ಅಕ್ಷರ ಮಾಂತ್ರಿಕ ಇನ್ನಿಲ್ಲ..!

ಜನಪ್ರಿಯ ಪತ್ರಕರ್ತ ರವಿಬೆಳಗೆರೆ ನಿಧನರಾಗಿದ್ದಾರೆ. ಗುರುವಾರ ತಡರಾತ್ರಿ ಹೃದಯಾಘಾತದಿಂದ ಮೃತರಾದ ಅವರಿಗೆ 62 ವರ್ಷ ವಯಸ್ಸಾಗಿತ್ತು. ಸಿನಿಕನ್ನಡದ ಜೊತೆಗೆ ಮಾತನಾಡಿದ ಹಾಯ್ ಬೆಂಗಳೂರ್ ಪತ್ರಿಕೆಯ ಹಿರಿಯ ವರದಿಗಾರ ಸತೀಶ್ ಬಿಲ್ಲಾಡಿ “ಬಾಸ್ ನಿನ್ನೆ ಈ ವಾರದ ಪತ್ರಿಕೆಯ ಕೆಲಸ ಮುಗಿಸಿಯೇ ಹೋಗಿದ್ದಾರೆ” ಎಂದು ನಿಟ್ಟುಸಿರು ಬಿಟ್ಟರು. ಪ್ರತಿ ಗುರುವಾರ ಓದುಗರ ಕೈ ಸೇರುತ್ತಿದ್ದ `ಹಾಯ್ ಬೆಂಗಳೂರ್’ ಈ ಸಲವೂ ಸಿದ್ಧವಾಗಿದೆ. ‘ಗೆದ್ದಾಯ್ತು ಭರ್ಜರಿ ಸಂಪುಟಕ್ಕೆ ಸರ್ಜರಿ’ ಎನ್ನುವುದು ಕವರ್ ಪೇಜ್ ಆರ್ಟಿಕಲ್. ಆದರೆ ಬೆಳೆಗೆರೆಯವರು ಮಾತ್ರ ಸಾವಿನ ಮುಂದೆ ಸೋಲೊಪ್ಪಿಕೊಂಡಿದ್ದಾರೆ.

“ನಿನ್ನೆ ತಡರಾತ್ರಿ ಎದೆ ನೋವು ಬಂದಾಗ ಅವರು ಕೂಗಿ ಹೇಳಿಕೊಂಡಿದ್ದರು. ತಕ್ಷಣ ಅವರ ಬಳಿಗೆ ಹೋದ ಚಾಲಕ ವಾದಿರಾಜ್ ಬೆಳಗೆರೆಯವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಅವರ ಹೃದಯ ಬಡಿತ ನಿಂತು ಹೋಗಿತ್ತೆಂದು ತಿಳಿಯಿತು” ಎನ್ನುತ್ತಾರೆ ಸತೀಶ್ ಬಿಲ್ಲಾಡಿ. ಬೆಳೆಗೆರೆಯವರ ಜೊತೆಗೆ ಸುಮಾರು 22 ವರ್ಷಗಳಿಂದ ಆತ್ಮೀಯವಾಗಿರುವ ಸತೀಶ್ ಬಿಲ್ಲಾಡಿ ಮಾತನಾಡುತ್ತಾ, “ನಾನು ಕಳೆದ 17 ವರ್ಷಗಳಿಂದ ಹಾಯ್'ಲ್ಲಿಯೇ ವೃತ್ತಿ ನಿರತನಾಗಿದ್ದೇನೆ. ಕೊರೊನಾ ಕಾರಣದ ಲಾಕ್ಡೌನ್ ಸಂದರ್ಭದಲ್ಲಿ ಕೆಲವು ತಿಂಗಳು ಪತ್ರಿಕೆ ಆನ್ಲೈನಲ್ಲಿ ಮಾತ್ರ ಬರುತ್ತಿತ್ತು. ಆದರೆ ಕಳೆದ ಆರು ವಾರಗಳಿಂದ ಮುದ್ರಿತ ರೂಪದಲ್ಲಿ ಬಿಡುಗಡೆಯಾಗುತ್ತಿತ್ತು. ನಿನ್ನೆಯ ಸಂಚಿಕೆಯಲ್ಲಿಯೂ ಅವರೇ ಖುದ್ದಾಗಿ 'ಸಾಫ್ಟ್ ಕಾರ್ನರ್’ ಬರೆದಿದ್ದರು. ಕಳೆದ ಸಪ್ಟೆಂಬರ್ ನಲ್ಲಿ ಪತ್ರಿಕೆಗೆ 25 ವರ್ಷ ತುಂಬಿತ್ತು. ಆದರೆ ಈ ಬೆಳ್ಳಿಹಬ್ಬದ ಸಂಭ್ರಮ ಸಂಭ್ರಮವಾಗಿ ಉಳಿಯಲಿಲ್ಲ. ಮನಸ್ಸಾದಾಗಲೆಲ್ಲ ಅವರೇ ಫೋನ್ ಮಾಡಿ ಮಾತನಾಡುತ್ತಿದ್ದರು. ಆದರೆ ಕಳೆದ ಎರಡು ವಾರಗಳಿಂದ ಸರಿಯಾಗಿ ಮಾತನಾಡಿರಲಿಲ್ಲ” ಎಂದರು ಸತೀಶ್. ಘಟನೆಯ ವೇಳೆ ಹೊಸಪೇಟೆಯಲ್ಲಿದ್ದ ಅವರು ವಿಷಯ ತಿಳಿದ ತಕ್ಷಣವೇ ಅಲ್ಲಿಂದ ಹೊರಟು ಬಂದಿದ್ದಾರೆ.

1995ರಲ್ಲಿ ಹಾಯ್ ಬೆಂಗಳೂರು ಆರಂಭಿಸಿದ್ದರು. ಅಂಕಣ ಬರಹ, ಕಥಾ ಸಂಕಲನ, ಕಾದಂಬರಿ ಸೇರಿದಂತೆ ಸುಮಾರು 70 ಪುಸ್ತಕಗಳು ಪ್ರಕಟವಾಗಿವೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಲಭಿಸಿವೆ. ಕನ್ನಡ ಮಾಧ್ಯಮ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿರುವವರು ಬೆಳಗೆರೆ. ಅವರನ್ನು ಬೇರೆ ಮಾಡಿ ಪತ್ರಿಕೋದ್ಯಮದ ಬಗ್ಗೆ ಮಾತನಾಡಲು ಸಾಧ್ಯವಿರದಷ್ಟು ಸಾಧನೆಯನ್ನು ಅವರು ಮಾಡಿ ತೋರಿಸಿದ್ದಾರೆ. ಅಪರಾಧದ ಜೊತೆಗೆ ನವಿರಾದ ಪ್ರೇಮಕತೆಯನ್ನೂ ಹೇಳುತ್ತಿದ್ದ ‘ಹಾಯ್ ಬೆಂಗಳೂರ್', ಮನಸಿನಾಳಕ್ಕೆ ತಲುಪುತ್ತಿದ್ದ 'ಓ ಮನಸೇ’ ಪತ್ರಿಕೆಗಳು ಒಂದು ಕಾಲಘಟ್ಟದ ಯುವ ಸಮೂಹಕ್ಕೆ ಆತ್ಮೀಯವಾಗಿತ್ತು. ಕಿರುತೆರೆ ಲೋಕದಲ್ಲಿ ಕೂಡ ಅವರು ಹಾಕಿಕೊಟ್ಟ ವಾಯ್ಸ್ ಓವರ್ ಶೈಲಿಯಿಂದ ಹೊರಬರಲು ಇಂದಿಗೂ ಯಾರಿಂದಲೂ ಸಾಧ್ಯವಾಗಿಲ್ಲ. ಹಾಯ್ ಬೆಂಗಳೂರ್ ಪತ್ರಿಕೆ ಶುರುವಾದ ಎರಡೇ ವರ್ಷದಲ್ಲಿ ಆ ಪತ್ರಿಕೆಯ ಬಗ್ಗೆಯೇ ಒಂದು ಸಿನಿಮಾ ಮೂಡಿ ಬಂದಿದ್ದು ಮತ್ತೊಂದು ಇತಿಹಾಸ. ಕಳೆದ ಬಾರಿಯ ‘ಬಿಗ್ ಬಾಸ್’ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗುವ ಮೂಲಕ ತಾವು ಇಂದಿಗೂ ಎಷ್ಟು ಪ್ರಸ್ತುತ ಎನ್ನುವುದನ್ನು ತೋರಿಸಿಕೊಟ್ಟಿದ್ದರು. ಯಾವ ಪತ್ರಿಕೆಯ ಸಂಪಾದಕರಿಗೂ ಓದುಗರ ಜೊತೆಗೆ ಇರದಂಥ ಬಾಂಧವ್ಯ ಅವರಿಗೆ ಓದುಗರಲ್ಲಿತ್ತು. ಡಾ.ರಾಜ್ ಅವರು ಅಭಿಮಾನಿಗಳನ್ನು ‘ದೇವರು’ ಎಂದು ಕರೆದಂತೆ ಬೆಳಗೆರೆಯವರು ಓದುಗರನ್ನು ‘ದೊರೆ’ ಎಂದು ಕರೆದು ಆ ಮೂಲಕ ಬ್ರ್ಯಾಂಡ್ ಆಗಿದ್ದರು.

ಬೆಳೆಗೆರೆಯವರೊಂದಿಗೆ ಸತೀಶ್ ಬಲ್ಲಾಡಿ

ಪದ್ಮನಾಭನಗರದಲ್ಲಿರುವ ಅವರದೇ ಮಾಲಕತ್ವದ ‘ಪ್ರಾರ್ಥನಾ’ ಶಾಲೆಯ ಮೈದಾನದಲ್ಲಿ ಇಂದು ಬೆಳಿಗ್ಗೆ ಒಂಬತ್ತು ಗಂಟೆಯಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಿರುವುದಾಗಿ ತಿಳಿದು ಬಂದಿದೆ. ಮೃತರು ಇಬ್ಬರು ಪತ್ನಿ ಮತ್ತು ನಾಲ್ವರು ಮಕ್ಕಳು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.

Recommended For You

Leave a Reply

error: Content is protected !!
%d bloggers like this: