ರಾಜು ದೇವಸಂದ್ರ ಚಿತ್ರಕ್ಕೆ ಆರವ್ ಸಂಗೀತದಾರಂಭ

ಹಂಸಲೇಖಾ ಅವರ ಶಿಷ್ಯ ಆರವ್ ರಿಷಿಕ್ ಇತ್ತೀಚೆಗೆ ತಮ್ಮ ಸಂಗೀತ ಸಂಯೋಜನೆಯ ಹಾಡುಗಳ ಮೂಲಕ ಹೆಚ್ಚು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಚಂದನವನದ ಯುವ ನಿರ್ದೇಶಕ ರಾಜು ದೇವಸಂದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 4ನೇ ಚಿತ್ರ ಇದು. ಅಕ್ಷತೆ, ಗೋಸಿಗ್ಯಾಂಗ್, ಕತ್ತಲೆ ಕಾಡು ಚಿತ್ರಗಳ ಬಳಿಕ ರಾಜು ಅವರು ನಿರ್ದೇಶಿಸಲಿರುವ ಇನ್ನೂ ಹೆಸರಿಡದ ಹೊಸ ಚಿತ್ರದ ಹಾಡುಗಳ ಕಂಪೋಸಿಂಗ್ ಕೆಲಸ ಆರವ್ ಅವರ ‘ರಾಗ ರಂಜಿನಿ’ ಸ್ಟುಡಿಯೋದಲ್ಲಿ ಆರಂಭಗೊಂಡಿತು.

ರಾಜು ದೇವಸಂದ್ರ ಅವರ ಈ ಹಿಂದಿನ ಮೂರು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಆರವ್ ರಿಷಿಕ್ ಅವರೇ ಈ ಚಿತ್ರಕ್ಕೂ ಸಂಗೀತ ನಿರ್ದೇಶಕರು. ಚಿತ್ರವನ್ನು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಹೀಗೆ ಐದು ಭಾಷೆಗಳಲ್ಲಿ ಹೊರತರಬೇಕು ಎನ್ನುವ ಕನಸು ನಿರ್ದೇಶಕರದ್ದು. ನಿರ್ದೇಶಕರ ಕನಸಿಗೆ ಕೈ ಜೋಡಿಸಿರುವ ನಿರ್ಮಾಪಕ ರಮೇಶ್ ಕೊಯಿರಾ ಅವರು ಚಿತ್ರದ ಛಾಯಾಗ್ರಾಹಕರು ಕೂಡ ಹೌದು. ಈಗಾಗಲೇ ಪ್ರಮೋದ್ ಬೋಪಣ್ಣ ಎನ್ನುವ ಕಲಾವಿದನನ್ನು ಇರಿಸಿಕೊಂಡು ‘ಅಂದುಕೊಂಡಂತೆ’ ಎನ್ನುವ ಚಿತ್ರ ನಿರ್ಮಿಸಿರುವ ರಮೇಶ್ ಕೊಯಿರಾ ಸುಮಾರು ಎರಡೂವರೆ ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ಧನು, ಜರ್ನಿ, ಜಗ್ಗಿ, ಗಲ್ಲಿ ಬೇಕರಿ, ಗಂಡ ಊರಿಗೆ ಹೋದಾಗ ಮೊದಲಾದ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ರಮೇಶ್ ಅವರಿಗೆ ಇದು 25ನೇ ಚಿತ್ರ. ಮುತ್ತುರಾಜ್, ಪಿಕೆಎಚ್ ದಾಸ್, ಮನೋಹರ್, ಬಿ ಎಲ್ ಬಾಬು, ಅಣಜಿ‌ ನಾಗರಾಜ್ ಮೊದಲಾದವರ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ರಮೇಶ್ ಕೊಯಿರಾ ಅವರು ಕನ್ನಡ ಮಾತ್ರವಲ್ಲದೆ ಕೊಂಕಣಿ ಮತ್ತು ಲಂಬಾಣಿ ಚಿತ್ರಗಳಿಗೂ ಕೆಲಸ ಮಾಡಿರುವುದು ವಿಶೇಷ. ರಾಜು ದೇವಸಂದ್ರ ಅವರದೇ ಕತ್ಲೆಕಾಡು ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ಕೊಯಿರಾ, ಇದೀಗ ಅವರ ಕಾಂಬಿನೇಶನ್ ಇಲ್ಲಿ ನಿರ್ಮಾಪಕರಾಗಿಯೂ ಮುಂದುವರಿದಿರುವುದು ಅವರಿಬ್ಬರ ಸ್ನೇಹಕ್ಕೆ ನಿದರ್ಶನವಾಗಿದೆ.

ಸ್ವಾರ್ಥ ರತ್ನ' ಚಿತ್ರದಲ್ಲಿ ನಾಯಕನಾಗಿ ನಟಿಸಿ 'ನಿನ್ನಯನಾ..’ ಹಾಡಿನ ಮೂಲಕ ಖ್ಯಾತಿ ಪಡೆದ ಆದರ್ಶ ಗುಂಡುರಾಜ್ ಈ ಚಿತ್ರದ ನಾಯಕ. ಸ್ವಾರ್ಥ ರತ್ನದ ಬಳಿಕ ಕಾದಲ್ ಪೈತ್ಯಂ' ಎನ್ನುವ ತಮಿಳು ಚಿತ್ರ, ಹಿಂದಿಯಲ್ಲಿ ಹೇ ದಿಲ್ ರಮ್ತಾ ಜೋಗಿ’ ಎನ್ನುವ ಸಿನಿಮಾಗಳಲ್ಲಿ ನಟಿಸಿರುವ ಆದರ್ಶ ಗುಂಡುರಾಜ್ ಮರಳಿ ಕನ್ನಡಕ್ಕೆ ಬಂದಿದ್ದಾರೆ. ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಡುವ ನಾಯಕನಾಗಿ ಆದರ್ಶ್ ಕಾಣಿಸಿಕೊಳ್ಳಲಿದ್ದು, ಚಿತ್ರದಲ್ಲಿ ಇವರಿಗೆ ಜೋಡಿಯಾಗಿ ನಟಿಸಲಿರುವ ಹುಡುಗಿಯ ಆಯ್ಕೆ ಇನ್ನೂ ಆಗಿಲ್ಲ. ಆದರೆ ಅಂಧೆಯ ಪಾತ್ರ ಇರುವುದರಿಂದ ಸಹಜವಾಗಿ ನಟನೆಗೆ ಹೆಚ್ಚು ಅವಕಾಶ ಇದೆ ಎನ್ನಬಹುದು. ಉಳಿದಂತೆ ಚಿತ್ರದಲ್ಲಿ ಪ್ರಮುಖ ಖಳನಾಗಿ ರುದ್ರ ಎನ್ನುವ ಪಾತ್ರದಲ್ಲಿ ನವೀನ್ ಶಕ್ತಿ ನಟಿಸಲಿದ್ದಾರೆ. ಮೂಲತಃ ರಂಗಭೂಮಿ ಕಲಾವಿದರಾಗಿರುವ ಅವರು ‘ರಂಗಾಭರಣ’ ತಂಡದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಇದು ಅವರಿಗೆ ಎರಡನೇ ಚಿತ್ರ. ಮತ್ತೋರ್ವ ಖಳ ಡೇವಿಡ್ ಎನ್ನುವ ಪಾತ್ರದಲ್ಲಿ ಪ್ರದೀಪ್ ಎನ್ನುವವರು ಅಭಿನಯಿಸಿದ್ದಾರೆ. ಅವರು ಈ ಹಿಂದೆ ಬಾಕ್ಸರ್, ಬಂಗಾರ ಸನ್ ಆಫ್ ಬಂಗಾರದ ಮನುಷ್ಯ, ಶತಾಯ ಗತಾಯ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಉಳಿದಂತೆ ಮಂಜು ಮಯೂರ್, ಪವನ್ ಕುಮಾರ್ ಕೊಲ್ಲೂರು ಮೊದಲಾದ ಕಲಾವಿದರು ತಂಡದಲ್ಲಿದ್ದಾರೆ. ಡೈರೆಕ್ಷನ್ ತಂಡದಲ್ಲಿ ಲೋಕೇಶ್ ಎ.ವಿ ಕೋಲಾರ ಇದ್ದಾರೆ. ಈ ಸಿನಿಮಾದಲ್ಲಿ ನಾಲ್ಕು ಫೈಟ್ ಗಳಿದ್ದು ಒಂದೇ ಒಂದು ಹಾಡು ಇದೆ. ಕೆಜಿಎಫ್ ಖ್ಯಾತಿಯ ವಿಕ್ರಂ ಮೋರ್ ಸಾಹಸ ಸಂಯೋಜನೆ ಮಾಡಲಿದ್ದು, ಚಿತ್ರದ ಏಕೈಕ ಹಾಡಿನ ರಚನೆ ಶಶಿಕರ ಪಾತೂರು ಅವರದಾಗಿದೆ. ಸಪ್ಟೆಂಬರ್‌ನಿಂದ ಚಿತ್ರೀಕರಣ ಆರಂಭಿಸಲಿರುವ ಚಿತ್ರತಂಡಕ್ಕೆ ಸಿನಿಕನ್ನಡದ ಶುಭಾಶಯಗಳು.

Recommended For You

Leave a Reply

error: Content is protected !!
%d bloggers like this: