ಸಂಗೀತ ನಿರ್ದೇಶಕ ರಾಜನ್ ವಿಧಿವಶ

ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕರಾಗಿದ್ದ ರಾಜನ್ (85) ನಿನ್ನೆ ರಾತ್ರಿ ನಿಧನರಾಗಿದ್ದಾರೆ. ರಾಜನ್ ಅವರು ಸಹೋದರ ನಾಗೇಂದ್ರ ಅವರೊಡನೆ ಸೇರಿಕೊಂಡು ರಾಜನ್ ನಾಗೇಂದ್ರ ಜೋಡಿಯಾಗಿ ಕನ್ನಡ ಚಿತ್ರಲೋಕಕ್ಕೆ ಅದ್ಭುತ ಹಾಡುಗಳನ್ನು ನೀಡಿದ್ದರು. 20 ವರ್ಷಗಳ ಹಿಂದೆ ನಾಗೇಂದ್ರ ತೀರಿಕೊಂಡಿದ್ದರು. ಇದೀಗ ಭಾನುವಾರ ರಾತ್ರಿ‌ 10.30ಕ್ಕೆ ರಾಜನ್ ಕೂಡ ನಿಧನರಾಗಿದ್ದಾರೆ.

ಎಂದಿನಂತೆ ಸಕ್ರಿಯರಾಗಿದ್ದ ರಾಜನ್ ಅವರು ಮಲಗುವ ವೇಳೆ ಗ್ಯಾಸ್ಟಿಕ್ ಸಮಸ್ಯೆಗೆ ಒಳಗಾಗಿದ್ದರು. ಆದರೆ ಕ್ಷಣಗಳಲ್ಲಿ ಸಮಸ್ಯೆ ಉಲ್ಬಣಗೊಂಡ ನಿಧನರಾದರೆಂದು ರಾಜನ್ ಪುತ್ರ ಅನಂತ್ ತಿಳಿಸಿದ್ದಾರೆ.

1950ರಿಂದ 90ರ ದಶಕದ ವರೆಗೆ 40 ವರ್ಷಗಳಲ್ಲಿ 375 ಚಿತ್ರಗಳಿಗೆ ಸಂಗೀತ ನೀಡಿದ ಕೀರ್ತಿ ರಾಜನ್ ನಾಗೇಂದ್ರ ಅವರದ್ದು. ಅವುಗಳಲ್ಲಿ 200 ಚಿತ್ರಗಳಯ ಕನ್ನಡದ್ದೇ ಆಗಿರುವುದು ಗಮನಾರ್ಹ. ಉಳಿದಂತೆ ತುಳು, ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಸಿಂಹಳ ಭಾಷೆಯ ಹಾಡುಗಳಿಗೂ ಸಂಗೀತ ನೀಡಿದ ಕೀರ್ತಿ ಇವರದು. ಮೃತರ ಅಂತ್ಯಕ್ರಿಯೆಯನ್ನು ಹೆಬ್ಬಾಳದ ಸ್ಮಶಾನದಲ್ಲಿ ನೆರವೇರಿಸುವ ಮಾಹಿತಿ ದೊರಕಿದೆ.

ಡಾ.ರಾಜ್, ಅನಂತನಾಗ್, ವಿಷ್ಣು ಹಿಟ್ಸ್!

ಕನ್ನಡದ ಮಾಧುರ್ಯಪೂರ್ಣ ಗೀತೆಗಳ ಪಟ್ಟಿ ಮಾಡಿದರೆ ಅವುಗಳಲ್ಲಿ ಅವುಗಳಲ್ಲಿ ರಾಜನ್ ನಾಗೇಂದ್ರ ಸಂಗೀತ ಇರಲೇಬೇಕು. ಅದರಲ್ಲೂ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅನಂತನಾಗ್ ಅವರ ಜನಪ್ರಿಯ ಹಾಡುಗಳನ್ನು ನೆನಪಿಸುವಾಗ ರಾಜನ್ ನಾಗೇಂದ್ರ ಹೆಸರನ್ನು ಮರೆಯಲಾಗದು. ಐವತ್ತರ ದಶಕದಿಂದಲೇ ಹಾಡುಗಳನ್ನು ನೀಡಿದ್ದರೂ ಅಪಾರ ಜನಪ್ರಿಯತೆಯ ಆರಂಭವಾಗಿದ್ದು 1973ರಲ್ಲಿ ತೆರೆಕಂಡ ‘ಗಂಧದ ಗುಡಿ’ ಚಿತ್ರದ ಮೂಲಕ. ವಿಪರ್ಯಾಸ ಏನೆಂದರೆ ಎರಡೇ ದಿನಗಳ ಹಿಂದೆ ಗಂಧದ ಗುಡಿ ನಿರ್ದೇಶಕ ವಿಜಯ್ ಕಾಲವಾಗಿದ್ದರು. ವಿಜಯ್ ಜತೆಗಿನ ಖ್ಯಾತ ಚಿತ್ರಗಳಲ್ಲಿ ‘ನಾ ನಿನ ಮರೆಯಲಾರೆ’, ‘ನಾ ನಿನ್ನ ಬಿಡಲಾರೆ’ ಕೂಡ ಸೇರಿಕೊಂಡಿವೆ. ವಿಷ್ಣುವರ್ಧನ್ ಅವರ ನಟನೆಯ ‘ಹೊಂಬಿಸಿಲು’, ಅನಂತನಾಗ್ ನಟನೆಯ ‘ಬಯಲುದಾರಿ’, ‘ಚಂದನದ ಗೊಂಬೆ’ ಗೀತೆಗಳಿಗೆ ಇಂದಿಗೂ ಸಂಗೀತ ಲೋಕದಲ್ಲಿ ಅಪಾರ ಮನ್ನಣೆ ಇದೆ.

ಕೆ ಎಸ್ ಚಿತ್ರಾರ ಪರಿಚಯ

ಕೇರಳದ ಗಾಯಕಿ ಕೆ ಎಸ್ ಚಿತ್ರಾ ಅವರನ್ನು ಕನ್ನಡಕ್ಕೆ ಮೊದಲು ಪರಿಚಯಿಸಿದ ಕೀರ್ತಿ ಕೂಡ ರಾಜನ್ ನಾಗೇಂದ್ರ ಜೋಡಿಗೆ ಸಲ್ಲುತ್ತದೆ. ರಾಜನ್ ನಾಗೇಂದ್ರ ಜೋಡಿಯು ಕನ್ನಡದಲ್ಲಿ ‘ಎರಡು ಕನಸು’ ಮತ್ತು ‘ಪರಸಂಗದ ಗೆಂಡೆತಿಮ್ಮ’ ಹಾಗೂ ತೆಲುಗಿನಲ್ಲಿ ‘ಪಂತುಲಮ್ಮ’ ಚಿತ್ರಗಳಿಗೆ ನೀಡಿದ ಸಂಗೀತ ಆಯಾ ರಾಜ್ಯಸರ್ಕಾರಗಳಿಂದ ಶ್ರೇಷ್ಠ ಸಂಗೀತ ನಿರ್ದೇಶಕ ಗೌರವವನ್ನು ತಂದುಕೊಟ್ಟಿತ್ತು.

ಮರೆಯಲಾಗದ ಗೀತೆಗಳು

ಆಕಾಶವೆ ಬೀಳಲಿ ಮೇಲೇ, ನಾವಾಡುವ ನುಡಿಯೇ ಕನ್ನಡ ನುಡಿ, ಕನ್ನಡವೇ ಸವಿ ನುಡಿಯು ಕರುನಾಡು ತಾಯ್ನಾಡು, ಮಾಮರವೆಲ್ಲೋ ಕೋಗಿಲೆಯೆಲ್ಲೋ, ಆಸೆಯ ಭಾವ ಒಲವಿನ ಜೀವ, ಜೀವ ವೀಣೆ ನೀಡು ಮಿಡಿತದ ಸಂಗೀತ, ಬಾನಲ್ಲು ನೀನೆ ಭುವಿಯಲ್ಲು ನೀನೆ, ಆಕಾಶ ದೀಪವು ನೀನು, ಏನೆಂದು ನಾ ಹೇಳಲಿ, ಆಕಾಶದಿಂದ ಧರೆಗಿಳಿದ ರಂಭೆ, ಆಡು ಆಟ ಆಡು, ಸುತ್ತ ಮುತ್ತ ಯಾರು ಇಲ್ಲ, ನಾ ಹಾಡಲು ನೀವು ಹಾಡಬೇಕು, ನೋಟದಾಗೆ ನಗೆಯಾ ಮೀಟಿ, ತೇರ ಏರಿ ಅಂಬರದಾಗೆ, ಬಂದೆಯ ಬಾಳಿನ ಬೆಳಕಾಗಿ, ನನ್ನ ಆಸೆ ಹಣ್ಣಾಗಿ, ನಲಿವಾ ಗುಲಾಬಿ ಹೂವೆ, ನೀ ನಡೆವ ಹಾದಿಯಲ್ಲಿ, ಮುತ್ತಿನಾ ಹನಿಗಳು ಸುತ್ತಲೂ ಮುತ್ತಲೂ, ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ, ದೇವಿ ಶಾರದೆ ಲೋಕ ಪೂಜಿತೆ, ತಾರೆಯು ಬಾನಿಗೆ ತಾವರೆ ನೀರಿಗೆ, ಜೇನಿನ ಹೊಳೆಯೋ ಹಾಲಿನ ಮಳೆಯೋ, ನಾನೆ ಎಂಬ ಭಾವ ನಾಶವಾಯಿತೋ, ಒಮ್ಮೆ ನಿನ್ನನ್ನು ಕಣ್ತುಂಬಾ, ಹೃದಯ ಗೀತೆ ಹಾಡುತಿದೆ, ಯುಗ ಯುಗಗಳೆ ಸಾಗಲಿ, ಕಂಗಳು ವಂದನೆ ಹೇಳಿವೆ, ಕಾಲವನ್ನು ತಡೆಯೋರು ಯಾರೂ ಇಲ್ಲ, ಪ್ರೇಮ ಪ್ರೀತಿ ನನ್ನುಸಿರು, ಈ ಹೃದಯಾ ಹಾಡಿದೆ, ಈ ಭಾವ ಗೀತೆ ನಿನಗಾಗಿ ಹಾಡಿದೆ, ಲೀಲಾಮಯ ಹೇ ದೇವ, ಮಧುಮಾಸ ಚಂದ್ರಮ ನೈದಿಲೆಗೆ ಸಂಭ್ರಮ, ಬಿಸಿಲಾದರೇನು ಮಳೆಯಾದರೇನು, ಒಲಿದ ಜೀವ ಜೊತೆಯಲಿರಲು ಹೀಗೆ ಸಂಗೀತ ನೀಡಿದ ಎಲ್ಲ ಹಾಡುಗಳಿಂದಲೂ ಜನಮನ ಗೆದ್ದವರು ರಾಜನ್ ನಾಗೇಂದ್ರ ಸಂಗೀತ ನಿರ್ದೇಶಕ ಜೋಡಿ ಎನ್ನಬಹುದು. ರಾಜನ್ ಅವರಿಗೆ ಸಿನಿಕನ್ನಡದ ನುಡಿನಮನ.

ನಿರ್ದೇಶಕ ಗೀತಪ್ರಿಯ ಜತೆಗೆ ರಾಜನ್
ಎಸ್.ಜಾನಕಿ, ಎಸ್.ಪಿ.ಬಿ. ಮೊದಲಾದವರ ಜೊತೆಗೆ

Recommended For You

Leave a Reply

error: Content is protected !!
%d bloggers like this: