ಸನ್ನಿ ಹೆಸರಲ್ಲಿ ಧ್ರುವನ ಬೆನ್ನು ಬಿದ್ದವರು..!

ಧ್ರುವ ಸರ್ಜಾ ಚಿತ್ರರಂಗ ಪ್ರವೇಶಿಸಿದ ದಿನದಿಂದಲೇ ದಾಖಲೆಗಳನ್ನು ಸೃಷ್ಟಿಸಲು ಶುರು ಮಾಡಿದವರು. ಮೊದಲ ಚಿತ್ರ ‘ಅದ್ಧೂರಿ' ಮಾತ್ರವಲ್ಲ, ಆನಂತರದಲ್ಲಿ ತೆರೆಕಂಡ 'ಬಹದ್ದೂರ್’ ಮತ್ತು `ಭರ್ಜರಿ’ ಚಿತ್ರಗಳು ಭರ್ಜರಿಯಾಗಿಯೇ ಶತದಿನೋತ್ಸವ ಕಾಣುವ ಮೂಲಕ ಮತ್ತೋರ್ವ ಹ್ಯಾಟ್ರಿಕ್ ಹೀರೋ ಬಂದಂತಾಗಿತ್ತು. ಆದರೆ ಇದೀಗ ಅವರ ಸಾಮಾಜಿಕ ಜಾಲತಾಣದ ದಾಖಲೆಯೊಂದು ಮಾತ್ರ ತಮಾಷೆಗೀಡಾಗಿದೆ.

ಕನ್ನಡದ ಮಟ್ಟಿಗೆ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಅಪರೂಪ. ಫೇಸ್ಬುಕ್, ಟ್ವಿಟ್ಟರ್ ಹೀಗೆ ಯಾವುದರಲ್ಲಾದರೊಂದು ಒರಿಜಿನಲ್ ಅಕೌಂಟ್ ಇರುತ್ತದೆ ಬಿಟ್ಟರೆ ಇನ್ಸ್ಟಾಗ್ರಾಂನಲ್ಲಿ ನಟರು ಇರುವುದು ಕಡಿಮೆ. ನಟಿಯರಿಗೆ ಮಾತ್ರ ಕೊರತೆ ಇಲ್ಲ. ಆದರೆ ಇನ್ಸ್ಟಾದಲ್ಲಿದ್ದುಕೊಂಡು ಒಂದು ಮಿಲಿಯನ್ ಫಾಲೋವರ್ಸ್ ಪಡೆದಿರುವ ಕನ್ನಡದ ಪ್ರಥಮ ನಟ ಎನ್ನುವ ಹೆಗ್ಗಳಿಕೆ ಧ್ರುವ ಸರ್ಜಾ ಪಾಲಾಗಿತ್ತು. ಮಾಸ್ ಪ್ರೇಕ್ಷಕರನ್ನು ರಂಜಿಸಲು ಅಪರೂದಲ್ಲೊಮ್ಮೆ ಬರುವ ಅವರಿಗೆ ಸಹಜವಾಗಿ ಇರುವಂಥ ಫಾಲೋವರ್ಸ್ ಇರಬಹುದು ಎನ್ನುವ ನಂಬಿಕೆ ಎಲ್ಲರಲ್ಲಿಯೂ ಇತ್ತು. ಆದರೆ ನೈಜ ವಿಚಾರ ತಿಳಿದಾಗ ಇದು ತೀರಾ ಕರಾಬು ಸಂಗತಿ ಅನಿಸಿದ್ದು ಸುಳ್ಳಲ್ಲ.

ನಿಜವಾಗಿ ಇವರೆಲ್ಲ ಯಾರ ಫಾಲೋವರ್ಸ್..?!

ಇದು ಧ್ರುವ ಸರ್ಜಾ ಅವರ ಅಧಿಕೃತ ಅಕೌಂಟ್. ಅದನ್ನು ಸಾಬೀತು ಪಡಿಸುವಂತೆ ನೀಲಿ ಟಿಕ್ ಮಾರ್ಕ್ ಕೂಡ ಇದೆ. ಅದರ ಹಿಸ್ಟರಿ ಹುಡುಕಲು ಹೋದರೆ ನೀಲಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಳು ಲಭಿಸುತ್ತವೆ. 2017ರಲ್ಲಿ ಆರಂಭವಾದ ಈ ಅಕೌಂಟ್‌ಗೆ ಆಗ ಇದ್ದ ಹೆಸರು ರೋಹಿತ್ ರಜತ್. ಅದರ ಬಳಿಕ ಬದಲಾದ ಹೆಸರುಗಳನ್ನು ನೋಡಿದರೆ ನಿಮಗೆ ತಲೆ ತಿರುಗುವುದು ಖಚಿತ! ಸಂಯುಕ್ತಾ ಹೆಗ್ಡೆ, ಕರುನಾಡ ಮಾಡೆಲ್ಸ್, ರಚಿತಾ ರಾಮ್ ಫ್ಯಾನ್ಸ್ ಹೆಸರಲ್ಲಿ ಸಾಕಷ್ಟು ಜನರನ್ನು ಫಾಲೋವರಾಗಿ ಪಡೆದ ಮೇಲೆ ಇದು ಒಮ್ಮೆಲೆ ಧ್ರುವ ಸರ್ಜಾ ಎನ್ನುವ ಹೆಸರಲ್ಲಿ ಚಾಲ್ತಿ ಪಡೆಯುತ್ತದೆ. ಬಳಿಕ ಮತ್ತೆ ಸಂಯುಕ್ತ ಹೆಗ್ಡೆ, ಶಾನ್ವಿ ಶ್ರೀವತ್ಸಾ ಮಾತ್ರವಲ್ಲ ಸನ್ನಿ ಲಿಯೋನ್ ಹೆಸರಲ್ಲಿಯೂ ಚಲಾವಣೆ ಆಗುತ್ತದೆ. ಸನ್ನಿ ಲಿಯೋನ್ ಹೆಸರಂತೂ ದೇಶದಲ್ಲೇ ಅತಿ ಹೆಚ್ಚು ಗೂಗಲ್ ಮಾಡಲ್ಪಟ್ಟ ಹೆಸರಾಗಿ ಗುರುತಿಸಿರುವಂಥದ್ದು ಎನ್ನುವುದು ಎಲ್ಲರಿಗೂ ಗೊತ್ತು. ಹೀಗೆ ಕನ್ನಡದ ಸ್ಟಾರ್ ಹೀರೋನ ಅಧಿಕೃತ ಇನ್ಸ್ಟ ಅಕೌಂಟ್ ಒಂದಕ್ಕೆ ಸನ್ನಿಲಿಯೋನ್ ಹೆಸರಲ್ಲಿ ಫಾಲೋವರ್ಸ್ ಪಡೆಯಬೇಕಾದ ಪರಿಸ್ಥಿತಿ ಬಂದಿರುವುದು ವಿಪರ್ಯಾಸವಲ್ಲದೆ ಇನ್ನೇನು! ಹಿಸ್ಟರಿ ದಾಖಲೆಯ ಪ್ರಕಾರ ಎರಡು ವರ್ಷಗಳ ಹಿಂದಿನ ತನಕ ಪ್ರಿಯಾಂಕ ಶರ್ಮ ಎನ್ನುವ ಹೆಸರಲ್ಲಿದ್ದ ಈ ಅಕೌಂಟ್ ಇದೀಗ ಧ್ರುವ ಸರ್ಜರದ್ದಾಗಿದೆ.

ನಿಜಕ್ಕೂ ಇದು ಧ್ರುವ ಸರ್ಜಾ ಅಕೌಂಟೇನಾ?

ಸಾಮಾನ್ಯವಾಗಿ ‘ಬ್ಲೂಟಿಕ್’ ಎನ್ನುವುದು ‘ಅಕೌಂಟ್ ಅಧಿಕೃತ’ ಎನ್ನುವುದರ ಸೂಚನೆ. ಈ ಹಿಂದೆ ರಕ್ಷಿತ್ ಶೆಟ್ಟಿ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಆಗಿದ್ದಾಗ ಅವರು ತನ್ನ ಅಕೌಂಟ್ ಬ್ಲೂ ಟಿಕ್ ಮೂಲಕ ಗೂಗಲ್ ಗುರುತಿಸಿದೆ ಎಂದಿದ್ದರು. ಆದರೆ ವಿ ರವಿಚಂದ್ರನ್ ಅವರ ಹೆಸರಲ್ಲಿಯೂ ಒಂದು ಫೇಸ್ಬುಕ್‌ ಅಕೌಂಟ್ ಇದೆ. ಅದಕ್ಕೆ ಬ್ಲೂಟಿಕ್ ಮಾರ್ಕ್ ಕೂಡ ಇದೆ. ಆದರೆ ಈ ಬಗ್ಗೆ ರವಿಚಂದ್ರನ್ ಅವರಲ್ಲೇ ಕೇಳಿದಾಗ “ನಾನು ವಾಟ್ಸ್ಯಾಪ್ ಬಿಟ್ಟರೆ ಬೇರೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಇಲ್ಲ” ಎಂದಿದ್ದರು! ಹಾಗಾದರೆ ಬೇರೆಯವರು ಮಾಡಿದ ಅಕೌಂಟ್ ಗೂ ಬ್ಲೂಟಿಕ್ ಬೀಳುತ್ತದೆ ಎಂದಾಯಿತು. ಇದು ಕೂಡ ಅಂತೆಯೇ ಧ್ರುವ ಸರ್ಜ ಅಧಿಕೃತವಾಗಿ ಹ್ಯಾಂಡಲ್ ಮಾಡುತ್ತಿರುವ ಅಕೌಂಟ್ ಅಲ್ಲವಾಗಿರಬಹುದೇ? ಹಾಗಾದರೆ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಲೇಬೇಕಿತ್ತು.

ಯಾಕೆಂದರೆ ಈಗ ಅಲ್ಲವಾದರೂ “ಒಂದು ಮಿಲಿಯನ್ ಫಾಲೋವರ್ಸ್ ಇರುವ ಕನ್ನಡದ ಪ್ರಥಮ ಸ್ಟಾರ್ ಎಂದು ಮಾಧ್ಯಮಗಳಲ್ಲಿ ಸುದ್ದಿಯಾದಾಗ ” ಆ ಅಕೌಂಟ್ ನನ್ನದಲ್ಲ ” ಎಂದು ಒಂದು ವಿಡಿಯೋ ಮಾಡಿ ಹರಿಯಬಿಡಬಹುದಿತ್ತಲ್ಲ? ಹಾಗೆ ಮಾಡಿದ್ದರೆ ಈ ಕರಾಬು ಪರಿಸ್ಥಿತಿ ಬರುತ್ತಿರಲಿಲ್ಲ. ಈಗಲಾದರೂ ಏನು ಪ್ರತಿಕ್ರಿಯೆ ನೀಡುತ್ತಾರೆ ಎನ್ನುವ ಕುತೂಹಲದಿಂದ ಅವರಿಗೆ ನಾವು ಕರೆ ಮಾಡಿದರೆ ಅವರು ಫೋನ್ ರಿಸೀವ್ ಮಾಡಲಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್, ವ್ಯೂವ್ಸ್ ಪಡೆಯಲು ಏನೆಲ್ಲ ಕೆಲಸಗಳು ನಡೆಯುತ್ತವೆ ಎನ್ನುವುದು ಎಲ್ಲರಿಗೂ ಗೊತ್ತು. ಅದರಲ್ಲಿಯೂ ಈ ಹಿಂದೆ ಸನ್ನಿಲಿಯೋನ್ ಹೆಸರು ಬಳಸಿದ ಫೇಸ್ಬುಕ್ ಪೇಜ್ ಬಳಿಕ ಮೋದಿ ಅಭಿಮಾನಿಗಳ ಪೇಜ್ ಆಗಿ ಬದಲಾಗಿದ್ದು ಕೂಡ ಸುದ್ದಿಯಾಗಿತ್ತು. ಈಗ ಧ್ರುವಸರ್ಜಾ ಅಕೌಂಟ್‌ಗೂ ಅದೇ ಗತಿ ಬಂದಿರುವುದು ಮಾತ್ರ ತಮಾಷೆಯ ಸಂಗತಿ.

Recommended For You

1 Comment

Leave a Reply

error: Content is protected !!