
ಕನ್ನಡದ ಜನಪ್ರಿಯ ಗೀತ ಸಾಹಿತಿ `ತಂಗಾಳಿ’ ನಾಗರಾಜ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರಿಗೆ 53 ವರ್ಷ ವಯಸ್ಸಾಗಿತ್ತು.
ಸರಿಯಾಗಿ 18 ವರ್ಷಗಳ ಹಿಂದೆ ತೆರೆಕಂಡ ಸಿನಿಮಾ ‘ಹಾರ್ಟ್ ಬೀಟ್ಸ್'. ವಿಜಯರಾಘವೇಂದ್ರ ನಾಯಕರಾಗಿದ್ದ ಆ ಚಿತ್ರದಲ್ಲಿ ಚಿತ್ರಕ್ಕಿಂತ ಹೆಚ್ಚು ಜನಪ್ರಿಯವಾದ ಹಾಡೊಂದಿತ್ತು. ಅದುವೇ "ತಂಗಾಳಿ ಎಲ್ಲಿಂದ ಬೀಸುವೇ.." ಎನ್ನುವ ಪಲ್ಲವಿಯಿದ್ದ ಗೀತೆ. ವೆಂಕಟ್ ನಾರಾಯಣ್ ಸಂಗೀತದಲ್ಲಿ ಕೆ ಎಸ್ ಚಿತ್ರಾ ಮತ್ತು ಹರಿಹರನ್ ಕಂಠದಲ್ಲಿ ಮೂಡಿದ ಮಾಧುರ್ಯಪೂರ್ಣವಾದ ಆ ಗೀತೆಗೆ ಅಷ್ಟೇ ಮಧುರವಾದ ಸಾಹಿತ್ಯ ನೀಡಿದವರು ಇದೇ ನಾಗರಾಜ್. ಆ ಹಾಡು ಹಿಟ್ ಆಗುವುದರೊಂದಿಗೆ, ಗೀತೆಯ ಪಲ್ಲವಿಯಲ್ಲಿದ್ದ ತಂಗಾಳಿಯೊಂದಿಗೆ ರಚನೆಕಾರ ನಾಗರಾಜ್ ಗುರುತಿಸಿಕೊಂಡರು. ಜನಪ್ರಿಯ ಹಾಡುಗಳನ್ನು ನೀಡುತ್ತಿದ್ದರೂ ಪ್ರಚಾರದ ಬೆನ್ನು ಬೀಳದೆ ತಣ್ಣಗೆ ಓಡಾಡಿಕೊಂಡಿದ
್ದ ಅವರ ರೀತಿಗೂ ತಂಗಾಳಿ ಎನ್ನುವ ಹೆಸರು ಅನ್ವರ್ಥವಾಗಿತ್ತು.
ಚಾಲೆಂಜಿಂಗ್ ಸ್ಟಾರ್ ಅಭಿನಯದ
ಕಲಾಸಿಪಾಳ್ಯ ಚಿತ್ರದಲ್ಲಿ “ಧೂಳ್ ಮಗ ಧೂಳ್” ಎನ್ನುವ ಗೀತೆ ಎಷ್ಟು ದೊಡ್ಡ ಹೆಸರಾಗಿತ್ತು ಎನ್ನುವುದು ದರ್ಶನ್ ಫ್ಯಾನ್ಸ್ ಗೆ ಮಾತ್ರವಲ್ಲ; ಕನ್ನಡ ಸಿನಿ ಪ್ರಿಯರಿಗೆಲ್ಲ ಗೊತ್ತು. ಅಂಥದೊಂದು ಮಾಸ್ ಹಾಡನ್ನು ಕೂಡ ಇದೇ ಸಾಹಿತಿಯೇ ರಚಿಸಿದ್ದರು ಎನ್ನುವುದು ಬಹಳ ಮಂದಿಗೆ ಗೊತ್ತಿಲ್ಲ. ಇವಷ್ಟೇ ಅಲ್ಲದೆ, ಕಾವೇರಿ ನಗರ, ಚೆನ್ನ, ಯೋಗಿ, ಶ್ರೀ ನಾಗಶಕ್ತಿ, ತಿಮ್ಮ, ಪ್ರೇಮ್ ನಗರ, ನಂದನಂದಿತ, ಅಗ್ರಜ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನೂರಾರು ಹಾಡುಗಳನ್ನು ರಚಿಸಿದ ಕೀರ್ತಿ ಇವರದು. ಎರಡು ವರ್ಷಗಳ ಹಿಂದೆ ಡಿವಿಜಿಯವರ ಮಂಕುತಿಮ್ಮನ ಕಗ್ಗದ ಸಾಲುಗಳನ್ನು ಬಳಸಿಕೊಂಡು ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಜೆ.ಕೆ ನಾಯಕರಾಗಿ ನಟಿಸಿದ ‘ಆ ಕರಾಳ ರಾತ್ರಿ’ ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದರು. ಈ ಘಟನೆಗಳನ್ನು ನೆನಪಿಸಿಕೊಂಡು ನಿರ್ದೇಶಕ ದಯಾಳ್, ಸಾಹಿತಿ, ನಿರ್ದೇಶಕ ಕವಿರಾಜ್ ಸೇರಿದಂತೆ ಚಿತ್ರರಂಗದ ಪ್ರಮುಖರು ಸಾಮಾಜಿಕ ಜಾಲತಾಣಗಳಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

ಸಿನಿಕನ್ನಡ.ಕಾಮ್ ಜತೆ ಮಾತನಾಡಿದ ತಂಗಾಳಿ ನಾಗರಾಜ್ ಅವರ ಪುತ್ರ ವಿಷ್ಣು, “ಇಂದು ಮುಂಜಾನೆ ತಂದೆಯವರು ನಿಧನರಾದರು. ಅವರಿಗೆ ತುಂಬಾ ಹಿಂದೆ ಅಪಘಾತವಾಗಿರುವ ಕಾರಣ ವರ್ಷಗಳಿಂದ ನಡೆಯೋಕೆ ಆಗುತ್ತಿರಲಿಲ್ಲ. ಇತ್ತೀಚೆಗೆ ಮಾತು ಕೂಡ ನಿಂತು ಹೋಗಿತ್ತು. ನಮ್ಮ ಮನೆ ಜಾಲಹಳ್ಳಿಯಲ್ಲಿರೋದು. ಇಲ್ಲೇ ಬಾಹುಬಲಿ ನಗರದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದೇವೆ” ಎಂದರು. ತಂಗಾಳಿ ನಾಗರಾಜ್ ಅವರಿಗೆ ಇಬ್ಬರು ಮಕ್ಕಳು. ನಾಗವಿಷ್ಣು ಮತ್ತು ಆತನ ತಂಗಿ ದಕ್ಷತಾ ನಾಗ ಶ್ರೀ ಇಬ್ಬರೂ ವಿದ್ಯಾರ್ಥಿಗಳು. ಇಬ್ಬರು ಮಕ್ಕಳ ಜತೆ ಪತ್ನಿ ಮಂಗಳಾರನ್ನು ಅಗಲಿದ ನಾಗರಾಜ್ ಅವರಿಗೆ ಸಿನಿಕನ್ನಡ
ಶ್ರದ್ಧಾಂಜಲಿ ಸಮರ್ಪಿಸುತ್ತದೆ.
