
ಮಕ್ಕಳ ಫೊಟೋಗಳನ್ನು ಆಕರ್ಷಕವಾಗಿ ತೆಗೆದು ಮನಸೆಳೆಯುವ ಯುವ ಛಾಯಾಗ್ರಾಹಕ, ನಿರ್ದೇಶಕ ಪುನೀಕ್ ಶೆಟ್ಟಿ ಇದೀಗ ಮತ್ತೆ ಗಮನ ಸೆಳೆದಿದ್ದಾರೆ. ಇತ್ತೀಚೆಗಷ್ಟೇ ಶ್ರೀರಾಮನ ವೇಷದಲ್ಲಿ ಮಗುವೊಂದರ ಚಿತ್ರ ಕ್ಲಿಕ್ಕಿಸಿದ್ದ ಪುನೀಕ್ ಶೆಟ್ಟಿ ಇದೀಗ ಗಣೇಶೋತ್ಸವದ ಪ್ರಯುಕ್ತ ಪುಟ್ಟ ಮಗುವೊಂದು ಸಂಭ್ರಮದಲ್ಲಿ ಭಾಗಿಯಾಗಿರುವುದನ್ನು ತಮ್ಮ ಛಾಯಾಚಿತ್ರ ಕಲೆಯಲ್ಲಿ ಅದ್ಭುತವಾಗಿ ಮೂಡಿಸಿದ್ದಾರೆ.

ಚಿತ್ರದಲ್ಲಿರುವುದು ಒಂಬತ್ತು ತಿಂಗಳ ಮಗು. ಮಗುವಿನ ಹೆಸರು ಗ್ರಂಥ. ಎಷ್ಟೇ ಪುಟ್ಟ ಮಕ್ಕಳಾದರೂ ಅದರ ಭಾವಗಳು ಪುನೀಕ್ ಶೆಟ್ಟಿಗೆ ಸ್ವಂತ! ಯಾಕೆಂದರೆ ಅಷ್ಟು ಫೊಟೊಜೆನಿಕ್ ಆಗಿ ತೋರಿಸುವ ಕಲೆ ಇವರಲ್ಲಿದೆ.

ಪರಿಸರ ಸ್ನೇಹಿ ಮಣ್ಣಿನ ಗಣೇಶ, ಅದರ ಮುಂದೆ ಒಂದಷ್ಟು ಫಲ ಕಾಣಿಕೆ ಮತ್ತು ದೀಪ,ಅಗರ ಬತ್ತಿ ಮತ್ತು ದೇವರೇ ಇಳಿದು ಬಂದಂಥ ಮಗುವಿನ ನಗು! ಇವಿಷ್ಟನ್ನು ಇರಿಸಿಕೊಂಡು ಪುನೀಕ್ ಶೆಟ್ಟಿ ಹಾಕಿಕೊಟ್ಟ ಚೌಕಟ್ಟು, ಅಂದಗೊಳಿಸಿದೆ ದುಪ್ಪಟ್ಟು.

ಅಂದಹಾಗೆ ಮಗು ಗ್ರಂಥ ಚಿಪ್ಪಾರು ಗುತ್ತು ಪ್ರಜ್ಞಾ ಮತ್ತು ಚರಣ್ ಆಳ್ವ ದಂಪತಿಯ ಪುತ್ರಿ. ಕನ್ನಡದಲ್ಲಿ `ವಿರುಪಾ’ ಎನ್ನುವ ಮಕ್ಕಳ ಚಿತ್ರ ನೀಡಿರುವ ಪುನೀಕ್ ಶೆಟ್ಟಿಯ ಈ ಛಾಯಾಗ್ರಹಣದ ಬಗ್ಗೆ ಈಗಾಗಲೇ ವ್ಯಾಪಕ ಪ್ರಶಂಸೆ ಆರಂಭವಾಗಿದೆ.


