ಭಜರಂಗಿ 2 ಟ್ರೇಲರ್ ನೋಡಿದವರಿಗೆ ಅದರಲ್ಲಿ ಶ್ರುತಿಯವರನ್ನು ಕಂಡಾಗ ಅಚ್ಚರಿಯಾಗಲೇಬೇಕು. ಸರಿಯಾಗಿ ಮೂರು ದಶಕಗಳ ಹಿಂದೆ `ಆಸೆಗೊಬ್ಬ ಮೀಸೆಗೊಬ್ಬ’ ಚಿತ್ರದಲ್ಲಿ ಶಿವಣ್ಣನೊಂದಿಗೆ ಮುದ್ದಾಗಿ ಕಾಣಿಸಿದ್ದ ಹುಡುಗಿಯ ಮುಖದಲ್ಲಿ ಎಷ್ಟೊಂದು ಭಾವ ಬದಲಾವಣೆ ಎಂದು ಬೆರಗು ಕಣ್ಣು ಬಿಡಲೇಬೇಕು! ಶಿವಣ್ಣ ಆಂಗ್ರಿ ಯಂಗ್ ಮ್ಯಾನ್ ಆಗುವುದು ಹೊಸದೇನಲ್ಲ. ಆದರೆ ಶ್ರುತಿ ಹೀಗೆ ಕಾಣಿಸಿಕೊಳ್ಳುತ್ತಿರುವುದು ವೃತ್ತಿ ಬದುಕಿನಲ್ಲೇ ಪ್ರಥಮ. ಚಿತ್ರ ಒಪ್ಪಿಕೊಂಡಿದ್ದೇಕೆ? ಲಾಕ್ಡೌನ್ ಕಳೆದಿದ್ದು ಹೇಗೆ? ಎನ್ನುವುದರ ಬಗ್ಗೆ ನಟಿ ಮಾತ್ರವಲ್ಲ, ಕರ್ನಾಟಕ ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ಮತ್ತು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರುತಿ ಸಿನಿಕನ್ನಡದ ಜತೆ ಮಾತನಾಡಿದ್ದಾರೆ.
`ಭಜರಂಗಿ 2′ ಚಿತ್ರವನ್ನು ಶಿವಣ್ಣನ ಸಿನಿಮಾ ಎಂದು ಒಪ್ಪಿಕೊಂಡಿರಾ?
ಶಿವಣ್ಣನ ಸಿನಿಮಾಗಳು ಚೆನ್ನಾಗಿರುತ್ತವೆ, ಒಳ್ಳೆಯ ಪಾತ್ರಗಳಿಗೆ ಅವಕಾಶ ಇರುತ್ತದೆ ಎನ್ನುವುದೇನೋ ಗೊತ್ತು. ಹಾಗಂತ ನಾನು ಯಾವತ್ತೂ ನನ್ನ ಪಾತ್ರದ ಬಗ್ಗೆ ವಿಚಾರಿಸದೆ ಯಾವುದೇ ಚಿತ್ರಗಳಿಗೆ ಯಸ್ ಎನ್ನುವುದಿಲ್ಲ. ಯಾಕೆಂದರೆ, ದಿಢೀರ್ ಎಂದು ಯಾವುದನ್ನೂ ಒಪ್ಪಿಕೊಳ್ಳುವುದು ಕಷ್ಟ. ಆದರೆ ನನ್ನಿಂದ ಈ ಪಾತ್ರ ಮಾಡಿಸಬೇಕು ಎಂದು ನಿರ್ದೇಶಕ ಹರ್ಷ ಅವರ ಆಕಾಕಂಕ್ಷೆಯಾಗಿತ್ತು. ಅವರು ನನಗೆ ಚೆನ್ನಾಗಿ ಪಾತ್ರವನ್ನು ನರೇಟ್ ಮಾಡಿದರು. ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ನನ್ನಲ್ಲಿಯೂ ಇತ್ತು. ಆಮೇಲೆ ಹರ್ಷ ಅವರು ಅಷ್ಟೊಂದು ಆತ್ಮವಿಶ್ವಾಸದಿಂದ ಇರುವಾಗ, ಒಬ್ಬ ಕಲಾವಿದರನ್ನು ಬೇರೊಂದು ಇಮೇಜ್ ನಲ್ಲಿ ತೋರಿಸಬಲ್ಲೆ ಪ್ರಯತ್ನ, ಹಾರ್ಡ್ ವರ್ಕ್ ಅವರಲ್ಲಿರುವಾಗ ನಾನು ಯಾಕೆ ಆ ಪ್ರಯತ್ನದಲ್ಲಿ ನನ್ನ ಹಾರ್ಡ್ ವರ್ಕ್ ತೋರಿಸಬಾರದು ಎಂದು ಜೊತೆ ಸೇರಿಕೊಂಡೆ. ನನ್ನ ಆರಂಭದ ಆತಂಕವನ್ನು ದೂರ ಮಾಡಿದ್ದೇ ನಿರ್ದೇಶಕ ಹರ್ಷ ಅವರಿಗೆ ನನ್ನ ಮೇಲೆ ಇದ್ದಂಥ ಭರವಸೆ ಎಂದೇ ಹೇಳಬಹುದು.
ಇಂಥದೊಂದು ಆಕ್ಷನ್ ಹೀರೋಯಿನ್ ಗೆಟಪ್ ಹಿಂದೆ ಮಿಸ್ ಮಾಡಿಕೊಂಡ ಹಾಗೆ ಅನಿಸುತ್ತಾ?
ಭಜರಂಗಿಯಲ್ಲಿ ಆಕ್ಷನ್ ಇಲ್ಲ. ಅಂದರೆ ದೈಹಿಕವಾದ ಹೊಡೆದಾಟಗಳು ಇಲ್ಲ. ಆದರೆ ಸಾಫ್ಟ್ ನೇಚರ್ ಕ್ಯಾರೆಕ್ಟರ್ ಮಾತ್ರ ಅಲ್ಲ. ಮೊದಲೆಲ್ಲ ನಾನು ವೈವಿಧ್ಯಮಯ ಪಾತ್ರದ ಬಗ್ಗೆ ಯೋಚಿಸಿದ್ದೇ ಇಲ್ಲ! ಯಾಕೆಂದರೆ ಆ ತರಹ ಮಾಡಬೇಕು, ಈ ತರಹ ಮಾಡಬೇಕು ಎಂದು ಚಿಂತಿಸುವುದಕ್ಕೂ ಸಮಯ ಇಲ್ಲದಂತೆ ಸಾಲು ಸಾಲು ಚಿತ್ರಗಳು ಸಿಗುತ್ತಿದ್ದವು. ಹಾಗಾಗಿ ಅದರ ಬಗ್ಗೆ ಯೋಚಿಸುವುದಕ್ಕೇನೇ ಹೋಗಿರಲಿಲ್ಲ. ಆದುದರಿಂದ ಮಿಸ್ ಮಾಡಿಕೊಂಡೆನೆಂಬ ಭಾವನೆ ಇಲ್ಲ. ಸಿಗುವ ಪಾತ್ರಗಳೆಲ್ಲ ನನ್ನ ಮಟ್ಟಿಗೆ ಚಾಲೆಂಜಿಂಗ್ ಆಗಿಯೇ ಇದ್ದವು. ನಾನು ಸುಮಾರು 16 ವರ್ಷ ವಯಸ್ಸಿದ್ದಾಗಲೇ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವಳು ನಾನು. `ಹೆತ್ತ ಕರುಳು’ ಮೊದಲಾದ ಚಿತ್ರಗಳಲ್ಲಿ ಮೂರು ಮಕ್ಕಳ ತಾಯಿಯಾಗಿ ನಟಿಸುವಾಗ ನನಗೆ ಇನ್ನೂ ಮಕ್ಕಳಾಟಿಕೆ ಬಿಟ್ಟಿರಲಿಲ್ಲ. ಹಾಗಾಗಿಯೇ ಶಾಟ್ “ಕಟ್” ಎಂದೊಡನೆ ನನ್ನ ಮಕ್ಕಳಾಗಿ ನಟಿಸಿದ ಮಕ್ಕಳೊಂದಿಗೆ ಕುಂಟೆಬಿಲ್ಲೆ ಆಡಲು ತೊಡಗುತ್ತಿದ್ದೆ! ಯಾವುದೇ ಪಾತ್ರ ಮಾಡಿದರೂ ಕೂಡ ಜನ ನೋಡಲಿ ಎಂದೇ ಬಯಸಿರುತ್ತೇವೆ ಅಲ್ಲವೇ? ಚಿತ್ರ ಸೇಲೆಬಲ್ ಆಗಿರಬೇಕು. ಯಶಸ್ಸು ಕಂಡಾಗಲೇ ಕಲಾವಿದ ಉಳಿಯಲು ಸಾಧ್ಯ. ಶ್ರುತಿಯನ್ನು ಅಳುಮುಂಜಿ ಮಾಡುವುದರಿಂದ ಎಲ್ಲರಿಗೂ ಲಾಭ ಇದೆ, ನಿರ್ದೇಶಕರಿಗೆ ಲಾಭ ಇದೆ ಎಂದು ಎಲ್ಲರೂ ಅಂದುಕೊಳ್ಳುವಾಗ ಅದನ್ನು ವಿರೋಧಿಸಲು ನಾನು ಯಾರು? ನಾನಷ್ಟೇ ಅಲ್ಲ, ನಿರ್ಮಾಪಕರು ಕೂಡ ಒಂದಷ್ಟು ಹಣ ಮಾಡುವ ಅವಕಾಶ ಇದೆ ಎನ್ನುವಾಗ ನಾನು ಮಾಡುವ ಪಾತ್ರದ ಬಗ್ಗೆ ಉತ್ಸಾಹವಿತ್ತು. ಆದರೆ ಇತ್ತೀಚೆಗೆ ವಿಭಿನ್ನ ಪಾತ್ರಗಳು ದೊರಕಿವೆ. ಭಜರಂಗಿ 2 ಚಿತ್ರದಲ್ಲಂತೂ ಹಿಂದೆಂದೂ ನೋಡಿರದ ಹಾಗೆ ಕಾಣಿಸುತ್ತೇನೆ.
ಲಾಕ್ಡೌನ್ ದಿನಗಳು ನಿಮ್ಮ ಮೇಲೆ ಬೀರಿದ ಪರಿಣಾಮಗಳೇನು?
ಎಲ್ಲರ ಹಾಗೆ ನನ್ನ ಬದುಕಿನ ಯೋಜನೆಗಳು ಕೂಡ ಬದಲಾದವು. ಸಿನಿಮಾ ವಿಚಾರಕ್ಕೆ ಬಂದರೆ `ಭಜರಂಗಿ 2′ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದೇನೆ. ಅದರ ಉಳಿದ ಭಾಗದ ಚಿತ್ರೀಕರಣ ವಿದೇಶದಲ್ಲಿ ನಡೆಯಬೇಕಿತ್ತು. ಸಿನಿಮಾ ವಿಚಾರದಲ್ಲಿ ವರ್ಕ್ ಫ್ರಮ್ ಹೋಮ್ ಕೂಡ ಸಾಧ್ಯವಿಲ್ಲವಲ್ಲ? ಆದರೆ ರಾಜಕಾರಣಿಯಾಗಿ ಸಾಧ್ಯವಾದಷ್ಟು ಸಕ್ರಿಯವಾಗಿದ್ದೆ. ಮಹಿಳೆಯರೇ ತಯಾರಿಸಿದ ಹದಿನೆಂಟು ಲಕ್ಷಕ್ಕೂ ಅಧಿಕ ಮಾಸ್ಕ್ ಗಳನ್ನು ಆಯಾಯ ಬೂತ್ ಗಳ ಮೂಲಕ ಮನೆಮನೆಗೂ ಹಂಚುವ ಕೆಲಸ ಮಾಡಿದ್ದೇವೆ. ವರ್ಚ್ಯುಯೆಲ್ ರ್ಯಾಲಿ ಮೂಲಕ ಮೋದಿಯವರ ಎರಡನೇ ಅವಧಿಯ ಮೊದಲನೇ ವರ್ಷದ ಆಚರಣೆ ಮಾಡಿದ್ದೇವೆ. ಅಂದರೆ ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಸಭೆ, ಸಮಾರಂಭ ಮಾಡಲು ಸಾಧ್ಯವಾಗದ ಕಾರಣ ವರ್ಚುಯೆಲ್ ರ್ಯಾಲಿ ಮಾಡಿದ್ದೇವೆ. ಇದರಲ್ಲಿ ಚಿತ್ರರಂಗದ ಮಹಿಳೆಯರನ್ನು ಪಾಲ್ಗೊಳ್ಳುವಂತೆ ಮಾಡುವ ಕೆಲಸ ನನ್ನದಾಗಿತ್ತು. ಇದರಲ್ಲಿ ಕಲಾವಿದೆಯರಷ್ಟೇ ಅಲ್ಲ, ಡಬ್ಬಿಂಗ್ ಕಲಾವಿದೆಯರು, ನಿರ್ಮಾಪಕರು, ನಿರ್ದೇಶಕಿಯರು, ಬರಹಗಾರ್ತಿಯರು, ನೃತ್ಯಗಾರರು, ಮೇಕಪ್ ಕಲಾವಿದರು ಹೀಗೆ ಎಲ್ಲ ವಿಭಾಗದ ಮಹಿಳೆಯರನ್ನು ಸಾಮಾಜಿಕ ಜಾಲತಾಣದ ಮೂಲಕ ಭಾಗಿಯಾಗಿಸುವ ಕೆಲಸ ಮಾಡಿದ್ದೇನೆ.
ಮಗಳ ಬರ್ತ್‌ಡೇಗೆ ನೀವು ಮನೆ ಕಟ್ಟಿಕೊಟ್ಟಿದ್ದು ವಿಭಿನ್ನವಾಗಿತ್ತಲ್ಲವೇ?
ಹೌದು, ನನ್ನ ಮಗಳು ಗೌರಿ ಇನ್ನೂ ಪಿ.ಯು ವಿದ್ಯಾರ್ಥಿನಿ. ಹಾಗಾಗಿ ಒಬ್ಬ ಪುಟ್ಟ ಹುಡುಗಿಯ ಆಸೆಗೆ ತಕ್ಕಂಥ ಮನೆಯೊಂದನ್ನು ನಾನೇ ಕಟ್ಟಿದೆ. ಅದು ನಾನು ಅವಳ ಜನ್ಮದಿನಕ್ಕೆ ಕೊಟ್ಟಂಥ ಉಡುಗೊರೆ. ಲಾಕ್ಡೌನ್ ಸಂದರ್ಭದಲ್ಲಿ ರಾಮನಗರದಲ್ಲಿರುವ ನಮ್ಮ ತೋಟದ ಮನೆಗೆ ಹೋಗಿದ್ದೆ. ಅಲ್ಲೇ ಸ್ವತಃ ಒಂದಷ್ಟು ಕೃಷಿ ಮಾಡಿದೆ. ಜತೆಗೆ ಮಗಳಿಗೆಂದು ಸ್ವತಃ ಒಂದು ಮನೆ ಸ್ಕೆಚ್ ಮಾಡಿದೆ. ಬೆರಳೆಣಿಕೆಯ ಕೆಲಸಗಾರರನ್ನು ಬಳಸಿಕೊಂಡು ನಾನೇ ಮನೆ ಪೂರ್ತಿ ಮಾಡಿದ್ದೇನೆ. ಸಂಪೂರ್ಣವಾಗಿ ಕಲ್ಲುಗಳನ್ನು ಮಾತ್ರ ಬಳಸಿಕೊಂಡು, ಬೇರೆ ಸಿಮೆಂಟ್ ಇಟ್ಟಿಗೆಗಳನ್ನುಉಪಯೋಗಿಸದೆ ಮನೆ ಮಾಡಿದ್ದೇನೆ. ಪ್ರಕೃತಿಯಲ್ಲೇ ಸಿಗುವ ಮಣ್ಣು, ಕಲ್ಲು, ಮಣ್ಣು, ಬಿದಿರು, ಹುಲ್ಲುಗಳ ಸಹಾಯದಿಂದ ಇನ್ನೊಂದು ಮನೆ ಮಾಡಿದ್ದೇನೆ! ಆ ಟ್ರೀ ಹೌಸ್ ಕೂಡ ನಾನು ಗೌರಿಗೆ ಕೊಟ್ಟ ಉಡುಗೊರೆ. ಅವಳು ಖುಷಿಯಾಗಿದ್ದಾಳೆ.