
ಅನುರಾಗ ಸಂಗಮ ಸಿನಿಮಾ ನೋಡಿದವರಿಗೆ ಆ ಚಿತ್ರ ತೀರ ಇತ್ತೀಚೆಗೆ ಬಂದಂತೆ ಅನಿಸಬಹುದು. ಯಾಕೆಂದರೆ ಅದರಲ್ಲಿ ತುಂಬಿರುವ ಭಾವಗಳು ಅಷ್ಟು ಹಸಿರು. ಆದರೆ ಚಿತ್ರ ತೆರೆಕಂಡು ಇಂದಿಗೆ 25 ವರ್ಷಗಳು! ಆ ಕುರಿತಾದ ವಿಶೇಷ ಲೇಖನ ಇದು.
ಚಿತ್ರದಲ್ಲಿ ರಮೇಶ್ ಅರವಿಂದ್ ಗಿಂತ ಪ್ರಾಧಾನ್ಯತೆ ಕುಮಾರ್ ಗೋವಿಂದ್ ಅವರಿಗೆ. ಆದರೆ ಚಿತ್ರ ನೋಡಿದವರು ರಮೇಶ್ ಅರವಿಂದ್ ನಟನೆ ಮರೆಯುವುದು ಕಷ್ಟ. ಯಾಕೆಂದರೆ ಅವರ ಪಾತ್ರ ಮತ್ತು ನಟನೆ ಆ ಮಟ್ಟದಲ್ಲಿತ್ತು.
ಚಾರ್ಲಿ ಚಾಪ್ಲಿನ್ ಅವರ ಸಿಟಿಲೈಟ್ಸ್ ಚಿತ್ರವನ್ನು ಸ್ಫೂರ್ತಿಯಾಗಿಸಿಕೊಂಡು ಮಾಡಿರುವ ವಿಭಿನ್ನವಾದ ಸಿನಿಮಾ ‘ಅನುರಾಗ ಸಂಗಮ’. ಅದರ ಬಳಿಕ ಈ ಸಿನಿಮಾ ತಮಿಳು, ತೆಲುಗು ಭಾಷೆಗೂ ರಿಮೇಕ್ ಆಯಿತು! ಯಾಕೆಂದರೆ ಚಿತ್ರ ಕನ್ನಡದಲ್ಲಿ 25 ವಾರಗಳ ಕಾಲ ಯಶಸ್ವಿ ಪ್ರದರ್ಶನ ದಾಖಲಿಸಿತ್ತು.
ನಿಜ’ರಾಗ’ದ ಸಂಗಮ!
ಅನುರಾಗ ಸಂಗಮವನ್ನು ಇಂದು ನಾವು ಅದರ ಹಾಡುಗಳ ಮೂಲಕ ನಿತ್ಯವೂ ನೆನಪಿಸುತ್ತೇವೆ. ಉಮಾಕಾಂತ್ ನಿರ್ದೇಶನದ ಈ ಸಿನಿಮಾದಲ್ಲಿ ಅಂಥ ಹಾಡುಗಳನ್ನು ನೀಡಿದ ಕೀರ್ತಿ ಸಂಗೀತ ನಿರ್ದೇಶಕ ವಿ ಮನೋಹರ್ ಅವರಿಗೆ ಸಲ್ಲುತ್ತದೆ. “ಓ ಮಲ್ಲಿಗೆ ನಿನ್ನೊಂದಿಗೆ ನಾನಿಲ್ಲವೇ ಸದಾ..” ಎನ್ನುವ ಗೀತೆ ಹಾಡಿನ ಜೊತೆಯಲ್ಲೇ ಹೊಸ ಗಾಯಕನನ್ನೂ ನೀಡಿತು. ರಮೇಶ್ಚಂದ್ರ ಅವರ ಕಂಠದಿಂದ ಹೊಮ್ಮಿದ ಆ ಗೀತೆಗೆ ರಾಜ್ಯ ಪ್ರಶಸ್ತಿಯೂ ಲಭಿಸಿತು.

ಚಿತ್ರದಲ್ಲಿ ಕುಮಾರ್ ಗೋವಿಂದ್ ಮತ್ತು ಸುಧಾರಾಣಿ ಪ್ರೇಕ್ಷಕರ ಮನಸೂರೆಗೊಂಡಿದ್ದರು. ಬಿ ಸರೋಜಾ ದೇವಿಯರು ಕೂಡ ಒಂದು ಪ್ರಧಾನ ಪಾತ್ರವನ್ನು ನಿಭಾಯಿಸಿದ್ದರು. ಎಸ್.ಕೆ ಫಿಲಮ್ಸ್ ಲಾಂಛನದಲ್ಲಿ ಡಿ. ಗೋವಿಂದಪ್ಪ ಅವರು ಚಿತ್ರವನ್ನು ನಿರ್ಮಿಸಿದ್ದರು.
