
ಸುಮಾರು 30ಕ್ಕೂ ಅಧಿಕ ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದಂಥ ಅರುಣ್ ಕುಮಾರ್ ಇಂದು ಸಂಜೆ ನಿಧನರಾಗಿದ್ದಾರೆ. ಅವರ ಸಾವಿಗೆ ಬ್ರೈನ್ ಟ್ಯೂಮರ್ ಕಾರಣವೆಂದು ತಿಳಿದು ಬಂದಿದೆ.
ಕನ್ನಡದಲ್ಲಿ ಇತ್ತೀಚೆಗೆ ತೆರೆಕಂಡ ಚಿತ್ರಗಳಲ್ಲಿ ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು' ಚಿತ್ರ ಅದರ ಛಾಯಾಗ್ರಹಣದ ಕಾರಣದಿಂದ ಹೆಚ್ಚು ಸುದ್ದಿ ಮಾಡಿತ್ತು. ಸಂಹಿತಾ ವಿನ್ಯಾ ನಾಯಕಿಯಾಗಿ ನಟಿಸಿದ್ದ ಈ ಚಿತ್ರದ ಛಾಯಾಗ್ರಾಹಕ ಅರುಣ್ ಕುಮಾರ್ ಆಗಿದ್ದರು. ಚಿತ್ರದ ನಿರ್ದೇಶಕರಾದ ಅಶೋಕ್ ಕಡಬ ಅವರು ಈ ಸಂದರ್ಭದಲ್ಲಿ ಸಿನಿಕನ್ನಡದ ಜೊತೆಗೆ ಮಾತನಾಡಿ, "ಅವರು ಒಬ್ಬರು ಉತ್ತಮ ಛಾಯಾಗ್ರಾಹಕರು. ಮೂಲತಃ ಕನ್ನಡದವರೇ ಆದರೂ ಮುಂಬೈನಲ್ಲಿ ಕೂಡ ಹೆಸರು ಮಾಡಿದವರು. ಅವರ ಛಾಯಾಗ್ರಹಣದ ಚೆಲುವನ್ನು ನೋಡಿಯೇ ನನ್ನ
ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’ ಮತ್ತು `ಅಮೃತ ಘಳಿಗೆ’ ಸಿನಿಮಾಗಳಿಗೆ ಛಾಯಾಗ್ರಾಹಕರನ್ನಾಗಿಸಿದ್ದೆ. ನಿರೀಕ್ಷೆಯಂತೆ ಎರಡು ಚಿತ್ರಗಳ ಕ್ಯಾಮೆರಾ ವರ್ಕ್ ಬಗ್ಗೆಯೂ ಉತ್ತಮ ಪ್ರತಿಕ್ರಿಯೆ ದೊರಕಿತ್ತು” ಎಂದರು. ಚಿತ್ರದ ನಾಯಕಿ ಸಂಹಿತಾ ವಿನ್ಯಾ ಮಾತನಾಡಿ “ಅವರು ಚಿತ್ರೀಕರಣದ ವೇಳೆ ಹಿಂದಿನಿಂದಲೂ ತಲೆನೋವು ಇದೆಯೆಂದು ಹೇಳುತ್ತಿದ್ದರು. ಆದರೆ ಅದನ್ನು ತೀರ ಗಂಭೀರವಾಗಿ ಸ್ವೀಕರಿಸಿರಲಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.

ಅರುಣ್ ಕುಮಾರ್ ಅವರು ಚಿಕ್ಕಮಗಳೂರಿನ ಬೀರೂರಿನವರು. ಅವರು ಇದೀಗ ತಮ್ಮ ಐವತ್ತೊಂದನೆಯ ವಯಸ್ಸಲ್ಲೇ ಮೂರುಮಂದಿ ಮಕ್ಕಳು ಮತ್ತು ಪತ್ನಿ ಸರಸ್ವತಿಯವರನ್ನು ಅಗಲಿದ್ದಾರೆ. ಹಿರಿಯ ಮಗ ಜಿತೇಂದ್ರ ಸೌಂಡ್ ಇಂಜಿನಿಯರಿಂಗ್ ಕೋರ್ಸ್ ಮಾಡುತ್ತಿದ್ದರೆ ಕಿರಿಯ ಪುತ್ರ ಹರ್ಷ ತಮ್ಮದೇ ಸ್ಟುಡಿಯೋ ಯೂನಿಟ್ ನೋಡಿಕೊಳ್ಳುತ್ತಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅರುಣ್ ಕುಮಾರ್ ಸದ್ಯದಲ್ಲೇ ತಮ್ಮ ಮಗಳು ಸುಮನಾಳ ಮದುವೆಯ ಯೋಜನೆ ಹಾಕಿಕೊಂಡಿದ್ದರು ಎಂದು ಅಶೋಕ್ ಕಡಬ ಸ್ಮರಿಸುತ್ತಾರೆ.

ಕಳೆದ ಒಂದು ವಾರದಿಂದ ತುಂಬ ತಲೆನೋವು ಅನುಭವವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ ಬಳಿಕ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ರೋಗವು ಅಂತಿಮ ಹಂತ ತಲುಪಿದ್ದ ಕಾರಣ ಅರುಣ್ ಕುಮಾರ್ ಅವರನ್ನು ಬದುಕಿಸಲು ಸಾಧ್ಯವಾಗಿರಲಿಲ್ಲ. ಇದರ ನಡುವೆ ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಆಗಿತ್ತು ಎಂದು ಹೇಳಲಾಗಿದೆ.
ಮೃತರು ಕನ್ನಡ ಮಾತ್ರವಲ್ಲದೆ ಹಿಂದಿ, ಮರಾಠಿ ಮತ್ತು ಗುಜರಾತಿ ಚಿತ್ರಗಳಿಗೂ ಕೆಲಸ ಮಾಡಿದ್ದು, ಗುಜರಾತಿ ಚಿತ್ರದ ಮೂಲಕ ಶ್ರೇಷ್ಠ ಛಾಯಾಗ್ರಾಹಕ ಪ್ರಶಸ್ತಿಗೂ ಭಾಜನರಾಗಿದ್ದರು. ತಮ್ಮದೇ ಸ್ಟುಡಿಯೋದಲ್ಲಿ ನಿರ್ಮಾಣವಾದ ಚಿತ್ರಗಳನ್ನು ಸೇರಿಸಿದರೆ ಸುಮಾರು 40ಕ್ಕೂ ಅಧಿಕ ಸಿನಿಮಾಗಳಿಗೆ ಅರುಣ್ ಕುಮಾರ್ ಕಾರ್ಯನಿರ್ವಹಿಸಿದ್ದರು. ಹಿರಿಯನಟ ಹೊನ್ನವಳ್ಳಿ ಕೃಷ್ಣ ನಿರ್ದೇಶನದ ಹೊಸಚಿತ್ರ ಮತ್ತು ನೃತ್ಯ ನಿರ್ದೇಶಕ ಜಗ್ಗು ನಿರ್ದೇಶನ ‘ಛಾಯಾ’ ಎನ್ನುವ ಸಿನಿಮಾಗಳಿಗೆ ಕೂಡ ಇವರೇ ಛಾಯಾಗ್ರಾಹಕರಾಗಿದ್ದು ಆ ಚಿತ್ರಗಳು ಇನ್ನಷ್ಟೇ ತೆರೆಕಾಣಬೇಕಿವೆ. ಅರುಣ್ ಕುಮಾರ್ ಅವರ ನಿಧನಕ್ಕೆ ಸಿನಿಕನ್ನಡ.ಕಾಮ್ ಸಂತಾಪ ವ್ಯಕ್ತಪಡಿಸುತ್ತದೆ.