
ಕರಾಬು.. ಎನ್ನುವ ಕನ್ನಡದ ಹಾಡು ಯಾವ ಮಟ್ಟಿಗೆ ಹಿಟ್ ಆಗಿದೆ ಎನ್ನುವುದು ಸಿನಿಪ್ರಿಯರೆಲ್ಲರಿಗೂ ತಿಳಿದಿರುವ ವಿಚಾರ. ಕನ್ನಡದಲ್ಲಿ 120 ಮಿಲಿಯನ್ ವ್ಯೂವ್ಸ್ ಪಡೆದಿರುವ `ಕರಾಬು’ ಹಾಡು ಈಗ ಅದೇ ಮೂರಕ್ಷರದ ಪಲ್ಲವಿಯೊಂದಿಗೆ ತೆಲುಗಿನಲ್ಲಿಯೂ ದಾಖಲೆಯ ವ್ಯೂವ್ಸ್ ಪಡೆಯುತ್ತಿದೆ. ಒಟ್ಟಿನಲ್ಲಿ ಚಂದನ್ ಶೆಟ್ಟಿಯ ಪಾಶ್ಚಾತ್ಯ ಶೈಲಿಯ ಕಂಪೋಸಿಂಗ್ ರೀತಿ ಎಲ್ಲ ಭಾಷೆಯ ಸಂಗೀತ ಪ್ರಿಯರಿಗೂ ಆತ್ಮೀಯವೆನಿಸಿದೆ. ಅದರ ಸೂಚಕವಾಗಿ ತೆಲುಗು ಭಾಷೆಯಲ್ಲಿ ಬಿಡುಗಡೆಯಾದ ಒಂದೇ ದಿನದಲ್ಲಿ ಆರು ಮಿಲಿಯನ್ ವ್ಯೂವ್ಸ್ ಆಗಿತ್ತು. ಇದೀಗ ಮೂರೇ ವಾರಗಳಲ್ಲಿ 17ಮಿಲಿಯನ್ ದಾಟಿ ವ್ಯೂವ್ಸ್ ಮುಂದುವರಿದಿದೆ.
ಕನ್ನಡದಲ್ಲಿ ಮೊದಲು ನೂರು ಮಿಲಿಯನ್ ದಾಟಿದ ಹಾಡು ಎನ್ನುವ ಕೀರ್ತಿ ಶರಣ್ ಅವರ ‘ಚುಟು ಚುಟು ಅನುತೈತೇ' ಹಾಡಿಗೆ ಮೀಸಲಾಗಿತ್ತು. ವಿಶೇಷ ಎನ್ನುವಂತೆ ಅದೇ 'ರ‍್ಯಾಂಬೊ 2'ಚಿತ್ರದ ನಿರ್ದೇಶಕರೇ ಆದ ನಂದ ಕಿಶೋರ್ ಅವರದೇ ನಿರ್ದೇಶನದ 'ಪೊಗರು' ಸಿನಿಮಾದ
‘ಕರಾಬು’ ಹಾಡು ಆ ದಾಖಲೆಯನ್ನು ಮುರಿದು ಮುಂಚೂಣಿಯಲ್ಲಿದೆ. ಮತ್ತೊಂದು ವಿಶೇಷ ಏನೆಂದರೆ ಈ ಎರಡು ಹಾಡುಗಳು ಕೂಡ ಆನಂದ್ ಆಡಿಯೋ ಸಂಸ್ಥೆಯ ಮೂಲಕವೇ ಬಿಡುಗಡೆಯಾಗಿದೆ.
ಚಂದನ್ ಶೆಟ್ಟಿ ಈ ಹಿಂದೆಯೂ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಆದರೆ ಅವು ಯಾವುದು ಕೂಡ, ಅವರ ಸಿಂಗಲ್ ಹಾಡುಗಳ ಆಲ್ಬಂ ಮಟ್ಟಕ್ಕೆ ಸುದ್ದಿಯಾಗಿರಲಿಲ್ಲ. ಅಂಥ ಸಂದರ್ಭದಲ್ಲಿ ಧ್ರುವನಂಥ ಒಬ್ಬ ಯುವ ಸ್ಟಾರ್ ನಟನ ಚಿತ್ರಕ್ಕೆ ಸಂಗೀತ ನಿರ್ದೇಶಕನಾಗಿ ಚಂದನ್ ಶೆಟ್ಟಿಯನ್ನು ಆಯ್ದುಕೊಂಡಿರುವುದಕ್ಕೆ ನಿರ್ದೇಶಕ ನಂದ ಕಿಶೋರ್ ಅವರನ್ನು ಮೆಚ್ಚಲೇಬೇಕು. ಹಾಡಿನ ಸಾಹಿತ್ಯ ಮತ್ತು ಸಂಗೀತ ಕೇಳಿಯೇ ಮೆಚ್ಚಿದ್ದ ಯುವ ಸಮೂಹ ಧ್ರುವ ಅವರ ಎಂಟ್ರಿಯನ್ನು ಹಾಡಲ್ಲಿ ತೋರಿಸಿರುವ ರೀತಿ, ಬೆಂಕಿಯಂಥ ಅವರ ನೃತ್ಯದ ಪ್ರತಿ ಹೆಜ್ಜೆಗೆ ಮಾರು ಹೋಗಿದ್ದಾರೆ. ಅದರ ಸಂಪೂರ್ಣ ಕ್ರೆಡಿಟ್ ನೃತ್ಯ ನಿರ್ದೇಶಕ ಮುರಳಿಯವರಿಗೆ ಸಲ್ಲುತ್ತದೆ.
ಚಿತ್ರವನ್ನು ಕನ್ನಡದ ಜತೆಗೆ ತೆಲುಗಲ್ಲಿಯೂ ತರುವ ಬಗ್ಗೆ ನಿರ್ದೇಶಕ ನಂದ ಕಿಶೋರ್ ಆರಂಭದಿಂದಲೇ ಯೋಜನೆ ಹಾಕಿದ್ದರು. ಅದಕ್ಕೆ ತಕ್ಕಂತೆ ತೆಲುಗಲ್ಲಿ ಈಗಾಗಲೇ ಜನಪ್ರಿಯ ತಾರೆಯಾಗಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರನ್ನು ಚಿತ್ರಕ್ಕೆ ನಾಯಕಿಯಾಗಿ ಮಾಡಿದ್ದರು. ಈ ಹಾಡಲ್ಲಿ ರಶ್ಮಿಕಾ ಅವರನ್ನು ಗೋಳು ಹೊಯ್ಯುವಂಥ ನಾಯಕನಾಗಿ ಧ್ರುವ ಕಾಣಿಸಿಕೊಂಡಿದ್ದಾರೆ. ವಿಶೇಷ ಏನೆಂದರೆ ಹಾಡು ನೋಡಿದವರಿಗೆಲ್ಲ ರಶ್ಮಿಕಾಗಿಂತಲೂ ಧ್ರುವನ ಎಂಟ್ರಿ ಮತ್ತು ಡ್ಯಾನ್ಸ್ ಇಷ್ಟವಾಗಿರುವ ಕಾರಣ ಆಕ್ಷನ್ ಪ್ರಿನ್ಸ್ ಎಲ್ಲ ಕಡೆ ವಿನ್ಸ್ ಎಂದು ಧೈರ್ಯದಿಂದ ಹೇಳಬಹುದಾಗಿದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯ ಕರಾಬು ಹಾಡುಗಳ ಸದ್ಯದ ಒಟ್ಟು ವ್ಯೂವ್ಸ್ 147 ಮಿಲಿಯನ್ ತಲುಪಿದೆ.

ಇದರ ಜತೆಗೆ ಫ್ಯಾನ್ ಮೇಡ್ ಹಾಡುಗಳ ವ್ಯೂವ್ಸ್ ಕೂಡ ಸೇರಿಸಿದರೆ ಖಂಡಿತವಾಗಿ ಇದು 150 ಮಿಲಿಯನ್ ತಲುಪಿರುತ್ತದೆ. ಆದರೆ ಹಾಗೆ ಲೆಕ್ಕಾಚಾರ ಹಾಕುವುದಕ್ಕಿಂತಲೂ ಈ ಹಾಡು ಚಿತ್ರ ಬಿಡುಗಡೆಯ ವೇಳೆಗೆ ಕನ್ನಡದಲ್ಲೇ ಇನ್ನಷ್ಟು ದಾಖಲೆಗಳನ್ನು ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಕನ್ನಡದಲ್ಲಿ ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ ಜತೆಗೆ ಹಾಡನ್ನು ತಾವೇ ಬರೆದು ಹಾಡಿದ್ದರು. ಆದರೆ ತೆಲುಗುವಿನಲ್ಲಿ ಹಾಡಿನ ಕ್ಯಾಚಿಯಾದ ಮೂರು ಪದಗಳನ್ನು ಹಾಗೆಯೇ ಉಳಿಸಿಕೊಂಡು ಹೊಸ ಸಾಹಿತ್ಯವನ್ನು ರಚಿಸಿದ್ದಾರೆ ಭಾಸ್ಕರ ಬತ್ಲ ರವಿಯವರು. ಗಾಯಕ ಅನುರಾಗ್ ಕುಲಕರ್ಣಿಯವರು ಈ ಹಾಡಿಗೆ ಧ್ವನಿಯಾಗಿದ್ದಾರೆ. ತೆಲುಗಲ್ಲಿ ಜ್ಯೂನಿಯರ್ ಎನ್‌ಟಿ ಆರ್ ಫ್ಯಾನ್ಸ್ ಸೇರಿದಂತೆ ಒಟ್ಟು ಸಿನಿ ಪ್ರಿಯರು ಧ್ರುವ ಅವರ ಈ ಹಾಡನ್ನು ಎರಡೂ ಕೈಗಳಿಂದ ಸ್ವೀಕರಿಸಿದ್ದಾರೆ. ಅದನ್ನು ಯೂಟ್ಯೂಬ್ ಹಾಡಿನ ಕೆಳಗೆ ದಾಖಲಾಗಿರುವ ತೆಲುಗು ವೀಕ್ಷಕರ ಅಭಿಪ್ರಾಯಗಳೇ ಸೂಚಿಸುತ್ತಿವೆ. ಅವಿಭಜಿತ ಆಂಧ್ರದ ಮಂದಿ ಮೆಚ್ಚುವ ಮಾಸ್ ಹೀರೋ ಲುಕ್ ಧ್ರುವನಲ್ಲಿ ಕಂಡಿರುವುದೇ ಈ ಲೈಕ್ಸ್‌ಗೆ ಕಾರಣ ಎಂದು ಹೇಳಲು ಅಡ್ಡಿಯಿಲ್ಲ. ಒಟ್ಟಿನಲ್ಲಿ ಆ ಕಾಲದಲ್ಲೇ ಅರ್ಜುನ್ ಸರ್ಜ ಎಲ್ಲ ಭಾಷೆಗಳಿಗೂ ಸಲ್ಲುವ ನಾಯಕನಾಗಿ ಗಮನ ಸೆಳೆದಿದ್ದರು. ಇದೀಗ ಅವರ ಅಳಿಯ ಕೂಡ ಅದೇ ದಾರಿಯಲ್ಲಿ ಹೆಜ್ಜೆ ಇಟ್ಟಿರುವುದು ಗಮನಾರ್ಹ.

ಕರಾಬು ಹಾಡಿನಲ್ಲಿ ಧ್ರುವ ಸರ್ಜ ಅವರು ನೀಡುವ ಅಬ್ಬರದ ಎಂಟ್ರಿ ಕಂಡವರು ಇದೇ ಹೀರೋ ಎಂಟ್ರಿ ಸಾಂಗ್ ಎಂದು ತಪ್ಪು ತಿಳಿದಿದ್ದರು. ಆದರೆ ನಾಯಕನ ಪ್ರವೇಶದ ಹಾಡಿಗೆ ಇದೀಗಷ್ಟೇ ಚಾಲನೆ ಸಿಕ್ಕಿರುವುದಾಗಿ ತಿಳಿದು ಬಂದಿದೆ. ಹಾಗಾಗಿ ಆ ಹಾಡಿನ ಬಗ್ಗೆ ಇನ್ನಷ್ಟು ಕುತೂಹಲ ಅಭಿಮಾನಿಗಳಲ್ಲಿದೆ. ಚಿತ್ರದಲ್ಲಿ ಡಾಲಿ ಧನಂಜಯ್, ರಾಘವೇಂದ್ರ ರಾಜ್ ಕುಮಾರ್, ಪಿ ರವಿಶಂಕರ್, ಸಾಧು ಕೋಕಿಲ ಸೇರಿದಂತೆ ಬೃಹತ್ ತಾರಾ ಬಳಗವೇ ಸಿನಿಮಾದಲ್ಲಿದೆ ಎನ್ನಲಾಗಿದೆ. ಬಿ ಕೆ ಗಂಗಾಧರ್ ಚಿತ್ರವನ್ನು ನಿರ್ಮಿಸುತ್ತಿದ್ದು ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮತ್ತು ವೈದಿಯವರ ಕ್ಯಾಮೆರಾ ವರ್ಕ್ ಚಿತ್ರದಲ್ಲಿದೆ. ಚಿತ್ರದ ಡೈಲಾಗ್ ಟೀಸರ್ ಕೂಡ ದಾಖಲೆಯ ವೀಕ್ಷಣೆ ಪಡೆದುಕೊಂಡಿದೆ. ಟ್ರೇಲರ್ ಮತ್ತು ಸಿನಿಮಾ ವೀಕ್ಷಣೆಗಾಗಿ ಅಪಾರ ಮಟ್ಟದ ಪ್ರೇಕ್ಷಕ ವರ್ಗ ಈಗಾಗಲೇ ಕಾದು ನಿಂತಿರುವುದು ನಿಜ.