ಜ್ಯೂನಿಯರ್ ರಾಜ್ ಕುಮಾರ್ ಎಂದೇ ಖ್ಯಾತರಾಗಿದ್ದ ರಂಗಭೂಮಿ ನಟ ಕೊಡಗನೂರು ಜಯಕುಮಾರ್ (72 ವರ್ಷ) ನಿಧನರಾಗಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ದಾವಣಗೆರೆಯ ತಮ್ಮ ಪುತ್ರನ ಮನೆಯಲ್ಲಿ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಜಯಕುಮಾರ್ ಅವರು ರಂಗಭೂಮಿ ಮಾತ್ರವಲ್ಲದೆ, ಸಿನಿಮಾ, ಕಿರುತೆರೆಯಲ್ಲಿ ಹಿರಿಯ ಪೋಷಕ ಕಲಾವಿದರಾಗಿ ಗುರುತಿಸಿಕೊಂಡಿದ್ದರು.
ಕಳೆದ ನಾಲ್ಕೈದು ದಿನಗಳಿಂದ ದಾವಣಗೆರೆಯಲ್ಲಿರುವ ಹಿರಿಯ ಪುತ್ರನ ವಾಸವಾಗಿದ್ದ ಅವರು ಇಂದು ಬೆಳಿಗ್ಗೆ ತಮ್ಮ ಊರಾದ ಕೊಡಗನೂರಿಗೆ ಹೊರಟಿದ್ದರು. ಸಿನಿಕನ್ನಡದ ಜತೆಗೆ ಮಾತನಾಡಿದ ಅವರ ಪುತ್ರ “ಶರ್ಟ್ ಹಾಕಿ ಹೊರಟು ನಿಂತವರು, ಎದೆ ನೋವಿನಿಂದ ಅಲ್ಲೇ ಮಂಚದ ಮೇಲೆ ಕುಳಿತರು. ಹಾಗೆ ಕುಳಿತವರಿಗೆ ಪ್ರಜ್ಞೆಯೇ ಇಲ್ಲ ಎಂದು ಅರಿವಾದೊಡನೆ ಮಲಗಿಸಿ ಫ್ಯಾನ್ ಹಾಕಿದೆವು. ಆದರೆ ಅದಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು” ಎಂದು ನೋವು ವ್ಯಕ್ತಪಡಿಸಿದರು.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಮಹಾಭಾರತ’ ಕನ್ನಡ ಧಾರಾವಾಹಿಯಲ್ಲಿ ಅವರು ನಿರ್ವಹಿಸಿದ್ದ ಧೃತರಾಷ್ಟ್ರನ ಪಾತ್ರವೇ ಕೊನೆಯ ಪಾತ್ರವಾಯಿತು.
ದಾವಣಗೆರೆ ಸಮೀಪ ಕೊಡಗನೂರು ಅವರ ಜನ್ಮಸ್ಥಳ. ವೃತ್ತಿರಂಗಭೂಮಿ ಜೊತೆ ಅವರದು ಸುಮಾರು ನಾಲ್ಕೂವರೆ ದಶಕಗಳ ಒಡನಾಟ. ಗುಬ್ಬಿ ಕಂಪನಿ, ಕೆಬಿಆರ್ ಕಂಪನಿ, ಕುಮಾರೇಶ್ವರ ನಾಟಕ ಸಂಘ, ಶ್ರೀ ಶೈಲ ಮಲ್ಲಿಕಾರ್ಜುನ ನಾಟ್ಯ ಸಂಘ, ಕರ್ನಾಟಕ ಕಲಾ ವೈಭವ ಸಂಘ, ಸಂಗಮೇಶ್ವರ ನಾಟಕ ಸಂಘಗಳ ಹಲವಾರು ನಾಟಕಗಳಲ್ಲಿ ಜಯಕುಮಾರ್ ಅಭಿನಯಿಸಿದ್ದಾರೆ. ಪೊಲೀಸನ ಮಗಳು, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಮಹಾತ್ಮೆ, ಮದಕರಿನಾಯಕ, ಮುದುಕನ ಮದುವೆ, ಟಿಪ್ಪು ಸುಲ್ತಾನ, ಗೋಮುಖ ವ್ಯಾಘ್ರ, ರಾಷ್ಟ್ರವೀರ ಎಚ್ಚಮ್ಮನಾಯಕ ಅವರಿಗೆ ಜನಪ್ರಿಯತೆ ತಂದುಕೊಟ್ಟ ನಾಟಕಗಳು. ರಂಗಭೂಮಿಯ ಹೆಸರಾಂತ ನಿರ್ದೇಶಕರಾದ ಪಿ.ಬಿ.ದುತ್ತರಗಿ, ಆರ್.ಡಿ.ಕಾಮತ್ ಅವರ ನಾಟಕಗಳಲ್ಲಿ ನಟಿಸಿದ್ದರು.
ಸಿನಿಮಾ ವಿಚಾರಕ್ಕೆ ಬಂದರೆ ಮುಸುರಿ ಕೃಷ್ಣಮೂರ್ತಿ, ಸುಂದರ ಕೃಷ್ಣ ಅರಸ್, ಜಿ.ವಿ.ಚನ್ನಬಸಪ್ಪ, ಎಚ್.ಟಿ.ಅರಸ್, ಉಮಾಶ್ರೀ, ದಿನೇಶ್, ಉದಯಕುಮಾರ್, ಸುಧೀರ್, ಓಬಳೇಶ್ವರ್ ಸೇರಿದಂತೆ ವೃತ್ತಿರಂಗಭೂಮಿಯ ಹೆಸರಾಂತ ಕಲಾವಿದರೊಂದಿಗೆ ಅಭಿನಯಿಸಿದ್ದಾರೆ.
ತಾಯಿಗೊಬ್ಬ ಕರ್ಣ, ಸತ್ಯನಾರಾಯಣ ಪೂಜಾಫಲ, ಸಾಂಗ್ಲಿಯಾನ-3, ಜನುಮದ ಜೋಡಿ, ಕಿಟ್ಟಿ, ಜಾಕಿ, ರಾಜ, ತಾಯಿ, ಶಬರಿ, ಮರಣದಂಡನೆ ಸೇರಿದಂತೆ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಂಕ್ರಾಂತಿ, ಮಹಾಮಾಯೆ, ಅಪ್ಪ, ಕೆಳದಿ ಚನ್ನಮ್ಮ, ಭಾಗೀರಥಿ, ಶ್ರೀ ರಾಘವೇಂದ್ರ ವೈಭವ, ಪಾ.ಪ.ಪಾಂಡು, ಶ್ರೀ ಕಲಾಭೈರವ ಮಹಾತ್ಮೆ ಸೇರಿದಂತೆ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸುವರ್ಣ ಅಕಾಡೆಮಿ ಪ್ರಶಸ್ತಿ, ವರದಪ್ಪ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗೆ ಅವರು ಭಾಜನರಾಗಿದ್ದರು.
ಮೃತರಿಗೆ ನಾಲ್ವರು ಮಕ್ಕಳಿದ್ದಾರೆ. ಆದರೆ ಜಯಕುಮಾರ್ ಅವರಂತೆ ಯಾರೂ ಕಲಾರಂಗಕ್ಕೆ ಪ್ರವೇಶಿಸಿಲ್ಲ.