ತಮಿಳು, ತೆಲುಗಲ್ಲಿಯೂ ಬರಲಿದೆ `ಆ ಕರಾಳ ರಾತ್ರಿ’

ಎರಡು ವರ್ಷಗಳ ಹಿಂದೆ ತೆರೆಕಂಡು ಪ್ರೇಕ್ಷಕರಿಂದ ಪ್ರಶಂಸೆಗೊಳಗಾದ ನಿರ್ದೇಶಕ ದಯಾಳ್ ಪದ್ಮನಾಭನ್ ನಿರ್ದೇಶನದ ಚಿತ್ರ ಆ ಕರಾಳ ರಾತ್ರಿ. 2018ರ ಶ್ರೇಷ್ಠ ಚಿತ್ರವೆಂದು ರಾಜ್ಯ ಪ್ರಶಸ್ತಿ ಪಡೆದಿರುವ ಈ ಸಿನಿಮಾ ಇದೀಗ ತಮ್ಮ ನಿರ್ದೇಶನದಲ್ಲೇ ತಮಿಳು ಮತ್ತು ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

ದಯಾಳ್ ಪದ್ಮನಾಭನ್ ಅವರು ಕನ್ನಡದಲ್ಲಿ ತಮ್ಮದೇ ಶೈಲಿಯ ವೈವಿಧ್ಯಮಯ ಚಿತ್ರಗಳ ಛಾಪನ್ನು ಮೂಡಿಸಿರುವ ನಿರ್ದೇಶಕ. ಇದೀಗ ಮೊದಲ ಬಾರಿ ತೆಲುಗು ಸಿನಿಮಾವೊಂದಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಅವರು ತೆಲುಗಿಗೆ ಹೋಗುವ ಜತೆಗೆ ಕನ್ನಡದ ಒಂದಷ್ಟು ಪ್ರತಿಭೆಗಳನ್ನು ಕೂಡ ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ತೆಲುಗು ಚಿತ್ರವನ್ನು ಖ್ಯಾತ ನಿರ್ಮಾಪಕರಾದ ಅಲ್ಲು ಅರವಿಂದ್ ಅವರು ನಿರ್ಮಿಸುತ್ತಿದ್ದಾರೆ.

ಆ ಕರಾಳ ರಾತ್ರಿ ಚಿತ್ರದಲ್ಲಿ ನಟಿ ವೀಣಾ ಸುಂದರ್ ಅವರು ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಅದಕ್ಕೆ ಅವರಿಗೆ ಶ್ರೇಷ್ಠ ಪೋಷಕ ನಟಿ ರಾಜ್ಯ ಪ್ರಶಸ್ತಿಯೂ ಬಂದಿತ್ತು. ಇದೀಗ ತೆಲುಗಲ್ಲಿ ಕೂಡ ತಮ್ಮ ಪಾತ್ರವನ್ನು ಅವರೇ ನಿರ್ವಹಿಸುತ್ತಿರುವುದಾಗಿ ತಿಳಿದು ಬಂದಿದೆ. ಚಿತ್ರದಲ್ಲಿ ಭವಿಷ್ಯ ಹೇಳುವವನ ಪಾತ್ರದಲ್ಲಿ ಅಭಿನಯಿಸಿದ್ದ ನಟ ನವೀನ್ ಕೃಷ್ಣ ಅವರು ಕೂಡ ತೆಲುಗಲ್ಲಿಯೂ ಅದೇ ಪಾತ್ರವನ್ನು ನಿಭಾಯಿಸುವ ಜತೆಗೆ ಪ್ರಧಾನ ಸಹ ನಿರ್ದೇಶಕರಾಗಿ ದಯಾಳ್ ಅವರಿಗೆ ಜತೆ ನೀಡಲಿದ್ದಾರೆ. ತೆಲುಗಿನ ಚಿತ್ರ ಪೂರ್ಣವಾದ ಬಳಿಕ ತಮಿಳಲ್ಲಿ ಇದೇ ಚಿತ್ರವನ್ನು ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಅಭಿಷೇಕ್ ಫಿಲ್ಮ್ಸ್‌ಗಾಗಿ ರಮೇಶ್ ಪಿಳ್ಳೈ ನಿರ್ಮಿಸಲಿರುವುದಾಗಿ ದಯಾಳ್ ಪದ್ಮನಾಭನ್ ತಿಳಿಸಿದ್ದಾರೆ. ಅಂದಹಾಗೆ ಕನ್ನಡದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದ ಜೆ.ಕೆಯ ಪಾತ್ರವನ್ನು ಯಾರು ನಿಭಾಯಿಸುತ್ತಾರೆ ಎನ್ನುವುದನ್ನು ದಯಾಳ್ ಗುಟ್ಟಾಗಿಯೇ ಇರಿಸಿದ್ದಾರೆ.

ಇದೇ ತಿಂಗಳಲ್ಲಿ ತೆಲುಗು ಚಿತ್ರದ ಚಿತ್ರೀಕರಣ ಶುರುವಾಗಲಿದ್ದು ದಯಾಳ್ ಮತ್ತು ತಂಡ ಹೈದರಾಬಾದ್‌ ರಾಮೋಜಿ ಫಿಲ್ಮ್‌ ಸಿಟಿಗೆ ಹೊರಡಲಿದೆ. ಕಳೆದ 17ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ದಯಾಳ್ ಅವರ ಪರಭಾಷೆಯಲ್ಲಿನ ಈ ಹೊಸ ಪ್ರಯತ್ನಕ್ಕೆ ಸಿನಿಕನ್ನಡ ಶುಭಕೋರುತ್ತದೆ. ಅಂದಹಾಗೆ ತಮ್ಮ ನಿರ್ದೇಶನದಲ್ಲಿ ತಯಾರಾಗಿರುವ ಲೂಸ್ ಮಾದ ಯೋಗಿ ನಟನೆಯ ‘ಒಂಬತ್ತನೇ ದಿಕ್ಕು’ ಚಿತ್ರ ಥಿಯೇಟರ್ ಸಮಸ್ಯೆ ಮುಗಿದೊಡನೆ ಬಿಡುಗಡೆಯಾಗಲಿದ್ದು, ಹಾಗಾಗಿ ಕನ್ನಡ ಚಿತ್ರರಂಗದಿಂದ ದೂರವಾಗುವ ಮಾತೇ ಇಲ್ಲ ಎಂದಿದ್ದಾರೆ ದಯಾಳ್.

Recommended For You

Leave a Reply

error: Content is protected !!
%d bloggers like this: