ದಶಕದ ಹಿಂದಿನವರೆಗೂ ಶಕೀಲ ಸಿನಿಮಾ' ಎಂದರೆ ಕಣ್ಣರಳಿಸುವ ಒಂದು ಸಮೂಹ ಇತ್ತು. ಆದರೆ ಆಂಡ್ರಾಯಿಡ್ ಫೋನ್, ಪೋರ್ನ್ ವಿಡಿಯೋಗಳು ಹರಿದಾಡಿದ ಬಳಿಕ ಆ ಹೆಸರನ್ನೇ ಮರೆತವರಿದ್ದಾರೆ. ಆದರೆ ಅದಕ್ಕೂ ಹಿಂದಿನ ದಶಕಗಳ ಕಾಲ ಮಲಯಾಳಂ ಚಿತ್ರರಂಗದಲ್ಲಿ ವಯಸ್ಕರ ಸಿನಿಮಾಗಳನ್ನು ಶಕೀಲ ಸಿನಿಮಾಗಳೆಂದೇ ಕರೆಯುವ ಟ್ರೆಂಡ್ ಇತ್ತು. ಅದಕ್ಕೆ ಕಾರಣ, ಎ ಸರ್ಟಿಫಿಕೇಟ್ ಸಿನಿಮಾಗಳ ಮೂಲಕ ಶಕೀಲರಷ್ಟು ಜನಪ್ರಿಯತೆ ಪಡೆದ ಮತ್ತೋರ್ವ ನಟಿ ಬೇರೆ ಇರಲಿಲ್ಲ. ಆದರೆ ಶಕೀಲ ವಯಸ್ಕರು ನೋಡುವಂಥ ಪಾತ್ರಗಳಿಗೆ ಗುಡ್ ಬೈ ಹೇಳಿ ಹಲ ವರ್ಷಗಳಾಗಿವೆ. ಈಗ ಏನಿದ್ದರೂ ಹಾಸ್ಯದ ಪಾತ್ರಗಳಿಗೆ ಮೀಸಲು. ಆದರೆ ಆಕೆಯ ಬದುಕು ಖಂಡಿತ ಹಾಸ್ಯವಲ್ಲ. ಅಲ್ಲಿ ನವರಸಗಳಿವೆ ಎನ್ನುವುದನ್ನು ಅರಿತುಕೊಂಡ ನಿರ್ದೇಶಕ ಇಂದ್ರಜಿತ್ ಲಂಕೇಶ್
ಶಕೀಲಾ’ ಹೆಸರಲ್ಲೇ ಒಂದು ಸಿನಿಮಾ ಮಾಡಿದ್ದಾರೆ. ಶಕೀಲಾ ಬಯೋಪಿಕ್ ಮಾಡಿದ್ದೇಕೆ ಎನ್ನುವುದನ್ನು ಅವರು ಇಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
`ಶಕೀಲಾ’ ಸಿನಿಮಾ ಬಿಡುಗಡೆ ಯಾವಾಗ?
ಇದೇ ಕ್ರಿಸ್ಮಸ್‌ಗೆ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿದ್ದೇವೆ. ಈ ಸಿನಿಮಾ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಸೆಳೆಯುವ ಶಕ್ತಿ ಹೊಂದಿದೆ ಎಂದುಕೊಂಡಿದ್ದೇನೆ. ಇಲ್ಲವಾದರೆ ಈ ಚಿತ್ರಕ್ಕೆ ಒಟಿಟಿಯಿಂದ ದೊಡ್ಡ ಮಟ್ಟದ ಆಫರ್ ಬಂದಾಗ ಕೊಟ್ಟು ಬಿಡಬಹುದಿತ್ತು. ಆದರೆ ಇದು ಪಂಚಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ದೊಡ್ಡ ಚಿತ್ರ. ಥಿಯೇಟ್ರಿಕಲ್ ಅನುಭವಕ್ಕಾಗಿಯೇ ತಯಾರು ಮಾಡಿರುವ ಚಿತ್ರ. ಸುಮಾರು ಎರಡೂವರೆ ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕು ಅಂದುಕೊಂಡಿದ್ದೇವೆ.
ಶಕೀಲ ಸಿನಿಮಾ ಮಾಡಬೇಕು ಅನಿಸಿದ್ದೇಕೆ?
ಆಕ್ಚುಯಲಿ ಈ ಪ್ರಶ್ನೆ ನನಗೆ ಈ ಹಿಂದೆಯೂ ತುಂಬ ಮಂದಿ ಕೇಳಿದ್ದಾರೆ. ಆದರೆ ನನ್ನ ಪ್ರಶ್ನೆ ಯಾಕೆ ಮಾಡಬಾರದು ಎನ್ನುವುದಾಗಿದೆ. ಆಕೆ ವಯಸ್ಕರ ಚಿತ್ರ ಮಾಡಿದ ನಟಿ ಇರಬಹುದು. ಆದರೆ ಸಿನಿಮಾಗೆ ಸೆನ್ಸಾರ್ ಮಂಡಳಿ ಸರ್ಟಿಫಿಕೆಟ್ ನೀಡಿದೆ ಎಂದಮೇಲೆ ಆಕೆಯದು ಅಧಿಕೃತ ಸಿನಿಮಾಗಳು ತಾನೇ? ಪುರುಷ ಪ್ರಧಾನ ಮಲಯಾಳಂ ಚಿತ್ರರಂಗದಲ್ಲಿ ಯಶಸ್ಸು ಗಳಿಸಿದವರು ಶಕೀಲ. ನನ್ನ ಗಮನಕ್ಕೆ ಬಂದಂತೆ ಒಂದು ವರ್ಷದಲ್ಲಿ ಯಾವ ನಾಯಕ, ನಾಯಕಿಯಾಗಲೀ ಅಥವಾ ಪೋಷಕ ಪಾತ್ರಧಾರಿಗಳಾಗಲೀ 100 ಸಿನಿಮಾಗಳಲ್ಲಿ ನಟಿಸಿದ ದಾಖಲೆಗಳಿಲ್ಲ. ಆದರೆ ಶಕೀಲ ಒಂದೇ ವರ್ಷದಲ್ಲಿ ನೂರು ಹಿಟ್ ಸಿನಿಮಾಗಳನ್ನು ನೀಡಿದವರು! ಎ ಸೆಂಟರ್ ಮಾತ್ರವಲ್ಲ, ಬಿ,ಸಿ ಸೆಂಟರ್‌ಗಳಲ್ಲಿಯು ಶಕೀಲ ಸಿನಿಮಾ ಪ್ರದರ್ಶನವಾಗುತ್ತಿತ್ತು. ಒಂದು ವರ್ಷಗಳ ಕಾಲ ಸಿನಿಮಾ ಓಡಿದಾಗ ಅಲ್ಲಿನ ಹೀರೋಗಳೇ ಭಯಭೀತರಾದರು! ನಮ್ಮ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ, ಓಡುತ್ತಿಲ್ಲ ಎಂದು ಆತಂಕಿತರಾದರು. ಇಂಥ ಸಂದರ್ಭದಲ್ಲಿ ಯಶಸ್ವಿ ನಟಿಯೊಬ್ಬಳನ್ನು ಅನಧಿಕೃತವಾಗಿ ಬ್ಯಾನ್ ಮಾಡಲಾಯಿತು. ಉದಾಹರಣೆಗೆ ಶಕೀಲಾರ 40 ಸಿನಿಮಾಗಳು ಸೆನ್ಸಾರ್ ಸರ್ಟಿಫಿಕೆಟ್ ಸಿಗದೆ ಡಬ್ಬದಲ್ಲೇ ಉಳಿದವು! ಆ ಸಂದರ್ಭದಲ್ಲಿ ಶಕೀಲ ನಿರ್ಮಾಪಕರು ತನಗೆ ನೀಡಿದ ಅಡ್ವಾನ್ಸ್ ವಾಪಾಸು ಮಾಡಬೇಕಾಗಿ ಬಂದಿತ್ತು! ಇವೆಲ್ಲವೂ ಬಯೋಪಿಕ್ ಮೂಲಕವಾದರೂ ದಾಖಲಾಗಬೇಕಾದ ವಿಚಾರಗಳು ಅನಿಸಿತ್ತು.
ಹಾಗಾದರೆ ನಿಮ್ಮ ಸಿನಿಮಾ ಶಕೀಲಾ ಅವರ ವೃತ್ತಿ ಬದುಕನ್ನು ಆಧಾರಿಸಿ ಮಾಡಲಾಗಿದೆಯೇ?
ವೃತ್ತಿ ಬದುಕನ್ನು ಕೂಡ ತರಲಾಗಿದೆ. ಆದರೆ ಹಾಗಂತ ನಾನು ಶಕೀಲ ಅವರ ಸಿನಿಮಾ ನೋಡಿ ಮಾತ್ರ ಈ ಚಿತ್ರಕ್ಕಾಗಿ ನಾನು ಮಾಹಿತಿ ಸಂಗ್ರಹಿಸಿದ್ದಲ್ಲ. ಸ್ವತಃ ಅವರನ್ನು ಕ್ಯಾಮೆರಾ ಮುಂದೆ ಕೂರಿಸಿ ಅವರಿಂದಲೇ ಜೀವನದ ವಿವಿಧ ಘಟನೆಗಳನ್ನು ತಿಳಿದುಕೊಂಡಿದ್ದೇನೆ. ಇದು ಹಲವಾರು ದಿನಗಳ ತನಕ ನಡೆದಂಥ ವಿಚಾರ. ಜೀವನದ ಹಲವು ರಸ ಭಾವಗಳನ್ನು ಕಂಡಂಥ ನಟಿ ಶಕೀಲ. ಕತೆಗೆ ನ್ಯಾಯವೊದಗಿಸುವ ರೀತಿಯಲ್ಲಿ ಅವೆಲ್ಲವನ್ನು ಹೊರಗಿಟ್ಟಿದ್ದೇನೆ. ಶಕೀಲ ಎಂದೊಡನೆ ಇದೊಂದು ವಯಸ್ಕರ ಸಿನಿಮಾ, ಅಶ್ಲೀಲ ಸಿನಿಮಾ ಎನ್ನುವ ಕಲ್ಪನೆ ಬೇಡ. ಆದರೆ ಅದೆನ್ನೆಲ್ಲ ಮೀರಿ ಶಕೀಲಾಗೂ ಒಂದು ಜಿವನ, ಅದರಲ್ಲಿ ನೋವು ಎಲ್ಲವೂ ಇದೆ. ಅವರ ಸಂಸಾರ, ಅವರ ತಂಗಿಯರು, ತಾಯಿಯೊಂದಿಗಿನ ಬದುಕು ಹಾಗೂ ಯಶಸ್ಸು ಕಂಡ ಬಳಿಕ ಚಿತ್ರೋದ್ಯಮದಿಂದ ಹೊರಗಿದ್ದು ನೆಸುತ್ತಿರುವ ಸಾಮಾನ್ಯ ಬದುಕು ಇವೆಲ್ಲವೂ ನನ್ನ ಚಿತ್ರದ ಭಾಗವಾಗಿದೆ. ಹಲವಾರು ಹುಡುಗಿಯರು ಕನಸು ಕಟ್ಟಿಕೊಂಡು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಅವರಿಗೆ ಇಲ್ಲಿ ನೋವು, ಮುಳ್ಳಿನ ದಾರಿ ಇದ್ದೇ ಇದೆ. ಯಾಕೆಂದರೆ ಇಂದಿಗೂ ಚಿತ್ರರಂಗ ಎನ್ನುವುದು ಪುರುಷ ಪ್ರಧಾನ ವ್ಯವಸ್ಥೆಯನ್ನೇ ಒಳಗೊಂಡಿದೆ. ಹಾಗಾಗಿ ಈ ವಿಚಾರವನ್ನು ಹೇಳಲೇಬೇಕು ಅನಿಸಿತು ನನಗೆ. ಇನ್ನೊಂದು ಪ್ರಮುಖ ವಿಚಾರ ಏನೆಂದರೆ, ಶಕೀಲ ಹುಟ್ಟಿದ್ದು ಒಂದು ಹಳ್ಳಿಗಾಡಿನ ಗಲ್ಲಿಯಲ್ಲಿರುವ ಒಂದೇ ಕೋಣೆಯ ಮನೆಯಲ್ಲಿ. ಪ್ರಸ್ತುತ 270ಚಿತ್ರಗಳನ್ನು ಮಾಡಿದ ಮೇಲೆಯೂ ಅವರು ಅದೇ ಮನೆಯಲ್ಲೇ ಇದ್ದಾರೆ! ಅಂದರೆ ಇದುವರೆಗೆ ಅವರಿಗೆ ಸಿಕ್ಕ ಸಂಭಾವನೆ ಎನ್ನುವುದು ದಿನ ಖರ್ಚಿಗಷ್ಟೇ ಸೀಮಿತವಾಗಿದೆ. ಇದು ಎಲ್ಲರಿಗೂ ಒಂದು ಕನ್ನಡಿಯಾಗುತ್ತದೆ ಎನ್ನುವುದು ನನ್ನ ಅನಿಸಿಕೆ.
ಸಿನಿಮಾ ಚಿತ್ರೀಕರಣ ಮಾಡಿದ ಅನುಭವ ಹೇಗಿತ್ತು?
ನಾನು ಮೊದಲ ಬಾರಿಗೆ ಒಂದು ಬಯೋಪಿಕ್ ಮಾಡಿದ್ದೇನೆ. ಶಕೀಲಾಗೆ ಜನಪ್ರಿಯತೆ ತಂದು ಕೊಟ್ಟಿದ್ದು ಕೇರಳವಾದ ಕಾರಣ ಅಲ್ಲಿ ಚಿತ್ರೀಕರಣ ಮಾಡಲೇ ಬೇಕಿತ್ತು. ಆದರೆ ನಾವು ಅಲ್ಲಿ ತಲುಪುವಾಗ ನೆರೆ ಬಂದಿತ್ತು! ಲೊಕೇಶನ್ ತೀರ್ಥಹಳ್ಳಿಗೆ ಶಿಫ್ಟ್ ಮಾಡಿದ್ರೆ, ಅಲ್ಲಿ ಮಳೆಯ ಕಾಟ! ಕನ್ನಡದ ಜೊತೆಗೆ ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಸಿದ್ಧವಾಗಿದೆ. ಶಕೀಲಾ ಪಾತ್ರದಲ್ಲಿ ಬಾಲಿವುಡ್ ನಟಿ ರೀಚಾ ಚಡ್ಡ ನಟಿಸಿದ್ದಾರೆ. ಬಾಲಿವುಡ್‌ನ ಪಂಕಜ್ ತ್ರಿಪಾಠಿ ಜೊತೆಗೆ ಕೇರಳದ ರಾಜೀವ್ ಪಿಳ್ಳೈ, ಕರ್ನಾಟಕದ ಎಸ್ತರ್ ನೊರೊನ್ಹಾ, ಸುಚೇಂದ್ರ ಪ್ರಸಾದ್ ಹೀಗೆ ವೈವಿಧ್ಯಮಯ ತಾರಾಗಣ ಇದೆ. ತಾಂತ್ರಿಕ ವಿಭಾಗದಲ್ಲಿ ಬಾಲಿವುಡ್‌ನ ದೊಡ್ಡ ಸಂಕಲನಕಾರ ಬಲ್ಲು ಸಲುಜ ಒಂದು ಶಕ್ತಿಯಾಗಿದ್ದಾರೆ. ದಂಗಲ್',
ಸ್ವದೇಶ್’ ಚಿತ್ರಗಳಿಗೆ ಸಂಕಲನ ಮಾಡಿದವರು ಮಾತ್ರವಲ್ಲ ಅವರು ಆಸ್ಕರ್ ಪ್ಯಾನೆಲ್‌ನ ಮೆಂಬರ್ ಕೂಡ ಹೌದು. ಚೈನಾದಲ್ಲಿ 500ಕೋಟಿ ವೆಚ್ಚದ ಚಿತ್ರಕ್ಕೆ ಸಂಕಲನ ಮಾಡಿದ ಖ್ಯಾತಿ ಅವರದು. ಶೀಲ ಕಿ ಜವಾನಿ, ಬೇಬಿ ಡಾಲ್ ಮೊದಲಾದ ಹಾಡುಗಳ ಖ್ಯಾತಿಯ ಕುಮಾರ್ ಅವರು ಹಾಡುಗಳನ್ನು ಬರೆದಿದ್ದಾರೆ. ಬಾಲಿವುಡ್‌ನಲ್ಲಿ ಹೆಸರಾಗಿರುವ `ಮೀಟ್ ಬ್ರದರ್ಸ್’ ಜೋಡಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಒಟ್ಟಿನಲ್ಲಿ ಎಲ್ಲ ರೀತಿಯಿಂದಲೂ ಇದೊಂದು ಹೊಸ ಅನುಭವ ತಂದುಕೊಟ್ಟಿದೆ ಎಂದರು.