ಮತ್ತೆ ಒಂದಾಗಲಿರುವ `ದಿಯಾ’ ಜೋಡಿ

ದಿಯಾ ಎನ್ನುವ ಒಂದೇ ಒಂದು ಸಿನಿಮಾ ಪೃಥ್ವಿ ಅಂಬಾರ್ ಎನ್ನುವ ನಟನನ್ನು ನ್ಯಾಶನಲ್ ಸ್ಟಾರ್ ಮಾಡಿತು ಎನ್ನಬಹುದು. ಅದಕ್ಕೆ ಅಮೆಜಾನ್ ಪ್ರೈಮಲ್ಲಿ ಚಿತ್ರ ನೋಡಿ ಮೆಚ್ಚಿದಂಥ ದೇಶದ ವಿವಿಧ ರಾಜ್ಯಗಳ ಜನರೇ ಸಾಕ್ಷಿ. ಅಂಥ ಪೃಥ್ವಿ ಅಂಬಾರ್ ಇವತ್ತು ತಮ್ಮ ಜನ್ಮದಿನಾಚರಣೆ ಮಾಡಿಕೊಂಡರು. ಕರಾವಳಿಯ ಪಡುಬಿದ್ರಿಯಲ್ಲಿ ಹೊಸ ಚಿತ್ರದ ಚಿತ್ರಕತೆಯ ಕೆಲಸದಲ್ಲಿ ತೊಡಗಿದ್ದ ಅವರು ಇದೀಗ ಬೆಂಗಳೂರಿಗೆ ಹೊರಟಿದ್ದಾರೆ. ಈ ಪಯಣದ ನಡುವೆ ಅವರಿಗೆ ಶುಭಕೋರಿ ಮಾತನಾಡಿದಾಗ ಸಿನಿಕನ್ನಡ.ಕಾಮ್ ಜತೆಗೆ ಅವರು ಹಂಚಿಕೊಂಡ ಹೊಸ ಸಿನಿಮಾ ವಿಚಾರಗಳು ಇಲ್ಲಿವೆ. ಜತೆಗೆ ಪಾಸಿಟಿವ್ ಪಿಕ್ಚರ್ ಯೂಟ್ಯೂಬ್ ಲಿಂಕ್ ನಲ್ಲಿರುವ ವಿಶೇಷ ಬರ್ತ್ ಡೇ ವಿಡಿಯೋ ನೋಡುವುದನ್ನು ಮರೆಯಬೇಡಿ.

ಜನ್ಮದಿನ ಹೇಗೆ ಆಚರಿಸಿಕೊಂಡಿರಿ?

ಈ ವರ್ಷ ಯಾರಿಗೂ ಅಷ್ಟೇನೂ ಸಂಭ್ರಮ ತಂದಿಲ್ಲ. ಹಾಗಾಗಿ ನಾನು ಕೂಡ ಆಚರಣೆಯ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಮದುವೆಯ ಬಳಿಕ ನನಗೆ ಇದು ಮೊದಲ ಜನ್ಮದಿನ! ಮಾತ್ರವಲ್ಲ, ಈ ವರ್ಷ ತೆರೆಕಂಡ `ದಿಯಾ’ ಸಿನಿಮಾ ನನ್ನ ಹದಿಮೂರು ವರ್ಷಗಳ ಚಿತ್ರರಂಗದಲ್ಲಿನ ಹೋರಾಟಕ್ಕೆ ಫಲ ನೀಡಿದೆ. ಹಾಗಾಗಿ ಮಧ್ಯರಾತ್ರಿ ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ. ನನ್ನ ಪತ್ನಿ ಪಾರುಲ್ ಶುಕ್ಲ ಐ ಫೋನ್ ಉಡುಗೊರೆ ನೀಡಿದ್ದಾಳೆ. ಎಲ್ಲ ಕಡೆಯಿಂದ ಫೋನ್ ಮೂಲಕ ಸಾಕಷ್ಟು ಶುಭಾಶಯಗಳು ಬಂದು ತಲುಪಿವೆ. ಪ್ರಸ್ತುತ ನಾನು ಈಗ ಉಡುಪಿಯ ಪಡುಬಿದ್ರಿ ಎಂಬಲ್ಲಿಂದ ಬೆಂಗಳೂರಿಗೆ ಹೊರಟಿದ್ದೇನೆ.

ಹೊಸ ಸಿನಿಮಾ ವಿಶೇಷಗಳೇನು?

ದಿಯಾ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದವರು ಮಾತ್ರವಲ್ಲ, ಲಕ್ಡೌನ್ ಸಂದರ್ಭದಲ್ಲಿ ಒಟಿಟಿಯಲ್ಲಿ ನೋಡಿದವರು ಕೂಡ ತುಂಬ ಮೆಚ್ಚಿದ್ದಾರೆ. ನಾನು ಅದಾಗಲೇ `ಫಾರ್ ರಜಿಸ್ಟ್ರೇಶನ್’ ಎನ್ನುವ ಹೊಸ ಚಿತ್ರಕ್ಕೆ ಸಹಿ ಮಾಡಿದ್ದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ಅದರ ಚಿತ್ರೀಕರಣ ಮುಗಿದಿರುತ್ತಿತ್ತು. ಆದರೆ ಲಾಕ್ಡೌನ್ ಇನ್ನಷ್ಟು ಹೊಸ ಚಿತ್ರಗಳ ಕುರಿತಾದ ಚರ್ಚೆಗೆ ವೇದಿಕೆ ನೀಡಿತು. ಹಾಗಾಗಿ ಹೊಸದಾದ ಮೂರು ಸಿನಿಮಾಗಳಿಗೆ ನಾಯಕನಾಗುವ ಅವಕಾಶ ಬಂದಿದೆ. ವೈವಿಧ್ಯತೆಯ ಪಾತ್ರಗಳನ್ನು ಆಯ್ಕೆ ಮಾಡುವತ್ತ ಗಮನ ಹರಿಸಿದ್ದೇನೆ. ಇದರ ನಡುವೆ ನಾನೇ ಒಂದು ಕತೆ ಬರೆದಿದ್ದೇನೆ. ಅದರ ಸ್ಕ್ರಿಪ್ಟ್ ಕೆಲಸ ಮಾಡಲೆಂದೇ ಪಡುಬಿದ್ರಿ ಸೇರಿಕೊಂಡಿದ್ದೆ.

ಮೂರು ಸಿನಿಮಾಗಳ ಮಾಹಿತಿ ಕೊಡುತ್ತೀರ?

ಒಂದು ಡಾಟರ್ ಆಫ್ ಪಾರ್ವತಮ್ಮ' ಚಿತ್ರದ ನಿರ್ಮಾಪಕ ಶಶಿಧರ್ ಕೆ.ಎಂ ನಿರ್ಮಿಸಿ, ನಿರ್ದೇಶಿಸುತ್ತಿರುವ ಚಿತ್ರಶುಗರ್ ಲೆಸ್’. ಅದನ್ನು ಖ್ಯಾತ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಮರ್ಪಿಸುತ್ತಿದ್ದು, ಇಂದು ಅದರ ಪೋಸ್ಟರ್ ಮೂಲಕ ಅವರು ನನಗೆ ಶುಭ ಕೋರಿರುವುದನ್ನು ನೀವು ನೋಡಿರಬಹುದು. ನಿಮ್ಮ ಮೂಲಕ ಅವರಿಗೆ ತ್ಯಾಂಕ್ಸ್. ಚಿತ್ರದ ಹೆಸೆರೇ ಹೇಳುವಂತೆ ಇದು ಡಯಾಬಿಟಿಕ್ ರೋಗಿಗಳ ಕುರಿತಾದ ಚಿತ್ರ. ಬಹುಶಃ ಇಂಥದೊಂದು ವಿಷಯದ ಮೇಲೆ ಇದುವರೆಗೆ ಸಿನಿಮಾಗಳು ಬಂದಿರುವ ಹಾಗಿಲ್ಲ. ಹಾಗಂತ ಗಂಭೀರವಾದ ಸಬ್ಜೆಕ್ಟ್ ಎಂದುಕೊಳ್ಳಬೇಕಿಲ್ಲ. ಧರ್ಮಣ್ಣ, ದತ್ತಣ್ಣ ಮೊದಲಾದ ಕಲಾವಿದರ ಪಾತ್ರಗಳ ಮೂಲಕ ಹಾಸ್ಯಾತ್ಮಕವಾಗಿ ಸಂಚರಿಸುವ ಕತೆ ಚಿತ್ರದಲ್ಲಿದೆ. ಒಂದು ರೀತಿ ಫೀಲ್ ಗುಡ್ ಚಿತ್ರ. ಆಗಸ್ಟ್ 24ಕ್ಕೆ ಸಿನಿಮಾದ ಮುಹೂರ್ತ ನೆರವೇರಲಿದೆ. ಚಿತ್ರೀಕರಣಕ್ಕೆ ಸ್ವಲ್ಪ ಗ್ಯಾಪ್ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಉಳಿದ ಎರಡು ಸಿನಿಮಾಗಳು ಕತೆಯ ವಿಚಾರದಲ್ಲಿ ಹೇಗೆ ವಿಭಿನ್ನವಾಗಿವೆ?

ಪ್ರಿಯಾಂಕ ಉಪೇಂದ್ರ ನಟನೆಯಲ್ಲಿ ತೆರೆಕಂಡ ದೇವಕಿ',ಮಮ್ಮಿ’ ಚಿತ್ರಗಳ ನಿರ್ದೇಶಕ ಲೋಹಿತ್ ಎಚ್ ನಿರ್ಮಾಣದ ಚಿತ್ರ. ಅದರ ಹೆಸರು ಲೈಫ್ ಈಸ್ ಬ್ಯೂಟಿಫುಲ್.' ಚಿತ್ರವನ್ನು ಮಲಯಾಳಂನ ಜೋಡಿ ನಿರ್ದೇಶಕರು ನಿರ್ದೇಶಿಸಲಿದ್ದಾರೆ. ಅವರು ಈ ಹಿಂದೆ ಜಾಹೀರಾತುಗಳ ನಿರ್ದೇಶಕರಾಗಿ ಗುರುತಿಸಿಕೊಂಡವರು. ಅದೊಂದು ಪ್ರಯೋಗಾತ್ಮಕ ಚಿತ್ರವಾಗಿದ್ದು ನಟನೆಗೆ ಒಳ್ಳೆಯ ಅವಕಾಶ ಇದೆ. ಇದೇ ಆಗಸ್ಟ್ 28ಕ್ಕೆ ಅದರ ಚಿತ್ರೀಕರಣ ಶುರುವಾಗಲಿದೆ. ಉಳಿದಂತೆ ನಾನು ಬರೆಯುತ್ತಿರುವ ಕತೆಗೆದಿಯಾ’ ಚಿತ್ರದ ಅಸೋಸಿಯೇಟ್ ದರ್ಶನ್ ಅಪೂರ್ವ ಚಿತ್ರಕತೆ ಬರೆದು ನಿರ್ದೇಶಿಸಲಿದ್ದಾರೆ. ಅದರಲ್ಲಿ ಖುಷಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಹುಶಃ ಅದರ ಚಿತ್ರೀಕರಣ ನವೆಂಬರಲ್ಲಿ ಆರಂಭವಾಗಬಹುದು. ಅದು ಕರಾವಳಿಯ ಕಡಲ ತೀರದಲ್ಲಿ ನಡೆಯುವ ಕತೆ. ಸ್ಥಳೀಯತೆಗೆ ಪ್ರಾಮುಖ್ಯತೆ ನೀಡಿರುವ ಕತೆಯಲ್ಲಿ ಪ್ರೀತಿ, ಪ್ರೇಮ, ಹಾಸ್ಯ ಎಲ್ಲವೂ ಇದೆ. `ಉಡುಪಿ ಕನ್ನಡ’ ಚಿತ್ರದ ವಿಶೇಷ ಆಕರ್ಷಣೆ ಎನ್ನಬಹುದು.

Recommended For You

Leave a Reply

error: Content is protected !!
%d bloggers like this: