ಶಿವರಾಜ್ ಕುಮಾರ್ ನಟನೆಯ `ಭಜರಂಗಿ 2′ ಚಿತ್ರ ಎರಡನೇ ಶೆಡ್ಯೂಲ್ ನಲ್ಲಿ ಯಶಸ್ವಿಯಾಗಿ ಒಂದು ವಾರದ ಚಿತ್ರೀಕರಣ ಮುಗಿಸಿದೆ. ಮೋಹನ್ ಬಿ.ಕೆರೆ ಸ್ಟುಡಿಯೋನಲ್ಲಿ ನಡೆದ ಚಿತ್ರೀಕರಣದ ಬಳಿಕ ವಿಡಿಯೋ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್.
ಸುದೀಪ್ ಅಲ್ಲಾದರೆ, ನಾವು ಇಲ್ಲಿ..!
ಕೋವಿಡ್ ಆದಮೇಲೆ ಎಲ್ಲರೂ ಕಷ್ಟದಲ್ಲಿದ್ದಾರೆ. ಮೊದಲು ಸುದೀಪ್ ಅವರ ಚಿತ್ರ ಹೈದರಾಬಾದ್‌ನಲ್ಲಿ ಚಿತ್ರೀಕರಣ ಆರಂಭಿಸಿದೆ. ಕರ್ನಾಟಕದ ಮಟ್ಟಿಗೆ ನಾವೇ ಮೊದ ಮೊದಲು ದೊಡ್ಡ ಬಜೆಟ್ ಚಿತ್ರವೊಂದರ ಎರಡನೇ ಶೆಡ್ಯೂಲ್‌ಗೆ ಚಲಾವಣೆ ನೀಡಿದ್ದೇವೆ. ಅದರಲ್ಲಿಯೂ ಕಮ್ ಬ್ಯಾಕ್ ಅಂದಾಗ ಸ್ವಲ್ಪ ನಿಧಾನಕ್ಕೆ ತಯಾರಾಗೋಣ ಎನ್ನುವ ಮಟ್ಟಕ್ಕೆ ಕೊರೊನಾ ಭಯ ಇರುತ್ತದೆ. ಆದರೆ `ಭಜರಂಗಿ’ಯಲ್ಲಿ ಒಂದು ಪವರ್ ಇದೆ. ಹಾಗಾಗಿ ಫೈಟ್ ಸನ್ನಿವೇಶದ ಮೂಲಕವೇ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದೇವೆ ಎಂದಿದ್ದಾರೆ.
ಎಲ್ಲರ ಬಗ್ಗೆಯೂ ಎಚ್ಚರ ವಹಿಸಿದ್ದೇವೆ..
ಭಜರಂಗಿಯಲ್ಲಿ ಪವರ್ ಇದೆಯೋ ಇಲ್ಲವೋ ಶಿವಣ್ಣ ಅಂತೂ ಎಂದಿನಂತೆ ಪವರ್‌ಫುಲ್ ಆಗಿ ಕಾಣಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ರವಿಯ ಸಾಹಸ ಸಂಯೋಜನೆ ಇರುವುದನ್ನು ನೆನಪಿಸಿಕೊಂಡಿರುವ ಶಿವಣ್ಣ ತಮಗೆ ಕೋವಿಡ್ ಬಳಿಕ ಅಂಥ ವ್ಯತ್ಯಾಸವೇನೂ ಗೊತ್ತಾಗಿಲ್ಲ ಎಂದಿದ್ದಾರೆ. ಸ್ಯಾನಿಟೈಸ್ ಮಾಡೋದು, ಟೆಂಪರೇಚರ್ ಚೆಕ್ ಮಾಡುವುದು ಬಿಟ್ಟರೆ ಎಲ್ಲವೂ ಮೊದಲಿನಂತೆ ಅನಿಸುತ್ತದೆ ಎಂದಿದ್ದಾರೆ ಶಿವರಾಜ್ ಕುಮಾರ್. ಹರ್ಷನ ನಿರ್ದೇಶನದಲ್ಲಿ ಇದು ದೊಡ್ಡ ಬಜೆಟ್ ಚಿತ್ರವಾಗಿದ್ದು, ನನ್ನನ್ನು ಮಾತ್ರವಲ್ಲ, ಎಲ್ಲ ಕಲಾವಿದರ ತಂತ್ರಜ್ಞರ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಂಡು ಚಿತ್ರ ಮಾಡಲಾಗುತ್ತಿದೆ. ಎಲ್ಲರೂ ಧೈರ್ಯವಾಗಿ ಚಿತ್ರೀಕರಣ ಶುರು ಮಾಡಬಹುದು. ಆದರೆ ಎಚ್ಚರಿಕೆ ವಹಿಸುವುದು ಮುಖ್ಯ ಎಂದಿದ್ದಾರೆ ಶಿವಣ್ಣ. ನಿರ್ದೇಶಕ ಹರ್ಷ ಅದಕ್ಕೆ ಬೆಂಬಲದ ಮಾತನಾಡಿದ್ದಾರೆ.