ಬಹುಶಃ ಒಬ್ಬ ಗಾಯಕನಿಗಾಗಿ ನಮ್ಮ ದೇಶ ಈ ಮಟ್ಟದಲ್ಲಿ ಮಿಡಿದಿರುವುದು ಇದೇ ಪ್ರಥಮ ಎನ್ನಬಹುದು. ತಮ್ಮನ್ನು ನಾಸ್ತಿಕ ಎಂದು ಕರೆದುಕೊಳ್ಳುವ ಪದ್ಮಭೂಷಣ ಕಮಲಹಾಸನ್ ಅವರಿಂದ ಹಿಡಿದು ಮೆಗಾಸ್ಟಾರ್ ಚಿರಂಜೀವಿ ತನಕ ಪ್ರತಿಯೊಬ್ಬರು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸುಧಾರಣೆಯಾಗಲೆಂದು ಪ್ರಾರ್ಥಿಸಿದ್ದಾರೆ. ಅದಕ್ಕೆ ಕಾರಣ ಎಸ್ಪಿಬಿ ಎನ್ನುವ ಗಾಯಕ ಮಾತ್ರವಲ್ಲ, ಅವರ ಸರಳ, ವಿರಳ ವ್ಯಕ್ತಿತ್ವ ಕೂಡ ಹೌದು ಎನ್ನುವುದನ್ನು ಮರೆಯುವಂತಿಲ್ಲ. ಇದರ ನಡುವೆ ಅವರು ದಾಖಲಿಸ್ಪಟ್ಟಿರುವ ಹೈದರಾಬಾದ್‌ನ `ಎಂಜಿಎಂ ಹೆಲ್ತ್‌ಕೇರ್’ನಿಂದ ಸಂಸ್ಥೆಯ ಸಹನಿರ್ದೇಶಕಿ ಅಂತಾರಾಷ್ಟ್ರೀಯ ತಜ್ಞರ ಸಹಾಯವನ್ನು ಬಳಸಿಕೊಳ್ಳುತ್ತಿರುವುದಾಗಿ ಮಾಧ್ಯಮ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಮಾತಿನಲ್ಲೇ ಕಣ್ಣೀರಾದ ಎಸ್.ಪಿ ಚರಣ್
ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಪುತ್ರ ಚರಣ್ ಅವರು ತಂದೆಯ ಯೂಟ್ಯೂಬ್ ವಾಹಿನಿ ಮೂಲಕ ನಿತ್ಯವೂ ಅವರ ಆರೋಗ್ಯದ ಬಗ್ಗೆ ನೇರವಾಗಿ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಬಹುಶಃ ತಂದೆಯ ಆಕಾಂಕ್ಷೆಯಂತೆ ಅವರು ಕೂಡ ಅನಾರೋಗ್ಯ ಅಷ್ಟೇನೂ ದೊಡ್ಡ ಮಟ್ಟದಲ್ಲಿಲ್ಲ. ಚಿಕಿತ್ಸೆಯಲ್ಲಿದ್ದರೂ ಸಹ ನನ್ನ ತಂದೆ ಸುಧಾರಿಸಿಕೊಳ್ಳುತ್ತಿರುವುದನ್ನು ನಾನು ಕಾಣುತ್ತಿದ್ದೇನೆ. ಅವರು ಸಂಪೂರ್ಣವಾಗಿ ಗುಣಮುಖರಾಗುತ್ತಾರೆ ಎನ್ನುವ ಭರವಸೆ ಇದೆ ಎಂದೇ ವರದಿ ನೀಡುತ್ತಿದ್ದರು. ಯಾಕೆಂದರೆ ಬಾಲಸುಬ್ರಹ್ಮಣ್ಯಂ ಅವರಿಗೂ ಅಭಿಮಾನಿಗಳನ್ನು ಆತಂಕದಲ್ಲಿರಿಸುವುದು, ಸ್ನೇಹಿತರಿಗೆ ಚಿಂತೆ ನೀಡುವುದು, ಯಾರದೋ ಕರುಣೆಗೆ ಒಳಪಡುವುದು ಇಷ್ಟವಿರಲಿಲ್ಲ. ಅದೇ ಕಾರಣದಿಂದಲೇ ಆಸ್ಪತ್ರೆಗೆ ದಾಖಲಾಗುವಾಗ ಹೇಗೆ ಧೈರ್ಯದಿಂದ ಮಾತನಾಡಿ ಮಾಹಿತಿ ನೀಡಿದ್ದರೋ, ಅಲ್ಲಿ ಸೇರಿಕೊಂಡ ಮೇಲೆಯೂ ” ನಾನು ಚೆನ್ನಾಗಿದ್ದೇನೆ ಯಾರೂ ಫೋನ್ ಮಾಡುವ ತೊಂದರೆ ತೆಗೆದುಕೊಳ್ಳಬೇಡಿ” ಎಂದೇ ಹೇಳಿದ್ದರು. ಮಾತ್ರವಲ್ಲ, ವೆಂಟಿಲೇಟರ್‌ಗೆ ಬದಲಾಯಿಸುವಾಗಲೂ ತಂಬ್ಸ್ ಅಪ್ ಮಾಡಿ ತೋರಿಸಿ ಉಳಿದವರಿಗೆ ಧೈರ್ಯ ತುಂಬಿದ್ದರು. ಆದರೆ ಚರಣ್ ಅವರು ನಿನ್ನೆ ಲೈವ್ ಬಂದಾಗ ತಮ್ಮ ತಂದೆಗಾಗಿ ಪ್ರಪಂಚದಾದ್ಯಂತ ತೋರಿಸುತ್ತಿರುವ ಆತಂಕ, ಕಾಳಜಿ ಮತ್ತು ಚಿತ್ರರಂಗದವರು ಸಂಜೆ ಆರು ಗಂಟೆಗೆ ಹಮ್ಮಿಕೊಂಡಿರುವ ವಿಶೇಷ ಪ್ರಾರ್ಥನೆಗೆ ಕೃತಜ್ಞತೆ ಹೇಳಲು ಪದಗಳಿಲ್ಲ ಎನ್ನುವ ಸಂದರ್ಭದಲ್ಲಿ ಅವರು ಗದ್ಗದಿತರಾಗಿ ಕಣ್ಣೀರು ತುಂಬಿಕೊಂಡರು.
ವಿದೇಶೀ ತಜ್ಞರಿಂದಲೂ ವಿಶೇಷ ಪ್ರಯತ್ನ
ಈ ಪ್ರಾರ್ಥನೆಗಳು ಖಂಡಿತವಾಗಿ ನಿರುಪಯುಕ್ತವಾಗದು. ನಿಮ್ಮ ಪ್ರಾರ್ಥನೆ ನಮ್ಮ ಕುಟುಂಬಕ್ಕೆ ಧೈರ್ಯ ನೀಡಿವೆ. ವಂದನೆಗಳು ಎಂದು ಚರಣ್ ಹೇಳಿದ್ದಾರೆ. ಅಲ್ಲಿಗೆ ಚರಣ್ ಅವರಲ್ಲಿ ಅದುವರೆಗೆ ಕಂಡಂಥ ಭರವಸೆಗಳು ಅಳಿದುಹೋಗುತ್ತಿರುವುದು ಸ್ಪಷ್ಟವಾಗಿತ್ತು. ಅವರೇ ನಮ್ಮೆಲ್ಲ ಪ್ರಾರ್ಥನೆಗಳಿಂದ ತುಸು ಧೈರ್ಯ ಪಡೆದಂತಿದ್ದರು. ಆದರೆ ನಿನ್ನೆ ರಾತ್ರಿ ಎಂಜಿಎಂ ಹೆಲ್ತ್ ಕೇರ್ ನೀಡಿರುವ ಎಸ್ ಪಿಬಿಯವರ ಆರೋಗ್ಯದ ಕುರಿತಾದ ಮಾಹಿತಿಯ ಪ್ರಕಾರ ಸಂಸ್ಥೆಯು ಇನ್ನಷ್ಟು ಪ್ರಯತ್ನ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ತಮ್ಮ ಆಸ್ಪತ್ರೆಯ ತಂಡವು ದೇಶ ಮತ್ತು ವಿದೇಶಗಳ ವೈದ್ಯಕೀಯ ಪರಿಣಿತರ ಜತೆಗೆ ಸೇರಿಕೊಂಡು ಅವರನ್ನು ಗುಣಮುಖರಾಗಿಸುವ ಪ್ರಯತ್ನ ನಡೆಸಿರುವುದಾಗಿ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಎಲ್ಲೆಲ್ಲೂ ಇವರಿಗೆ ಅಭಿಮಾನಿಗಳೇ..!
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನಿನ್ನೆ ಇಂಥದೊಂದು ಪ್ರಾರ್ಥನೆಗೆ ಕರೆ ನೀಡಿದವರಲ್ಲಿ ತಮಿಳು ಸಿನಿಮಾ ನಿರ್ದೇಶಕ ಪದ್ಮಶ್ರೀ ಭಾರತಿ ರಾಜ ಪ್ರಮುಖರು. ಪುಟ್ಟಣ್ಣ ಕಣಗಾಲ್ ಶಿಷ್ಯರಾಗಿರುವ ಭಾರತಿರಾಜ ಅವರು ಚಿತ್ರರಂಗಕ್ಕೆ ಬರುವ ಮೊದಲೇ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಸ್ನೇಹಿತರು. ಭಾರತಿರಾಜ ಅವರ ನಾಟಕಗಳಿಗೆ ಹಿನ್ನೆಲೆ ಗಾಯಕರಾಗಿ ಹಾಡಿರುವ ಎಸ್ಪಿಬಿಯವರು, ಭಾರತಿರಾಜ ಅವರಿಗೆ ಚಿತ್ರರಂಗ ಪ್ರವೇಶಿಸಲು ಸಹಾಯವಾಗಿದ್ದರು. ಅವರಿಗಷ್ಟೇ ಅಲ್ಲ, ನಮ್ಮ ದೇಶದ ಶ್ರೇಷ್ಠ ಸಂಗೀತ ನಿರ್ದೇಶಕ ಎನಿಸಿಕೊಂಡಿರುವ ಇಳಯರಾಜಾ ಅವರನ್ನು ಕೂಡ ಸಿನಿಮಾ ಸಂಗೀತ ಲೋಕಕ್ಕೆ ಪರಿಚಯಿಸಿದವರು ಎಸ್ಪಿ ಬಾಲಸುಬ್ರಹ್ಮಣ್ಯಂ. ನಿನ್ನೆ ನಡೆಸಲಾದ ಜೂಮ್ ಕಾಲ್ ಪ್ರಾರ್ಥನೆಯಲ್ಲಿ ನಮ್ಮ ಕನ್ನಡದ ಬಿ ಸರೋಜಾದೇವಿಯವರು ಸೇರಿದಂತೆ ಗಾಯಕಿ ಕೆಎಸ್ ಚಿತ್ರಾ, ಮನು, ನಟ ಶರತ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.
ಬಾಲಸುಬ್ರಹ್ಮಣ್ಯಂ ಅವರು ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಸ್ಟಾರ್ ನಟರಿಗೆ ಹಾಡಿದ್ದು, ಅವರ ಹಾಡುಗಳಿಗೆ ಎಲ್ಲರೂ ಮನಸೋತಿರುವ ಕಾರಣ ಅಸಂಖ್ಯಾತ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ಕಮಲ ಹಾಸನ್ ಸೇರಿದಂತೆ ಮಲಯಾಳಂನಲ್ಲಿಯೂ ಹಾಡಿ ಗುರುತಿಸಿಕೊಂಡವರು ಎಸ್‌ಪಿಬಿ. ಸುಮಾರು ಐದೂವರೆ ದಶಕಗಳಿಂದ ಹಿಟ್ ಹಾಡುಗಳನ್ನೇ ನೀಡುತ್ತಾ ಬಂದಿರುವ ಕಾರಣ, ಇಂದು ಬದುಕಿರುವ ಎಲ್ಲ ಜಮಾನದ ವ್ಯಕ್ತಿಗಳು ಕೂಡ ತಮ್ಮ ಯೌವನದ ಪ್ರಭಾವಯುತ ಪ್ರೇಮಗೀತೆಗಳಲ್ಲಿ ಎಸ್ಪಿಬಿಯವರನ್ನೇ ನೆನಪಿಸಿಕೊಳ್ಳುತ್ತಾರೆ. ಹಾಗಾಗಿ ಬಾಲಸುಬ್ರಹ್ಮಣ್ಯಂ ಅವರ ಅನಾರೋಗ್ಯವು ನಮ್ಮ ಬದುಕಿನ ಒಂದು ಪ್ರಮುಖ ಘಟ್ಟವನ್ನೇ ಐಸಿಯು ಸೇರಿಸಿದಂತಾಗಿರುವುದು ಸುಳ್ಳಲ್ಲ. ನಾಳೆ ಹುಟ್ಟಲಿರುವ ನಾಯಕನಿಗೂ ಧ್ವನಿಯಾಗಬಲ್ಲ ಮಹಾನ್ ಪ್ರತಿಭೆ ಆದಷ್ಟು ಬೇಗ ಬಂದು ಇನ್ನಷ್ಟು ಸ್ಟಾರ್ ಗಳ ಎಂಟ್ರಿ ಸಾಂಗ್ ಗೆ ಜೀವಧ್ವನಿಯಾಗುವಂತೆ ಸಿನಿಕನ್ನಡ.ಕಾಮ್ ಪ್ರಾರ್ಥಿಸುತ್ತದೆ.