ಸ್ಟಿಲ್ ಸೀನು(48) ನಿಧನ

ಕನ್ನಡ ಚಿತ್ರರಂಗದ ಖ್ಯಾತ ಸ್ಥಿರಚಿತ್ರ ಛಾಯಾಗ್ರಾಹಕ ‘ಸ್ಟಿಲ್ ಸೀನು’ ಎಂದೇ ಖ್ಯಾತರಾಗಿದ್ದ ಶ್ರೀನಿವಾಸ್ ನಿಧನರಾಗಿದ್ದಾರೆ. ಎರಡು ವಾರದ ಹಿಂದೆ ತಾವು ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸ್ಕಿಡ್ ಆಗುವ ಮೂಲಕ ರಸ್ತೆ ಬಿದ್ದು ತಲೆಗೆ ಏಟು ಮಾಡಿಕೊಂಡಿದ್ದ ಅವರು ಚಿಕಿತ್ಸೆಯ ನಡುವೆ ಕೋಮಾದಲ್ಲಿದ್ದರು. ಇಂದು ಗುರುವಾರ ಮುಂಜಾನೆ 5.30ರ ಸುಮಾರಿಗೆ ಅವರ ಪ್ರಾಣಪಕ್ಷಿ ಹೊರಟು ಹೋಗಿರುವುದಾಗಿ ಪುತ್ರ ಸಾಯಿ ವಿಮಲ್ ಸಿನಿಕನ್ನಡ.ಕಾಮ್‌ಗೆ ಮಾಹಿತಿ ನೀಡಿದ್ದಾರೆ.

ಕೋಮಾದಲ್ಲಿ ಸ್ಟಿಲ್ ಸೀನು

ಸೀನು ಅವರದ್ದು ಚಂದನವನದ ಜತೆಗೆ ಮೂರುವರೆ ದಶಕಗಳನ್ನು ದಾಟಿದ ನಂಟು. 1986ರಲ್ಲಿ ಛಾಯಾಗ್ರಾಹಕರಾಗಿ ವೃತ್ತಿ ಶುರು ಮಾಡಿದವರು ಕಳೆದ ವರ್ಷ ಖುದ್ದಾಗಿ ಚಿತ್ರವೊಂದನ್ನು ನಿರ್ಮಿಸಿ ಅದಕ್ಕೆ ತಾವೇ ಛಾಯಾಗ್ರಾಹಕರಾಗುವ ಮಟ್ಟಕ್ಕೆ ಬೆಳೆದಿದ್ದರು. ಹಾಗಂತ ಸುಮಾರು 150 ಚಿತ್ರಗಳಿಗೆ ಸ್ಟಿಲ್ ಫೊಟೋಗ್ರಾಫರ್ ಆದ ಅನುಭವ ಇತ್ತೇ ಹೊರತು, ಆರ್ಥಿಕವಾಗಿ ಸಬಲರಾಗಿರಲಿಲ್ಲ! ಸಾಲ ಮಾಡಿ ಒಳ್ಳೆಯ ಸಿನಿಮಾ ಮಾಡಿದರೆ ಟಿ.ವಿ ರೈಟ್ಸ್‌ ಮೂಲಕ ಲಾಭಗಳಿಸಬಹುದೆಂದು ನಂಬಿ ಮಾಡಿದ ಚಿತ್ರ `ಗಹನ’ ಕೈಕೊಡುವುದರೊಂದಿಗೆ ಅವರು ಸಾಲಗಾರರಾಗಿಯೇ ಉಳಿದಿದ್ದರು. ಈಗ ಅವರು ನಿಧನವಾಗಿರುವ ಕಾರಣ, ಪತ್ನಿ ಮತ್ತು ಇಬ್ಬರು ಮಕ್ಕಳು ಇರುವ ಅವರ ಕುಟುಂಬ ಅನಿರೀಕ್ಷಿತ ಅಗಲಿಕೆಯ ನೋವಿನ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ.

ಒಂದೇ ದಿನಕ್ಕೆ ನಾಲ್ಕೈದು ಲೊಕೇಶನ್‌ಗಳಲ್ಲಿ ಓಡಾಡಿಕೊಂಡು ಸ್ಟಿಲ್ ಫೋಟೋಗ್ರಫಿ ಮಾಡುತ್ತಿದ್ದ ಸೀನು ಕಳೆದ ಎರಡು ವಾರಗಳಿಂದ ಆಸ್ಪತ್ರೆ ಸೇರಿಕೊಂಡು ಕೋಮಾದಲ್ಲೇ ಚಿಕಿತ್ಸೆಯಲ್ಲಿದ್ದರು. ತುಮಕೂರು ರಸ್ತೆಯ `ಸ್ಪರ್ಶ’ ಆಸ್ಪತ್ರೆಗೆ ದಾಖಲಿಸಿ ಆಪರೇಶನ್ ನಡೆಸಲಾಗಿತ್ತು. ಬಳಿಕ ಕೋಮಾದಲ್ಲಿದ್ದ ಅವರನ್ನು ಎಂಟು ದಿನಗಳ ಹಿಂದೆ ವೈಟ್ ಫೀಲ್ಡ್‌ನ ಸತ್ಯಸಾಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಮನೆಯವರನ್ನು ಕರೆಸಿದ ಅಲ್ಲಿನ ವೈದ್ಯಾಧಿಕಾರಿಗಳು ಸೀನು ಅವರ ಮೆದುಳು ಸಂಪೂರ್ಣವಾಗಿ ಪ್ರತಿಕ್ರಿಯೆ ಕಳೆದುಕೊಳ್ಳುತ್ತಿರುವ ಬಗ್ಗೆ ಸೂಚನೆ ನೀಡಿದ್ದರು. ಇಂದು ಮುಂಜಾನೆ ನಿಧನರಾದ ವಾರ್ತೆ ತಿಳಿಸಿದ್ದು, ಪ್ರಸ್ತುತ ಅವರ ಮೃತದೇಹವನ್ನು ಯಶವಂತಪುರದ ಮನೆಗೆ ತರಲೆಂದು ಕುಟುಂಬ ವರ್ಗ ಆಸ್ಪತ್ರೆಯ ಕಡೆಗೆ ಧಾವಿಸಿದೆ.

ಸಹಾಯ ಬಯಸಿದ್ದರು

ಈಗಾಗಲೇ ಸ್ಪರ್ಶ ಆಸ್ಪತ್ರೆಯಲ್ಲಿ ಮೂರುವರೆ ಲಕ್ಷದಷ್ಟು ಖರ್ಚಾಗಿದೆ. ಅದನ್ನು ಸೀನು ಅವರ ಸಹೋದರಿ ಪಾವತಿಸಿದ್ದಾರೆ. ಈ ನಡುವೆ ಚಿತ್ರರಂಗದಿಂದ ಸಹಾಯಕ್ಕಾಗಿ ಕುಟುಂಬ ವರ್ಗ ಅಪೇಕ್ಷಿಸಿತ್ತು. ಸೀನು ಅವರ ಹೊರತು ಇತರರಿಗೆ ಚಿತ್ರರಂಗದ ಯಾರೊಂದಿಗೂ ಸಂಪರ್ಕ ಇರದ ಕಾರಣ, ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಮೂಲಕ ಸಹಾಯಕ್ಕೆ ಅಭ್ಯರ್ಥನೆ ಮಾಡಲಾಗಿತ್ತು. ಒಂದಿಬ್ಬರು ನಿರ್ದೇಶಕರು ಸಣ್ಣ ಮೊತ್ತವನ್ನು ಗೂಗಲ್ ಪೇ ಮಾಡಿದ್ದು ಬಿಟ್ಟರೆ, ಅಂಥ ಸಹಾಯವೇನೂ ಅವರಿಗೆ ದೊರಕಿರಲಿಲ್ಲ. ಇದೇ ಸಂದರ್ಭದಲ್ಲಿ ಸಹಾಯ ನೀಡುವುದಾಗಿ ಆಸ್ಪತ್ರೆಗೆ ಬಂದಿದ್ದ ಐಎಫ್ಎಂಎ ವತಿಯಿಂದ 5,000 ರೂಪಾಯಿಗಳ ಚೆಕ್ ಹೊರತು ಪಡಿಸಿ ಬೇರೆ ಯಾವುದೇ ಸಹಾಯವಾಗಿಲ್ಲ. ಅವರೆಲ್ಲರಿಗೂ ವಂದನೆಗಳು ಎಂದು ಸೀನು ಪುತ್ರ ಸಾಯಿ ವಿಮಲ್ ತಿಳಿಸಿದ್ದಾರೆ. ಆದರೆ ಇದೀಗ ಕುಟುಂಬದ ಆರ್ಥಿಕ ಆಧಾರ ಸ್ಥಂಭವೂ ಆಗಿದ್ದ ಸೀನು ನಿಧನರಾಗಿರುವುದರಿಂದ ಕಾಲೇಜು ವಿದ್ಯಾರ್ಥಿಗಳಾದ ಮಕ್ಕಳ ಮೇಲೆ ಎಲ್ಲ ಜವಾಬ್ದಾರಿಯೂ ಬಿದ್ದಂತಾಗಿದೆ. ಸೀನು ಅವರ ಪತ್ನಿ ಗೃಹಿಣಿಯಾಗಿದ್ದು, ಇಬ್ಬರು ಮಕ್ಕಳಾದ ಸಾಯಿ ಹಿಮಬಿಂದು(20) ಮತ್ತು ಸಾಯಿ ವಿಮಲ್(17) ತಂದೆಯ ಅನಿರೀಕ್ಷಿತ ಅಗಲಿಕೆಯ ಆಘಾತದಲ್ಲಿದ್ದಾರೆ.

ಐಎಫ್ ಎಂ ಎ ಕಾರ್ಯದರ್ಶಿ ದಿಲೀಪ್ ಪ್ರತಿಕ್ರಿಯೆ

ಐಎಫ್ಎಂಎ ಪ್ರಧಾನ ಕಾರ್ಯದರ್ಶಿ ಈ ಬಗ್ಗೆ ಸಿನಿಕನ್ನಡಕ್ಕೆ ಪ್ರತಿಕ್ರಿಯಿಸಿ, “ನಾವು ಐಎಫ್‌ಎಂಎನಿಂದ 5000ರೂಪಾಯಿ ಚೆಕ್ ನೀಡುವುದರ ಜತೆಗೆ ನಮ್ಮ ತಂಡದಿಂದ 75,000 ರೂಪಾಯಿಗಳ ಮೊತ್ತವನ್ನು ಅವರಿಗೆ ನೀಡಲಾಗಿದೆ. ಸಿನಿಮಾರಂಗದಲ್ಲಿರುವ ನಿರ್ದೇಶಕ, ನಿರ್ಮಾಪಕ, ನಾಯಕ,ಪಿಆರ್ ಒ ಸೇರಿದಂತೆ ಎಲ್ಲರೂ ನಮ್ಮ ಮನವಿಯನ್ನು ಪರಿಗಣಿಸಿ ಅವರಿಗೆ ಹಣ ನೀಡಿ ಸ್ಪಂದಿಸಿದ್ದಾರೆ. ನಿರ್ಮಾಪಕ ಕುಮಾರ್ ಅವರು ಮತ್ತು ಸ್ನೇಹಿತರ ಕಡೆಯಿಂದ ಒಂದೇ ದಿನದಲ್ಲಿ 1ಲಕ್ಷ 18 ಸಾವಿರ ಸಂದಾಯವಾಗಿದೆ. ಈ ಬಗ್ಗೆ ದಾಖಲೆಗಳು ಬೇಕಾಗಿದ್ದಲ್ಲಿ ಅದನ್ನು ತೋರಿಸಲು ಸಿದ್ಧ ಎಂದು ದಿಲೀಪ್ ತಿಳಿಸಿದ್ದಾರೆ. ಬಹುಶಃ ಐಎಫ್ ಎಂಯವರು ತಾವು ಸಂಗ್ರಹಿಸಿದ ಮೊತ್ತವನ್ನು ಒಟ್ಟಾಗಿ ನೀಡದೇ ನೇರವಾಗಿ ಸೀನು ಅಕೌಂಟ್ ಡಿಟೇಲ್ಸ್ ಅನ್ನೇ ಇತರರಿಗೆ ನೀಡಿ ಮನವಿ ಮಾಡಿರುವುದು ಈ ಗೊಂದಲಕ್ಕೆ ಕಾರಣವಾಗಿರಬಹುದು.

Name- SRINIVASA R
Acc No-50190013839059
IFSC Code- BDBL0001750
Bank Name-BANDHAN BANK(Malleswaram)
Google Pay/phonepe-9483452559

35 ವರ್ಷಗಳ ವೃತ್ತಿ ಬದುಕು; 150 ಸಿನಿಮಾಗಳು

ಸಿನಿಮಾಗಳ ಸುದ್ದಿ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದುತ್ತಾ, ಅವುಗಳ ಛಾಯಾಗ್ರಹಣ ನೋಡುತ್ತಾ ಛಾಯಾಗ್ರಹಣದ ಆಸಕ್ತಿ ಪಡೆದುಕೊಂಡ ಸೀನು ಮೊದಲು ಸಮೀಪಿಸಿದ್ದೇ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯನ್ನು. ಆಗ ಇನ್ನೂ ಎಂಟನೇ ತರಗತಿ ಹುಡುಗನಾಗಿದ್ದ ಸೀನುವಿಗೆ ಅಲ್ಲಿದ್ದ ಓರ್ವ ಕಾರ್ ಡ್ರೈವರ್ ಬುದ್ಧಿ ಮಾತು ಹೇಳಿ, ಸ್ಟಿಲ್ ಫೊಟೋಗ್ರಫಿ ಕೆಲಸದ ಬಗ್ಗೆ ಮಾಹಿತಿ ಕೊಟ್ಟಿದ್ದರು. ಬಳಿಕ 1986 ರಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿ, ಕಂಠೀರವ ಸ್ಟೇಡಿಯಂ ಬಳಿಯಿದ್ದ ರಜನಿ ಸ್ಟುಡಿಯೋದಲ್ಲಿ ಕೆಲಸಕ್ಕೆ ಸೇರಿದ್ದರು. 1989 ರಲ್ಲಿ ‘ನಂಜುಂಡಿ ಕಲ್ಯಾಣ’ ಚಿತ್ರದ 25 ನೇ ವಾರದ ರಜತ ಮಹೋತ್ಸವದ ಅದ್ಧೂರಿ ಕಾರ್ಯಕ್ರಮದ ವಿಡಿಯೋಗ್ರಫಿ ಮಾಡಲು ಅವಕಾಶ ಸಿಕ್ಕಿತು.‌ ಆ ಸಂದರ್ಭದಲ್ಲಿ ಅಣ್ಣಾವ್ರ ಇಡೀ ಕುಟುಂಬ ಪರಿಚಯವಾಯಿತು.

1989 ರಲ್ಲಿ ತಮ್ಮ ಸಿನಿಮಾ ಗುರುಗಳಾದ ಶ್ರೀನಿಧಿ ರಾಮು ಅವರೊಂದಿಗೆ ಸೇರಿಕೊಂಡು ‘ಆಸೆಗೊಬ್ಬ ಮೀಸೆಗೊಬ್ಬ’ ಸಿನಿಮಾದಲ್ಲಿ ಕೆಲಸ ಮಾಡಿದರು. ‘ಹೊಸರಾಗ’ ಚಿತ್ರದ ಮೂಲಕ ಅಸಿಸ್ಟೆಂಟ್ ಕ್ಯಾಮೆರಾಮ್ಯಾನ್ ಕೂಡ ಆದರು. ತದನಂತರ ಹಿರಿಯ ಛಾಯಾಗ್ರಾಹಕರೊಂದಿಗೆ 50 ಸಿನಿಮಾಗಳಿಗೆ ಸಹಾಯಕ ಸ್ಟಿಲ್ ಫೊಟೋಗ್ರಾಫರ್ ಆಗಿ ಕೆಲಸ ಮಾಡಿದರು. ಅವುಗಳಲ್ಲಿ ಮಹಾಭಾರತ, ಮೆಜೆಸ್ಟಿಕ್, ಸ್ಪರ್ಶ, ಗ್ರಾಮದೇವತೆ, ರೌಡಿ ಅಳಿಯ, ಕುಶಲವೇ ಕ್ಷೇಮವೇ, ದೇವರು ಕೊಟ್ಟ ತಂಗಿ, ತಾಯಿ ಇಲ್ಲದ ತಬ್ಬಲಿ, ಮನೆಮಗಳು, ಚಾಮುಂಡಿ, ಅಬ್ಬಬ್ಬಾ ಎಂತಹ ಹುಡುಗ, ಊಲಾಲಾ, ಸಿಕ್ಸರ್, ಧರ್ಮದೇವತೆ, ಬಾ ಬಾರೋ ರಸಿಕ, ಒಡಹುಟ್ಟಿದವಳು, ರಾಮಕೃಷ್ಣ, ಕುರಿಗಳು ಸಾರ್ ಕುರಿಗಳು, ಮಾತಾಡು ಮಾತಾಡು ಮಲ್ಲಿಗೆ, ಒಲವೇ ಜೀವನ ಲೆಕ್ಕಾಚಾರ, ಕೆಂಚ, ತವರಿಗೆ ಬಾ ತಂಗಿ, ಗೂಳಿ, ಕಾಮಣ್ಣನ ಮಕ್ಕಳು, ಶಾಸ್ತ್ರಿ, ತಂಗಿಗಾಗಿ, ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ, ಶಿವಾಜಿನಗರ, ಮುಕುಂದ ಮುರಾರಿ, ವಿಷ್ಣುಸೇನ, ಚಪ್ಪಾಳೆ, ಗೌರಮ್ಮ.. ಹೀಗೆ ವೃತ್ತಿ ನಿರಂತರವಾಗಿ ಸಾಗಿತ್ತು. ಚಿತ್ರರಂಗದಲ್ಲಿ ತಮಗೆ ಗಾಡ್ ಫಾದರ್ ಆಗಿದ್ದಂಥ ಓಂ ಸಾಯಿ ಪ್ರಕಾಶ್ ಅವರ ಐವತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಕಾರ್ಯನಿರ್ವಹಿಸಿದ್ದು ವಿಶೇಷ.

25ಕ್ಕೂ ಅಧಿಕ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿಯೂ ಕಾಣಿಸಿದ್ದರು ಸ್ಟಿಲ್ ಸೀನು.

ಶಿವಣ್ಣ, ದರ್ಶನ್ ಎಂದರೆ ಪ್ರೀತಿಯಿತ್ತು

ಡಾ. ರಾಜ್ ಕುಮಾರ್ ಅವರಿಂದ ಹಿಡಿದು ಇತ್ತೀಚಿನ ಸ್ಟಾರ್‌ಗಳ ತನಕ ಬಹುತೇಕ ಎಲ್ಲ ನಾಯಕರ ಚಿತ್ರಗಳಲ್ಲಿ ಸ್ಟಿಲ್ ಫೊಟೋಗ್ರಾಫರ್ ಆಗಿದ್ದ ಸೀನು ಅವರಿಗೆ ಡಾ.ರಾಜ್, ಡಾ. ವಿಷ್ಣು, ಅಂಬರೀಶ್, ಶಿವರಾಜ್ ಕುಮಾರ್, ದರ್ಶನ್, ಸುದೀಪ್, ಉಪೇಂದ್ರ ಮತ್ತು ನಿರ್ದೇಶಕರಲ್ಲಿ ಓಂ ಸಾಯಿ ಪ್ರಕಾಶ್, ನಾಗಣ್ಣ, ನಾಗತಿಹಳ್ಳಿ ಚಂದ್ರಶೇಖರ್, ಪಿ.ಎನ್ ಸತ್ಯ ಮೊದಲಾದವರ ಜತೆಗೆ ಕೆಲಸ ಮಾಡುವುದು ಎಂದರೆ ಖುಷಿ ಇತ್ತಂತೆ. 2016 ರಲ್ಲಿ ದುಬೈನಲ್ಲಿ ನೆಲೆಸಿದ ಯುಎಇ ದುಬೈ ಕನ್ನಡಿಗರು ನಡೆಸಿದ 12 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಿತ್ಯೋತ್ಸವ ಕವಿ ಕೆ.ಎಸ್ ನಿಸಾರ್ ಅಹಮದ್ ಅವರೊಂದಿಗೆ ಸೀನು ಅವರಿಗೂ ಸನ್ಮಾನ ನಡೆಸಲಾಗಿತ್ತು. ಅಲ್ಲಿ ‘ಚಂದನವನ ಛಾಯಾಚಿತ್ರ ಶಿಲ್ಪಿ’ ಎಂಬ ಬಿರುದು ನೀಡಿ ಗೌರವಿಸಿಲಾಗಿತ್ತು.

ಕಳೆದ ವರ್ಷ ಓಂ ಶ್ರೀ ಸಾಯಿರಾಂ ಫಿಲಂಸ್ ಬ್ಯಾನರ್ ನಡಿಯಲ್ಲಿ ‘ಗಹನ’ ಸಿನಿಮಾ ನಿರ್ಮಿಸಿದ್ದರು. ಗೌರಿ ಶಂಕರ್, ಸುಂದರನಾಥ್ ಸುವರ್ಣ, ಕಬೀರ್ ಲಾಲ್, ಪಿ.ಕೆ ಎಚ್ ದಾಸ್, ಅಜೇಯ್ ವಿನ್ಸೆಂಟ್… ಸೇರಿದಂತೆ ಅನೇಕ ಮಹಾನ್ ಸಿನಿಮಾಟೋಗ್ರಾಫರ್ ಅವರೊಂದಿಗೆ ಮಾಡಿದ ಕೆಲಸದ ಅನುಭವದಲ್ಲಿ ‘ಗಹನ’ ಚಿತ್ರಕ್ಕೆ ತಾವೇ ಕ್ಯಾಮೆರಾ ಮ್ಯಾನ್ ಆಗಿಯೂ ಕೆಲಸ ಮಾಡಿದ್ದರು. ಸಿನಿಮಾ ಮಾಡಿದಾಗ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರು ಬಹಳ ಖುಷಿಪಟ್ಟು ಪ್ರೋತ್ಸಾಹ ನೀಡಿ ಹುರಿದುಂಬಿಸಿದರು. ಚಿತ್ರದ ಪೋಸ್ಟರ್, ಫೊಟೋಗ್ರಫಿ ಹಾಗೂ ಸಿನಿಮಾವನ್ನು ಮೆಚ್ಚಿಕೊಂಡು ಹೊಗಳಿ, ಅವರೇ ರಿಲೀಸ್ ಗೆ ಸಹಾಯ ಮಾಡಿದ್ದರು. ಚಿತ್ರ ಲಾಭ ತಂದಿದ್ದರೆ ಇನ್ನಷ್ಟು ಚಿತ್ರಗಳ ನಿರ್ಮಾಣ ಅವರ ಕನಸಾಗಿತ್ತು. ಆದರೆ ವಿಧಿ ವಿಪರ್ಯಾಸ ಕುಟುಂಬದ ಕನಸನ್ನೇ ಕಸಿದುಕೊಂಡಿದೆ.

Recommended For You

Leave a Reply

error: Content is protected !!