
ಉಪೇಂದ್ರ ಎಂಬ ಸೂಪರ್ ಸ್ಟಾರ್ ಹೆಸರು ಬೆನ್ನಿಗಿದ್ದರೂ ಅದರ ಹಿಡಿತದಿಂದ ಹೊರಬಂದು ಚಿತ್ರರಂಗದಲ್ಲಿ ತನ್ನದೇ ಗುರುತು ಮೂಡಿಸಬೇಕು ಎಂಬ ಅಗಾಧವಾದ ಆಕಾಂಕ್ಷೆ ಹೊತ್ತು ಬರುತ್ತಿರುವ ‘ನಿರಂಜನ್ ಸುಧೀಂದ್ರ’ ಎಂಬ ಸ್ಫುರದ್ರೂಪಿ ಹುಡುಗನ ಮೊದಲ ಸಿನಿಮಾ ‘ಸೂಪರ್ ಸ್ಟಾರ್’ ನ ಟೀಸರ್ ಈಗಾಗಲೇ ದಾಖಲೆ ವೀಕ್ಷಣೆ ಕಂಡು ಪ್ರೇಕ್ಷಕರಲ್ಲಿ ಆಸಕ್ತಿ ಮೂಡಿಸಿದೆ. ಟೀಸರ್ ಕೇವಲ ಟೀಸರ್ ಮಾತ್ರ ನಮ್ಮ ಸಿನಿಮಾದ ಬಗ್ಗೆ ಜನರಿಗೆ ತೋರಿಸಬೇಕಾದುದು ಇನ್ನೂ ಬೇರೇನೇ ಇದೆ ಎನ್ನುವ ನಿರಂಜನ್ ಅವರು ಸಿನಿಕನ್ನಡ.ಕಾಮ್ ಗೆ ವಿಶೇಷ ಸಂದರ್ಶನ ನೀಡಿದ್ದಾರೆ.
ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ‘ಸೂಪರ್ ಸ್ಟಾರ್’ ಚಿತ್ರ ತಂಡದಿಂದ ಏನಾದರೂ ಅಪ್ಡೇಟ್ ನಿರೀಕ್ಷಿಸಬಹುದೇ?
ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಒಂದು ಥೀಮ್ ಸಾಂಗ್ ಬಿಡುಗಡೆ ಮಾಡುವ ಯೋಚನೆ ಇತ್ತು, ಆದರೆ ಕೋವಿಡ್ ಕಾರಣ ಚಿಕ್ಕಪ್ಪ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಅದೂ ಅಲ್ಲದೆ ನಮ್ಮ ಇಡೀ ಕುಟುಂಬ ಹುಟ್ಟುಹಬ್ಬದ ಆಚರಣೆಗೆ ಬೆಂಗಳೂರಿಂದ ಹೊರಗೆ ವೆಕೇಶನ್ ಹೋಗುವ ತಯಾರಿಯಲ್ಲಿದ್ದೇವೆ ಹಾಗಾಗಿ ಅದೆಲ್ಲ ಮುಗಿಸಿ ಬಂದ ಎರಡು ವಾರದಲ್ಲಿ ಅಪ್ಡೇಟ್ ಕೊಡುವ ಯೋಜನೆ ಹಾಕಿಕೊಂಡಿದ್ದೇವೆ.
ಕ್ಯಾರಕ್ಟರ್ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಬಗ್ಗೆ ಹೇಗನಿಸುತ್ತಿದೆ?
ಒಂದೆಡೆ ಬಹಳವೇ ಖುಷಿಯಾಗಿದೆ, ಜೊತೆಗೆ ಜವಾಬ್ದಾರಿಯೂ ಹೆಚ್ಚಿದೆ ಎನ್ನಬಹುದು, ಅಂದಹಾಗೆ ಈ
ಕ್ಯಾರಕ್ಟರ್ ಟೀಸರ್ ಕೇವಲ ಒಂದು ಸಣ್ಣ ಝಲಕ್ ಎಂದಷ್ಟೇ ಹೇಳುತ್ತೇನೆ, ಸಿನಿಮಾದ ಬಗ್ಗೆ ಜನರಿಗೆ ನಾವು ಇನ್ನೂ ತೋರಿಸಬೇಕಾದುದು ಬೇರೇನೇ ಇದೆ, ಹಂತ ಹಂತವಾಗಿ ಒಂದೊಂದೇ ಅಪ್ಡೇಟ್ ಅನ್ನು ಪ್ರೇಕ್ಷಕರ ಮುಂದಿಡುವ ಯೋಜನೆಯನ್ನು ನಮ್ಮ ಇಡೀ ಚಿತ್ರತಂಡ ಇಟ್ಟುಕೊಂಡಿದ್ದೇವೆ. ಕಷ್ಟಪಟ್ಟು ಕೆಲಸ ಮಾಡಿದ್ದೇವೆ ಜನರಿಗೆ ಖಂಡಿತ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ.
ಉಪೇಂದ್ರ ಅವರ ಮನೆಯಿಂದ ಹೊರಬರುತ್ತಿರುವ ಪ್ರತಿಭೆ, ಸಹಜವಾಗಿ ಜನರಲ್ಲಿ ನಿಮ್ಮ ಬಗ್ಗೆ ನಿರೀಕ್ಷೆ ಹೆಚ್ಚಿದೆ ಈ ಒತ್ತಡವನ್ನು ಹೇಗೆ ನಿಭಾಯಿಸುತ್ತಿದ್ದೀರಿ?
ಹೌದು ನಿಜ, ನನ್ನ ಮೇಲೆ ಜೊತೆಗೆ ನಿರ್ದೇಶಕರ ಮೇಲೆಯೂ ಅಷ್ಟೇ ನಿರೀಕ್ಷೆ ಇದೆ. ನಾನು ಯಾವಾಗಲೂ ಹೇಳುವುದು ಒಂದೇ ಉಪೇಂದ್ರ ಇಸ್ ಎ ಲೆಜೆಂಡ್ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದವರು, ದಯವಿಟ್ಟು ನನ್ನನ್ನು ಅವರಿಗೆ ಹೋಲಿಸಬೇಡಿ ನಾನಿನ್ನೂ ಈಗಷ್ಟೇ ನೆಲೆಕಂಡುಕೊಂಡು ಕೊಳ್ಳುತ್ತಿರುವ ಕಲಾವಿದ ಅಷ್ಟೆ. ಅಂದಹಾಗೆ ಚಿಕ್ಕಪ್ಪ ಅವರ ಆಶೀರ್ವಾದ ಇರುವುದು ನನ್ನ ಸೌಭಾಗ್ಯ ಅದರಲ್ಲಿ ಎರಡು ಮಾತಿಲ್ಲ. ಹೌದು ಸಹಜವಾಗಿ ಜನರಲ್ಲಿ ನಿರೀಕ್ಷೆ ಇದೆ, ಅವರ ನಿರೀಕ್ಷೆ ಹುಸಿಯಾಗದಂತೆ ನೋಡಿಕೊಳ್ಳುವ ಎಲ್ಲ ತಯಾರಿ ಮಾಡಿಕೊಂಡಿದ್ದೇನೆ. ನಮ್ಮ ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಅವರೂ ಸಹ ಅಷ್ಟೇ ಜವಾಬ್ದಾರಿಯಿಂದ ಎರಡು ವರ್ಷ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿ ಅವರದೇ ಬ್ಯಾನರ್ ನಲ್ಲಿ ಹಣಕಾಸಿನ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಈ ಚಿತ್ರ ಮಾಡುತ್ತಿದ್ದಾರೆ. ಕ್ಯಾರಕ್ಟರ್ ಟೀಸರ್ ನೋಡಿದವರಿಗೆ ಈಗಾಗಲೇ ಚಿತ್ರದ ಮೇಕಿಂಗ್ ಯಾವ ಮಟ್ಟದಲ್ಲಿದೆ ಎಂಬ ಐಡಿಯಾ ಬಂದಿರುತ್ತದೆ. ಒಂದೊಳ್ಳೆ ಸ್ಕ್ರಿಪ್ಟ್ ಗಾಗಿ ಸುಮಾರು ನಾಲ್ಕು ವರ್ಷ ಕಾದಿದ್ದ ನನಗೆ ಈ ಸಿನಿಮಾ ಸಿಕ್ಕಿದ್ದು ಖುಷಿ ಕೊಟ್ಟಿದೆ. ನೂರು ಪ್ರತಿಶತ ಶ್ರಮ ಹಾಕಿ ಜನರ ಮುಂದೆ ತರುವ ಉದ್ದೇಶವಿದೆ.

ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ! ಅಂದಹಾಗೆ ಚಿತ್ರದ ಕಥಾನಾಯಕಿ ಯಾರು?
ಚಿತ್ರದಲ್ಲಿ ನಾನೊಬ್ಬ ಡಾನ್ಸರ್, ಮೊನ್ನೆ ಬಿಡುಗಡೆಯಾದ ಕ್ಯಾರೆಕ್ಟರ್ ಟೀಸರ್ ನಲ್ಲಿ ಇದನ್ನು ನಾವು ರಿವೀಲ್ ಮಾಡಿಲ್ಲ. ನೃತ್ಯದ ಸುತ್ತ ಕೇಂದ್ರಿಕೃತವಾಗಿರುವ ಸ್ಕ್ರಿಪ್ಟ್ ಇದು, ನನ್ನ ಪಾತ್ರಕ್ಕೆ ಬೇರೆ ಬೇರೆ ರೀತಿಯ ಶೇಡ್ಸ್ ಇರಲಿದ್ದು ಜೊತೆಗೆ ಮೈನವಿರೇಳಿಸುವ ಸ್ಟಂಟ್ಸ್ ಕೂಡ ಇರಲಿವೆ, ಎಲ್ಲಕಿಂತ ಮಿಗಿಲಾಗಿ ಸಮಾಜಕ್ಕೆ ಒಂದು ಒಳ್ಳೆ ಸಂದೇಶವಿರುವ ಚಿತ್ರ ಎಂದಷ್ಟೇ ನಾನು ಈ ಹಂತದಲ್ಲಿ ಹೇಳಬಹುದು. ಮುಂದೆ ಸಿನಿಮಾ ಟ್ರೇಲರ್ ಬಿಡುಗಡೆ ಆಗುವಾಗ ಈ ಚಿತ್ರದ ಬಗ್ಗೆ ಹಾಗೂ ನನ್ನ ಪಾತ್ರದ ಬಗ್ಗೆ ಸಂಪೂರ್ಣವಾದ ಮಾಹಿತಿ ಸಿಗುತ್ತದೆ. ಚಿತ್ರದ ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಸ್ಕ್ರಿಪ್ಟ್ ಗೆ ಸರಿಹೊಂದುವ ನಾಯಕಿಯ ಹುಡುಕಾಟದಲ್ಲಿದ್ದೇವೆ, ಮುಂಬೈನಿಂದ ಕರೆತರುವ ಯೋಜನೆ ಸಹ ಇದೆ. ಮುಂದಿನ ಒಂದು ತಿಂಗಳ ಒಳಗೆ ನಾಯಕಿಯ ಪರಿಚಯ ಮಾಡಬಹುದು ಎಂದು ನಿರ್ದೇಶಕರು ಹೇಳಿದ್ದಾರೆ.
ಉಪೇಂದ್ರ ಅವರ ಅಣ್ಣನ ಮಗ ಹಾಗಾಗಿ ಚಿತ್ರರಂಗದಲ್ಲಿ ಹೆಚ್ಚು ಶ್ರಮವಿಲ್ಲದೆ ಎಂಟ್ರಿ ಸಿಕ್ಕಿತು ಎಂದು ಜನ ಹೇಳುವುದು ನಿಮ್ಮ ಕಿವಿಗೆ ಬಿದ್ದಿರತ್ತೆ, ಇದರ ಬಗ್ಗೆ ನೀವು ಏನು ಹೇಳುತ್ತೀರಿ?
ಈ ಮೊದಲೇ ಹೇಳಿದ ಹಾಗೆ ಉಪೇಂದ್ರ ಅವರು ನನ್ನ ಚಿಕ್ಕಪ್ಪ, ಅವರ ಆಶೀರ್ವಾದ ನನ್ನ ಮೇಲಿದೆ ಎಂದು ಹೇಳಿಕೊಳ್ಳಲಿಕ್ಕೆ ನನಗೆ ಖುಷಿ ಇದೆ. ಆದರೆ ಕೇವಲ ಅದೊಂದೇ ಕಾರಣಕ್ಕೆ ನನಗೆ ಈ ಚಿತ್ರದ ಅವಕಾಶ ಸಿಕ್ಕಿತು ಎಂಬುದು ಶುದ್ಧ ಸುಳ್ಳು. ನಾನು ಕೂಡ ನನ್ನ ನೃತ್ಯ, ಸ್ಟಂಟ್ಸ್, ಫೋಟೋ ಸೇರಿದಂತೆ ಒಂದು ಪೋರ್ಟ್ ಫೋಲಿಯೋ ಸಿದ್ಧಪಡಿಸಿಕೊಂಡು ಒಬ್ಬ ಹೊಸ ಆರ್ಟಿಸ್ಟ್ ನಂತೆ ಅವಕಾಶಗಳಿಗೆ ಪ್ರಯತ್ನ ಪಟ್ಟಿದ್ದೇನೆ. ಹಾಗೊಮ್ಮೆ ನನ್ನ ಡ್ಯಾನ್ಸ್ ಮಾಸ್ಟರ್ ಮೂಲಕ ನಿರ್ದೇಶಕ ರಮೇಶ್ ಅವರಿಗೆ ನನ್ನ ಪ್ರೊಫೈಲ್ ಸಿಕ್ಕಿತು, ಆಗ ಅವರಿಗೆ ಹಿಡಿಸಿ ಈ ಹುಡುಗನಲ್ಲಿ ಏನೋ ವಿಶೇಷತೆಯಿದೆ ಇವರನ್ನು ಸಂಪರ್ಕಿಸೋಣ ಎಂದರಂತೆ. ಆ ಸಮಯದಲ್ಲಿ ನಾನು ಉಪೇಂದ್ರ ಅವರ ಅಣ್ಣನ ಮಗ ಎಂಬ ವಿಷಯ ಅವರಿಗೆ ಗೊತ್ತಿರಲಿಲ್ಲ. ಅಂದಹಾಗೆ ನಾನು ಸಹ ಸುಮಾರು ಐದಾರು ವರ್ಷಗಳಿಂದ ಅವಕಾಶದ ಹುಡುಕಾಟದಲ್ಲಿದ್ದೇನೆ ಆದರೆ ಎಲ್ಲಿಯೂ ಸಹ ಉಪೇಂದ್ರ ಅವರ ಹೆಸರು ಬಳಸಿಕೊಂಡು ಅವಕಾಶ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ, ಅದು ಸರಿ ಕೂಡ ಅಲ್ಲ. ಅಂದಹಾಗೆ ಪ್ರಿಯಾಂಕ ಅವರು ಅಭಿನಯಿಸಿದ್ದ ‘2nd ಹಾಫ್’ ಸಿನಿಮಾಗೆ ಕೂಡ ಒಂದು ಪಾತ್ರವಿದೆ ಮಾಡುತ್ತೀರಾ ಎಂದು ಕೇಳಿದರು, ಆಡಿಷನ್ ನಲ್ಲಿ ನನ್ನ ಪಾತ್ರ ನಿರ್ವಹಣೆ ಇಷ್ಟವಾದ ನಂತರವೇ ನನಗೆ ಅವಕಾಶ ಸಿಕ್ಕಿದ್ದು, ಹಾಗೆಯೆ ‘ನಮ್ ಹುಡುಗ್ರು’ ಸಿನಿಮಾ ಕೂಡ. ಅಂದಹಾಗೆ ಬ್ಯಾಗ್ರೌಂಡ್ ಇರಲಿ ಇಲ್ಲದಿರಲಿ ಇಲ್ಲಿ ಶ್ರಮ ವಹಿಸಿ ಕೆಲಸ ಮಾಡಿದರೆ ಮಾತ್ರ ಉಳಿಗಾಲ ಎಂಬ ಸತ್ಯ ನನಗೆ ತಿಳಿದಿದೆ. ಅದೂ ಅಲ್ಲದೆ ನಮ್ಮ ಜನ ಪ್ರತಿಭೆಗೆ ಬೆಲೆ ಕೊಡುತ್ತಾರೆಯೆ ಹೊರತು ಒಬ್ಬರ ಹಿನ್ನೆಲೆ ನೋಡಿ ಅಲ್ಲ ಎಂಬುದು ಕೂಡ ನನಗೆ ತಿಳಿದಿದೆ. ಹಿನ್ನಲೆ ಇರುವ ಕಾರಣ ಇನ್ನೂ ಹೆಚ್ಚು ಕಷ್ಟ ಪಡಬೇಕು ಎಂಬುದು ಅಷ್ಟೇ ಸತ್ಯ.

ಚಿತ್ರರಂಗಕ್ಕೆ ಬರಬೇಕು ಎಂಬ ಸಲುವಾಗಿ ನೀವು ಮಾಡಿಕೊಂಡ ತಯಾರಿಗಳೇನು?
ಚಿಕ್ಕಂದಿನಿಂದಲೇ ನಾನು ಡ್ಯಾನ್ಸರ್, ಕಾಲೇಜಿಗೆ ಬರುವ ಹೊತ್ತಿಗೆ ನಟನಾಗಬೇಕೆಂಬ ಆಸಕ್ತಿ ಬಲವಾಯಿತು, ಮೊದಲು ಬಾಲಿವುಡ್ ಡಾನ್ಸ್ ಶೈಲಿಯಲ್ಲಿ ಪರಿಣತಿ ಹೊಂದಿದ್ದ ನನಗೆ ಒಬ್ಬ ಡ್ಯಾನ್ಸರ್ ಗೆ ಎಲ್ಲ ಬಗೆಯ ಡ್ಯಾನ್ಸ್ ಫಾರ್ಮ್ ತಿಳಿದಿರಬೇಕು ಎಂದೆನಿಸಿ ವೆಸ್ಟರ್ನ್, ಹಿಪ್ ಹಾಪ್ ಬ್ರೇಕ್ ಡ್ಯಾನ್ಸ್ ಹಾಗೆ ವಿವಿಧ ಶೈಲಿಯ ನೃತ್ಯದ ಅಭ್ಯಾಸ ಮಾಡಲು ಪ್ರಾರಂಭಿಸಿದೆ. PESIT ಕಾಲೇಜಿನಲ್ಲಿ ಕಲಿಯುವಾಗ ‘ಪಲ್ಸ್ ಡ್ಯಾನ್ಸ್ ಕ್ರೂ’ ಎಂಬ ತಂಡ ಕಟ್ಟಿಕೊಂಡು ಕರ್ನಾಟಕ, ಮುಂಬೈ, ಕೊಲ್ಕತ್ತಾ ಹಾಗೆ ಬೇರೆ ರಾಜ್ಯಗಳಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಗೆದ್ದ ಅನುಭವವಿದೆ. ‘2 nd ಹಾಫ್’ ಸಿನಿಮಾ ಮುಗಿದ ನಂತರ ರವಿ ಜಮಖಂಡಿ ಅವರ ಬಳಿ ಸುಮಾರು ಒಂಬತ್ತು ತಿಂಗಳು ಸ್ಟಂಟ್ಸ್ ಮತ್ತು ಜಿಮ್ನ್ಯಾಸ್ಟಿಕ್ಸ್ ತರಬೇತಿ ಪಡೆದುಕೊಂಡೇ. ಒಬ್ಬ ಹೀರೋ ಅಂದಮೇಲೆ ಡ್ಯಾನ್ಸ್ ಜೊತೆಗೆ ವಿವಿಧ ಬಗೆಯ ಸ್ಟಂಟ್ಸ್ಗಳನ್ನು ಕಲಿತಿರಬೇಕು ಎಂಬ ಹುಚ್ಚಿತ್ತು ನನಗೆ ಹಾಗೆ ಬ್ಯಾಕ್ ಫ್ಲಿಪ್ಸ್, ಕಿಕ್ಸ್, ಮಾರ್ಷಲ್ ಆರ್ಟ್ಸ್, ವೆಪನ್ ಹಂಡ್ಲಿಂಗ್ ಮತ್ತು ಸ್ಟಿಕ್ ಫೈಟಿಂಗ್ ಇದನೆಲ್ಲ ಶ್ರದ್ಧೆ ಇಂದ ಕಲಿತೆ. ಕಲಿತದ್ದೆಲ್ಲ ‘ ಸೂಪರ್ ಸ್ಟಾರ್ ‘ ಸಿನಿಮಾಗೆ ಉಪಯೋಗವಾಗುತ್ತಿದೆ.

ಸಂದರ್ಶನ: ಸುಜಯ್ ಬೆದ್ರ