ರೀ ಕಾಲಘಟ್ಟದ ಇತರ ನಾಯಕಿಯರು ಪೋಷಕ ಪಾತ್ರಗಳಿಗೆ ಸೀಮಿತರಾಗುತ್ತಿರುವಾಗ ಈ ಲಾಕ್ಡೌನ್ ಸಂದರ್ಭದಲ್ಲಿಯೂ, ತಾವು ನಾಯಕಿಯಾಗಿರುವ ಹೊಸ ಚಿತ್ರದ ಮಾತುಕತೆ ಕೆಲಸಗಳು ನಡೆಯಿತೆಂದು ತಿಳಿಸಿರುವ ಅಪರೂಪದ ನಟಿ ಮಾಲಾಶ್ರೀ. ಹಾಗಾಗಿ ಮತ್ತೊಮ್ಮೆ ಮಾಲಾಶ್ರೀಗೆ ಮಾಲಾಶ್ರೀಯವರೇ ಸಾಟಿ ಎಂದು ನೆನಪಿಸುತ್ತಾ ಅವರ ಜನ್ಮದಿನದ ಸಂದರ್ಭದಲ್ಲಿ ಈ ವಿಶೇಷ ಸಂದರ್ಶನವನ್ನು ಸಿನಿಕನ್ನಡದ ಓದುಗರಿಗಾಗಿ ಸಮರ್ಪಿಸುತ್ತಿದ್ದೇವೆ.

ಮಾಲಾಶ್ರೀಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು
ತ್ಯಾಂಕ್ಸ್. ತುಂಬ ತ್ಯಾಂಕ್ಸ್ ನೆನಪಿರಿಸಿ ಫೋನ್ ಮಾಡಿದ್ದಕ್ಕೆ. ಆದರೆ ನಾನು ನಿಮ್ಮನ್ನು ಪಾರ್ಟಿಗೆ ಕರೆಯಲ್ಲ. ಆಕ್ಚುಯಲಿ ಪಾರ್ಟಿ ಮಾಡ್ತಾನೂ ಇಲ್ಲ. ಮನೇಲೇ ಇರ್ತೇವೆ ಈ ದಿನ.
ಪರ್ವಾಗಿಲ್ಲ. ಆದರೆ ರಾಮು ಅವರು ಏನು ಗಿಫ್ಟ್ ಕೊಡ್ತಿದ್ದಾರೆ ಅನ್ನೋದನ್ನು ಮಾತ್ರ ಹೇಳಿ?
ಓಹ್.. ಅದಿನ್ನೂ ನನಗೇನೇ ಗೊತ್ತಾಗಿಲ್ಲ. ಬಹುಶಃ ಸಂಜೆ ಹೊತ್ತಿಗೆ ಗೊತ್ತಾಗುತ್ತೆ ಅನ್ಸುತ್ತೆ. ಆಮೇಲೆ ಹೇಳ್ತೀನಿ ನಿಮಗೆ. ಬರ್ತ್ ಡೇ ಮನೇಲೆ, ಕುಟುಂಬದ ಜತೇಲೇ ಆಚರಿಸುತ್ತಿದ್ದೇನೆ. ಎಲ್ಲೂ ಹೊರಗಡೆ ಹೋಗುತ್ತಿಲ್ಲ. ಯಾವುದೇ ಪಾರ್ಟಿಯಲ್ಲಿ ಭಾಗಿಯಾಗುತ್ತಿಲ್ಲ. “ಸ್ಟೇ ಸೇಫ್ ಸ್ಟೇ ಹೆಲ್ತಿ” ಎನ್ನುವಂತೆ ಈ ಬಾರಿ ಮನೇಲೆ ಆಚರಣೆ.

ಇತ್ತೀಚೆಗೆ ಹೆಚ್ಚು ಹಳೆಯ ಫೊಟೋಸ್ ಪೋಸ್ಟ್ ಮಾಡ್ತಿದ್ದೀರಲ್ವ? ಏನು ಕಾರಣ?
ನೀವು ನನ್ನ ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡ್ತಿದ್ರೆ ನಿಮಗೆ ಗೊತ್ತಾಗುತ್ತೆ; ಅಲ್ಲಿ ಮೊದಲಿಂದಲೂ ಫ್ಯಾನ್ಸ್ ಎಲ್ಲ ನನ್ನಲ್ಲಿ ಹಳೆಯ ಫೊಟೋಸ್ ಕೇಳುತ್ತಿದ್ದರು. ಆದರೆ ನನಗೆ ಅದನ್ನೆಲ್ಲ ಮಾಡಲು ಸಮಯ ಸಿಗುತ್ತಿರಲಿಲ್ಲ. ಆದರೆ ಈಗ ಹೆಚ್ಚು ಮನೇಲೆ ಇರುವ ಕಾರಣ; ಹಳೆಯ ಫೊಟೋಸ್ ಎಲ್ಲ ಸ್ವಲ್ಪ ಹುಡುಕಾಡಿ ಟ್ವಿಟ್ಟರಲ್ಲಿ ಹಾಕ್ತಿದ್ದೇನೆ. ಬೇರೇನೂ ವಿಶೇಷ ಇಲ್ಲ.
ಲಾಕ್ಡೌನ್ ಟೈಮಲ್ಲಿ ಎಲ್ಲಿದ್ದಿರಿ?
ನಾನು ಬೆಂಗಳೂರಲ್ಲೇ ಇದ್ದೆ. ಫ್ಯಾಮಿಲಿ ಜತೆಗೆ ಹೆಚ್ಚು ಸಮಯ ಕಳೆದೆ. ಹೊಸ ರೆಸಿಪಿ ಟ್ರೈ ಮಾಡೋದು, ವರ್ಕೌಟ್ ಮಾಡೋದು, ಸ್ಕ್ರಿಪ್ಟ್ ಡಿಸ್ಕಶನಲ್ಲಿ ಪಾಲ್ಗೊಳ್ಳೋದು ಹೀಗೆ ಸಮಯ ಕಳೆದೆ. ಡಿಸ್ಕಶನ್ ಕಂಪ್ಲೀಟಾಗಿ ಚಿತ್ರರಂಗಕ್ಕೆ ಕಾಡಿರುವ ಕೊರೊನ ಸಮಸ್ಯೆ ಮುಗಿದ ಮೇಲೆ ಅದರ ಬಗ್ಗೆ ಅನೌನ್ಸ್ ಮಾಡೋಣ ಅಂತ ಇದ್ದೀನಿ.
ಮಗಳು ಸಿನಿಮಾರಂಗಕ್ಕೆ ಬರುವ ಆಸಕ್ತಿ ತೋರಿಸಿಲ್ವಾ?
ಅವಳು ಈಗ ಡಿಗ್ರಿ ಸ್ಟುಡೆಂಟ್. ಸದ್ಯ ಓದುತ್ತಿದ್ದಾಳೆ. ಸಿನಿಮಾ ಬಗ್ಗೆ ಹೇಳಬೇಕೆಂದರೆ ನನ್ನ ಸಿನಿಮಾ ಇಷ್ಟಪಡ್ತಾಳೆ. ಅವಳಾಗಿ ಹೀರೋಯಿನ್ ಆಗಬೇಕು ಅಂತಾ ಯಾವತ್ತೂ ಹಠ ಮಾಡಿಲ್ಲ. ಎಲ್ಲದಕ್ಕೂ ಟೈಮ್ ಬರುತ್ತೆ ಅಂತಾರಲ್ಲ? ಆಗ ಯಾರನ್ನೂ ತಡೆಯೋಕೆ ಆಗಲ್ಲ.

ಬಹುಶಃ ಬರ್ತ್‌ಡೇ ಬ್ಯುಸಿ ಇರಬಹುದು ಅನ್ಸುತ್ತೆ. ಹಾಗಾದರೆ ಇನ್ನೊಮ್ಮೆ ಡಿಟೇಲಾಗಿ ಮಾತನಾಡೋಣವೇ?
ಹೌದು.. ಬೆಳಗ್ಗಿನಿಂದ ತುಂಬ ಕಾಲ್ಸ್ ಬರುತ್ತಿವೆ. ಎಲ್ಲರೂ ಬರ್ತ್ ಡೇ ವಿಶ್ ಮಾಡ್ತಿದ್ದಾರೆ. ಪ್ರತಿಯೊಬ್ಬರಿಗೂ ಅಟೆಂಡ್ ಮಾಡಿ ತ್ಯಾಂಕ್ಸ್ ಹೇಳ್ತಾ ಇದ್ದೀನಿ. ಅಲ್ಲದೆ ನಾನು ಈಗ ಮಾರ್ಕೆಟ್‌ಗೆ ಹೋಗೋ ಪ್ಲ್ಯಾನ್ ಇದೆ. ನಿಮಗೆ ಮತ್ತೊಮ್ಮೆ ತ್ಯಾಂಕ್ಸ್. ಖಂಡಿತವಾಗಿ ಇನ್ನೊಮ್ಮೆ ಭೇಟಿ ಮಾಡಿ ಮಾತನಾಡೋಣ.
