ವಿಜಯ್ ಅವರು ಕನ್ನಡದಲ್ಲಿ ನಿರ್ದೇಶಿಸಿದ ಪ್ರಥಮ ಚಿತ್ರ `ರಂಗಮಹಲ್ ರಹಸ್ಯ’. ಅದರಲ್ಲಿ ನಾಯಕರಾಗಿದ್ದವರು ಶ್ರೀನಾಥ್. ನಿರ್ದೇಶಕ ವಿಜಯ್ (84) ಅವರು ನಿನ್ನೆ ಅನಾರಾಗೋಗ್ಯದಿಂದ ನಿಧನರಾಗಿದ್ದಾರೆ. ಅವರ ಕುರಿತಾದ ಒಂದಷ್ಟು ನೆನಪುಗಳನ್ನು ಪ್ರಣಯರಾಜ ಶ್ರೀನಾಥ್ ಸಿನಿಕನ್ನಡದ ಜತೆಗೆ ಹಂಚಿಕೊಂಡಿದ್ದಾರೆ.
“ವಿಜಯ್ ಕನ್ನಡದಲ್ಲಿ ನಿರ್ದೇಶಿಸಿದ ಮೊದಲ ಮತ್ತು ಎರಡನೆಯ ಚಿತ್ರದಲ್ಲಿ ನಾನೇ ನಾಯಕನಾಗಿದ್ದೆ. ಹಾಗಾಗಿ ನಮ್ಮಿಬ್ಬರಲ್ಲಿ ಆತ್ಮೀಯ ಸ್ನೇಹ ಇತ್ತು. ಆ ಸ್ನೇಹ ಇಲ್ಲಿಯವರೆಗೂ ಮುಂದುವರಿದಿತ್ತು. ಕೆಲವು ತಿಂಗಳಿಗೊಮ್ಮೆಯಾದರೂ ಫೋನ್ ಮಾಡಿ ಮಾತನಾಡುತ್ತಿದ್ದೆವು. ಕೊನೆಯದಾಗಿ ಮಾತನಾಡುವಾಗ ಅನಾರೋಗ್ಯದ ಬಗ್ಗೆ ಹೇಳಿಕೊಂಡಿದ್ದ. ಈಗ ನೋಡಿದರೆ ನಿಧನದ ಸುದ್ದಿ ಸಿಕ್ಕಿದೆ. ಆತನ ಆತ್ಮಕ್ಕೆ ದೇವರು ಶಾಂತಿ ನೀಡಲಿ.”

ರಂಗ ಮಹಲ್ ರಹಸ್ಯ' ಚಿತ್ರ ಮಾಡುವಾಗ ನಾವಿಬ್ಬರೂ ಯಂಗ್ ಇದ್ದೆವು. ಮಾತ್ರವಲ್ಲ ಅದು 70ದಿನಗಳ ಕಾಲ ಪ್ರದರ್ಶನ ಕಂಡ ಒಂದು ಸಕ್ಸಸ್‌ಫುಲ್ ಚಿತ್ರವಾಗಿತ್ತು. ಹಾಗಾಗಿ ನಮ್ಮಿಬ್ಬರ ಆತ್ಮೀಯತೆಗೆ ಹಲವು ಕಾರಣಗಳಿದ್ದವು. ಆನಂತರ ಅವರ ಎರಡನೇ ಚಿತ್ರಮೊದಲ ರಾತ್ರಿ’ಯಲ್ಲಿಯೂ ನಾನೇ ನಾಯಕ ಆಗಿದ್ದೆ. ಅದು ಕೂಡ ಉತ್ತಮ ಪ್ರದರ್ಶನ ಕಂಡಿತ್ತು. ಹಾಗೆ ಎಪ್ಪತ್ತರ ದಶಕದಲ್ಲೇ ಸ್ನೇಹಿತರಾಗಿದ್ದೆವು. ಬಹಳ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದ ಮನುಷ್ಯ. ಕೆಲಸದಲ್ಲಿ ತುಂಬ ಸಮರ್ಪಣಾ ಮನೋಭಾವ ಹೊಂದಿದ್ದ ವ್ಯಕ್ತಿ. ಸಮಯ ಪಾಲನೆಯಲ್ಲಿ ಎತ್ತಿದ ಕೈ. ಎಲ್ಲಕ್ಕಿಂತ ಮುಖ್ಯವಾಗಿ ಆನಂತರ ಕೂಡ ನಾವು ಸಾಕಷ್ಟು ಚಿತ್ರ ಮಾಡಿದ್ದೇವೆ. ಆದರೆ ಯಾವತ್ತೂ ಅವನು ಯಾರಲ್ಲಿಯೂ ಕೋಪಿಸಿಕೊಂಡಿದ್ದನ್ನೇ ನೋಡಿಲ್ಲ! ಯಾವಾಗಲೂ ನಗುನಗುತ್ತಲೇ ಇದ್ದ. ತೆಲುಗಲ್ಲಿ ಮೊದಲನೇ ಸಿನಿಮಾ ಮಾಡಿದಾಗ ಆದ ಕಷ್ಟವನ್ನು ನನ್ನಲ್ಲಿ ಹೇಳುವಾಗ ಕೂಡ ನಗುತ್ತಲೇ ಇದ್ದ. ಕಷ್ಟದಲ್ಲಿ, ನೋವಲ್ಲಿ ನಗಬಲ್ಲ ಹಾಗೂ ಇತರರನ್ನು ಸ್ನೇಹದಿಂದ ನೋಡುವ ಒಳ್ಳೆಯ ಮನುಷ್ಯನಾಗಿದ್ದ.
ರಾಜ್ ಸಿನಿಮಾಗಳಿಂದಲೂ ಇಷ್ಟವಾಗಿದ್ದ!
“ನನಗೆ ಆತ ನಿರ್ದೇಶಿಸಿದ ಬೇರೆ ಚಿತ್ರಗಳೂ ಇಷ್ಟವಾಗಿದ್ದವು. ಅದರಲ್ಲಿಯೂ ರಾಜ್ ಕುಮಾರ್ ನಟನೆಯ `ನಾ ನಿನ್ನ ಮರೆಯಲಾರೆ’ ಸಿನಿಮಾ ನಿಜಕ್ಕೂ ಮರೆಯಲಾಗದಂಥ ಸಿನಿಮಾ. ಪ್ರತಿಯೊಂದು ಸಿನಿಮಾದಲ್ಲಿ ಆತ ತನ್ನ ಛಾಪು ಮೂಡಿಸುತ್ತಿದ್ದ ಅನ್ನೋದನ್ನು ನೆನಪಿಸಿಕೊಳ್ಳಲೇಬೇಕು. ಆತನ ಸಿನಿಮಾ ಪರ್ಸೆಪ್ಷನ್ನೇ ಬೇರೆ ರೀತಿಯಲ್ಲಿತ್ತು. ಅದರಲ್ಲಿ ಗೆಲುವು ಕಂಡಿದ್ದು ಆತನ ಪ್ರತಿಭೆಗೆ ಸಾಕ್ಷಿ. ಈ ವರ್ಷ ಸಾವು ಕರೆದುಕೊಂಡು ಹೋದವರಿಗೆ ಲೆಕ್ಕವೇ ಇಲ್ಲ ಬಿಡಿ..” ಎಂದರು ಶ್ರೀನಾಥ್.

ಕನ್ನಡ, ತೆಲುಗು, ಹಿಂದಿ ಚಿತ್ರಗಳ ನಿರ್ದೇಶಕ
ಆಂಧ್ರ ಮೂಲದ ವಿಜಯಾ ರೆಡ್ಡಿ ಕನ್ನಡದಲ್ಲಿ ವಿಜಯ್ ಎಂದೇ ಗುರುತಿಸಿಕೊಂಡಿದ್ದರು. ರೈತ ಕುಟುಂಬದಲ್ಲಿ ಹುಟ್ಟಿದ್ದ ಅವರು ಕೆಲಸ ಹುಡುಕಿತ್ತಾ ಮದರಾಸಿಗೆ ಹೋಗಿ ಯಶಸ್ವಿ ನಿರ್ದೇಶಕ, ನಿರ್ಮಾಪಕರಾಗಿ ಬೆಳೆದಿದ್ದೇ ಇತಿಹಾಸ. ಕನ್ನಡದ ಯಶಸ್ವಿ ಚಿತ್ರಗಳ ನಿರ್ದೇಶಕ ಎಂದು ಗುರುತಿಸಲ್ಪಡುವ ವಿಜಯ್ ಅವರು ಗಂಧದ ಗುಡಿಯ ಮೂಲಕ ಡಾ.ರಾಜ್ ಅವರ ಸಿನಿಮಾಗಳ ನಿರ್ದೇಶಕರಾದರು. ಬಳಿಕ ಅವರಿಬ್ಬರ ಸಹಯೋಗದಲ್ಲಿ ಮೂಡಿ ಬಂದ ಮಯೂರ, ನಾ ನಿನ್ನ ಮರೆಯಲಾರೆ, ಶ್ರೀನಿವಾಸ ಕಲ್ಯಾಣ, ಸನಾದಿ ಅಪ್ಪಣ್ಣ, ಭಕ್ತ ಪ್ರಹ್ಲಾದ ಸೂಪರ್ ಹಿಟ್‌ಗಳಾಗಿದ್ದವು. ಅನಂತನಾಗ್ ಅವರೊಂದಿಗೆ ನಾ ನಿನ್ನ ಬಿಡಲಾರೆ, ಮುಳ್ಳಿನ ಗುಲಾಬಿ ಮಾತ್ರವಲ್ಲ ಶಂಕರನಾಗ್ ಅವರಿಗೆ ನೀಡಿದ ಆಟೋ ರಾಜ' ಸಿನಿಮಾ ಅವರ ವೃತ್ತಿ ಬದುಕಿನ ಪ್ರಮುಖ ಚಿತ್ರಗಳಾಗಿ ಗುರುತಿಸಲ್ಪಡುತ್ತವೆ. ಡಾ.ರಾಜ್ ಮತ್ತು ವಿಷ್ಣು ಅವರ 150ನೇ ಸಿನಿಮಾ ನಿರ್ದೇಶಿಸಿದ ಕೀರ್ತಿಯೂ ವಿಜಯ್ ಅವರದ್ದೇ ಎನ್ನುವುದು ಗಮನಾರ್ಹ. ವಿಷ್ಣುವರ್ಧನ್ ಅವರ ಹಿಟ್ ಚಿತ್ರಗಳಲ್ಲಿ ವಿಜಯ್ ನಿರ್ದೇಶನದದೇವ’ ಕೂಡ ಒಂದು. ಹುಲಿಯ ಹಾಲಿನ ಮೇವು, ಬಡವರ ಬಂಧು, ತಾಳಿಯ ಭಾಗ್ಯ, ಕೌಬಾಯ್ ಕಳ್ಳ ಸೇರಿದಂತೆ 37 ಕನ್ನಡ ಸಿನಿಮಾಗಳನ್ನು ನಿರ್ದೇಶಿಸಿರುವ ವಿಜಯ್ ಅವರು 16 ಹಿಂದಿ ಮತ್ತು 12 ತೆಲುಗು ಸಿನಿಮಾಗಳಿಗೂ ನಿರ್ದೇಶಕರಾಗಿದ್ದರು! ವಿ ಸೋಮಶೇಖರ್ ನಿರ್ದೇಶನದ ಆರದಗಾಯ ಚಿತ್ರಕ್ಕೆ ವಿಜಯ್ ಅವರು ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು.
ಛಾಯಾ ಚಿತ್ರಗಳು : ಪ್ರಗತಿ ಅಶ್ವಥ ನಾರಾಯಣ ಮತ್ತು ಬಿ ಎಸ್ ಬಸವರಾಜ್
