ಮಾವನನ್ನು ಕಳೆದುಕೊಂಡ ರವಿಚಂದ್ರನ್

ಕನ್ನಡದ ಜನಪ್ರಿಯ ನಟ, ನಿರ್ದೇಶಕ ವಿ ರವಿಚಂದ್ರನ್ ಅವರ ಮಾವ ಅಂದರೆ ಪತ್ನಿ ಸುಮತಿಯವರ ತಂದೆ ನಿಧನರಾಗಿದ್ದಾರೆ. ಮಾಜಿ ಕೇಂದ್ರ ಸಚಿವರಾಗಿದ್ದ ಎ.ಎಮ್ ವೇಲು ಅವರು ಎರಡು ದಿನಗಳ ಹಿಂದೆ ಚೆನ್ನೈನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಎ.ಎಮ್ ವೇಲು ಅವರು ತಮಿಳು ನಾಡಿನ ಅರಕೋಣಂ ಲೋಕಸಭಾ ಕ್ಷೇತ್ರದಿಂದ 1980ರಲ್ಲಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಮೂಲಕ ಚುನಾವಣೆಗೆ ಸ್ಪರ್ಧಿಸಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಳಿಕ 1996ರಲ್ಲಿ ಮೂಪನಾರ್ ಅವರ ತಮಿಳು ಮಾಣಿಲ ಕಾಂಗ್ರೆಸ್ ಮೂಲಕ ಆಯ್ಕೆಯಾಗಿದ್ದರು. ವಯಸ್ಸಾಗಿದ್ದರೂ ಕೂಡ ಕ್ರಿಯಾಶೀಲರಾಗಿದ್ದ ವೇಲು ಅವರ ಸಾವಿಗೆ ಹೃದಯಾಘಾತವೇ ಕಾರಣ ಎನ್ನಲಾಗಿದೆ. ಈ ವರ್ಷದಲ್ಲಿ ನಾವು ದಿನಗೂಲಿ ಕಾರ್ಮಿಕರಿಂದ ಹಿಡಿದು ಉದ್ಯಮಿಗಳ ತನಕ ಸಾಕಷ್ಟು ಮಂದಿಯ ಅನಿರೀಕ್ಷಿತ ಸಾವಿಗೆ ಸಾಕ್ಷಿಯಾಗಿದ್ದೇವೆ. ಅದಕ್ಕೆ ಲಾಕ್ಡೌನ್ ಮತ್ತು ಅದರಿಂದಾದ ವೃತ್ತಿ ಮತ್ತು ಆರ್ಥಿಕ ನಷ್ಟಗಳೇ ಪ್ರಮುಖ ಕಾರಣವೆಂದು ತಿಳಿದು ಬಂದಿದೆ. ಎಂ.ಎ ವೇಲು ಅವರು ಕೂಡ ಹಲವಾರು ಬಸ್ಸುಗಳ ಮಾಲೀಕರಾಗಿ, ವಿದ್ಯಾ ಸಂಸ್ಥೆಗಳನ್ನು ನಡೆಸುವ ಮೂಲಕ ಹೆಸರಾಗಿದ್ದರು. ತಮ್ಮ ಊರಾದ ಶೊಲಿಂಗುರಲ್ಲಿ ಮೊದಲ ಚಿತ್ರ ಮಂದಿರವನ್ನು ಅವರು ತಮ್ಮ ಮಗಳು ಸುಮತಿ ಹೆಸರಲ್ಲಿ ಕಟ್ಟಿದ್ದರು. ಬಳಿಕ ‘ಸುಮತಿ ಸಿನಿಮಾಲ್’ ಮೂಲಕವೂ ಗಮನ ಸೆಳೆದಿದ್ದರು. ಆದರೆ ವೇಲು ಅವರ ಹೃದಯಾಘಾತಕ್ಕೆ ವಿವರವಾದ ಕಾರಣಗಳು ನಮಗೆ ಲಭ್ಯವಾಗಿಲ್ಲ.

ಅವರು ತಮ್ಮ ಮೊಮ್ಮಗಳ ಮದುವೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಚೆನ್ನೈನ ಶ್ರೀಮಂತರಲ್ಲೊಬ್ಬರಾಗಿದ್ದ ವೇಲು ಅವರಿಗೆ ರವಿಚಂದ್ರನ್ ಅವರೆಂದರೆ ವಿಶೇಷ ಅಭಿಮಾನ ಇತ್ತು. ಅದು ಮಗಳ ಗಂಡನೆಂದೋ, ಖ್ಯಾತ ನಟನೆಂದೋ ಮಾತ್ರ ಆಗಿರಲಿಲ್ಲ. ಬದಲಾಗಿ ರವಿಚಂದ್ರನ್ ಅವರ ಗುಣಕ್ಕೆ ಅವರು ಮನಸೋತಿದ್ದರು. ರವಿಚಂದ್ರನ್ ಸಿನಿಮಾದಲ್ಲಿ ಮಾತ್ರವಲ್ಲ, ನಿಜಕ್ಕೂ ಸ್ವಾಭಿಮಾನಿ. ಅವರು ಯಾವತ್ತಿದ್ದರೂ, “ಸಿನಿಮಾದಲ್ಲಿ ಸಾಲ ಮಾಡಿಕೊಂಡೆ, ಸಿನಿಮಾದಲ್ಲೇ ದುಡ್ಡು ಮಾಡುತ್ತೇನೆ” ಎಂದು ಪ್ರಯತ್ನಿಸಿದ್ದರೇ ವಿನಃ ಎಂದಿಗೂ ತಮ್ಮ ಮಾವನನ್ನು ನಿರ್ಮಾಣರಂಗಕ್ಕೆ ಕರೆಸಿಕೊಂಡವರಲ್ಲ. ಹಾಗಾಗಿಯೇ ತಮ್ಮ ಅಳಿಯನ ಶಿಸ್ತಿನ ಬಗ್ಗೆ ವೇಲು ಅವರಿಗೆ ವಿಶೇಷ ಅಕ್ಕರೆ ಇತ್ತು.

ತ್ರಿವಿಕ್ರಮ ಟೀಸರ್ ಬಿಡುಗಡೆ

ಇಂದು ಭಾನುವಾರ ರವಿಚಂದ್ರನ್ ಅವರ ಪುತ್ರ ವಿಕ್ರಮ್ ಜನ್ಮದಿನ. ಲಾಕ್ಡೌನ್ ಕಾರಣದಿಂದ ಸದ್ದೇ ಕಳೆದುಕೊಂಡ ಚಿತ್ರರಂಗಕ್ಕೆ `ತ್ರಿವಿಕ್ರಮ’ ಚಿತ್ರದ ಟೀಸರ್ ಮೂಲಕ ಹೊಸ ಕಳೆಯೊಂದಿಗೆ ಮರಳುವ ಯೋಜನೆ ಹಾಕಿದ್ದರು ವಿಕ್ರಮ್. ಆದರೆ ಅವರ ಉತ್ಸಾಹಕ್ಕೆ ಒಂದು ಮಟ್ಟಕ್ಕೆ ತೆರೆ ಬಿದ್ದಿದೆ. ಚಿತ್ರದ ನಿರ್ದೇಶಕ ಸಹನಾ ಮೂರ್ತಿಯವರ ಪ್ರಕಾರ ತಾತನ ನಿಧನದ ಸುದ್ದಿ ಕೇಳಿ ಚೆನ್ನೈಗೆ ಹೋಗಿದ್ದ ವಿಕ್ರಮ್ ಶುಕ್ರವಾರವೇ ಅಲ್ಲಿಂದ ವಾಪಾಸಾಗಿದ್ದಾರೆ. ಆದರೆ ಸಹಜವಾಗಿ ಜನ್ಮದಿನಾಚರಣೆ ಮಾಡಿಕೊಳ್ಳುತ್ತಿಲ್ಲ. ಆದರೆ ಟ್ರೇಲರ್ ಬಿಡುಗಡೆಗೆ ಈಗಾಗಲೇ ಆಟೊಮ್ಯಾಟಿಕ್ ಟೈಮ್ ಫಿಕ್ಸ್ ಮಾಡಲಾಗಿದ್ದು, ಅದು ಅದರ ಪಾಡಿಗೆ 11.30ಕ್ಕೆ ಬಿಡುಗಡೆಯಾಗಿದೆ. ಟೀಸರ್‌ ಗೆ ಸಿಗುವ ಪ್ರಶಂಸೆಗಳು ವಿಕ್ರಮ್ ಮತ್ತು ಒಟ್ಟು ರವಿಚಂದ್ರನ್ ಕುಟುಂಬಕ್ಕೆ ಮತ್ತೊಂದು ರೀತಿಯಲ್ಲಿ ಹೊಸ ಹುರುಪು ತುಂಬಲು ಕಾರಣವಾಗಲಿ ಎಂದು ಹಾರೈಕೆಗಳು.

Recommended For You

Leave a Reply

error: Content is protected !!
%d bloggers like this: