ನಟ ಧ್ರುವ ಸರ್ಜಾ ಅವರ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ `ಎಬೌಟ್ ದಿಸ್ ಅಕೌಂಟ್’ ಎನ್ನುವುದನ್ನು ಚೆಕ್ ಮಾಡಿದಾಗ ಅದು ಈ ಹಿಂದೆ ಸನ್ನಿಲಿಯೋನ್ ಹೆಸರಲ್ಲಿ ಚಲಾವಣೆಯಲ್ಲಿತ್ತು ಎನ್ನುವುದು ಬಯಲಾಗಿತ್ತು. ಆ ವಿಚಾರವನ್ನು ನಾವು ನಿನ್ನೆಯೇ ಓದುಗರ ಮುಂದೆ ಇರಿಸಿದ್ದೆವು. ಅದಕ್ಕೂ ಮೊದಲು ಈ ಬಗ್ಗೆ ಧ್ರುವ ಸರ್ಜಾ ಅವರ ಅಭಿಪ್ರಾಯ ತಿಳಿಯಬೇಕಿತ್ತು. ಅದಕ್ಕಾಗಿ ಫೋನ್, ಮೆಸೇಜ್ ಮಾಡಿದ್ದರೂ ಅವರಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ಇಂದು ಅವರಾಗಿಯೇ ಫೋನ್ ಮಾಡಿ ಅದರ ಬಗ್ಗೆ ಸಂಪೂರ್ಣವಾಗಿ ಸ್ಪಷ್ಟೀಕರಣ ನೀಡಿದ್ದಾರೆ. ಜವಾಬ್ದಾರಿಯುತ ಮಾಧ್ಯಮವಾಗಿರುವ ಕಾರಣ ಅದನ್ನು ಮತ್ತು ಅವರು ಮಾತನಾಡಿರುವ ಇನ್ನಿತರ ವಿಚಾರಗಳನ್ನು ಯಥಾ ಪ್ರಕಾರ ಸಿನಿಕನ್ನಡ.ಕಾಮ್ ನಿಮ್ಮ ಮುಂದಿಡುತ್ತಿದೆ.
ಆಕ್ಚುವಲಿ ನಿನ್ನೆ ಆರ್ಟಿಕಲ್ ಬರೆಯುವ ಮೊದಲು ನಾನು ನಿಮಗೆ ಫೋನ್ ಮಾಡಿದ್ದೆ..
ಕ್ಷಮಿಸಿ. ನನಗೆ ಫೋನ್ ಬಂದಿದ್ದು ಗೊತ್ತಾಗಲಿಲ್ಲ. ಇವತ್ತು ಅಕಸ್ಮಾತ್ತಾಗಿ ಮೆಸೇಜ್ ನೋಡಿದೆ. ಹಾಗಾಗಿ ನೋಡಿದ ತಕ್ಷಣ ಫೋನ್ ಮಾಡಿದೆ. ಎಲ್ಲರೂ ಸಾಂಗ್ ಬಗ್ಗೇನೇ ಬರೀತಾ ಇದ್ದಾರೆ. ನೀವು ಏನು ಆರ್ಟಿಕಲ್ ಬರೆದಿದ್ದಿರಿ?
ಸನ್ನಿ ಹೆಸರಲ್ಲಿ ಧ್ರುವನ ಬೆನ್ನು ಬಿದ್ದವರು..!
ನಿಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ಈ ಹಿಂದೆ ಸನ್ನಿಲಿಯೋನ್ ಫ್ಯಾನ್ಸ್ ಹೆಸರಲ್ಲಿತ್ತು ಅಂತ..!
ಓಹ್ ಅದಾ? ಅದು ನನ್ನದೇ ಅಕೌಂಟ್! ಆದರೆ ಏನಾಗಿದೆ ಎಂದರೆ ತುಂಬ ಜನ ಹ್ಯಾಕ್ ಮಾಡುತ್ತಾರೆ. ಹ್ಯಾಕ್ ಮಾಡಿ ಅವರಿಗೆ ಬೇಕಾದ ಹೆಸರುಗಳನ್ನು ಹಾಕಿಡುತ್ತಾರೆ. ಮತ್ತೆ ನನ್ನ ಕೈಗೆ ಸೇರುವಲ್ಲಿ ಇನ್ನೊಂದಷ್ಟು ಹೆಸರುಗಳಿಗೆ ಬದಲಾಗಿಯೂ ಇತ್ತು. ನನ್ನ ಮೊಬೈಲ್ ಬೇರೆ ಚೇಂಜಾಗಿತ್ತು. ಹಾಗಾಗಿ ಲಾಗಿನ್ ಕೂಡ ಆಗಿರಲಿಲ್ಲ. ಹ್ಯಾಕ್ ಆಗಿದೆ ಅಂತ ಗೊತ್ತಾದಾಗ ಮಾತ್ರ ನಾನೇ ಅದನ್ನು ಮತ್ತೆ ಬಳಸಬೇಕು ಅಂತ ತೀರ್ಮಾನ ಮಾಡಿದೆ. ಸಾಮಾನ್ಯವಾಗಿ ನಾನು ಅಗತ್ಯದ್ದು ಮಾತ್ರ ಪೋಸ್ಟ್ ಮಾಡ್ತೀನಿ. ಯಾರ ಜತೆಗಾದರೂ ಚಾಟ್ ಮಾಡೋದಕ್ಕಿಂತ ನೇರವಾಗಿ ಮಾತನಾಡೋಕೆ ಇಷ್ಟ ಪಡ್ತೀನಿ.
ಹಾಗಾದರೆ ಈಗ ಅದರಲ್ಲಿರುವ ಪೋಸ್ಟ್‌ಗಳೆಲ್ಲ ನಿಮ್ಮದೇನ?
ಖಂಡಿತವಾಗಿಯೂ ನನ್ನದೇ. ಇನ್ಸ್ಟಗ್ರಾಂ ಹ್ಯಾಕ್ ಆಗಿದ್ದಾಗ ನಾನೇ ಫೇಸ್ಬುಕ್ ಮೂಲಕ ಬಂದು ಹೇಳಿದ್ದೆ; ಅದು ನಾನಲ್ಲ ಅಂತ. ಆಮೇಲೆ ಗೊತ್ತಾಯ್ತು ವೆರಿಫೈ ಆಗಿ ಬ್ಲೂಟಿಕ್ ಬಂದರೆ ಮತ್ತೆ ಅದು ಹ್ಯಾಕ್ ಆಗುವುದಿಲ್ಲ ಎಂದು. ಧ್ರುವ ಸರ್ಜ ಸಿಂಗಲ್ ಎ ಇದ್ದಾಗ ಹ್ಯಾಕ್ ಆಗಿತ್ತು. ಆಮೇಲೆ ನಾನು ಡಬಲ್ ಎ ಹಾಕಿದೆ. ಆಗಲೂ ಹ್ಯಾಕ್ ಆಯ್ತು. ಆಮೇಲೆ ತಿಳಿದವರು ನೀಡಿದ ಸಲಹೆಯ ಪ್ರಕಾರ ವೆರಿಫೈ ಮಾಡಿದರೆ ಆಮೇಲೆ ಹ್ಯಾಕ್ ಆಗಲ್ಲ. ಮಾತ್ರವಲ್ಲ, ಬೇರೆ ಫೇಕ್ ಅಕೌಂಟ್ಸ್ ಎಲ್ಲ ಅವರೇ ಕ್ಲೋಸ್ ಮಾಡ್ತಾರೆ ಅಂದರು. ಹಾಗೆ ವೆರಿಫೈ ಕೂಡ ಆಗಿದೆ. ಟ್ವಿಟ್ಟರ್ ಅಂತೂ ಯಾವತ್ತೂ ಹ್ಯಾಕ್ ಆಗಿಲ್ಲ. ಆದರೆ ಇನ್ಸ್ಟಾ ಹ್ಯಾಕ್ ಮಾಡಿದವರು ಯಾರು ಎಂದು ಗೊತ್ತಾಗಲಿಲ್ಲ. ಅವರ ನೆಟ್ವರ್ಕ್ ಚೇಂಜ್ ಆಗಿದೆ ಎಂದು ಗೊತ್ತಾಯ್ತು. ವೆರಿಫೈ ಆದಮೇಲೆ ಹ್ಯಾಕ್ ಆಗಿಲ್ಲ ಅಂತ ಸಮಾಧಾನ ಇದೆ.
ಈಗ `ಕರಾಬು’ ಹಾಡು ದಾಖಲೆಯ ವ್ಯೂವ್ಸ್ ಪಡೆದುಕೊಂಡಿರುವ ಬಗ್ಗೆ ಏನು ಹೇಳ್ತೀರಿ?
ಸಹಜವಾಗಿ ಹಾಡು ಮಾಡೋದೇ ಜನಮೆಚ್ಚಿ ಹಿಟ್ ಆಗಲಿ ಎಂದು. ಆದರೆ ನಿಜ ಹೇಳಬೇಕೆಂದರೆ ಈ ಮಟ್ಟಕ್ಕೆ ಹಿಟ್ ಆಗುತ್ತೆ ಅಂತ ನಾವು ನಿರೀಕ್ಷೆ ಮಾಡಿರಲಿಲ್ಲ. ಎಲ್ಲವೂ ಅನಿರೀಕ್ಷಿತ ಎಂದೇ ನಾನು ಹೇಳುತ್ತೇನೆ. ಒಂದು ವೇಳೆ ಇಲ್ಲಿಯೂ ಕೂಡ ವ್ಯೂವ್ಸ್ ಫೇಕ್ ಮಾಡಬಹುದು ಎನ್ನುವ ಸಂದೇಹ ಬರುವಂಥದ್ದೇ. ಆದರೆ ಹಾಡು ಆನ್ಲೈನಲ್ಲಿ ಮಾತ್ರವಲ್ಲ; ನೇರವಾಗಿ ಜನರಿಗೆ ರೀಚ್ ಆಗಿರುವುದನ್ನು ನೋಡುತ್ತಿದ್ದೇವೆ. ಒಂದು ಚಿಕ್ಕ ಹುಡುಗ ಟಿಕ್ಟಾಕ್‌ನಲ್ಲಿ ಕರಾಬು ಡ್ಯಾನ್ಸ್ ಮಾಡಿರುವುದು ನಮ್ಮ ಸಾಂಗ್ ಗಿಂತಲೂ ಫೇಮಸ್ ಆಗಿತ್ತು. ಫ್ಯಾನ್ಸು, ಇಂಡಸ್ಟ್ರಿಯವರು, ಕ್ರಿಕೆಟ್ ನವರು ಮಾತ್ರವಲ್ಲ, ವಿದೇಶೀಯರು ಕೂಡ ಸೇರಿದಂತೆ ಜನಗಳೇ ಈ ಹಾಡನ್ನು ತಮ್ಮದಾಗಿಸಿದ್ದಾರೆ. ಎಲ್ಲ ಕ್ರೆಡಿಟ್ ಸಂಗೀತ ನಿರ್ದೇಶಕರಿಗೆ ಮತ್ತು ತಂಡಕ್ಕೆ ಸಲ್ಲಬೇಕು ಎನ್ನುತ್ತೇನೆ.
ಮತ್ತೆ ಚಿತ್ರೀಕರಣ ಆರಂಭವಾಗ್ತಿದೆ. ನಿಮ್ಮ ಇಂದಿನ ದೇಹಸ್ಥಿತಿ ವ್ಯತ್ಯಾಸವಾಗಿಲ್ಲವೇ?
ಇನ್ನು ಪೆಂಡಿಂಗ್ ಇರುವುದು ಒಂದು ಹಾಡಿನ ಚಿತ್ರೀಕರಣ ಮಾತ್ರ. ಅದರ ಶೂಟಿಂಗ್ ಮೂರು ದಿನದಲ್ಲಿ ಶುರುವಾಗಲಿದೆ. ನನ್ನ ದೇಹ ಸ್ಥಿತಿ ಹಿಂದಿನಂತೆ ಮರಳಿಸುವುದು ದೊಡ್ಡ ವಿಚಾರವಲ್ಲ. ಆದರೆ ಕೆಲವೊಂದು ಶಾಶ್ವತವಾಗಿ ಮರಳುವುದಿಲ್ಲ ಎನ್ನುವುದೇ ನೋವು..
ಮತ್ತೆ ನಾವು ಮಾತು ಮುಂದುವರಿಸಲಿಲ್ಲ. ಕೆಲವು ವಿಚಾರಗಳನ್ನು ನಾವು ನೆನಪಿಸಬೇಕಾದ ಅಗತ್ಯ ಇರುವುದಿಲ್ಲ. ಯಾಕೆಂದರೆ ಅವರು ಅದನ್ನು ಮರೆತರೆ ತಾನೇ ಹೊಸದಾಗಿ ನಾವು ನೆನಪಿಸಬೇಕಾಗಿರುವುದು! ಅವರ ಬಾಂಧವ್ಯ ಹೇಗಿತ್ತು ಎನ್ನುವುದನ್ನು ಕನ್ನಡ ಸಿನಿಪ್ರಿಯರು ತಿಳಿದಿದ್ದಾರೆ. ಅವರ ವಾಟ್ಸ್ಯಾಪ್ ಡಿಪಿಯಲ್ಲಿ ಇಂದಿಗೂ ಸಹೋದರನ ಜತೆಗಿರುವ ಚಿತ್ರವೇ ಇದೆ. ಇಲ್ಲಿ ಯಾರೂ ಶಾಶ್ವತ ಅಲ್ಲ. ಆದರೆ ನೆನಪುಗಳು ಅಮರ. ಧ್ರುವ ಸರ್ಜಾರ ಪೊಗರು ಚಿತ್ರಕ್ಕೆ ಸಿನಿಕನ್ನಡ.ಕಾಮ್‌ನ ಶುಭಾಶಯಗಳು.