ನಿರ್ದೇಶಕ ಜಿ ಮೂರ್ತಿ ನಿಧನ

ನಿರ್ದೇಶಕ ಜಿ ಮೂರ್ತಿಯವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಹೃದಯಾಘಾತದಿಂದಾಗಿ ಸಾವು ಸಂಭವಿಸಿದೆ ಎನ್ನುವುದನ್ನು ಅವರ ಸಹೋದರ ಸಂಬಂಧಿ ಸುಂದರ್ ಸಿನಿಕನ್ನಡಕ್ಕೆ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಹನ್ನೊಂದು ಗಂಟೆಗೆ ನಿಧನರಾಗಿರುವ ಅವರ ಪಾರ್ಥಿವ ಶರೀರವನ್ನು ಪ್ರಸ್ತುತ ಅವರ ಸುಮನ ಹಳ್ಳಿಯ ಮನೆಯಲ್ಲಿ ಇರಿಸಲಾಗಿದೆ. ಸಂಜೆ ನಾಲ್ಕು ಗಂಟೆ ಸುಮಾರಿಗೆ ಸುಮನಹಳ್ಳಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮತ್ತು ಕುಟುಂಬವನ್ನು ಅಗಲಿದ್ದಾರೆ.

ಸಿನಿಮಾ ನಿರ್ದೇಶಕರಾಗುವ ಮೊದಲು ಸಾಕಷ್ಟು ಚಿತ್ರಗಳಿಗೆ ಕಲಾ ನಿರ್ದೇಶಕರಾಗಿಯೂ ಕೂಡ ಕೆಲಸ ಮಾಡಿದ್ದರು. ಜಿ.ವಿ ಅಯ್ಯರ್ ಅವರ ಗರಡಿಯಲ್ಲಿ ಬೆಳೆದವರು ಜಿ. ಮೂರ್ತಿ. `ಹಂಸಗೀತೆ’ ಸಿನಿಮಾ ಚಿತ್ರೀಕರಣದ ವೇಳೆ ಶಾಲಾ ರಜಾ ದಿನಗಳಲ್ಲಿ ತಮ್ಮನ್ನು ಕೂಡ ಶೂಟಿಂಗ್ ಗೆ ಕರೆದುಕೊಂಡು ಹೋಗಿದ್ದಾಗಿ ನೆನಪಿಸಿಕೊಳ್ಳುತ್ತಿದ್ದ ಅವರು ಅಯ್ಯರ್ ಅವರ ತಂಡದೊಂದಿಗೆ ಕೇರಳಕ್ಕೂ ಹೋಗಿದ್ದರು. ಅಯ್ಯರ್ ಜೊತೆ ಇದ್ದಾಗ ಕಲಾನಿರ್ದೇಶಕರಾಗಿ ಮಾಡಿದ್ದೀನಿ, ಕಾಸ್ಟ್ಯೂಮ್ ಡಿಸೈನರ್ ಆಗಿ ಮಾಡಿದ್ದೀನಿ, ಮೇಕಪ್ ಆರ್ಟಿಸ್ಟ್ ಆಗಿ ಮಾಡಿದ್ದೀನಿ, ಸುಣ್ಣ ಹೊಡಿತಿದ್ದೆ, ರಂಗೋಲಿ ಹಾಕ್ತಿದ್ದೆ, ಆಕ್ಟಿಂಗೂ ಮಾಡಿದ್ದೆ. ಜೊತೆಗೆ ಊಟಕ್ಕೆ ಕುಳಿತಾಗ ಎಲ್ಲರಿಗೂ ಊಡ ಬಡಿಸ್ತಾ ಇದ್ದೆ ಎನ್ನುತ್ತಿದ್ದರು. ತಮಿಳು, ತೆಲುಗು, ಹಿಂದಿ, ಮಲಯಾಳಂ ಸಿನಿಮಾಗಳಲ್ಲಿ ಅನುಭವ ಪಡೆದ ಬಳಿಕ ನಂತರ ಕನ್ನಡದಲ್ಲಿ ರಾಜೇಂದ್ರ ಸಿಂಗ್ ಬಾಬು, ಎಸ್ ನಾರಾಯಣ್ ಸೇರಿದಂತೆ ಅನೇಕ ನಿರ್ದೇಶಕರ ಜೊತೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದವರು ಜಿ. ಮೂರ್ತಿ. ಹೀಗೆ ಸಾಗಿದ ಅವರ ಸಿನಿಮಾ ಪಯಣ ಕಳೆದ 15 ವರ್ಷದ ಹಿಂದೆ ಅವರೇ ಸ್ವತಃ ಕಥೆ, ಚಿತ್ರಕಥೆ ಬರೆದು ನಿರ್ದೇಶನಕ್ಕಿಳಿಯುವಂತೆ ಮಾಡಿತು.

ಮೊದಲ ಬಾರಿಗೆ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ‘ಕುರುನಾಡು’. ಅದಕ್ಕೆ ಎರಡು ರಾಜ್ಯ ಪ್ರಶಸ್ತಿಗಳು ಕೂಡ ದೊರಕಿತ್ತು.

ಅದರ ಬಳಿಕ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ‘ಶಂಕರ್ ಪುಣ್ಯಕೋಟಿ’. ಒಂದು ಹೆಣ್ಣು ಹಾಗೂ ಹಸುವಿನ ನಡುವಿನ ಕಥೆ. ಹೆಣ್ಣು ತಾಯಿ ಆಗ್ಲಿಲ್ಲ ಅಂದ್ರೆ ಯಾವ ನೋವನ್ನ ಅನುಭವಿಸುತ್ತಾಳೆ. ಹಸು ಕರು ಹಾಕ್ಲಿಲ್ಲ ಅಂದ್ರೆ ಅದರ ವಾಸ ಸ್ಥಾನ ಎಲ್ಲಕ ಎಂವ ವಿಷಯವನ್ನು ಸಿನಿಮಾದಲ್ಲಿ ತೋರಿಸಲಾಗಿತ್ತು. ಆ ಸಿನಿಮಾಗೆ ಬೆಸ್ಟ್ ಡೈರೆಕ್ಟರ್ ಸ್ಟೇಟ್ ಅವಾರ್ಡ್ ಸೇರಿದಂತೆ ಮೂರು ಅವಾರ್ಡ್ ಗಳು ಲಭಿಸಿತ್ತು. ಲಕ್ಷಾಂತರ ಮಕ್ಕಳಿಗೆ ಶಿಕ್ಷಣ, ಅನ್ನದಾಸೋಹ ನೀಡುತ್ತಿರುವ ಸಂಸ್ಥೆಯಾದ ಸಿದ್ಧಗಂಗಾ ಮಠದ ಬಗ್ಗೆ ‘ಸಿದ್ಧಗಂಗಾ’ ಎಂಬ ಸಿನಿಮಾವನ್ನು ಕೂಡ ಇವರು ಮಾಡಿದ್ದರು ಎನ್ನುವುದು ಗಮನಾರ್ಹ. ಚಿತ್ರವು ಬೆಂಗಳೂರು ಇಂಟರ್ ನ್ಯಾಷನಲ್ ಫೆಸ್ಟಿವಲ್ ನಲ್ಲಿ ಸೆಲೆಕ್ಟ್ ಆಗಿತ್ತು. `ಅರಳುವ ಹೂವುಗಳು’ ಸೇರಿದಂತೆ ಅನೇಕ ಸಿನಿಮಾಗಳನ್ನ ಮಾಡಿದ್ದಾರೆ.

ಕೊನೆಯದಾಗಿ ಬಿಡುಗಡೆ ಕಂಡಿದ್ದ ಚಿತ್ರ ಬಿಂಬ ಸಾಕಷ್ಟು ವಿಶೇಷಗಳನ್ನು ಹೊಂದಿತ್ತು. ಒಬ್ಬನೇ ಕಲಾವಿದ, ಒಂದೇ ಶಾಟ್‌ನಲ್ಲಿ ಚಿತ್ರೀಕರಣ ಮಾಡಿದ ಸಿನಿಮಾ ಅದಾಗಿತ್ತು. ಶ್ರೀನಿವಾಸ ಪ್ರಭು ಅವರು ಚಿತ್ರದಲ್ಲಿನ ಏಕೈಕ ಕಲಾವಿಧ ಆಗಿ ನಟಿಸಿದ್ದರು. ಇದರ ಜತೆಗೆ ಸುಗಂಧಿ ಎಂಬ ಯಕ್ಷಗಾನ ಸಂಬಂಧಿಸಿದ ಸಿನಿಮಾ ಮಾಡಿದ್ದಾರೆ. ಶಿವರಾಮ ಕಾರಂತರು ಇಂದಿಗೂ ಜೀವಂತವಾಗಿದ್ದಾರೆಂಬುದನ್ನು ಸಿನಿಮಾದಲ್ಲಿ ತೋರಿಸುವುದಕ್ಕೆ ಹೊರಟಿದ್ದರು. ಈ ವರ್ಷ ಕಸಿದುಕೊಂಡಮಹನೀಯರುಗಳ ಪಟ್ಟಿಯಲ್ಲಿ ನಿರ್ದೇಶಕ ಜಿ ಮೂರ್ತಿಯವರು ಕೂಡ ಸೇರಿಕೊಂಡಿರುವುದು ದುಃಖದ ವಿಚಾರ.

ಛಾಯಾಗ್ರಾಹಕ ಪಿಕೆ ಎಚ್ ದಾಸ್ ಸೇರಿದಂತೆ ಚಿತ್ರರಂಗದ ಗಣ್ಯರು ಮೂರ್ತಿಯವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ದಾಸ್ ಅವರು ಮೂರ್ತಿಯರ ಒಂಬತ್ತು ಸಿನಿಮಾಗಳಲ್ಲಿ ಛಾಯಾಗ್ರಾಹಕರಾಗಿದ್ದರು.

ಈ ಸುದ್ದಿ ಪ್ರಕಟಗೊಳಿಸಿದ ಬಳಿಕ ಸಂಪರ್ಕಕ್ಕೆ ಸಿಕ್ಕ ಜಿ ಮೂರ್ತಿಯವರ ಮತ್ತೋರ್ವ ಸಹೋದರರು ಸಾವಿಗೆ ನಿಜವಾದ ಕಾರಣ ಏನಾಗಿತ್ತು ಎನ್ನುವುದನ್ನು ವಿವರಿಸಿದ್ದಾರೆ.‌ ಮನೆಯಲ್ಲಿ ಜಾರಿಬಿದ್ದು ತಲೆಗೆ ಏಟಾಗಿದ್ದು ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಬ್ರೈನ್ ಹ್ಯಾಮರೇಜ್ ಆಗಿ ತೀರಿಕೊಂಡಿದ್ದಾಗಿ ತಿಳಿಸಿದ್ದಾರೆ.

Recommended For You

Leave a Reply

error: Content is protected !!
%d bloggers like this: