ಹಿರಿಯ ನಟ ಸೋಮಣ್ಣ ಇಂದು ನಿಧನರಾಗಿದ್ದಾರೆ. ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಸೋಮಣ್ಣನ ಬಗ್ಗೆ ಇಂದಿನ ತಲೆಮಾರಿಗೆ ಅರಿವು ಕಡಿಮೆ ಎಂದೇ ಹೇಳಬಹುದು. ಯಾಕೆಂದರೆ ಅವರು ನಟನೆಗೆ ವಿರಾಮ ನೀಡಿ ಸಾಕಷ್ಟು ಕಾಲವಾಗಿದೆ. ಆದರೆ ಅವರ ಸಹೋದರ ದತ್ತಣ್ಣನ ವಿಚಾರಕ್ಕೆ ಬಂದರೆ ಇಂದಿಗೂ ಕನ್ನಡದಿಂದ ಬಾಲಿವುಡ್ ತನಕ ಜನಪ್ರಿಯ ನಟರು. ಇದೀಗ ಅವರಿಗೆ ಹಿರಿಯಣ್ಣ ಸೋಮಶೇಖರ ರಾವ್ ಅವರನ್ನು ಕಳೆದುಕೊಂಡಿದ್ದಾರೆ.
ಬ್ಯಾಂಕ್ ಅಧಿಕಾರಿಯಾಗಿದ್ದ ಹೆಚ್.ಜಿ. ಸೋಮಶೇಖರ ರಾವ್ ಕಲಾರಂಗದಲ್ಲಿನ ಆಸಕ್ತಿಯಿಂದಾಗಿ ಕಲಾವಿದರಾಗಿ ಬದಲಾದರು. ಇವರು ಚಿತ್ರರಂಗವನ್ನು ಪ್ರವೇಶಿಸಿದ್ದು 1981ರಲ್ಲಿ, ಟಿ.ಎಸ್.ರಂಗಾರವರ ನಿರ್ದೇಶನದ ‘ಸಾವಿತ್ರಿ’ಮೂಲಕ. ಅದಕ್ಕೂ ಮೊದಲೇ ಸೋಮಣ್ಣ ಅನೇಕ ಪಾಶ್ಚಿಮಾತ್ಯ ಮತ್ತು ಭಾರತೀಯ ನಾಟಕಕಾರರ ಕೃತಿಗಳನ್ನು ರಂಗಭೂಮಿಯ ಮೇಲೆ ತಂದವರು. ಸಿನಿಮಾದಲ್ಲಿ ಖ್ಯಾತ ನಟ ಅನಿಲ್ ಠಕ್ಕರ್ ರವರ ಎದುರು ಇವರು ನೀಡಿದ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಆನಂತರ ರಾಯರು ಅನೇಕ ಚಿತ್ರಗಳಲ್ಲಿ ಭಾವಪ್ರಧಾನ ಮತ್ತು ಹಾಸ್ಯಪ್ರಧಾನ ಪಾತ್ರಗಳನ್ನು ನಿರ್ವಹಿಸಿದರು. ರವೀ ನಿರ್ದೇಶನದ ‘ಮಿಥಿಲೆಯ ಸೀತೆಯರು’ಇವರ ಅಭಿನಯ ಸಾಮರ್ಥ್ಯವನ್ನು ಸರಿಯಾಗಿ ಗುರುತಿಸುವಂತೆ ಮಾಡಿತು. ರವೀಯವರೇ ನಿರ್ದೇಶಿಸಿದ ಇನ್ನೊಂದು ಚಿತ್ರ ‘ಹರಕೆಯ ಕುರಿ’ಯಲ್ಲಿ ಸೋಮಶೇಖರ ರಾಯರು ನೀಡಿದ ಸೊಗಸಾದ ಅಭಿನಯಕ್ಕಾಗಿ 1992 -93ನೇ ಸಾಲಿನ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತು. ಕೆನರಾ ಬ್ಯಾಂಕ್ನಲ್ಲಿ ಉನ್ನತ ಅಧಿಕಾರಿಯಾಗಿದ್ದು ನಿವೃತ್ತಿ ಹೊಂದಿದ ರಾಯರಿಗೆ ಕನ್ನಡ ರಂಗಭೂಮಿಗೆ ತಮ್ಮ ಸೇವೆಯನ್ನು ಸಲ್ಲಿಸುವುದೇ ನಿಜವಾದ ವೃತ್ತಿಯಾಗಿತ್ತು. ಸೋಮಶೇಖರರಾಯರ ಬದುಕಿನ ಅನುಭವ ಕಥನವು ಪ್ರಕಟವಾಗಿದೆ. ಕಿರುತೆರೆ, ಚಲನಚಿತ್ರಗಳಿಗಿಂತ ಮಿಗಿಲಾಗಿ ರಂಗಭೂಮಿಯನ್ನು ಪ್ರೀತಿಸಿದ ರಾಯರು ತಮ್ಮ 86ನೇ ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದ ಇಂದು ನಮ್ಮನ್ನು ಅಗಲಿದ್ದಾರೆ.
ರಮೇಶ್ ಅರವಿಂದ್ ನಿರ್ದೇಶನದಲ್ಲಿ 1998ರಲ್ಲಿ ತೆರೆಕಂಡ ‘ಹೂಮಳೆ’ಯಲ್ಲಿಯೂ ಅವರ ನಟನೆ ಗಮನಾರ್ಹವಾಗಿತ್ತು. ಚಿತ್ರದಲ್ಲಿ ಅವರ ಸಹೋದರ ದತ್ತಣ್ಣ ಕೂಡ ನಟಿಸಿದ್ದರು. ಕಿರಣ್ ರಾಜ್ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ ನಾಯಕರಾಗಿರುವ ‘777ಚಾರ್ಲಿ’ಯಲ್ಲಿಯೂ ಅವರು ಪ್ರಮುಖ ಪಾತ್ರವೊಂದನ್ನು ನಿಭಾಯಿಸಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಚಿತ್ರ ಇನ್ನಷ್ಟೇ ತೆರೆಗೆ ಬರಬೇಕಿದೆ.